LPG Gas Crisis: ಯುದ್ಧ ಪರಿಣಾಮ: ಬೆಂಗಳೂರಿನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ, ಹೋಟೆಲ್, ಪಿಜಿಗಳಲ್ಲಿ ಮೆನು ಚೇಂಜ್
LPG Gas Crisis: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಭಾರತದಲ್ಲಿ ವಾಣಿಜ್ಯ ಹಾಗೂ ಅಡುಗೆ ಅನಿಲ ಸಿಲಿಂಡರ್ ಕೊರತೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ವಾಣಿಜ್ಯ ಸಿಲಿಂಡರ್‌ನ ಕೊರತೆಯು ತೀವ್ರಗೊಂಡಿದೆ. ಆದರೆ ಪರಿಸ್ಥಿತಿ ಇನ್ನೂ ನಿಯಂತ್ರಣದಲ್ಲಿರುವುದು ಸಮಾಧಾನಕರ ಸಂಗತಿ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಕೊರತೆಯು ಬೆಂಗಳೂರು - ಹುಬ್ಬಳ್ಳಿ ಸೇರಿದಂತೆ ವಿವಿಧ ಪ್ರಮುಖ ನಗರಗಳ ಮೇಲೆ ಆಗಿದ್ದು, ಹೋಟೆಲ್‌ಗಳಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆಯ ಕಾರಣಕ್ಕೆ ಊಟದ ಮೆನು ಬದಲಾವಣೆ ಮಾಡುವುದು ಹಾಗೂ ಕೆಲವು ಕಡೆ ಹೋಟೆಲ್ ಬಂದ್ ಸಹ ನಡೆದಿದೆ. ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಿಂದಾ ಜಾಗತಿಕ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಲ್ಲಿ ಅಮೆರಿಕ ಸಹ ಭಾಗಿಯಾಗಿರುವುದು ಯುದ್ಧ ತೀವ್ರಗೊಂಡಿದೆ. ಇದರಿಂದಾಗಿ ಕರ್ನಾಟಕದಾದ್ಯಂತ ವಾಣಿಜ್ಯ (Commercial) ಮತ್ತು ಗೃಹಬಳಕೆಯ (Domestic) ಸಿಲಿಂಡರ್‌ಗಳ ಪೂರೈಕೆ ಗಣನೀಯವಾಗಿ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.

Gas ಬೆಂಗಳೂರಿನ ಹೋಟೆಲ್‌ಗಳಿಗೆ ಸಂಕಷ್ಟ
ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಎರಡು ಕ್ಷೇತ್ರಗಳೆಂದರೆ ಮೊದಲನೆಯದಾಗಿ ಹೋಟೆಲ್ ಉದ್ಯಮ ಹಾಗೂ ಮತ್ತೊಂದು ಬೆಂಗಳೂರಿನ ಪಿ.ಜಿಗಳು ಈ ಎರಡು ಕಡೆಯೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಿ ಅಂದಾಜು 30,000 ಹೆಚ್ಚು ಹೋಟೆಲ್‌ಗಳು ಇವೆ. ಶೇ. 90ರಷ್ಟು ಹೋಟೆಲ್‌ಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳನ್ನೇ ಅವಲಂಬಿಸಿವೆ. ಆದರೆ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್‌ಗಳು ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿಸಿ ರಾವ್ ಅವರು Oneindia Kannadaಕ್ಕೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಲಕ್ಷಾಂತರ ಜನ ಹೋಟೆಲ್ ಊಟದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಇದೀಗ ವಾಣಿಜ್ಯ ಸಿಲಿಂಡರ್‌ಗಳು ಶೂನ್ಯವಾಗುತ್ತಿದ್ದು. ಹೋಟೆಲ್‌ಗಳನ್ನು ಕ್ಲೋಸ್ ಮಾಡುವ ಪರಿಸ್ಥಿತಿ ಇದೆ. ತಕ್ಷಣವೇ ಪರ್ಯಾಯ ವ್ಯವಸ್ಥೆ ಕಂಡಿಕೊಳ್ಳಲು ಸಾಧ್ಯವಿಲ್ಲ. ನಾವು ಸಹ ಎಲೆಕ್ಟ್ರಿಕಲ್ ಸಾಧನಗಳನ್ನು ಅಳವಡಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರ ಈ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಇಲ್ಲದೆ ಇರುವುದರಿಂದ ಹಲವು ಹೋಟೆಲ್‌ಗಳು ಮತ್ತು ಪಿಜಿಗಳು (PG) ಈಗಾಗಲೇ ಬಂದ್ ಆಗುತ್ತಿವೆ. ಹೋಟೆಲ್ ಮಾಲೀಕರು ಸಿಲಿಂಡರ್‌ಗಾಗಿ ಪರದಾಡುವಂತಾಗಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸುಮಾರು 60 ರೂಪಾಯಿ ರಷ್ಟು ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಈಗ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯು 915.50 ರೂಪಾಯಿ ಆಗಿದೆ.
