ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ್ಯುರೂಪಿ ನಾಯಂಡಹಳ್ಳಿ ಜಂಕ್ಷನ್ ಹೀಗಿದೆ ನೋಡಿ

By Prasad
|
Google Oneindia Kannada News

ಬೆಂಗಳೂರು, ಆ. 8 : ನಮ್ಮ ಮೆಟ್ರೋ ಮೇಲ್ಸೇತುವೆಯ ಕೆಳಗಡೆ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಬುಧವಾರ ಸಂಜೆ ನಡೆದ ಭೀಕರ ಅಪಘಾತವಾದ ನಂತರವಾದರೂ ಟ್ರಾಫಿಕ್ ಪೊಲೀಸರು, ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ, ಆ ಜಂಕ್ಷನ್ ಮಾತ್ರ ಏನೂ ಆಗೇ ಇಲ್ಲವೇನೋ ಎಂಬಂತೆ ಗುರುವಾರ ಯಥಾಸ್ಥಿತಿಗೆ ಮರಳಿದೆ.

ಸರಕಾರ ದಡಬಡಿಸಿ ಏಳಬೇಕಾದರೆ ಅಲ್ಲಿ ಮತ್ತೊಂದು ಅದೇ ಬಗೆಯ ಭೀಕರ ದುರ್ಘಟನೆ ನಡೆಯಬೇಕಾ? ಮತ್ತೊಂದು ಕುಟುಂಬ ಟ್ರಕ್ ಅಡಿಯಲ್ಲಿ ಸಿಲುಕಿ ಕೈಲಾಸ ಸೇರಬೇಕಾ? ಆಮೆಗತಿಯಲ್ಲಿ ನಡೆಯುತ್ತಿರುವ ಆಕಾಶಚುಂಬಿ ನಮ್ಮ ಮೆಟ್ರೋ ಕಾಮಗಾರಿಯ ಕಳಗಡೆ ಮತ್ತೆಷ್ಟು ರಕ್ತದೋಕುಳಿಯಾಗಬೇಕು?

ಆ ಜಂಕ್ಷನ್ ನಲ್ಲಿ ಒಂದೇ ಒಂದು ಸಿಗ್ನಲ್ ಇಲ್ಲ. ಬನಶಂಕರಿ ಕಡೆಯಿಂದ, ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆಯಿಂದ, ನಾಗರಬಾವಿ ಕಡೆಯಿಂದ ಮತ್ತು ಮೈಸೂರಿನ ಕಡೆಯಿಂದ ಬರುವ ಸಾವಿರಾರು ವಾಹನಗಳ ಸಂಚಾರಕ್ಕೆ ಲಂಗು ಲಗಾಮೇ ಇಲ್ಲ. ಭೀಕರ ಅಪಘಾತವಾದ ಮರುದಿನವೇ ವಾಹನಗಳು ಎಂದಿನಂತೆ ಅಡ್ಡಾದಿಡ್ಡಿ ಚಲಿಸುತ್ತಲೇ ಇವೆ. ಇದಕ್ಕೆ ಪೊಲೀಸರು ಏನು ಹೇಳುತ್ತಾರೆ?

ಗುರುವಾರ ಮಧ್ಯಾಹ್ನ 11.30ರ ಸುಮಾರಿಗೆ ಕಂಡುಬಂದ ದೃಶ್ಯವನ್ನು ಚಿತ್ರಗಳಲ್ಲಿ ಸೆರೆಹಿಡಿಯಲಾಗಿದೆ. ಪೊಲೀಸರೆಲ್ಲಿದ್ದಾರೆ ನೀವೇ ಹುಡುಕಿ. ನಾಲ್ಕೂ ದಿಕ್ಕಿನಿಂದ ಬರುತ್ತಿರುವ ವಾಹನಗಳು ಯಾವ ರೀತಿ ಚಲಿಸುತ್ತಿವೆ ಎಂಬುದನ್ನು ಒಮ್ಮೆ ಗಮನಿಸಿ. ಸರಕಾರ ಕೂಡಲೆ ಕ್ರಮ ತೆಗೆದುಕೊಂಡು, ಈ ಮೃತ್ಯುರೂಪಿ ಜಂಕ್ಷನ್ ನಲ್ಲಿ ಸಿಗ್ನಲ್ ಅಳವಡಿಸಲಿ, ಸತತವಾಗಿ ಪೊಲೀಸರು ಟ್ರಾಫಿಕ್ ಅನ್ನು ನಿಗ್ರಹಿಸಲಿ.

