ರೇಣುಕಾಚಾರ್ಯ 50 ಕೋಟಿ ರು.ಗೆ ಹರಾಜು!

ಬಿಜೆಪಿ ಸರಕಾರವನ್ನು ಗೋಳಾಡಿಸಿದ ರೇಣುಕಾಚಾರ್ಯ, ಗೂಳಿಹಟ್ಟಿ ಶೇಖರ್, ಶಿವರಾಜ್ ತಂಗಡಗಿ, ಬೇಳೂರು ಗೋಪಾಲಕೃಷ್ಣ ಮುಂತಾದವರನ್ನು ಮದ್ದೂರು ಬಸ್ ನಿಲ್ದಾಣದಲ್ಲಿ ಈ ರೀತಿ ವಿನೂತನ ಮಾದರಿಯಲ್ಲಿ ಹರಾಜುಹಾಕಿ ಪ್ರತಿಭಟನೆ ವ್ಯಕ್ತಪಡಿಸಿದ್ದು ಮಂಡ್ಯ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ.
ಭಿನ್ನಮತೀಯರ ನೇತಾರ ರೇಣುಕಾರಾರ್ಯಗೆ ಅತೀ ಹೆಚ್ಚು 50 ಕೋಟಿ ರು., ಬೇಳೂರು ಗೋಪಾಲಕೃಷ್ಣ 30 ಕೋಟಿ ರು., ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಶಂಕರಲಿಂಗೇ ಗೌಡ 20 ಕೋಟಿ ರು., ಶಿವರಾಜ್ ತಂಗಡಗಿ 25 ಕೋಟಿ ರು.ಗೆ ಹರಾಜು ಮಾಡಲಾಯಿತು. ಜೊತೆಗೆ 'ಅಯ್ಯಯ್ಯೋ ಅಯ್ಯಯ್ಯೋ' ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಹಿಡಿದು ಭಿನ್ನಮತೀಯರಿಗೆ ಕರವೇ ಕಾರ್ಯಕರ್ತರು ಧಿಕ್ಕಾರ ಕೂಗಿದರು.
ಕರವೇ ಮಂಡ್ಯ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕುರಿಗಳನ್ನು ಒಟ್ಟುಗೂಡಿಸಿ ಅವುಗಳಿಗೆ ಒಬ್ಬೊಬ್ಬ ಶಾಸಕರ ಹೆಸರನ್ನು ಇಟ್ಟು, ಅವರಿಗೆ ಬೆಲೆ ನಿಗದಿಪಡಿಸಿ ಸಾಂಕೇತಿಕವಾಗಿ ಹರಾಜುಹಾಕಲಾಯಿತು. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರ ಬಣ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಭಿನ್ನಮತದ ಹೊಗೆ ಎಬ್ಬಿಸಿದ್ದ ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.
"ಈ ಶಾಸಕರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ರಾಜ್ಯಕ್ಕೆ ಕಾಲಿಡಬಾರದು. ಅವರನ್ನು ರಾಜ್ಯಕ್ಕೆ ಕಾಲಿಡದಂತೆ ಅವರಿದ್ದ ರಾಜ್ಯದಲ್ಲಿಯೇ ಗಡಿಪಾರು ಮಾಡಬೇಕು. ಇವರೆಲ್ಲ ಸೇರಿ ರಾಜ್ಯವನ್ನೇ ಹರಾಜಿಗೆ ಹಾಕಿದ್ದಾರೆ. ನಾಡಿನ ಜನತೆಗೆ ಅಪಮಾನ ಮಾಡಿದ್ದಾರೆ" ಎಂದು ಕೋಡಿಹಳ್ಳಿ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರಾಜ್ಯಕೀಯದಲ್ಲಿ ನಡೆಯುತ್ತಿರುವ ಎಲ್ಲ ದೊಂಬರಾಟವನ್ನು ಜನತೆಯೆಲ್ಲ ನೋಡುತ್ತಿದ್ದಾರೆ. ಬೆಂಬಲದ ನಾಟಕವೊಡ್ಡಿ ಆಮಿಷಕ್ಕೆ ತಲೆಬಾಗಿ ಕೆಲವರು ಈಗಾಗಲೆ ಮಾತೃಪಕ್ಷಕ್ಕೆ ಹಿಂದಿರುಗಿದ್ದಾರೆ. ರೇಣುಕಾಚಾರ್ಯ ತಮ್ಮ ಎಂದಿನ ರೀತಿಯಲ್ಲಿ ನಾಟಕೀಯ ತಿರುವು ನೀಡಿ, 'ಯಡಿಯೂರಪ್ಪನವರೇ ನನ್ನ ನಾಯಕ' ಎಂದು ಜಯಘೋಷಣೆ ಮಾಡಿದ್ದಾರೆ. ಎಲ್ಲ ಬೆಳವಣಿಗೆಗಳು ನಾಡಹಬ್ಬ ಮೈಸೂರು ದಸರಾದ ಮೇಲೆ ಕರಿನೆರಳು ಬೀಳಿಸುವುದರಲ್ಲಿ ಸಂಶಯವೇ ಇಲ್ಲ. ಮುಂದೇನಾಗುವುದೋ ತಿಳಿಯಲು ಸೋಮವಾರದವರೆಗೆ ಕಾದು ನೋಡಲೇಬೇಕು.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications