Hampi Utsav 2024: ನಾಳೆಯಿಂದ ವಿಶ್ವವಿಖ್ಯಾತ ಹಂಪಿಯಲ್ಲಿ ಸರಳ ಉತ್ಸವ, ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ವಿಜಯನಗರ, ಫೆಬ್ರವರಿ 01: ಬಹು ಮುಖ್ಯ ಉತ್ಸವಕ್ಕೆ ಹಂಪಿ ಮದುಮಗಳಂತೆ ಶೃಂಗಾರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಫೆಬ್ರವರಿ 2 ರಂದು 3 ದಿನಗಳ ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶುಕ್ರವಾರ ರಾತ್ರಿ 8 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಹಲವು ಸಚಿವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಫೆಬ್ರವರಿ 2, 3 ಮತ್ತು 4 ರಂದು ಗ್ರಾಮೀಣ ಆಟಗಳು, ರಂಗೋಲಿ ಸ್ಪರ್ಧೆಗಳು, ಸಂಗೀತ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿಂದೆ ಪ್ರತಿ ವರ್ಷ ನವೆಂಬರ್ 3, 4 ಮತ್ತು 5 ರಂದು ಹಂಪಿ ಉತ್ಸವವನ್ನು ನಿಗದಿಪಡಿಸಲಾಗಿತ್ತು. ಆದರೆ ಸರ್ಕಾರಗಳು ಬದಲಾದಂತೆ ದಿನಾಂಕಗಳನ್ನು ಸಹ ಬದಲಾಯಿಸಲಾಗಿದೆ.

ಈ ಬಾರಿ ಸರಳ ಹಂಪಿ ಉತ್ಸವ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅರ್ಕಾರ ಅಧಿಕಾರಕ್ಕೆ ಬಂದ ನಂತರ ತಡವಾಗಿ ಹಂಪಿ ಉತ್ಸವ ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಳವಾಗಿ ಉತ್ಸವ ನಡೆಸಲು ಸರ್ಕಾರ ಯೋಚಿಸಿದೆ. ವಿಜಯನಗರ ಜಿಲ್ಲಾಡಳಿತವು ಹಂಪಿ ಉತ್ಸವಕ್ಕೆ 17 ಕೋಟಿ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದು, ರಾಜ್ಯದಿಂದ 14 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು ಉಳಿದ ಹಣವನ್ನು ಸ್ಥಳೀಯವಾಗಿ ಹೊಂದಿಸಲಾಗಿದೆ.
ಇನ್ನು, ಮುಖ್ಯ ಕಾರ್ಯಕ್ರಮದ ಪೂರ್ವಭಾವಿಯಾಗಿ ಕಳೆದ ವಾರ ಜಿಲ್ಲಾಡಳಿತದ ವತಿಯಿಂದ ಬೈಕ್ ರ್ಯಾಲಿ, ತುಂಗಾ ಆರತಿ, ವಿವಿಧ ಕಲೆಗಳ ಪ್ರದರ್ಶನದಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಏಕಕಾಲದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ನಾಲ್ಕು ದೊಡ್ಡ ವೇದಿಕೆಗಳನ್ನು ನಿರ್ಮಿಸಲಾಗಿದೆ. ಹಂಪಿ ಉತ್ಸವದ ಸಂದರ್ಭದಲ್ಲಿ ಹಲವಾರು ಪ್ರಸಿದ್ಧ ಗಾಯಕರು ಮತ್ತು ಸಂಗೀತಗಾರರು ಪ್ರದರ್ಶನ ನೀಡಲಿದ್ದಾರೆ.
ಫೆಬ್ರವರಿ 2, 3 ಮತ್ತು 4 ರಂದು ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ವಿವಿಧ ಸಾಂಸ್ಕೃತಿಕ ತಂಡಗಳನ್ನು ನಿಯೋಜಿಸಲಾಗಿದೆ. ಹೊಸಪೇಟೆಯ ರಸ್ತೆಗಳಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ: ಸಿದ್ದರಾಮಯ್ಯ ಟ್ವೀಟ್
ಹಂಪಿ ಉತ್ಸವದ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಕನ್ನಡಿಗರಿಗೆ ಕರೆ ನೀಡಿದ್ದಾರೆ. "ನಾಡಿನ ಕಲೆ, ವಾಸ್ತುಶಿಲ್ಪದ ತೊಟ್ಟಿಲು, ವಿಶ್ವವಿಖ್ಯಾತ ಹಂಪಿಯಲ್ಲಿ ಇದೇ ಫೆಬ್ರವರಿ 2 ರಿಂದ 4ನೇ ತಾರೀಖಿನ ವರೆಗೆ ಹಂಪಿ ಉತ್ಸವ ನಡೆಯಲಿದೆ. ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ" ಎಂದು ಮನವಿ ಮಾಡಿದ್ದಾರೆ.
ನಾಡಿನ ಕಲೆ, ವಾಸ್ತುಶಿಲ್ಪದ ತೊಟ್ಟಿಲು, ವಿಶ್ವವಿಖ್ಯಾತ ಹಂಪಿಯಲ್ಲಿ ಇದೇ ಫೆಬ್ರವರಿ 2 ರಿಂದ 4ನೇ ತಾರೀಖಿನ ವರೆಗೆ ಹಂಪಿ ಉತ್ಸವ ನಡೆಯಲಿದೆ.
— Siddaramaiah (@siddaramaiah) February 1, 2024
ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ. #ಹಂಪಿಉತ್ಸವ pic.twitter.com/50ChyPsn0b
ಹಂಪಿ ಬೈ ಸ್ಕೈ
ಈ ಬಾರಿಯ ಹಂಪಿ ಉತ್ಸವದ ಪ್ರಮುಖ ಆಕರ್ಷಣೆ ಹಂಪಿ ಬೈ ಸ್ಕೈ. ಈ ವರ್ಷ ಉತ್ಸವದ ಒಂದು ದಿನ ಮುಂಚಿತವಾಗಿ ಹಂಪಿ ಬೈ ಸ್ಕೈಗೆ ಚಾನೆ ದೊರೆಯಲಿದೆ. ಇದರಿಂದ ಪ್ರವಾಸಿಗರಿಗೆ ಹೆಲಿಕಾಪ್ಟರ್‌ನಲ್ಲಿ ವಿಶ್ವ ಪಾರಂಪರಿಕ ತಾಣವನ್ನು ಆಕಾಶದಿಂದ ನೋಡಲು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿ 1 ರಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟನೆ ಮಾಡಲಿದ್ದಾರೆ.
ವಿಜಯನಗರ ಸಾಮ್ರಾಜ್ಯವನ್ನು ಬಾನೆತ್ತರದಿಂದದ ನೋಡು ಬಯಸುವ ಪ್ರವಾಸಿಗರಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪ್ರಯಾಣಿಕರಿಗೆ 4,229 ರೂಪಾಯಿ ದರವಿದೆ. ಪ್ರತಿ ಸವಾರಿಗೆ ಐದರಿಂದ ಆರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಹೊಸಪೇಟೆಯಿಂದ ಹಳ್ಳಿಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರಯಾಣಿಕರಿಗೆ ವಿಶೇಷ ಬಸ್‌ಗಳನ್ನು ಪ್ರಾರಂಭಿಸಿದೆ.












Click it and Unblock the Notifications