ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರೇತಶಾಂತಿ

By * ಜಿತೇಂದ್ರ ಕುಂದೇಶ್ವರ, ಮಂಗಳೂರು
|
Google Oneindia Kannada News

Mangalore air crash
ವಿಮಾನ ದುರಂತದಲ್ಲಿ ಮಡಿದ ಕಲಾವಿದನೊಬ್ಬನ ಆತ್ಮ ಬಜಪೆ ಏರ್ಪೋರ್ಟ್ ಜಾಗದ ಅಧಿದೈವ ಕೋರ್ದಬ್ಬು ಬಳಿ ಇದೆಯಂತೆ... ಅದಕ್ಕಾಗಿ ಜೂ.11ರಂದು (ಶುಕ್ರವಾರ) ಬಜಪೆ ಸಿದ್ಧಾರ್ಥ ನಗರದ ಕಾರಣಿಕದ ದೈವ ಕೋರ್ದಬ್ಬು ದೈವದ ದರ್ಶನ ಸಂದರ್ಭ ಪ್ರೇತಮೋಕ್ಷ ನಡೆಯಲಿದೆ.

ಹಿನ್ನೆಲೆ: ಮೇ 22ರಂದು ವಿಮಾನ ದುರಂತದಲ್ಲಿ ಕೆಮ್ತೂರಿನ ಜಯ ಪ್ರಕಾಶ್ ದೇವಾಡಿಗ ಮೃತಪಟ್ಟಿದ್ದರು. ಅವರು ವಿಮಾನದಲ್ಲಿ ಕುಳಿತಿದ್ದ ಸೀಟು ನಂಬರ್ 63. ಇದರಲ್ಲಿ ಏನು ವಿಶೇಷ ಎಂದರೆ ಜೆ.ಪಿ. ಅಕ್ಕಪಕ್ಕದಲ್ಲಿ ಕುಳಿತಿದ್ದ 62 ಮತ್ತು 64ನೇ ಸೀಟ್‌ನ ಪ್ರಯಾಣಿಕರು ಬದುಕಿ ಉಳಿದಿದ್ದಾರೆ. ಈ ಮೂರು ಸೀಟುಗಳು ಇದ್ದದ್ದು ವಿಮಾನ ತುಂಡಾದ ರೆಕ್ಕೆ ಬಳಿಯಲ್ಲಿ!

ಈ ಸಾವಿಗೆ ಕಾರಣ ಏನು ಎಂದು ಮನೆಯವರು ಅಲೆವೂರು ದೇವಸಾನದ ಜ್ಯೋತಿಷಿ ಬಳಿ ಪ್ರಶ್ನೆ ಕೇಳಿದ್ದರು. ಅವರು ವಿಮಾನ ನಿಲ್ದಾಣದ ಜಾಗದ ಅಧಿದೈವ ಕೋರ್ದಬ್ಬು ಬಳಿಯಲ್ಲಿ ಮೃತನ ಪ್ರೇತಾತ್ಮ ಸೇರಿದೆ. ಅದನ್ನು ವಿಮೋಚನೆ ಮಾಡಿದ ಬಳಿಕವೇ ಪ್ರೇತ ಮೋಕ್ಷ ಸಾಧ್ಯ ಎಂದರು. ಅದರಂತೆ ಬಜಪೆ ಸಿದ್ಧಾರ್ಥ ನಗರದ ವಿಮಾನ ನಿಲ್ದಾಣ ಪುನರ್ವಸತಿ ಕಾಲೊನಿಯಲ್ಲಿರುವ ಕೋರ್ದಬ್ಬು ಹಾಗೂ ರಾಹು ಗುಳಿಗ ದೈವಸ್ಥಾನಕ್ಕೆ ಮೃತ ಜಯಪ್ರಕಾಶ್‌ನ ಅಣ್ಣ ಪ್ರಭಾಕರ ಹಾಗೂ ಮಿತ್ರ ಸುಂದರ್ ಬುಧವಾರ ಆಗಮಿಸಿ ಪ್ರೇತ ಮೋಕ್ಷಕ್ಕೆ ದಿನ ನಿಗದಿಪಡಿಸಿದ್ದಾರೆ. ಜೂ.11ರಂದು ದೈವ ದರ್ಶನ, ವಿಶೇಷ ಸೇವೆ ಆಯೋಜಿಸಲಾಗಿದೆ. ದೈವಗಳು ಮಧ್ಯರಾತ್ರಿ 12 ಗಂಟೆಗೆ ಪ್ರೇತಾತ್ಮ ಬಿಟ್ಟುಕೊಡಲಿಯಂತೆ!

