ಸೈಬರ್ ಠಾಣೆ ಅಧಿಕಾರಿ ಹೆಸರಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ!
ಬಳ್ಳಾರಿ, ಜನವರಿ 18: ಆನ್ ಲೈನ್ ವಂಚಕರು ಜನ ಸಾಮಾನ್ಯರನ್ನು ವಂಚಿಸುವುದು ಮಾಮೂಲಿ. ಆದರೆ, ವಂಚಕರು ಈಗ ಪೊಲೀಸರ ಹೆಸರಿನಲ್ಲಿಯೇ ಜನರನ್ನು ವಂಚಿಸುತ್ತಿದ್ದಾರೆ. ಪೊಲೀಸರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.
ಬಳ್ಳಾರಿ ಸೇರಿದಂತೆ ರಾಜ್ಯಾದ್ಯಂತ ಆನ್ ಲೈನ್ ವಂಚಕರ ಜಾಲ ಸಕ್ರಿಯವಾಗಿದೆ. ಸ್ವಲ್ಪವೇ ಎಚ್ಚರ ತಪ್ಪಿದರೂ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಕ್ಷಣ ಮಾತ್ರದಲ್ಲಿ ಡ್ರಾ ಆಗುತ್ತದೆ.
ಪೊಲೀಸರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಮೇಸೆಂಜರ್ ಮೂಲಕ ಹಣಕ್ಕೆ ಬೇಡಿಕೆ ಈಡಲಾಗುತ್ತಿದೆ. ಪಿಎಸ್ಐ, ಎಎಸ್ಐ, ಪಿಐ, ಕಾನಸ್ಟೇಬಲ್‌ಗಳ ನಕಲಿ ಖಾತೆ ತೆರೆದು ಜನರ ಹತ್ತಿರ ದುಡ್ಡು ಕೇಳಲಾಗುತ್ತಿದೆ.

ಬಳ್ಳಾರಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪಿಐ ಆಗಿದ್ದ ಸುಭಾಷ, ಸಂಡೂರು ಪಿಎಸ್ ಐ ಬಸವರಾಜ್ ಅವರ ಹೆಸರನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಮೇಸೆಂಜರ್ ಮೂಲಕ ಸಂದೇಶ ಕಳಿಸಿ ತುರ್ತು ಹಣದ ಅಗತ್ಯವಿದೆ ಎಂದು ಬೇಡಿಕೆ ಇಡಲಾಗಿದೆ.
ಪೊಲೀಸರ ಖಾತೆಯಲ್ಲಿರುವ ಸ್ನೇಹಿತರಿಗೆ ಸಂದೇಶ ಕಳಿಸಿ ಪೋನ್ ಪೇ, ಗೂಗಲ್ ಪೇ ಮೂಲಕ ಹಣ ಕಳಿಸಿ ಎಂದು ಬೇಡಿಕೆ ಇಡಲಾಗಿದೆ. ಈ ಕುರಿತು ಪೊಲೀಸರು ಸ್ವತಃ ಸೈಬರ್ ಪೊಲೀಸ್ ಠಾಣೆ ಮೆಟ್ಟೆಲೇರಿದ್ದಾರೆ.

ಇದುವರೆಗೂ ಅಮಾಯಕ ಜನರಿಗೆ ವಂಚನೆ ಮಾಡುತ್ತಿದ್ದ ಆನ್ ಲೈನ್ ಖದೀಮರು ಈಗ ಪೊಲೀಸರ ಹೆಸರಿನಲ್ಲಿ ವಂಚನೆ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರ ಹೆಸರಿನಲ್ಲಿ ಸಂದೇಶ ಕಳಿಸಿದರೆ ಜನರಿಗೆ ಅನುಮಾನ ಬರುವುದಿಲ್ಲ ಎಂಬುದು ಇದಕ್ಕೆ ಕಾರಣವಾಗಿದೆ.












Click it and Unblock the Notifications