• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಗಜ್ಜಿಯ ಯುದ್ಧನೀತಿ

By Super
|

ನಮ್ಮ ಮನೆಯಲ್ಲಿ ಇರುವುದು ನಾವು ಐವರು ಮಂದಿ. ನಮ್ಮ ಮನೆಯ ಅತಿ ಮುಖ್ಯ ಸದಸ್ಯೆ ಯಾರು ಗೊತ್ತೆ ? ಅವರೇ ನಮ್ಮ ಗಂಗಜ್ಜಿ .

ನಮ್ಮನ್ನೆಲ್ಲ ಏನೇನೋ ಕೇಳಿ- ಯಾವಾಗಲೂ ಏನೋ ಒಂದು ಹೇಳಿ ಗೋಳು ಹೊಯ್ದುಕೊಳ್ಳುವುದೇ ಅವರ ಹಾಬಿ. ಮನೆಯಲ್ಲಿ ಎಲ್ಲರ ಮೇಲೂ ನಿಗಾ ಇಟ್ಟು , ನಮ್ಮ ಪುರಾತನ ಸಂಸ್ಕೃತಿಯನ್ನು ಕಾಪಾಡುವುದು ಅವರ ಮುಖ್ಯ ಕಸುಬು. ಇಷ್ಟು ಹೇಳಿದ ಮೇಲೆ ನಿಮಗೆ ನಿನ್ನೆ ನಮ್ಮ ಮನೇಲಿ ನಡೆದ ಇರಾಕ್‌ ಯುದ್ಧ ಪುರಾಣವನ್ನು ಬಿತ್ತರಿಸದಿದ್ದರೆ ಹೇಗಾದೀತು? ಆದ್ದರಿಂದ, ಪೇಳುತ್ತೇನೆ...ಕೇಳುವಂತವರಾಗಿ!

ಯುದ್ಧ ಆರಂಭವಾಗಿ ವಾರವಾಗ್ತಾ ಬಂತು. ಯುದ್ಧದ ಸುದ್ದಿಯನ್ನು ಟೀವಿಯಲ್ಲಿ ನೋಡುತ್ತಾ ಬುಶ್‌ ಅನ್ನು ಮನಸಾರೆ ಹಳಿಯುತ್ತಾ ಖಾರ ಹಚ್ಚಿದ ಸುಬ್ಬಮ್ಮನ ಅಂಗಡಿಯ ಹುರಿದ ಕಡಲೇಕಾಯಿ ಮೆಲ್ಲುತ್ತಾ ಕುಳಿತಿದ್ದೆ . ಆರಾಮವಾಗಿ ಆಸೀನಳಾಗಿದ್ದ ನನ್ನನ್ನು ನೋಡಿ ನಮ್ಮ gumಗಜ್ಜಿಗೆ ಖುಶಿಯಾಗಿರಬೇಕು. ಮಿಕ ಸಿಕ್ಕಿಬಿತ್ತು ಎಂದು ಗಪ್ಪೆಂದು ಕಚ್ಚಿಕೊಂಡೇ ಬಿಟ್ಟರು, ಫೆವಿಕಾಲ್‌ನಂತೆ !

ಕಾರ್ಪೆಟ್‌ ಮೇಲೆ ಕಾಲುಚಾಚಿ ಕುಳಿತೇಬಿಟ್ಟರು ಅಜ್ಜಿ ! ಮುಂದೆನಾಯಿತು ಅನ್ನುವುದನ್ನು ನೀವೇ ಓದಿ!

ಗಂಗಜ್ಜಿ : ಮುಸ್ಸಂಜೆ ಹೊತ್ತಲ್ಲಿ ಏನು ಸುಡುಗಾಡು ನೋಡ್ತೀಯೇ ತಾಯಿ ? ಬರೀ ಬೆಂಕಿ, ಬಿರ್ಸು ಬಾಣ... ಲಕ್ಷಣವಾಗಿ ದೇವ್ರಿಗೆ ದೀಪ ಹಚ್ಚಿ ಅಮ್ಮಂಗೆ ಅಡುಗೆಗೆ ಸಹಾಯ ಮಾಡಬಾರ್ದೆ ? ಏನೋಮ್ಮ.. ನಿನ್ದೊಂದೂ ತಿಳೀವಲ್ದು. ನಿಮ್ಮಪ್ಪಂಗೆ ಹೇಳಿದ್ರೆ ಕಿವೀಮೇಲೇ ಹಾಕ್ಕೂಳ್ಳೊಲ್ಲ ಅವನು!

ನಾನು : ಸುಮ್ಮ್ನಿರಜ್ಜೀ... ಇದು ಬಾಣ ಬಿರ್ಸು ಅಲ್ಲ, ಪಟಾಕಿನೂ ಅಲ್ಲ , ನಿಂಗೊಂದೂ ಗೊತ್ತಾಗಲ್ಲ . ಇದು ಯುದ್ಧ ಅಜ್ಜೀ ಯುದ್ಧ ! ವಾರ್‌!.... ಅಮೆರಿಕದವರು ಇರಾಕ್‌ನ ಮೇಲೆ ದಂಡೆತ್ತಿ ಬಂದಿದ್ದಾರಜ್ಜೀ. ಇದು ಎಲ್ಲಿಗೆ ಹೋಗಿ ಮುಟ್ಟತ್ತೋ ಹೇಳಕ್ಕಾಗಲ್ಲ ! ಆಮೇಲೆ ಹಾಗೇ ಥರ್ಡ್‌ ವರ್ಲ್ಡ್‌ ವಾರ್‌, ಅಂದ್ರೇ ಮೂರ್ನೇ ಮಹಾಯುದ್ಧವೇ ಆದ್ರೂ ಆಗ್ಬಹುದು. ಅದನ್ನೆಲ್ಲ ಅದೇ ಆಗ ಮಹಾಭಾರತದಲ್ಲಿ ನಿಮ್ಮ ಸಂಜಯ ದಿವ್ಯದೃಷ್ಟಿಯಿಂದ ನೋಡಿ ಹೇಳ್ತಿದ್ನಲ್ಲ ಯುದ್ಧದಲ್ಲಿ ಏನೇನಾಗ್ತಿದೆ ಅಂತ, ಹಾಗೆ ಈಗ ಟಿವಿಯವರು ಎಲ್ಲ ಕವರ್‌ ಮಾಡ್ತಿದ್ದಾರಜ್ಜೀ... ನಾನು ನೋಡ್ಬೇಕು ಸುಮ್ಮ್ನಿರು. ಇಷ್ಟಕ್ಕೂ ಅಮ್ಮಾನೇ ಇವತ್ತು ಅಡಿಗೆ ಬೋರು. ಪಿಜ್ಜಾ ಆರ್ಡರ್‌ ಮಾಡು ಅಂತಾ ಹೇಳಿದ್ದಾಳೆ. ನೀನು ಹೇಗೂ ಇವತ್ತು ಉಪಾಸ. ಆರಾಮಾಗಿ ಮಲಗು ನಡಿ. ನಾನು ಯುದ್ಧ ನೋಡಬೇಕು.

ಗಂ : ಆಂ ? ಏನಂದಿ ? ಹಾಗಾದ್ರೆ ಯುದ್ಧನೂ ಟಿವಿನಲ್ಲಿ ಪ್ರೋಗ್ರಾಂ ಥರಾ ನೋಡ್ತೀಯೇನೂ ?

ನಾ : ಹೂಂ ಮತ್ತೆ . ಈ ಯುದ್ಧದಲ್ಲಿ ಒಂದೊಂದು ನಿಮಿಶಾನೂ ಕವರ್‌ ಮಾಡ್ತಿದ್ದಾರಜ್ಜಿ ಚಾನಲ್‌ನವರೂ.

ಗಂ : ಖರ್ಮ ಖರ್ಮ ! ಯಾರ್ಯಾರಿಗೇ ಯುದ್ಧಾ ?

ನಾ : ಪ್ಚ್‌... ಆಗಲೇ ಹೇಳಲಿಲ್ಲ್ವೇನಜ್ಜಿ.... ಇರಾಕ್ನ ಮೇಲೆ ಬ್ರಿಟಿಶರನ್ನ, ಆಸ್ಟ್ರೇಲಿಯದೋರನ್ನ ಕಟ್ಟಿಕೊಂಡು ಅಮೇರಿಕಾ ಮುಗಿಬೀಳ್ತಿದೆ ಅಂತಾ... ಮೊನ್ನೆ ಮೊನ್ನೆ ತಾನೆ ನಾನು ಆಫೀಸ್ನಿಂದ ಅಮೆರಿಕಾಗೆ ಹೋಗಿಬಂದಾಗ ನಿಂಗೆ ಹೇಳಲಿಲ್ವೇ, ಅಲ್ಲಿಯ ಪ್ರೆಸಿಡೆಂಟ್‌ ಮಹಾಶಯ ಬುಶ್‌ ಅಂತ.... ಅವನ್ದೇ ಈ ಕಿತಾಪತಿ ಎಲ್ಲಾ....

