G.Janardhana Reddy: ನನಗೆ ಪ್ರಾಣಭೀತಿ ಇದೆ, Z+ ಭದ್ರತೆ ಒದಗಿಸಿ: ಸಿಎಂ ಸಿದ್ದರಾಮಯ್ಯಗೆ ಜನಾರ್ದನ ರೆಡ್ಡಿ ಪತ್ರ
G.Janardhana Reddy: ಬಳ್ಳಾರಿ ಬ್ಯಾನರ್ ಘರ್ಷಣೆ ಬೆನ್ನಲ್ಲೇ ಇದೀಗ ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ತಮಗೆ Z+ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯದ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಜನಾರ್ದನ ರೆಡ್ಡಿ ಅವರು ಪತ್ರದಲ್ಲಿ, "ನಮಗೆ ಪ್ರಾಣಭೀತಿ ಇದೆ ದಯವಿಟ್ಟು ನಮಗೆ ರಕ್ಷಣೆ ನೀಡಿ, ಝಡ್ ಶ್ರೇಣಿಯ ರಕ್ಷಣೆ ಕೊಡಿ ಹಾಗೂ ಶಾಸಕ ನಾರಾ ಭರತ್ ರೆಡ್ಡಿ, ಸತೀಶ್ ರೆಡ್ಡಿ ಬಂಧಿಸಿ," ಎಂದು ಮನವಿ ಮಾಡಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಭದ್ರತೆ ನೀಡುವಂತೆ ಸರ್ಕಾರಕ್ಕೆ ಮನವಿ: "ಒಂದು ವೇಳೆ ರಾಜ್ಯ ಸರ್ಕಾರ ಭದ್ರತೆ ನೀಡದಿದ್ದರೆ, ಇನ್ನುಂದೆ ಯಾವುದೇ ದಾಳಿ ನಡೆದರೂ ಸರ್ಕಾರವೇ ನೇರ ಹೊಣೆ," ಎಂದು ಪತ್ರದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ಪತ್ರದಲ್ಲಿ ಉಲ್ಲೇಖ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಈ ಕೇಸ್‌ನಲ್ಲಿ ರೆಡ್ಡಿ ಗ್ಯಾಂಗ್ ಬಂಧನವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಾರಣ ಇಲ್ಲಿದೆ ನೋಡಿ.
ಪ್ರಕರಣಕ್ಕೆ ಸ್ಫೋಟಕ ತಿರುವು: ಬಳ್ಳಾರಿ ಬ್ಯಾನರ್ ಘರ್ಷಣೆ ಕ್ಷಣಕ್ಕೊಂದು ತಿರುವುದು ಪಡೆದುಕೊಳ್ಳುತ್ತಿದೆ. ಬ್ಯಾನರ್ ಅಳವಡಿಕೆ ವಿಚಾರಕ್ಕೆ ಶಾಸಕ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಇದು ಕೊನೆಗೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಈ ವೇಳೆ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದರು.
ಇದೀಗ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದ್ದು, ಸತೀಶ್ ರೆಡ್ಡಿ ಗನ್ ಮ್ಯಾನ್ ಫೈರ್ ಮಾಡಿದ್ದ ಬಂದೂಕಿನ ಗುಂಡು ತಗುಲಿ ಯುವಕ ರಾಜಶೇಖರ್ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 12 ಎಂಎಂ ಬುಲೆಟ್ನಿಂದ ರಾಜಶೇಖರ್ ಪ್ರಾಣ ಕಳೆದುಕೊಂಡಿದ್ದಾರೆ. ಸತೀಶ್ ರೆಡ್ಡಿ ಖಾಸಗಿ ಗನ್ಮ್ಯಾನ್ ಸಹ ಬಳಕೆ ಮಾಡಿರುವುದು ಇದೇ ಗನ್ ಆಗಿದೆ. ಈ ಸಂಬಂಧ ಈಗಾಗಲೇ 5 ಗನ್ಗಳನ್ನು ಬ್ರೂಸ್ ಪೇಟೆ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಓರ್ವ ಗನ್ಮ್ಯಾನ್ನನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ನಾಲ್ವರು ತಲೆಮರಿಸಿಕೊಂಡಿದ್ದಾರೆ ಎಂದು ತಿಳಿದುವಂದಿದೆ.
ಭರತ್ ರೆಡ್ಡಿ, ಜನಾರ್ದನ ರೆಡ್ಡಿಗೆ ಸಂಕಷ್ಟ: ಪ್ರಕರಣ ಸಂಬಂಧ ಎರಡೂ ಗುಂಪುಗಳ ಮೇಲೂ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. 50ಕ್ಕೂ ಅಧಿಕ ಮಂದಿಯ ವಿಚಾರಣೆ ನಡೆಸಿದ್ದಾರೆ. ಇಂದು ಮತ್ತಷ್ಟು ಜನರ ಬಂಧನ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಗಲಾಟೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಬಂಧನ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸತೀಶ್ ರೆಡ್ಡಿ ಸ್ಥಳಕ್ಕೆ ಬಂದ ಬಳಿಕವೇ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಅವರ ಮೇಲೆ ಹಲ್ಲೆಗೆ ಜನಾರ್ದನ್ ರೆಡ್ಡಿ ಕಡೆಯವರು ಮುಂದಾಗಿದ್ದರು. ಈ ವೇಳೆ ಸತೀಶ್ ರೆಡ್ಡಿ ಖಾಸಗಿ ಗನ್ಮ್ಯಾನ್ಗಳು ಫೈರಿಂಗ್ ಮಾಡಿದ್ದರು. ಈ ಸಂಬಂಧ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಇಬ್ಬರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಈವರೆಗೂ ಒಟ್ಟಾರೆ 6 ಪ್ರಕರಣಗಳು ದಾಖಲಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದರ ಬೆನ್ನಲ್ಲೇ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.












Click it and Unblock the Notifications