ಎಲ್ರೀ ಟ್ರಾಫಿಕ್ ಪೊಲೀಸ್ರು?

ಎಲ್ರೀ ಟ್ರಾಫಿಕ್ ಪೊಲೀಸ್ರು?

ಟ್ರಾಫಿಕ್ ಪೊಲೀಸರು ಇದ್ದರೂ ಕೂಡ ಈ ಜಂಕ್ಷನ್ ನಲ್ಲಿ ಟ್ರಾಫಿಕ್ ಹೀಗೆಯೇ ಇರುತ್ತದೆ. ಎಲ್ಲರಿಗೂ ತಾವೇ ಮೊದಲು ರಸ್ತೆ ದಾಟಬೇಕೆಂಬ ಹುಕಿ. ದಾರಿ ಬಿಡದಿದ್ದರೆ ಕೊಂಯ್ಕ್ ಕೊಂಯ್ಕ್ ಹಾರ್ನ್ ಹಾಕುತ್ತಲೇ ಇರುತ್ತಾರೆ. ಪೊಲೀಸರು ಮೂಕವಿಸ್ಮಿತರಾಗಿ ನೋಡುತ್ತಲೇ ಇರುತ್ತಾರೆ.

ಮೈಸೂರಿನ ಕಡೆಯಿಂದ ವಾಹನ ಪ್ರವಾಹ

ಮೈಸೂರಿನ ಕಡೆಯಿಂದ ವಾಹನ ಪ್ರವಾಹ

ಮೈಸೂರಿನ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಈ ದಾರಿಯಲ್ಲಿ ಯಮವೇಗದಲ್ಲಿ ಸಾಗುತ್ತಿದ್ದಾಗಲೇ ಬುಧವಾರ ಅಪಘಾತ ಸಂಭವಿಸಿರುವುದು. ಇಳಿಜಾರಿನಲ್ಲಿ ಇರುವ ರಸ್ತೆಗೆ ಜಂಕ್ಷನ್ ಬಳಿ ಹಂಪ್ಸ್ ಇಲ್ಲವೇ ಇಲ್ಲ. ಕಂಟ್ರೋಲ್ ತಪ್ಪಿದರೆ ಹೆಣ ಬೀಳುವುದು ಗ್ಯಾರಂಟಿ. ಜನರು ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡೇ ಇಲ್ಲಿ ಸಾಗಬೇಕು.

ಯಾವ ರಸ್ತೆ ಎತ್ತ ಸಾಗುತ್ತದೆ ಸ್ವಾಮಿ?

ಯಾವ ರಸ್ತೆ ಎತ್ತ ಸಾಗುತ್ತದೆ ಸ್ವಾಮಿ?

ಯಾವ ರಸ್ತೆ ಯಾವ ಕಡೆ ಸಾಗುತ್ತದೆ ಎಂಬುದರ ಬೋರ್ಡ್ ಗಳು ಇಲ್ಲಿಲ್ಲ. ಮೊದಲ ಬಾರಿ ಬರುವವರಿಗೆ ನಗರಕ್ಕೆ ಯಾವ ಕಡೆ ಹೋಗಬೇಕು, ಬನಶಂಕರಿ ಕಡೆ ಹೇಗೆ ಹೋಗಬೇಕು, ನಾಗರಭಾವಿ ಕಡೆ ಹೋಗಬೇಕಾದರೆ ಎತ್ತ ಕಡೆ ಟರ್ನ್ ತಗೋಬೇಕು ಎಂಬ ಗೊಂದಲ ಇದ್ದದ್ದೇ.

ಗೊಂದಲದ ಗೂಡು ಈ ಜಂಕ್ಷನ್

ಗೊಂದಲದ ಗೂಡು ಈ ಜಂಕ್ಷನ್

ಗೊಂದಲದ ಗೂಡಾಗಿರುವ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಮೈಸೂರಿನಿಂದ ಬರುವ ವಾಹನಗಳು ಜಂಕ್ಷನ್ ಬಳಿ ಬಂದರೂ ವೇಗವನ್ನು ನಿಯಂತ್ರಿಸುವುದಿಲ್ಲ. ಯದ್ವಾತದ್ವಾ ಓಡುವ ಲಾರಿಗಳು ನಿಯಂತ್ರಣ ತಪ್ಪಿದರೆ ದುರಂತ ತಪ್ಪಿದ್ದಲ್ಲ. ಇದು ನಾಗರಭಾವಿ ಎಡತಿರುವಿನ ದೃಶ್ಯ.

