ಜನಾ ರೆಡ್ಡಿ -ಲಕ್ಷ್ಮಿ ಅರುಣಾ ಖಜಾನೆಯಲ್ಲಿ ಏನೆಲ್ಲಾ ಇದೆ?

ಆದರೆ, 2010-11ರಲ್ಲಿ ಇವರ ಒಟ್ಟು ಆಸ್ತಿ ಮೌಲ್ಯ 378.30 ಕೋಟಿ ರೂ.ಗೆ ಏರಿದೆ. ಇದರಲ್ಲಿ ರೆಡ್ಡಿ ಹೆಸರಿನ ಆಸ್ತಿ ಬರೀ 144 ಕೋಟಿ ರೂ. ಮತ್ತು ಪತ್ನಿ ಲಕ್ಷ್ಮಿಅರುಣಾ ಹೆಸರಿನಲ್ಲಿರುವ ಆಸ್ತಿ ಮೊತ್ತ 230 ಕೋಟಿ ರೂ. ಉಳಿದಂತೆ ಬ್ರಹ್ಮಿಣಿ ಹೆಸರಲ್ಲಿ 4.25 ಕೋಟಿ ಮತ್ತು ಕಿರೀಟಿ ಹೆಸರಲ್ಲಿ 8 ಲಕ್ಷ ರೂ. ಆಸ್ತಿ ತೋರಿಸಲಾಗಿದೆ. ಗಮನಾರ್ಹ ಅಂಶ ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಜನಾರ್ದನ ರೆಡ್ಡಿ ಆಸ್ತಿ ಪ್ರಮಾಣ ಸುಮಾರು 15 ಕೋಟಿಯಷ್ಟು ಕಡಿಮೆಯಾಗಿದೆ! ಆದರೆ, ಪತ್ನಿ ಹೆಸರಿನ ಆಸ್ತಿ ಏಕಾಏಕಿ 145 ಕೋಟಿಯಿಂದ 230 ಕೋಟಿಗೆ ಹೆಚ್ಚಿದೆ.
ಹೀಗಿರುವಾಗ ರೆಡ್ಡಿ ಕೊಟ್ಟಿರುವ ಈ ಅಧಿಕೃತ ದಾಖಲೆ ಪ್ರಕಾರ ಜನಾರ್ದನ ರೆಡ್ಡಿಗಿಂತ ಪತ್ನಿ ಲಕ್ಷ್ಮಿ ಅರುಣಾ ಹೆಚ್ಚು ಶ್ರೀಮಂತರು. ಅಂದರೆ, ರಾಜ್ಯದಲ್ಲಿ ಯಾವಾಗ ಅಕ್ರಮ ಗಣಿಗಾರಿಕೆ ಕುರಿತು ಆರೋಪಗಳು ಜೋರಾದಾವೊ ಆಗ ರೆಡ್ಡಿ ಕೂಡ ಹೆಚ್ಚಿನ ಹಣ-ಆಸ್ತಿಯನ್ನು ಹೆಂಡತಿ ಹೆಸರಿನಲ್ಲಿ ಹೂಡಿಕೆ ಮಾಡಲು ಶುರು ಮಾಡಿದರು. ರೆಡ್ಡಿ ಕೇವಲ ಎರಡು ಠೇವಣಿ ಖಾತೆಗಳನ್ನು ತೋರಿಸಿದ್ದು, ಅದರಲ್ಲಿರುವ ಮೊತ್ತ ಬರೀ 25.23 ಲಕ್ಷ ರೂ.
ದೊಡ್ಡಬಳ್ಳಾಪುರದಲ್ಲಿದೆ ಲಕ್ಷ್ಮಿ ಅರುಣಾಗೆ 25 ಎಕರೆ ಜಮೀನು: ಅದೇ ಲಕ್ಷ್ಮಿ ಅರುಣಾ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಠೇವಣಿ, ಷೇರು ಮೊತ್ತ, ಜಮೀನು, ಚಿನ್ನಾಭರಣಗಳನ್ನು ಎಣಿಸುವುದೇ ಕಷ್ಟ. ಲಕ್ಷ್ಮಿ ಅವರು ಬಳ್ಳಾರಿ ಆಕ್ಸಿಸ್ ಬ್ಯಾಂಕ್‌ನಲ್ಲಿ ಒಂದೇದಿನ ಒಟ್ಟು 11 ಖಾತೆಗಳನ್ನು ತೆರೆದು ಪ್ರತಿಯೊಂದು ಖಾತೆಯಲ್ಲಿ ಕೋಟಿ ಹಣ ಠೇವಣಿ ಇಡುತ್ತಾರೆ. 2011ರ ಮಾಚ್ 29ರಂದು ಒಟ್ಟು 11 ಅಕೌಂಟ್‌ಗೆ ಅವರು ಜಮೆ ಮಾಡಿದ ಮೊತ್ತ ಬರೋಬರಿ 16.51 ಕೋಟಿ ರೂ.! ಇನ್ನು ಓಬಳಾಪುರಂ, ಎನೋಬಲ್, ಕಿರೀಟಿ ಗ್ರೂಪ್, ಒಡಿಸ್ಸಿ ಕಾರ್ಪೊರೇಷನ್ ಮತ್ತಿತರ ಕಂಪನಿಗಳಲ್ಲಿ ಒಟ್ಟು ಸುಮಾರು 100 ಕೋಟಿ ಬಂಡವಾಳ ಹಾಕಿರುವುದಾಗಿ ದಾಖಲೆಗಳು ಹೇಳುತ್ತವೆ.
2011ರ ಮಾರ್ಚ್‌ನಲ್ಲಿ ಅರುಣಾ 66.75 ಕೋಟಿ ರೂ. ಮೈನಿಂಗ್ ಬಿಸಿನೆಸ್‌ಗೆ ಹೂಡಿದ್ದರು. ಈ ನಡುವೆ ಪತ್ನಿ ಹೆಸರಿನಲ್ಲಿ 2004ರಿಂದ ಇಲ್ಲಿವರೆಗೆ 19 ಕೋಟಿ ಚಿನ್ನಾಭರಣ ಖರೀದಿಸಿದ್ದಾರೆ. ಹಾಗೆಯೇ ಆಂಧ್ರದ ಕರ್ನೂಲ್, ಬೆಂಗಳೂರು ಸೇರಿದಂತೆ ಹಲವೆಡೆ ಕೋಟ್ಯಂತರ ಬೆಲೆ ಜಮೀನು ಹೊಂದಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಲಕ್ಷ್ಮಿ ಅರುಣಾ ಸುಮಾರು 25 ಎಕರೆ ಜಮೀನು ಹೊಂದಿದ್ದಾರೆ. ಅಲ್ಲದೆ ಸುಮಾರು 10 ಕೋಟಿ ಮೌಲ್ಯದ ಕಟ್ಟಡಗಳ ಒಡತಿಯಾಗಿದ್ದು, 68 ಕಡೆ ನಿವೇಶನ ಹೊಂದಿದ್ದಾರೆ.
ಲೋಕಾಯುಕ್ತಕ್ಕೆ ಸಲ್ಲಿಸಿರುವ ತಮ್ಮ ಆಸ್ತಿ ವಿವರದಲ್ಲಿ ಇಷ್ಟೆಲ್ಲ ಹೇಳಿಕೊಂಡಿದ್ದರೂ ಒಂದು ಮಾತ್ರ ನಿಜ, ಅದೇನೆಂದರೆ, ರೆಡ್ಡಿ ಲೋಕಾಯುಕ್ತಕ್ಕೆ ಸಲ್ಲಿಸಿರುವುದು ಕೃಷ್ಣನ ಲೆಕ್ಕ. ಹಾಗಾದರೆ, ಸಾವಿರಾರು ಕೋಟಿಗಳ ರೆಡ್ಡಿ ಕುಟುಂಬದ ಉಳಿದ ಆಸ್ತಿಯೆಲ್ಲ ಎಲ್ಲಿದೆ ಎನ್ನುವುದು ಸದ್ಯ ಸಿಬಿಐ ತನಿಖೆಯಿಂದ ಬಯಲಾಗುವುದು ಗ್ಯಾರಂಟಿ.












Click it and Unblock the Notifications