ಆಂಧ್ರಪ್ರದೇಶ: ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60ರಿಂದ 62 ವರ್ಷಕ್ಕೆ ಏರಿಕೆ
ಅಮರಾವತಿ, ಜನವರಿ 31: ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಏರಿಸುವ ಸುಗ್ರೀವಾಜ್ಞೆಯನ್ನು ಆಂಧ್ರಪ್ರದೇಶ ಸರ್ಕಾರ ಹೊರಡಿಸಿದೆ.
ನಿವೃತ್ತಿ ವಯಸ್ಸು ಏರಿಕೆ ಜನವರಿ 1, 2022 ರಿಂದ ಜಾರಿಗೆ ಬರುವಂತೆ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಸೋಮವಾರ ಪ್ರಕಟಣೆ ಹೊರಡಿಸಿದೆ.
ಜೂನ್ 2014ರಲ್ಲಿ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಏರಿಕೆ ಮಾಡಿತ್ತು. ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಬೇಡಿಕೆ ಮಂಡಿಸದ ಸರ್ಕಾರಿ ನೌಕರರು ಸೇರಿದಂತೆ ಹಲವರಿಗೆ ಈ ಕ್ರಮ ಅಚ್ಚರಿ ಮೂಡಿಸಿದೆ.

ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿಗಳು, ರಾಜ್ಯ ಸರ್ಕಾರಿ ಯಂತ್ರದಲ್ಲಿ ಲಭ್ಯವಿರುವ ಮಾನವಶಕ್ತಿಯ ಉತ್ತಮ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರೆ, ಇನ್ನು ಕೆಲವರು ದಕ್ಷಿಣ ರಾಜ್ಯದ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿರುವುದರಿಂದ ಆಂಧ್ರಪ್ರದೇಶ ರಾಜ್ಯದ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಿರ್ಧಾರವು ಅನೇಕ ಸಿಬ್ಬಂದಿಗೆ ನಿವೃತ್ತಿ ಪ್ರಯೋಜನಗಳ ಪಾವತಿಯನ್ನು ಎರಡು ವರ್ಷಗಳವರೆಗೆ ಮುಂದೂಡಬಹುದಾಗಿದೆ.
ನಿವೃತ್ತಿ ಪ್ರಯೋಜನಗಳು ರಾಜ್ಯ ಸರ್ಕಾರದ ವೆಚ್ಚದ ಪ್ರಮುಖ ಭಾಗವಾಗಿದೆ. ಕೆಲವು ಮಾಧ್ಯಮಗಳ ಪ್ರಕಾರ ನಿರ್ಧಾರವು ಸರ್ಕಾರಿ ಸಿಬ್ಬಂದಿಯ ನಿವೃತ್ತಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸುತ್ತದೆ, ಹೀಗಾಗಿ ಅವರ ಪಿಂಚಣಿ ಮತ್ತು ಇತರ ನಿವೃತ್ತಿ ಪ್ರಯೋಜನಗಳ ಮೇಲೆ ಸರ್ಕಾರವು ಮಾಡುವ ವೆಚ್ಚವು ಹೆಚ್ಚಾಗಲಿದೆ ಎಂದು ವರದಿ ಮಾಡಿವೆ.
ವರದಿಯ ಪ್ರಕಾರ, ಆಂಧ್ರಪ್ರದೇಶದ ಸರ್ಕಾರಿ ನೌಕರರ ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಇತರ ಪ್ರಯೋಜನಗಳು ಸರಾಸರಿ ಸುಮಾರು 30 ಲಕ್ಷ ರೂ. ಆಗಿದೆ.
ಈ ಹಿಂದೆ ತೆಲಂಗಾಣ ಮತ್ತು ಮಧ್ಯಪ್ರದೇಶದಂತಹ ಇತರ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸಿವೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 61ಕ್ಕೆ ಬದಲಾಯಿಸಲಾಗಿದೆ. ಮಧ್ಯಪ್ರದೇಶದಲ್ಲಿ ನಿವೃತ್ತಿ ವಯಸ್ಸು 62. ಕೇಂದ್ರ ಸರ್ಕಾರದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಆಗಿದೆ.












Click it and Unblock the Notifications