ಆದಷ್ಟು ಬೇಗನೆ ಸಿಗ್ನಲ್ ಅಳವಡಿಸಲಿ

ಆದಷ್ಟು ಬೇಗನೆ ಸಿಗ್ನಲ್ ಅಳವಡಿಸಲಿ

ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಪೊಲೀಸರು ಟ್ರಾಫಿಕ್ ನಿಯಂತ್ರಿಸುತ್ತಾರಾದರೂ ಎಲ್ಲ ಸಮಯದಲ್ಲಿ ಇರುವುದಿಲ್ಲದಿರುವುದೇ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದನ್ನು ತಪ್ಪಿಸಲು ಆದಷ್ಟು ಬೇಗನೆ ಇಲ್ಲಿ ಸಿಗ್ನಲ್ ಅಳವಡಿಸುವಂತಾಗಲಿ.

ಅದೋ ಅಲ್ಲಿದ್ದಾರೆ ನೋಡಿ ಪೊಲೀಸ್ರು!

ಅದೋ ಅಲ್ಲಿದ್ದಾರೆ ನೋಡಿ ಪೊಲೀಸ್ರು!

ಪೊಲೀಸರು ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದೀರಾ? ಅಲ್ಲಿ ದೂರದಲ್ಲಿ ಫ್ರೈ ಓವರ್ ಕೆಳಗಡೆ ನೆರಳಲ್ಲಿ ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿಕೊಳ್ಳುತ್ತ ನಿಂತಿದ್ದಾರೆ ನೋಡಿ ಟ್ರಾಫಿಕ್ ಪೊಲೀಸರು. ಏನು ಮಾತಾಡಿಕೊಳ್ಳುತ್ತಿರಬಹುದು ನಿಮ್ಮ ಊಹೆಗೆ ಬಿಟ್ಟಿದ್ದು.

ನಾನೇ ಮೊದಲು ಹೋಗಬೇಕು

ನಾನೇ ಮೊದಲು ಹೋಗಬೇಕು

ವಾಹನಗಳು ಇಲ್ಲಿ ಕಾಲದ ವೇಗವನ್ನು ಮೀರಿ ಚಲಿಸುತ್ತಿರುತ್ತವೆ. ತಾವೇ ಮೊದಲು ಮುನ್ನಗ್ಗಬೇಕು. ಹ್ಯಾಗಿದ್ರೂ ಸಿಗ್ನಲ್ ಇಲ್ಲ, ಹೇಳೋರು ಕೇಳೋರು ಇಲ್ಲವೇ ಇಲ್ಲ. ಪೊಲೀಸರ ಹ್ಯಾಂಡ್ ಸಿಗ್ನಲ್ ಅನ್ನು ಚಾಲಕರು ಕೇಳುವುದೂ ಇಲ್ಲ. ಒಂದೊಂದು ಬಾರಿ ಪೊಲೀಸರು ಇಲ್ಲಿ ಅಸಹಾಯಕರಾಗುತ್ತಾರೆ ಎಂದೆನಿಸುತ್ತದೆ.

ಈ ದುರಂತಗಳಿಗೆ ಯಾರು ಹೊಣೆ?

ಈ ದುರಂತಗಳಿಗೆ ಯಾರು ಹೊಣೆ?

ವಾಹನಗಳು ಹೇಗೆ ಚಲಿಸುತ್ತಿವೆ ಒಮ್ಮೆ ನೋಡಿರಿ. ಸೆಟಲೈಟ್ ಬಸ್ ನಿಲ್ದಾಣದ ಕಡೆಯಿಂದ ಬರುವ ಬಸ್, ಲಾರಿ, ಕಾರುಗಳು ಪಿಲ್ಲರ್ ಎರಡೂ ಬದಿಯಿಂದ ವೇಗವಾಗಿ ಬರುತ್ತಿರುತ್ತವೆ. ಇತರ ಚಾಲಕರು ಮಾತ್ರವಲ್ಲ ಪೊಲೀಸರು ಕೂಡ ಕಕ್ಕಾಬಿಕ್ಕಿಯಾಗಿಬಿಡುವಂತೆ ಸಂಚಾರವಿರುತ್ತದೆ ಇಲ್ಲಿ. ದುರಂತ ಸಂಭವಿಸಿಬಿಟ್ಟಿದೆ. ಈ ಎಲ್ಲ ದುರಂತಗಳಿಗೆ ಯಾರು ಹೊಣೆ?

English summary
Should we wait for another accident to happen on Mysore road near Nayandahalli junction to install traffic signals and control the erratic traffic? Why Bangalore traffic police have not taken any action?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X