ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದರ ಮೊಗದಲಿ ಕೋಲ್ಗೆಟ್ ನಗೆ!

By Prasad
|
Google Oneindia Kannada News

DV Sadananda Gowda
ಬೆಂಗಳೂರು, ಅ. 8 : ಗೋವಾದಲ್ಲಿ ಜನಾರ್ದನ ರೆಡ್ಡಿ ಭಿನ್ನಮತೀಯರೊಡನೆ ನಡೆಸುತ್ತಿರುವ ಸಂಧಾನ ಪ್ರಕ್ರಿಯೆ ಅಂತಹ ಯಶಸ್ಸು ತಂದುಕೊಡದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೆ 'ಆಪರೇಶನ್ ಕಮಲ'ಕ್ಕೆ ಕೈಹಾಕಿದೆ.

ಬಿಕ್ಕಟ್ಟು ಉದ್ಭವವಾದ ನಂತರ ನಡೆಸಿದ ಆಪರೇಶನ್ನಿಗೆ ಚೆನ್ನಪಟ್ಟಣದ ಜೆಡಿಎಸ್ ಶಾಸಕ ಎಂಸಿ ಅಶ್ವತ್ಥ್ ಮೊದಲ ಬಲಿ ಆಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಚೆನ್ನಪಟ್ಟಣದ ಅವರ ಮನೆಯ ಮುಂದೆ ಇಂದು ಧರಣಿ ನಡೆಸಿದರು.

ಸಂಜೆಯ ವೇಳೆಗೆ ಈ ಕುರಿತು ಸ್ಪಷ್ಟೀಕರಣ ನೀಡದಿದ್ದರೆ ಮತ್ತು ಜೆಡಿಎಸ್ ಗೆ ಮರಳದಿದ್ದರೆ ದೆಹಲಿಯಿಂದ ಬೆಂಗಳೂರಿಗೆ ಧಾವಿಸಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅಶ್ವತ್ಥ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಶ್ವತ್ಥ್ ಅವರನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡಿದೆ ಎಂಬ ಸುದ್ದಿಗೆ ಪುಷ್ಟಿಯೆಂಬಂತೆ ಇಂದು ಸಂಜೆ ಹೊಟೇಲ್ ಮೌರ್ಯದಲ್ಲಿ ಆರಂಭವಾಗುತ್ತಿರುವ ಜೆಡಿಎಸ್ ಸಭೆಗೆ ಅಶ್ವತ್ಥ್ ಗೈರು ಹಾಜರಾಗಿದ್ದಾರೆ.

ಕಾಂಗ್ರೆಸ್ ಬಗ್ಗೆ ಮೃದು ಧೋರಣೆ : ಬಿಜೆಪಿಯ ಆಪರೇಶನ್ ಕಮಲಕ್ಕೆ ಮತ್ತು ಕುದುರೆ ವ್ಯಾಪಾರಕ್ಕೆ ಹೆದರಿ ಕಾಂಗ್ರೆಸ್ ನಾಯಕರೀಗಾಗಲೆ ಪುಣೆ ಬಳಿಯಿರುವ ಆಂಬಿ ವ್ಯಾಲಿಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಈ ನಡುವೆ, ಈಗ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ಹಿಂದೆ ಕಾಂಗ್ರೆಸ್ ಕೈವಾಡ ಇಲ್ಲವೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಜನರಿಂದ ಆಯ್ಕೆಯಾಗಿರುವ ಸರಕಾರಕ್ಕೆ ಆಡಳಿತ ನಡೆಸಲು ಅವಕಾಶ ನೀಡಿ ಎಂದು ಹೇಳಿ ಯಡಿಯೂರಪ್ಪ ಕಾಂಗ್ರೆಸ್ ನತ್ತ ಬಿಳಿ ಬಾವುಟ ಹಾರಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬರುವುದೂಯಿಲ್ಲ.

ಆದರೆ, ಯಡಿಯೂರಪ್ಪ ಬಿಟ್ಟಿರುವ ಕುದುರೆಯನ್ನು ಕಟ್ಟಿಹಾಕಿರುವ ಜೆಡಿಎಸ್ ಮಾತ್ರ ಯುದ್ಧಕ್ಕೆ ಸನ್ನದ್ಧವಾಗಿ ಕುಳಿತಿದೆ. ಅತ್ತ ಗೋವಾದಲ್ಲಿ ಆನಂದ್ ಆಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ ಮತ್ತು ಪಕ್ಷೇತರರನ್ನು ತಮ್ಮತ್ತ ಸೆಳೆದುಕೊಂಡ ಖುಷಿಯಿಂದ ಕುಮಾರಸ್ವಾಮಿ ಬೀಗುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಯಡಿಯೂರಪ್ಪ ಸರಕಾರವನ್ನು ಬೀಳಿಸುವುದೇ ನಮ್ಮ ಏಕೈಕ ಗುರಿ ಎಂದು ವೈ ಎಸ್ ವಿ ದತ್ತಾ ರಣಕಹಳೆ ಊದಿದ್ದಾರೆ.

ಭಿನ್ನಮತೀಯರ ಜಿಗುಟುತನದಿಂದ ಕಂಗೆಟ್ಟಿರುವ ಬಿಜೆಪಿ ವರಿಷ್ಠರು ದೆಹಲಿಯಿಂದ ಗೋವಾಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಭಿನ್ನಮತೀಯರ ಬೇಡಿಕೆ ಕೂಡ ಅದೇ ಆಗಿದೆ. ಜನಾರ್ದನ ರೆಡ್ಡಿಯ ಸಂಧಾನ ಮತ್ತು ನೀಡಿರುವ ಭರವಸೆಗಳಿಂದ ತೃಪ್ತರಾಗದ ಕೆಲ ಭಿನ್ನಮತೀಯರು ರಾಜ್ಯ ಅಥವಾ ರಾಷ್ಟ್ರ ನಾಯಕರೊಡನೆ ಮಾತುಕತೆ ನಡೆಸಬೇಕೆನ್ನುವ ಪಟ್ಟು ಹಿಡಿದಿದ್ದಾರೆ.

ಇದೇ ವೇಳೆ, ಶುಕ್ರವಾರ ಸಂಜೆ 5 ಗಂಟೆಗೆ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಸಂಸತ್ ಸದಸ್ಯ ಡಿವಿ ಸದಾನಂದಗೌಡರು "ಅಕ್ಟೋಬರ್ 11ರ ಬೆಳಗ್ಗೆವರೆಗೂ ಕಾಯಿರಿ. ನಮ್ಮ ರಾಜಕೀಯ ತಂತ್ರ ಏನೆಂದು ನಿಮಗೇ ಗೊತ್ತಾಗುತ್ತದೆ" ಎಂದು ತಮ್ಮ ಎಂದಿನ ನಗು ಮಿಶ್ರಿತ ಮಾತುಗಳಲ್ಲಿ ಹೇಳಿದರು. ಬಿಜೆಪಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂಬ ಆತ್ಮವಿಶ್ವಾಸ ಅವರ ಮಾತುಗಳಲ್ಲಿ ಎದ್ದುಕಾಣುತ್ತಿತ್ತು.

ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X