ಗಂ : ಹಯ್ಯೋ ಯಾಕಂತೇ? ಅವ್ನಿಗೇನು ಬಂತೇ ಕೇಡುಗಾಲಾ?

ನಾ : ಇರಾಕ್ನಲ್ಲಿ ಸದ್ದಾಂ ಹುಸೇನ್‌ ಇಲ್ವೇನಜ್ಜಿ.. ಅದೇ ಅವತ್ತು ಪದ್ದತ್ತೆ ಮಗ ಸುರೇಶಾ ಕುವೈತ್ನಿಂದ ರಜಕ್ಕೆ ಬಂದಾಗ ಹೇಳ್ತಿದ್ನಲ್ಲ ಅವನ ಬಗ್ಗೇ? ನೀನೂ ಬಾಯಿಬಿಟ್ಟುಕೊಂಡು ಕೇಳ್ತಿದ್ದೆ ಅವನ ಕಾರ್ನಾಮೆಗಳನ್ನ... ಅವನೇ... ಅವ್ನನ್ನ ಇವರು ಸದೇಬಡೀತಾರಂತೇ.. ಅದಕ್ಕೆ ಯುದ್ಧಾ... ಅಯ್ಯೋ ಅಲ್ಲಿ ನೋಡಜ್ಜೀ ಹ್ಯಾಗೆ ಎಲ್ಲ ಉರಿದು ಬೂದಿಗುಡ್ಡೆಯಾಗ್ತಿದೆ ಅಂತಾ... ತಥ್‌.. ಸರೀಗೆ ನೋಡಕ್ಕೂ ಬಿಡಲ್ಲ ನೀನು... ಎಲ್ಲ ಮಿಸ್ಸ್‌ ಆಯ್ತು ನೋಡೀಗ!

ಗಂ: ಹಯ್ಯಾ ಅವ್ನೇನೇ ? ಹಾಳಾದೊವ್ನು... ಹಾಗಾದ್ರೆ ಒಳ್ಳೇದೆ ಬಿಡು... ನೆಗೆದ್ಬಿದ್ಹೋಗ, ಅದ್ಕೇ ಹಿರೀರು ಹೇಳೋದು ಮಾಡಿದ್ದುಣ್ಣೋ ಮಹರಾಯ ಅಂತ

ನಾ : ಏ... ನಿಂಗೆಲ್ಲೋ ಭ್ರಾಂತು ಅಜ್ಜಿ... ಅದು ಅಷ್ಟೆಲ್ಲ ಸಿಂಪಲ್‌ ಅಲ್ಲಾ... ಅವ್ನೇನೂ ಸತ್ತಾ ಅಂದ್ಕೊಂಡ್ಯಾ ? ಯಾರ್ಯಾರೋ ಪಾಪದೋರು ಸಾಯ್ತಾರಜ್ಜೀ ಈಗಾ.. ಅದೂ ಅಲ್ದೇ ಇದೇನು ನಿಮ್ಮ ಮಹಾಭಾರತದ ಕಾಲದ ಥರಾ ಎಲ್ಲೋ ಯಾವುದೊ ಊರಾಚೆ ನಿಂತುಕೊಂಡು ಬಭ್ರುವಾಹನ ಅರ್ಜುನನ ತರಹ ಹಾಡು ಹೇಳಿಕೊಂಡು ಅವನೊಂದ್ಸಲಾ ಇವನೊಂದ್ಸಲಾ ಬಾಣ ಬಿಟ್ಟು , ಸಂಜೆಯಾಯ್ತೂಂದ್ರೆ ಅಲ್ಲೇ ಎಲ್ಲಾ ಪ್ಯಾಕ್‌ ಮಾಡಿಟ್ಟು ಟೆಂಟ್ನಲ್ಲಿ ಮಲ್ಕೊಳ್ತಿದ್ರಲ್ಲ , ಅಂಥಾ ಯುದ್ಧ ಅಲ್ಲಜ್ಜೀ ಇದು....

ಗಂ: ಹಾಗೇನೂ ? ಮತ್ತೇ ? ಅದ್ಯಾಕೇ ಹಾಗೆ ಒಂದೇ ಸಮ ಆ ಸುಡುಗಾಡು ಕಡ್ಳೇಕಾಯಿ ತಿಂತೀಯೆ... ಪಿತ್ತ ಹತ್ತೀತೂ..

