Hampi Utsav 2024: ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್ - ಮಾಹಿತಿ ತಿಳಿಯಿರಿ
ವಿಜಯನಗರ, ಡಿಸೆಂಬರ್, 26: ಹೊಸವರ್ಷಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಬಾಕಿಯಿದ್ದು, ಈ ಹಿನ್ನೆಲೆ ವಿಶ್ವಪರಂಪರೆ ತಾಣವಾಗಿರುವ ಹಂಪಿಗೆ ಈ ಸಮಯದಲ್ಲಿ ಭೇಟಿ ನೀಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಹಾಗೆಯೇ ಇದೀಗ ಹಂಪಿ ಉತ್ಸವಕ್ಕೂ ರಾಜ್ಯ ಸರ್ಕಾರ ಮುಹೂರ್ತ ನಿಗದಿ ಮಾಡಿದ್ದು, ಇದು ಕೂಡ ಪ್ರವಾಸಿಗರಿಗೆ ಸಿಹಿಸುದ್ದಿಯಾಗಿದೆ. ಹಾಗಾದರೆ ಇದು ಯಾವಾಗಿನಿಂದ ಆರಂಭವಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ
ಫೆಬ್ರವರಿ 2 ರಿಂದ ಹಂಪಿ ಉತ್ಸವ ಆರಂಭ ಆಗಲಿದೆ. ಈ ಉತ್ಸವ ಫೆಬ್ರವರಿ 2, 3 ಮತ್ತು 4ರವರೆಗೆ 3 ದಿನಗಳ ಕಾಲ ನಡೆಯಲಿದೆ. ಹಾಗೆಯೇ ಉತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ಸಿಎಂ ಸಿದ್ದರಾಮಯ್ಯ ಅವರು ಫೆಬ್ರವರಿ 2ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ಒಪ್ಪಿಗೆ ನೀಡಿದ್ದು, ಮೊದಲ ದಿನ ಉತ್ಸವ ಉದ್ಘಾಟನೆ ಮಾಡಲಿದ್ದಾರೆ. ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವಾಕರ್ ಅವರಿಗೆ ವಿಜಯ ನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.
ಈ ಬಾರಿಯ ಹಂಪಿ ಉತ್ಸವ ವಿಜೃಂಭಣೆಯಿಂದ ಮಾಡುವಂತೆ ಹಾಗೂ ಸ್ಥಳೀಯ ಕಲಾವಿದರು ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಒತ್ತು ನೀಡಲು ಉಸ್ತುವಾರಿ ಸಚಿವರು ನಿರ್ದೇಶನ ನೀಡಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಸಾಂಸ್ಕೃತಿಕ ತಂಡಗಳನ್ನು ಜೊತೆ ಸೇರಿಸಿಕೊಂಡು ಉತ್ಸವ ಯಶಸ್ವಿಗೊಳಿಸಲು ತಿಳಿಸಿದ್ದಾರೆ.
ಇನ್ನು ಸಾಮಾನ್ಯ ದಿನಗಳಲ್ಲೇ ಪ್ರತಿನಿತ್ಯ ಸಾವಿರಾರು ಮಂದಿ ವಿಜಯನಗರ ಸಾಮ್ರಾಜ್ಯದ ಅಂತಲೇ ಪ್ರಖ್ಯಾತಿಯಾಗಿದ್ದ ಹಂಪಿಗೆ ಭೇಟಿ ನೀಡುತ್ತಾರೆ. ಇನ್ನು ಹಂಪಿ ಉತ್ಸವದ ವೇಳೆ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ಸಾಧ್ಯೆತೆಯಿದೆ ಎನ್ನಲಾಗಿದೆ.
ವಿಜಯನಗರದ ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಈಗಾಗಲೇ 1986ರಲ್ಲಿ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಹಂಪಿಯೂ ಸೇರಿದೆ. ಆದ್ದರಿಂದ ಈ ಉತ್ಸವವು ಜನೋತ್ಸವದೊಂದಿಗೆ ವಿಜಯನಗರದ ಕಲಾ ಪ್ರಪಂಚವನ್ನು ತೋರಿಸಲಿದೆ. ಇನ್ನು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರ ಆದೇಶದ ಮೇರೆಗೆ ಇಲ್ಲಿನ ಕಲ್ಲಿನ ರಥವನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ.
ಬೆಂಗಳೂರಿನಿಂದ ಹಂಪಿಯು ಸುಮಾರು 342.2 ಕಿಲೋ ಮೀಟರ್ ದೂರದಲ್ಲಿದೆ. ರಸ್ತೆ, ರೈಲು ಅಥವಾ ವಿಮಾನದ ಮೂಲಕವೂ ಇಲ್ಲಿಗೆ ತಲುಪಬಹುದಾಗಿದೆ. ಹಂಪಿಗೆ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಪ್ರತಿದಿನ ವಿಮಾನಗಳಿವೆ. ಹಂಪಿಯಲ್ಲಿ ಟ್ಯಾಕ್ಸಿ, ಬೈಕ್ ಅಥವಾ ಬೈಸಿಕಲ್ ಬಾಡಿಗೆಗೆ ಪಡೆದು ವಿಜಯ ವಿಠ್ಠಲ ದೇವಸ್ಥಾನವನ್ನು ತಲುಪಬಹುದಾಗಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳಲ್ಲೂ ಸಹ ಪ್ರವಾಸ ಮಾಡಬಹುದಾಗಿದೆ.












Click it and Unblock the Notifications