20 ಸಾವಿರ ಖರ್ಚು: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯಪ್ರಕಾಶ್ ಅವರ ಸಹೋದರ ಪ್ರಭಾಕರ, ಅಂತ್ಯ ಸಂಸ್ಕಾರದ ಪಿಂಡ ಪ್ರದಾನದ ಬಳಿಕ ಅನ್ನವನ್ನು ಹೊರಗೆ ಇಟ್ಟಾಗ ಕಾಗೆ ಮುಟ್ಟಲಿಲ್ಲ. ಈ ಬಗ್ಗೆ ಜ್ಯೋತಿಷಿಯಲ್ಲಿ ಪ್ರಶ್ನೆ ಕೇಳಿದೆವು. ಆಗ ತಮ್ಮನ ಆತ್ಮ ದುರಂತದ ಸ್ಥಳದಲ್ಲಿರುವ ಕೋರ್ದಬ್ಬು ದೈವದ ಕೈಯಲ್ಲಿದೆ, ಇದನ್ನು ಬಿಡಿಸಿದರೆ ಮಾತ್ರ ಮುಕ್ತಿ ಎಂದು ಹೇಳಿದ್ದರು. ಗುರುವಾರ ವೈಕುಂಠ ಸಮಾರಾಧನೆ ಮಾಡಿದ್ದೇವೆ. ಮೃತನ ಆತ್ಮಕ್ಕೆ ಸದ್ಗತಿ ನೀಡುವುದು ನಮ್ಮ ಕರ್ತವ್ಯ. ಅದಕ್ಕಾಗಿ ಈ ಕಾರ್ಯ ಆಯೋಜಿಸಿದ್ದೇವೆ' ಎಂದರು. ಪ್ರೇತ ಮೋಕ್ಷಕ್ಕೆಂದೇ ದರ್ಶನ ಸೇವೆ ಮಾಡಿಸುವುದಾದರೆ ಆಗುವ ಖರ್ಚು 20,000 ರೂಪಾಯಿ.

ಏರ್‌ಪೋರ್ಟ್ ಬಂತು, ದೇಗುಲ ಹೋಯ್ತು...

ದೈವಗಳ ಪುನರ್ವಸತಿ ಹಿಂದೆಯೂ ಕತೆ ಇದೆ. ಕೆಂಜಾರುಪದವು ಗುಡ್ಡೆಯ ತುತ್ತತುದಿ ಮರವೂರು ಪದವಿನಲ್ಲಿ ಕೋರ್ದಬ್ಬು ದೈವ ಮತ್ತು ರಾಹು ಗುಳಿಗರ ಸ್ಥಾನವಿದೆ. ನಂಬಿದವರಿಗೆ ಇಂಬು ಕೊಡುವ ದೈವ ಎಂದು ಹಳ್ಳಿಗರು ಆರಾಧಿಸುತ್ತಿದ್ದರು.

2002ರಲ್ಲಿ ದೈವಗಳ ಸ್ಥಾನ ತೆಗೆದು ರನ್‌ವೇ ಮಾಡಲಾಗಿತ್ತು. ಸಿದ್ಧಾರ್ಥ ನಗರದ ಪುನರ್ವಸತಿ ಕಾಲೋನಿಯಲ್ಲಿ ದೈವ ಪ್ರತಿಷ್ಠಾಪನೆ ನಡೆದಿತ್ತು. ಪುನರ್ವಸತಿ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಪ್ರತಿ ವರ್ಷ ಫೆಬ್ರವರಿಯಲ್ಲಿ ನೇಮ ನಡೆಯುತ್ತದೆ.

ದೈವದ ಮೂಲ ಸ್ಥಳ ಅಗೆಯುವಾಗ ಜೆಸಿಬಿ ಕೂಡ ಹಾಳಾಗಿತ್ತು. ಅದರ ಬಕೆಟ್ ತುಂಡಾಗಿತ್ತು. ವಿಮಾನ ಡಿಕ್ಕಿ ಹೊಡೆದ ಲೋಕಲೈಸರ್ ಕಂಬದ ಬಳಿಯೇ ಮೂಲ ಸ್ಥಳವಿತ್ತು' ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜಪ್ಪ. (ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X