ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ಉತ್ಸವ ಮತ್ತು ವಿವಾದಗಳು!

By * ರೋಹಿಣಿ ಬಳ್ಳಾರಿ
|
Google Oneindia Kannada News

Controversies surrounding Hampi Utsav
ಹಂಪಿ ಉತ್ಸವ ಪ್ರಾರಂಭ ಆದಾಗಿನಿಂದಲೂ ಒಂದಿಲ್ಲ ಒಂದು ರೀತಿಯ ವಿವಾದಗಳು ಸೃಷ್ಟಿಯಾಗಿ ಉತ್ಸವದ ಉತ್ಸಾಹಕ್ಕೆ ಅಡ್ಡಿಪಡಿಸುತ್ತಲೇ ಇವೆ. ರಾಮಕೃಷ್ಣಹೆಗಡೆ ಅವರ ಆಡಳಿತಾವಧಿಯಲ್ಲಿ ಎಂ.ಪಿ. ಪ್ರಕಾಶ್ ಅವರ ಕಲ್ಪನೆಯ ಕೂಸಾಗಿ ಮೈದಳೆದ ಹಂಪಿ ಉತ್ಸವದ ಮೊದಲ ಉತ್ಸವದಲ್ಲೇ ನಾಡಿನ ಮುತ್ಸದ್ಧಿ, ಧೀಮಂತ ನಾಯಕ ನಜೀರ್ ಸಾಬ್ ಅಕಾಲಿಕ ಮರಣಕ್ಕೆ ತುತ್ತಾದರು. ಉತ್ಸವ ಮೊಟಕಾಯಿತು.

ನಂತರದ ಉತ್ಸವಗಳಲ್ಲಿ ಉತ್ಸವ ಆಚರಿಸುವವರನ್ನು ತೀವ್ರವಾಗಿ ಕಾಡಿದ್ದು, ಬರ - ನೆರೆ, ಆರ್ಥಿಕ ಮುಗ್ಗಟ್ಟು. ಅಲ್ಲದೇ, ಸಂವಿಧಾನವಾಗಿ ರಾಜಕೀಯ ವ್ಯವಸ್ಥೆಯನ್ನೇ ಏರುಪೇರು ಮಾಡಿದ್ದು ಎಸ್.ಆರ್. ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ರಾಷ್ಟ್ರಪತಿ ಆಡಳಿತ. ಎಸ್.ಎಂ. ಕೃಷ್ಣ ಆಡಳಿತಾವಧಿಯಲ್ಲಿ ಜನವರಿ 26ರ ಸಂಜೆ ಉತ್ಸವ ಉದ್ಘಾಟನೆಗೊಳ್ಳಬೇಕಿತ್ತು. ಆದರೆ, ಹೊಸಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸೂರ್ಯನಾರಾಯಣ ಧ್ವಜವಂದನೆ ಸ್ವೀಕರಿಸುವಾಗಲೇ ಆಗುಂತಕನ ಗುಂಡಿನ ಗುರಿಗೆ ಕೊಲೆ ಆಗಿದ್ದರು. ಉತ್ಸವ ರದ್ದಾಯಿತು.

ಪ್ರತಿವರ್ಷದ ನವೆಂಬರ್ ತಿಂಗಳಲ್ಲಿ ಈ ಉತ್ಸವ ಆಚರಿಸಲ್ಪಡುತ್ತಿತ್ತು. ದೇಶ - ವಿದೇಶಗಳ ಯಾತ್ರಾರ್ಥಿಗಳು ಕೂಡ ನವೆಂಬರ್‌ನಲ್ಲಿ ಹಂಪಿಗೆ ಭೇಟಿ ನೀಡಲು ಅತೀವ ಆಸಕ್ತಿ ತೋರುತ್ತಿದ್ದರು. ಸುಗ್ಗಿಯ ಮಾಗಿ ಛಳಿಯ ಆಸುಪಾಸಿನಲ್ಲಿ ಹಿಗ್ಗಿನಿಂದ ಇರುತ್ತಿದ್ದ ಸುತ್ತಲಿನ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಹಂಪಿ ಉತ್ಸವವನ್ನು ಗ್ರಾಮೀಣ ಉತ್ಸವವವಾಗಿ, ಹಳ್ಳಿಗರ ಹಬ್ಬವಾಗಿ, ಜನೋತ್ಸವವಾಗಿ ಆಚರಿಸುತ್ತಿದ್ದರು. ನವೆಂಬರ್ ನಿಂದ ಜನವರಿಗೆ ಉತ್ಸವಾಚರಣೆ ಮುಂದೂಡಿದ್ದರಿಂದ ಉತ್ಸವ ಕಾಟಾಚಾರಕ್ಕಷ್ಟೇ ನಡೆಯುತ್ತಿದೆ.

ಇದಕ್ಕೆ ಪೂರಕವಾಗಿ ತೆಲುಗರ ರಾಜ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ಉತ್ಸವವನ್ನು ಬಿಜೆಪಿ ಆಚರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿತು. ಇದೇ ಸಂದರ್ಭದಲ್ಲಿ ಕಳೆದ ವರ್ಷ ಬಳ್ಳಾರಿಯಲ್ಲಿ ಜನವರಿ 26ರಂದೇ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್ ಕುಸಿತು 30 ಜನರು ಮೃತಪಟ್ಟರು. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಎಕರೆ ಭೂಮಿಯನ್ನು ಥೀಮ್‌ಪಾರ್ಕ್'ಗಾಗಿ ಸರ್ಕಾರ ವಶಕ್ಕೆ ತೆಗೆದುಕೊಂಡು ಮತ್ತೊಂದು ರೀತಿಯಲ್ಲಿ ವಿವಾದವನ್ನೇ ಹೊದ್ದುಕೊಂಡಿತು.

ಪ್ರಸ್ತುತ ಹಂಪಿ ಉತ್ಸವ 2011ಕ್ಕೆ ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ ಭರದಿಂದ ಸಜ್ಜುಗೊಳ್ಳುತ್ತಿದೆ. ಜನವರಿ 27, 28 ಮತ್ತು 29ರಂದು ಹಂಪಿಯಲ್ಲಿ ಉತ್ಸವ ಆಚರಣೆಗೆ ಪೂರ್ವಭಾವಿ ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಅಂಕುಶ ತಿರುಗುತ್ತಿದೆ. ಮುಖ್ಯಮಂತ್ರಿಯವರ ವಿರುದ್ಧ ಅನೇಕ ಕೇಸುಗಳನ್ನು ಜಡಿಯಲಾಗಿದೆ. ಇದರ ಛಾಯೆ ಉತ್ಸವದ ಮೇಲೆ ಬಂದರೂ ಆಶ್ಚರ್ಯವಿಲ್ಲ.

English summary
Controversies surrounding Hampi Utsav. Earlier the festival was conducted in the month of Novermber. Cases filed against BS Yeddyurappa too could cast shadow on Hampi festival, which is starting from January 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X