ಬೆಂಗಳೂರು ಪಿಜಿ ಅಸೋಸಿಯೇಷನ್ ಹೇಳುವುದು
ಬೆಂಗಳೂರಿನಲ್ಲಿ ಹೋಟೆಲ್‌ಗಳ ಜೊತೆಗೆ ಪಿ.ಜಿಗಳಿಗೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ಬೆಂಗಳೂರಿನ ಪಿಜಿಗಳಲ್ಲೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ಹೀಗಾಗಿ, ಪಿಜಿಗಳಲ್ಲಿ ನೀಡುವ ಆಹಾರದ ಮೆನು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಪಿಜಿ (PG) ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಅರುಣ್ ಕುಮಾರ್ ಡಿ.ಟಿ ಅವರು Oneindia Kannadaಕ್ಕೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಯಾವುದೇ ಪಿಜಿಗಳಲ್ಲೂ ಆಹಾರ ಇಲ್ಲದ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಇದು ಸಂಕಷ್ಟದ ಸಮಯವಾಗಿದ್ದು, ಈ ಸಮಯದಲ್ಲಿ ಮಾನವೀಯತೆ ದೃಷ್ಟಿಯಿಂದ ಪಿಜಿಗಳಲ್ಲಿ ಇರುವವರಿಗೆ ದರ ಹೆಚ್ಚಳ ಮಾಡಬಾರದು ಹಾಗೂ ಯಾರಿಗೂ ಊಟ ಇಲ್ಲದಂತೆ ಕಳುಹಿಸಬಾರದು ಎಂದು ಹೇಳಲಾಗಿದೆ. ಅಲ್ಲದೆ ಕೆಲವೊಂದು ಸರಳ ಅಡುಗೆಗಳನ್ನು / ಮೆನು ಬದಲಾವಣೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಹೆಚ್ಚು ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇರುವ ದೋಸೆ ಹಾಗೂ ಚಪಾತಿಯಂತಹ ಆಹಾರ ಪದಾರ್ಥಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಪಿಜಿಗಳ ಊಟದ ಮೆನು ಬದಲಾವಣೆ
ಸೋಮವಾರ ದಿಂದ ಶುಕ್ರವಾರ: ದಿನಕ್ಕೆ 2 ಬಾರಿ ಊಟ( ಲಂಚ್ ಬಾಕ್ಸ್ ಪಡೆಯಲು ಸೂಚನೆ)
ಶನಿವಾರ - ಭಾನುವಾರ: ದಿನಕ್ಕೆ 3 ಬಾರಿ ಊಟ
ಹೆಚ್ಚು ಗ್ಯಾಸ್ ಬಳಕೆಯ ಪದಾರ್ಥಗಳಿಗೆ ಬ್ರೇಕ್
ದೋಸೆ, ಪೂರಿ, ಚಪಾತಿ ಹಾಗೂ ಇತರೆ ಗ್ಯಾಸ್ ಹೆಚ್ಚು ಬೇಕಾಗುವ ಪದಾರ್ಥಗಳನ್ನು ತಪ್ಪಿಸಲಾಗಿದೆ. ಸ್ವಯಂ ಅಡುಗೆ ಗ್ಯಾಸ್ ಸೌಲಭ್ಯ ರದ್ದು ಮಾಡಲಾಗಿದ್ದು, ಅಗತ್ಯವಿದ್ದಲ್ಲಿ ಇಂಡಕ್ಷನ್ ಸ್ಟೌವ್ ಬಳಕೆ ಹಾಗೂ ಎಲೆಕ್ಟ್ರಿಕ್ ರೈಸ್ ಕುಕ್ಕರ್ ಬಳಕೆಗೆ ಆದ್ಯತೆ ನೀಡಲಾಗಿದೆ. 20 ಲೀಟರ್ ಎಲೆಕ್ಟ್ರಿಕ್ ರೈಸ್ ಕುಕ್ಕರ್ ಬಳಸಲು ಸಲಹೆ. ಸಮೀಪದ PGಗಳ ಸಂಯುಕ್ತ ಅಡುಗೆ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ.
ಕಾಳಸಂತೆ ಮಾರಾಟ
ಇನ್ನು ಮಾರುಕಟ್ಟೆಯಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಕೆಲವರು ಸಿಲಿಂಡರ್ ಅಭಾವದ ಲಾಭ ಪಡೆದು ಕೆಲವು ಕಡೆ ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳನ್ನು 3,000 ವರೆಗೂ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಇನ್ನು ಸಿಲಿಂಡರ್ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಇಂಡಕ್ಷನ್ ಸ್ಟವ್‌ಗಳಿಗೆ (Induction Stove) ಬೇಡಿಕೆಯೂ ಹೆಚ್ಚಾಗಿದೆ.












Click it and Unblock the Notifications