ನಾ : ನನಗಾಗಲೇ ಪಿತ್ತ ನೆತ್ತೀಗೇರಾಯ್ತು ........... (ಮೆಲುದನಿಯಲ್ಲಿ)

ಗಂ : ಏನೂ ಏನಂದೆ... ಜೋರಾಗಿ ಹೇಳ್ಬಾರ್ದೇ ? ಕಿವೀ ಕೇಳೊಲ್ದು...

ನಾ : ಏನಿಲ್ಲಾ ಇದು ಅಂಥಾ ಯುದ್ಧ ಅಲ್ಲಜ್ಜೀ ಅಂದೆ! ಎರಡೂ ಕಡ್ಯೋರು ಅವ್ರವ್ರ ಪೌರುಶಾ ತೋರ್ಸ್ಕೊಂಡ್ತೂಂದ್ರೆ ನಿನಗೆ ಇವತ್ತೇ ಕೊನೇ ಉಪಾಸ.. ನನಗೆ ಇದೇ ಕೊನೇ ಕಡ್ಲೆಕಾಯಿ ಪ್ಯಾಕೆಟ್ಟೂ... ಗೊತ್ತಾ... ಹಂಗೂ ಆಗ್ಬಹುದು ಅಂದೆ!

ಗಂ : ಹಯ್ಯೂ ಹೌದೇನೇ? ಬಿಡ್ತೂ ಅನ್ನು ಪೆದ್ಗುಂಡಿ.. ಮನೇ ಹೆಣ್ಮಗೂ ಹಾಗೆಲ್ಲ ಮಾತಾಡ್ಬೇಡಾ... ಅದೇನೇ ಅದೂ ಯಾಪಾಟಿ ಮಾತಾಡ್ತಿದ್ದಾರೇ ? ಅವ್ರೆಲ್ಲಾ ಯಾರೂ? ಯುದ್ಧಾ ಮಾಡೋರೇ ? ಮಧ್ಮಧ್ಯ ಹಾಗೆ ಯುದ್ಧಾ ಬಿಟ್ಟು ಹ್ಯಾಗೆ ಈಚೆ ಬಂದರೂಂತೀನೀ?

ನಾ : (ಹುಶ್ಶಪ್ಪಾ !) ಸರೀ ಕೇಳೂ... ಅದೇ ಅಲ್ಲಿ ಟೇಬಲ್‌ ಹತ್ರಾ ಕೂತಿದ್ದಾಳಲ್ಲಾ ಸುಂದರೀ... ಅವಳು ಬಿಬಿಸಿ ಚಾನಲ್‌ನೋಳು... ಅವಳು ಮಾತಾಡಿಸ್ತಿದಾಳಲ್ಲಾ ಅದೆ ಇನ್ನೊಂದು ಟಿವಿ ಪರದೆ ಮೇಲೆ... ಅವನೂ ಈ ಯುದ್ಧಾ ಮಾಡ್ತಿರೋ ಒಬ್ಬ ಸಿಪಾಯಿ ಅಂತಿಟ್ಕೋ... ಅವ್ನು ಯುದ್ಧ ಬಿಟ್ಟು ಬಂದಿಲ್ಲಾ.. ಯುದ್ಧ ಮಾಡ್ತಿರೋ ಸಿಪಾಯಿಗಳ ಜೊತೆನೇ ಈ ಚಾನಲ್‌ನೋರೂ ಸೇರ್ಕೊಂಡಿದ್ದಾರೆ... ಸಿಪಾಯಿ ವೇಷಾ ಹಾಕಿ... ಅವರ ಹತ್ರಾ ಇರೋ communication equipment, ಅದೇ ಅಜ್ಜಿ , ಈಗ ಹೊಸದಾಗಿ ಬಂದಿರೋ ಸಾಧನಗಳನ್ನ ಉಪಯೋಗಿಸಿ ಈ ಥರಾ ಪಿಕ್ಚರ್ಸ್‌ ತೆಗೆದು ತಕ್ಷಣಾ ನಮಗೆ ತೋರಿಸ್ತಾರೆ. ಗೊತ್ತಾ ? ತುಂಬಾ ಮುಂದುವರ್ದಿದೆ technology... ಸರಿ... ಇಲ್ಲಿ ಇವಳು ಅವನ್ನ ಏನು ಎತ್ತ ಅಂತಾ ಕೇಳ್ತಿದ್ದಾಳೆ... ಅದಕ್ಕೆ ಅವನು... ಹೀಗಾಯ್ತು... ಇಷ್ಟು ಬಾಂಬ್‌ ಹಾಕದ್ವೀ, ಇಷ್ಟು ಜನಾ ಮಕ್ಕಳು ಮರೀ ಸತ್ತವು ಅಂತಾ ಅಂಕಿ ಅಂಶ ಹೇಳ್ತಿದ್ದಾನೇ... ಯುದ್ಧಾ ಮುಗದ್ಮೇಲೆ ಮಿಕ್ಕಿ ಉಳಿದವ್ರಿಗೆಲ್ಲಾ ಊಟಾಬಟ್ಟೇ ಔಷಧಿ.... ಇನ್ನೂ ಏನೇನೋ ವ್ಯವಸ್ತೇ ಮಾಡುತ್ತೆ ಅಮೆರಿಕಾ ಅಂತಾನೂ ಹೇಳ್ತಿದ್ದಾನಜ್ಜೀ... ಈಗರ್ಥ್ವಾಯ್ತೇ?

ಗಂ : ಹೋ.. ಹೂಂ ಈಗರ್ಥ್ವಾಯ್ತೂ...

(32 ಸೆಕೆಂಡು ಮೌನ!)

ಗಂ : ಅಲ್ಲಾ .... ಅರೆ.. ಎಲ್ಹೋದ್ಳೂ ಇವ್ಳೂ ?.... (ನನ್ನ ನೋಡಿ) ಎಲ್ಹೋಗಿದ್ಯೇ... ಹಯ್ಯಾ ರಾಮಾ... ಅದೇನೇ ಅದೂ ಕೈಯಲ್ಲೀ ?

ನಾ : ಕೋಕ್‌ ಅಜ್ಜಿ... ನಿಂಗೂ ಸೊಲ್ಪ ಬಗ್ಗಿಸ್ಕೊಡ್ಳೆ ?

ಗಂ : ಥೂ ... ನಂಗ್ಯಾಕೆ ಸುಡುಗಾಡೂ... ಅಲ್ಲ್ವೇ, ಅದೂ ಅಮೆರಿಕದೋರು ತಯಾರ್‌ ಮಾಡೋದಲ್ವೇನೇ? ನೀನ್ಯಾಕೆ ಕುಡೀತಿ ಆ ಮನೇಹಾಳ್ರು ಮಾಡಿದ್ದೂ ?

ನಾ : ಅಯ್ಯಾ.. ಹೋಗಜ್ಜೀ ನೀನೊಂದು...

ಗಂ : ಅಲ್ಲ್ವೇ... ಮಿಕ್ಕೋರಿಗೇ ಊಟ ಬಟ್ಟೆ ಅಂದ್ಯಲ್ಲಾ... ಈಪಾಟೀ ಸುಡ್ತಿದ್ದಾರಲ್ಲ ಯಾರು ಮಿಕ್ತಾರಂತೇ?

ನಾ : ಅಲ್ಲೆ ಅಜ್ಜಿ ಇರೋದು ಈ ಬುಶ್‌ನ ಜಾಣ್ತನ... ಮೊದಲು ಇರಾಕಿ ಭೂಮಿಯಲ್ಲಿ ಸಿಗತ್ತಲ್ಲ ಆ ಎಣ್ಣೆಯಿಂದ ಲಾಭಾ ಮಾಡ್ಕೊಳ್ಳೋಕೆ, ಪ್ರಾಫಿಟ್‌ ಮಾಡ್ಕೊಳ್ಳೋಕೆ, ತಮ್ಮ ಸ್ವಾರ್ಥ ಸಾಧಿಸ್ಕೊಳ್ಳೋಕೆ ಯುದ್ಧ ಮಾಡೋದು.. ಆಮೇಲೆ ಅದನ್ನ ಧರ್ಮಯುದ್ಧ ಅಂತಾ ಜನ್ರನ್ನ ನಂಬ್ಸೋದು... ಅದಿಕ್ಕೇ... ನಾವು ಹಾಗಲ್ಲಾ.. ಒಳ್ಳೆವ್ರೂ, ನಿಮಗೆ ಕಾಟ ಕೊಡ್ತಿರೋ ಸದ್ದಾಮ ಒಬ್ಬನ್ನ ಸಾಯಿಸಿ ಆಮೇಲೆ ನೀವೆಲ್ಲ ಇನ್ನೂ ಬದುಕಿದ್ರೆ ನಿಮ್ಮನ್ನೆಲ್ಲ ಉದ್ಧಾರಾ ಮಾಡ್ತೀವಿ ಅಂತ ಇರಾಕೀ ಜನ್ರಿಗೆ ಪೂಸೀ ಹೊಡೀಯೋಕೆ ಹೀಗ್ಮಾಡ್ತಾನೆ ಬುಶ್ಶು.

ಗಂ : ಅಮೆರಿಕನ್ರೂ ಇದನ್ನೆಲ್ಲ ನಂಬ್ತಾರ್ಯೇ ?

ನಾ : ಅಮೆರಿಕನ್ರಿಗೆ ನಿನ್ನಷ್ಟು ತಲೆ ಇಲ್ಲಾ ನೋಡು.. ಅವ್ನು ಬುರುಡೇ ಹೊಡೀತಿದ್ರೆ ಇವ್ರು ಅದ್ನೆಲ್ಲಾ ನಂಬ್ತಿದ್ದಾರೆ!

ಗಂ : ಓಹೊಹೋ... ಅವ್ನು ಸತ್ಮೇಲೆ ಬಿಸೀ ಎಣ್ಣೇ ಕೊಪ್ಪರ್ಗೇಲಿ ಬೀಳ್ಬೇಕೂನ್ನೊದು ಅವ್ನಿಗ್ಯಾರೂ ಹೇಳ್ಳಿಲ್ವೇನೂ ? ಮಾಡಿದ್ಪಾಪ ಸುಂನೆ ಬಿಡುತ್ಯೇ ಅವನ್ನಾ ? ಹೋಗ್ಲೀ ಅಮೆರಿಕ್ದೋರು- ಯಾಕ್ಸುಂನೇ ಇದೆಲ್ಲಾ .. ಏನೂ ಬೇಡಾ ಅಂತ ಹೇಳ್ಳಿಲ್ವೇ ಬುಶ್ಶಂಗೇ?

ನಾ : ಹೇಳ್ದೇ ಏನಜ್ಜೀ... ಕೇಳೋರ್ಯಾರಲ್ಲಿ ? ನನ್ನ ಅಮೆರಿಕನ್‌ ಫ್ರೆಂಡ್‌ ಇಲ್ಲ್ವಾ.. ಅದೇ ನ್ಯಾನ್ಸೀ ಜೋನ್ಸ್‌... ಅವ್ಳೂ ಅದೇ ಬೊಂಬ್ಡಾ ಹೊಡೀತಿದ್ಲು... ಯಾರ್ಗೂ ಸೊಪ್ಪ್‌ ಹಾಕ್ತಿಲ್ವಂತೆ ಬುಶ್ಶು..... ಹುಶ್‌! ನೋಡಲ್ಲಿ... ಹೊರಗ್‌ ಬರ್ದೆ ಊರೊಳ್ಗೇ ಅವಿತ್ಕೊಂಡು ಸದ್ದಾಮ ಇವ್ರನ್ನೆಲ್ಲ ಆಟ, ಆಟ ಆಡಿಸ್ತಿದ್ದಾನಜ್ಜೀ... ಇವ್ರೆಲ್ಲಾ ಊರೊಳಗೆ ಹೋಗೋ ಹಾಗೆ ಮಾಡಿ ತಿರಗ್ಬೀಳ್ತಾನೋ ಏನೋ .. Oh Ajjee Look at the Piece of news ! They are anticipating that Saddam will use biological weapons shortly..! Oh holy Hell!! ಅಜ್ಜೀ ಮುಗೀತಿನ್ನು...ಗೋತಾ..

ಗಂ : ಏನೇ ಹಾಗಂದ್ರೇ ? ಏನ್ಗತೀನೇ ?

ನಾ : ಅದೊಂಥರಾ ಹೊಸಾ ಅಸ್ತ್ರಾನಜ್ಜೀ... ನೀನೇ ನಂಗೆಲ್ಲ ಕೊರೀತಿರಲಿಲ್ಲ್ವಾ- ಹಳೆಕಾಲದಲ್ಲಿ ಯೂಸ್‌ ಮಾಡ್ತಿದ್ದ ವರುಣಾಸ್ತ್ರ , ಆಗ್ನೇಯಾಸ್ತ್ರ , ಬ್ರಹ್ಮಾಸ್ತ್ರ ಅಂತೆಲ್ಲಾ... ಹಾಗೆ ಈಗ ಇದೂ ಒಂದು...

ಗಂ : ಹಾಗೇ ? ಇದೂ ಮಳೆ ಬರ್ಸುತ್ತೇನೂ ಹಾಗಾದ್ರೇ?

ನಾ: ನೋ ಅಜ್ಜಿ ನೋ.. ಇದು ಮಳೆ ಅಲ್ಲ , ಖಾಯಿಲೆ ಬರ್ಸುತ್ತೆ.... ಯಾರ್ಗೂ ಗೊತ್ತಿಲ್ದೇ ಇರೋ ರೋಗಗಳ್ನೆಲ್ಲ ಬರ್ಸುತ್ತೆ... ಯಾಕೆ ಸತ್ವೂ ಅಂತಾನೂ ನಮಗ್ಗೊತ್ತಾಗಲ್ಲ ಹಾಗ್ಮಾಡತ್ತೆ... ಅಂಥಾ ಪ್ರಚಂಡಾಸ್ತ್ರ ಅಜ್ಜೀ ಇದು! ನಿನ್ಗೊತಿಲ್ಲಾ.....

ಗಂ : ಹಯ್ಯಾ ಯಾರ್ಹತ್ರಿದ್ಯೇ ಈಗ ಅದೂ, ಸದ್ದಾಮನ್‌ ಹತ್ರಾನೇ? ಅಲ್ಲ ಇರಾಕೋರಿಗೆ ಅಷ್ಟ್‌ ಬುದ್ಧಿನೇ ಹಾಗಾದ್ರೇ ? ಅಂತಾ ಅಸ್ತ ಮಾಡ್ಕೊಂಡಿದಾರೆಂದ್ರೆ ಸುಂನೇನೇ ಅವ್ರೂ? ಇವ್ರ್ಯಾಕೆ ಅವ್ರನ್ನ ಕೆಣಕ್ಬೇಕೂ?

ನಾ : ಅಯ್ಯೋ ಅದು ಹಾಗಲ್ಲಜ್ಜೀ.. ಅವ್ನಿಗೆ ಆಥರಾ ವೆಪನ್ಸ್‌ ಮಾರಿದ್ದೇ ಅಮೆರಿಕದೊರು....

ಗಂ : ಹೌದೇ ? ಅವ್ರ್ಯಾಕೆ ಹಾಗ್ಮಾಡದ್ರೂ?

ನಾ : ಅವ್ರು ಹಾಗೇ ಅಜ್ಜಿ , ನೀನು ಸುಂನೆ ನನ್ನ ತಲೆ ತಿನ್ನಬೇಡ..

ಗಂ : ಮತ್ತೆ !? ವಾಪ್ಸು ಕೊಡೂಂತ ಕೇಳಕ್ಕಿಲ್ವೇ ಅವ್ರೂ? ಕೇಳದ್ರೂ ಈಗವನು ಕೊಡಲ್ಲಾಂತಿಟ್ಕೋ.. ಹಯ್ಯಪ್ಪ ಇನ್ನೂ ಏನೇನು ನೋಡ್ಬೇಕೋ ರಾಮಾ ನಾನೂ ಈ ಭೂಮಿ ಮೇಲೇ ? ಈಗ ಮುಂದೇನೂ ?

ನಾ : ಗೊತ್ತಿಲ್ಲಜ್ಜೀ.. ನೀನು ನೋಡಕ್ಬಿಟ್ಟ್ರೇ ತಾನೇ ನಂಗೊತ್ತಾಗೋದು ಮುಂದೇನೂ ಅಂತಾ ?

*

(ಕಾಲಿಂಗ್‌ ಬೆಲ್‌ನ ದನಿ... ನಾನು ಎದ್ದು ಹೋಗಿ ವಾಪಸ್‌ ಬಂದಮೇಲೆ)

ನಾ : ಅಮ್ಮಾ.....ಪಿಜ್ಜಾ ಬಂತೂ...

ಗಂ : ಅದ್ಯಾರು ಕಂಡ್ಹಿಡ್ದ್ರೇ ಈ ಹಾಳು ಪಿಜ್ಜಾನಾ ? ಬೇಕೂಂದ್ರೆ ಒಳ್ಳೇ ಐಯ್ಯಂಗಾರರ ಬೇಕ್ರಿ ಬ್ರೆಡ್‌ ತಿನ್ಬಾರ್ದೇ ? ಹಶ್‌! ನನ್ಮಾತ್ಗೆಲ್ಲಿ ಬೆಲೆ ? ಸರೀ ಮುಂದೇನಾಗುತ್ತೇ?

ನಾ : ನೀನೇ ಹೇಳಜ್ಜಿ ನನಗ್ಗೊತ್ತಿಲ್ಲ .. ನಾನು ಪಿಜ್ಜಾ ತಿನ್ಬೇಕು.

ಗಂ : ಅಲ್ಲಾ , ಯುದ್ಧಾ ಈಗ್ಲೂ ನಿಲ್ಸೋಕಾಗಲ್ವೇ?

ನಾ : (ಪಿಜ್ಜಾ ಮುಕ್ಕುತ್ತಾ) ಹೆಂಗಜ್ಜಿ ನಿಲ್ಲಿಸ್ತೀಯಾ?

ಗಂ : ಇಲ್ಕೇಳು... ನಾನೇನಾದ್ರೂ ಆ ಬುಶ್ಶನಾಗಿದ್ದಿದ್ರೇ... ನಾ...

ನಾ : ಏನಜ್ಜಿ ಒಳ್ಳೆ ಹಕ್ಕ-ಬುಕ್ಕ ಅಂದ್ಹಾಗೆ ಹಶ್ಶ-ಬುಶ್ಶ ಅಂತೀಯಾ... ಅವ್ನು 'ಬುಶ್‌'!

ಗಂ : ಬುಶ್ಶೋ ಬುಶ್ಖೋಟೋ...ನಾನು ಅವ್ನಾಗಿದಿದ್ರೆ ...

ನಾ : ಅವ್ನಾಗಿದಿದ್ದ್ರೆ ?

ಗಂ : ಮೊದಲು ಈ ಯುದ್ಧ ಗಿದ್ಧ ಒಂದೂ ಬೇಡಾ ಅಂತ ಸಿಪಾಯಿಗಳ್ನ ವಾಪಸ್‌ ಕರ್ಕೂಂಬರ್ತಿದ್ದೆ. ನೀನೇ ಹೇಳ್ತೀಯಲ್ಲ ಅಮೆರಿಕದೋರು ತುಂಬಾ ಮುಂದುವರ್ದಿದಾರೆ ಅಂತ... ಅವರ್ನೇ ಯಾರ್ನಾದ್ರೂ ಕೆಲವ್ರನ್ನ ಮಾತ್ರ ತುಂಬಾ ಹುಶಾರಾಗಿ ಅದೆ ನಮ್ಮ ಚಾಣಕ್ಯ ಮಾಡ್ತಿದ್ನಲ್ಲ ಹಾಗೆ ಗೂಢಚಾರಿಗಳಾಗಿ ಟ್ರೈನ್‌ ಮಾಡಿ ಮೆತ್ತಗೆ ಇರಾಕಿಗೆ ಕಳಿಸೋದು. ಅಲ್ಲಿ ಸದ್ದಾಮ ಎಲ್ಲಿ ಅಂತ ಅದೇನೇನೋ ಇದ್ಯಲ್ಲ ಈಗಿನ ಹೊಸಾ ಸಾಧನಗಳು ಅದ್ನ ಉಪಯೋಗಿಸಿ ಹುಡುಕ್ಸೊದು. ಅಮೇಲಿನ್ನೇನು? ಅವ್ನು ಸಿಕ್ತಿದ್ದ ಹಾಗೇ ಅವನ್ಕಥೆ ಮುಗ್ಸೋದು.... ಆಗ ಬೇರೆ ಪಾಪದೋರು ಸಾಯಲ್ಲ... ಬುಶ್ಶಂಗೂ ಬಿಸೀ ಎಣ್ಣೆ ಕೊಪ್ಪರ್ಗೆ ಇಲ್ಲ

ಗಂಗಜ್ಜಿಯ ಈ ಮುಗ್ಧ ಮಾತಿಗೆ, Simplistic solutionಗೆ ನಗಬೇಕೋ ಅಳಬೇಕೋ ಗೊತ್ತಾಗದೆ, ಪಿಜ್ಜಾ ಮುಗಿಸಿ ಟಿವಿ ಆರಿಸಿ ಎದ್ದುಹೋಗಿ ಮುಸುಗು ಬೀರಿದೆ ಅನ್ನಿ.

English summary
Gulf War 11 A Spoof in Kannada by H.R. Jayashree
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more