ಇಂದಿನ ರಾಜಕೀಯ ನಾಟಕದ ಬಿಸಿ ರೋಚಕ ಸುದ್ದಿಗಳು!

ರೋಚಕ ಘಟನೆಗಳತ್ತ ಒಂದು ನೋಟ ಹರಿಸೋಣ...
* ಭಿನ್ನಮತೀಯರೊಡನೆ ಮಾತನಾಡುವುದರ ಜೊತೆಗೆ ನಾಡಿನ, ಪಕ್ಕದ ರಾಜ್ಯಗಳಲ್ಲಿನ ಎಲ್ಲ ದೇವರಿಗೂ ಸಾಷ್ಟಾಂಗ ನಮಸ್ಕಾರ ಹಾಕುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬೆಂಗಳೂರಿನ ಅನೇಕ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿದರು, ಸಲ್ಲಿಸುತ್ತಿದ್ದಾರೆ ಮತ್ತು ಸರಕಾರದ ಉಳಿವಿಗಾಗಿ ತಾಯತವನ್ನೂ ಕಟ್ಟಿಸಿಕೊಂಡಿದ್ದಾರೆ.
* ವಿಧಾನಸೌಧದ ಮುಂದೆ ಮಾತ್ರವಲ್ಲ ದೂರದ ಬಿಳಿರಂಗನ ಬೆಟ್ಟದಲ್ಲಿಯೂ ಮಾಟ, ಮಂತ್ರ ಹಾಕಲಾಗಿದೆ. ಯಾರ ಲಾಭಕ್ಕಾಗಿ ಗೊತ್ತಿಲ್ಲ.
* ಗೋವಾದ ತಾಜ್ ಎಕ್ಸೋಟಿಕಾ ರೆಸಾರ್ಟಿನ ಕಡಲ ತಡಿಯಲ್ಲಿ ಭರ್ಜರಿ ವ್ಯಾಪಾರಗಳನ್ನು ಗಮನಿಸಿರುವ, ಭಿನ್ನರ ಪಾಳಯದಿಂದ ಹಿಂತಿರುಗಿ ಬಂದಿದ್ದ ಎಸ್ಕೆ ಬೆಳ್ಳುಬ್ಬಿ ಮತ್ತು ರಾಜೂಗೌಡ ಇಂದು ಗೋವಾಗೆ ಧಾವಿಸಿ ಭಿನ್ನಮತೀಯರನ್ನು ಸೇರಿಕೊಂಡಿದ್ದಾರೆ. ಭಿನ್ನರ ಮನವೊಲಿಸಲು ಅಲ್ಲಿಗೆ ಹೋಗಿದ್ದಾರಂತೆ! ನಂಬುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು.
* ವಿಧಾನಸೌಧದ ಬಳಿ ವಾಮಾಚಾರ ಮಾಡಿದ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಲಿನ ಎಲ್ಲ ಗೇಟುಗಳಿಗೆ ಬೀಗ ಜಡಿಯಲಾಗಿದೆ. ವಾಮಾಚಾರದ ಪ್ರಭಾವವನ್ನು ಕಡಿಮೆಗೊಳಿಸಲು ಬಾಲಬ್ರೂಹಿ ಗೃಹದಲ್ಲಿನ ಸಂಕಷ್ಟಹರ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
* ಚಾಮರಾಜ ನಗರ ಶಾಸಕ ರೆಬೆಲ್ ಸ್ಟಾರ್ ಶಂಕರಲಿಂಗೇಗೌಡ ಅವರನ್ನು ಕೆಆರ್ಎಸ್ ಹೆಲಿಪ್ಯಾಡ್ ನಿಂದ ಕಿಡ್ನಾಪ್ ಮಾಡಲಾಗಿದೆಯಂತೆ. ಎಲ್ಲಿ ಕರೆದುಕೊಂಡು ಹೋಗಲಾಗಿದೆ, ಯಾರು ಕರೆದುಕೊಂಡು ಹೋಗಿದ್ದಾರೆ... ತಿಳಿಯಲು ಕಾಯಬೇಕು.
* ವಾಮಾಚಾರದ ವಿರುದ್ಧ ಪತ್ರಕರ್ತ ಅಗ್ನಿ ಶ್ರೀಧರ್ ಸೇರಿದಂತೆ ಬೆಂಗಳೂರಿನ ಬುದ್ಧಜೀವಿಗಳಿಂದ ವಾಚಾಮಗೋಚರ ತೆಗಳಿಕೆ. ಭ್ರಷ್ಟ ಶಾಸಕರ ವಿರುದ್ಧ ಜನರು ಬಂದೂಕು, ಮಚ್ಚು ಎತ್ತಿಕೊಳ್ಳಬೇಕಿಲ್ಲ, ಚಪ್ಪಲಿ ತೆಗೆದುಕೊಳ್ಳಬೇಕೆಂದು ಶ್ರೀಧರ್ ಕರೆ.
* ಸದ್ಯದ ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ಪಂಚ್ : ಎಲ್ಲ ರಾಜಕೀಯ ಬೆಳವಣಿಗೆಗಳಿಗೆ ಯಡಿಯೂರಪ್ಪನವರಿಗೆ ಜಿಗುಪ್ಸೆ ಬಂದಿದೆಯಂತೆ! ಹಾಗಿದ್ದರೆ ಪದವನ್ನು ಯಾಕೆ ತ್ಯಜಿಸುತ್ತಿಲ್ಲ ಎಂದು ಮತದಾರರು ಕೇಳುತ್ತಿದ್ದಾರೆ. ಒಂದು ಘಳಿಗೆ ಜಿಗುಪ್ಸೆಯ ಮಾತನಾಡುತ್ತಿರುವ ಮುಖ್ಯಮಂತ್ರಿ, ಮತ್ತೊಂದು ಘಳಿಗೆ ಇನ್ನೆರಡೂವರೆ ವರ್ಷ ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಡಿ ಎಂದು ಪಕ್ಷಭೇದ ಮರೆತು ಶಾಸಕರನ್ನು ಕೇಳಿಕೊಳ್ಳುತ್ತಿದ್ದಾರೆ! ಇವರನ್ನು ನಂಬುವುದು ಹೇಗೋ ಕಾಣೆ ಪದ್ಮಾವತಿಪತಿ ತಿರುಪತಿ ಶ್ರೀವೆಂಕಟಾಚಲಪತಿ... ಹೇಳುವುದು ಒಂದು...
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications