ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಾದಶಿಯಂದೆ ಏಕೆ ಉಪವಾಸ ಮಾಡಬೇಕು?

By Super
|
Google Oneindia Kannada News

ರ್ರೆಂದು ಬೀಸುತ್ತಿರುವ ಗಾಳಿ, ಮಾಸ, ತಿಥಿ, ನಕ್ಷತ್ರಗಳ ಬಗ್ಗೆ ಕಾಳಜಿ ಇಲ್ಲದವರಿಗೂ ಇದು ಆಷಾಢ ಮಾಸ ಎಂಬುದನ್ನು ನೆನಪಿಸುತ್ತಿದೆ. ಮಕ್ಕಳಂತೂ ಹಿರಿ ಹಿರಿ ಹಿಗ್ಗುತ್ತಾ ಗಾಳಿಪಟ ಹಾರಿಸುತ್ತಿದ್ದಾರೆ. ಮಂಡ್ಯದಲ್ಲಿ ಮೊನ್ನೆಯಷ್ಟೇ ಗಾಳಿಪಟದ ಸ್ಪರ್ಧೆ ನಡೆದಿದೆ. ಬೆಂಗಳೂರಿನ ಜಕ್ಕೂರು ಮೈದಾನ ಗಾಳಿಪಟದ ಸ್ಪರ್ಧೆಗೆ ಸಜ್ಜಾಗುತ್ತಿದೆ.

ಈ ಮಧ್ಯೆ ತಿಂಗಳಲ್ಲಿ ಎರಡು ದಿನ ಬರುವ ಏಕಾದಶಿಯಂದು ಉಪವಾಸ ಮಾಡದ ಎಷ್ಟೋ ಮಂದಿ ಆಷಾಢ ಏಕಾದಶಿಯ ಉಪವಾಸ ಮಾಡಿದ್ದಾರೆ. ಆಷಾಢ ಏಕಾದಶಿಯಂದು ಉಪವಾಸ ಮಾಡುವುದರಿಂದ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕರ ನಂಬಿಕೆ. ಉಪವಾಸ ಮಾಡುವುದೇಕೆ? ಇದರ ಹಿಂದಿನ ವೈಜ್ಞಾನಿಕ ವಿಚಾರವೇನು...?

ಉಪವಾಸ : ಲಂಘನಂ ಪರಮೌಷಧಂ ಎಂಬ ಜನಜನಿತವಾದ ಮಾತೇ ಇದೆ. ಪ್ರಿವೆನ್‌ಷನ್‌ ಈಸ್‌ ಬೆಟರ್‌ದ್ಯಾನ್‌ ಕ್ಯೂರ್‌ ಎನ್ನುವಂತೆ ಅಜೀರ್ಣ ತಡೆಯಲು ಉಪವಾಸವೇ ಅತ್ಯುತ್ತಮ ಔಷಧ. ಪಕ್ಷದ 14 ದಿನವೂ ಹೊಟ್ಟೆ ಬಿರಿಯ ತಿನ್ನುವ ಮಂದಿ 15 ದಿನಕ್ಕೊಮ್ಮೆ ಉಪವಾಸ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬುದನ್ನು ಕೆಲವು ವೈದ್ಯರೂ ಒಪ್ಪುತ್ತಾರೆ. ಆದರೆ, ಆರೋಗ್ಯದ ದೃಷ್ಟಿಯಿಂದ ಉಪವಾಸ ಮಾಡಿ ಎಂದರೆ ಜನ ಕೇಳುವುದಿಲ್ಲ ಎಂದು ಇದನ್ನು ಶಾಸ್ತ್ರ ಎಂದು ಜಾರಿಗೆ ತರಲಾಗಿದೆ ಎಂಬುದು ಹಿರಿಯರ ಅಭಿಪ್ರಾಯ.

ಏಕಾದಶಿಯಂದೇ ಏಕೆ? : ಆದರೆ ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. ಉಪವಾಸವನ್ನು ಏಕಾದಶಿಯಂದೇ ಏಕೆ ಮಾಡಬೇಕು? ದ್ವಾದಶಿ, ಪಂಚಮಿ, ಪಾಢ್ಯ ಏಕಾಗಬಾರದು? ಈ ಪ್ರಶ್ನೆಗೂ ವೈಜ್ಞಾನಿಕ ತಳಹದಿಯಲ್ಲಿ ಮಾತನಾಡುವ ಬೆಂಗಳೂರಿನ ಗಜೇಂದ್ರನಗರ ಬಡಾವಣೆಯ ಈಶ್ವರಂ ಶ್ರೀನಿವಾಸ ಶಾಸ್ತ್ರಿಗಳು ಹೀಗೆ ಉತ್ತರ ನೀಡುತ್ತಾರೆ.

ಖಗೋಳ ಶಾಸ್ತ್ರದ ಪ್ರಕಾರ ಚಂದ್ರನು ಭೂಮಿಯ ಸುತ್ತ ಸುತ್ತುವಾಗ 24 ಗಂಟೆಗಳ ಅವಧಿಯ ಅಂತರದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದನ್ನೇ ಒಂದು ತಿಥಿ ಎನ್ನುವುದು. ಹೀಗೆ ಪೂರ್ಣಿಮೆ ಅಥವಾ ಅಮಾವಾಸ್ಯೆಯ ದಿನದಿಂದ ದಶಮಿ (10ನೇ ದಿನದ) ಹೊತ್ತಿಗೆ 120 ಡಿಗ್ರಿಗಳಷ್ಟು ಚಂದ್ರ ಸಂಚರಿಸಿರುತ್ತಾನೆ. ಅಂದರೆ ಏಕಾದಶಿಯ ಹೊತ್ತಿಗೆ ಚಂದ್ರನು 120 ಡಿಗ್ರಿಗೆ ಬಂದು 132 ಡಿಗ್ರಿ ಕೋನದಲ್ಲಿರುತ್ತಾನೆ. ಆಹೊತ್ತಿನಲ್ಲಿ ಭೂಮಿಯ ಮೇಲೆ ಚಂದ್ರನ ಆಕರ್ಷಣೆ ಹೆಚ್ಚು.

ಈ ಅವಧಿಯಲ್ಲಿ ಚಂದ್ರನ ಆಕರ್ಷಣೆಯ ಪ್ರಭಾವ ಭೂಮಿಯ ಮೇಲೂ, ಜಲವರ್ಗಗಳ ಮೇಲೂ ಹೆಚ್ಚಾಗಿ ಉಂಟಾಗಿರುತ್ತದೆ. ಚಂದ್ರನು ಈ ಅವಧಿಯಲ್ಲಿ ಜಲ, ನೆಲ, ಗಾಳಿ, ಬೆಂಕಿ, ಆಕಾಶ ಎಂಬ ಪಂಚಭೂತಗಳಿಂದ ಆದ ಮಾನವನ ಶರೀರದ ಮೇಲೂ ಪರಿಣಾಮ ಉಂಟು ಮಾಡುತ್ತಾನೆ. ಮಾನವನ ಜೀರ್ಣಾಂಗಗಳು ಈ ಅವಧಿಯಲ್ಲಿ ಪ್ರಭಾವಕ್ಕೊಳಗಾಗಿರುತ್ತವೆ.

ಹೀಗಾಗಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಮಾನವನ ಆರೋಗ್ಯ ಸಮೃದ್ಧಿಯಾಗಿರುತ್ತದೆ. ಅಂದು ಊಟ ಮಾಡುವುದರಿಂದ ಚಂದ್ರ ಪ್ರಭಾವಕ್ಕೆ ಒಳಗಾದ ಜೀರ್ಣಾಂಗಗಳಿಂದಾಗಿ ಅಜೀರ್ಣ ಸಂಬಂಧಿತ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ ಅವರು.

ಹುಣ್ಣಿಮೆಯ ದಿನ ಚಂದ್ರನ ಆಕರ್ಷಣೆಗೆ ಸಾಗರದಲ್ಲಿ ಅಲ್ಲಕಲ್ಲೋಲಗಳುಂಟಾಗಿ, ಉಬ್ಬರದ ಅಲೆಗಳು ಮೂಡುವುದನ್ನು ನೀವು ಒಪ್ಪುವುದಾದರೆ, ಜೀರ್ಣಾಂಗಗಳ ಮೇಲೂ ಚಂದ್ರ ಪ್ರಭಾವ ಇರುತ್ತದೆ ಎಂಬುದನ್ನು ಒಪ್ಪಲೇ ಬೇಕು ಎನ್ನುತ್ತಾರೆ ಅವರು. ಏಕಾದಶಿಯ ದಿನ ಉಪವಾಸ ಮಾಡುವುದರಿಂದ, ನಿದ್ರೆ ಕಡಿಮೆ ಆಗುತ್ತದೆ. (ಹಸಿದಾಗ ನಿದ್ದೆ ಬಾರದು ಎಂಬುದು ಸಾಬೀತಾಗಿರುವ ಸಿದ್ಧಾಂತ) ಜಾಗರಣೆ, ಉಪವಾಸ ಈ ಎರಡರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಈ ಅತಿ ಉಷ್ಣದಿಂದ ದೇಹದಲ್ಲಿರುವ ರೋಗಾಣುಗಳು (ವೈರಸ್‌ - ಬ್ಯಾಕ್ಟೀರಿಯಾ) ಸಾವನ್ನಪ್ಪಿ. ಆರೋಗ್ಯ ವರ್ಧಿಸುತ್ತದೆ ಎಂಬುದು ಅವರ ವಿಶ್ಲೇಷಣೆ.

ಪಾರಣೆಯ ವಿಶೇಷ : ಇದಾದ ನಂತರ ದ್ವಾದಶಿಯಂದು ಮಾಡುವ ಪಾರಣೆಯಲ್ಲಿ ಹೆಸರು ಬೇಳೆ ಪಾಯಸ ಮಾಡುತ್ತಾರೆ. ಇದು ಹಿಂದಿನ ದಿನ ಶರೀರದಲ್ಲಿ ಉತ್ಪತ್ತಿಯಾದ ಉಷ್ಣವನ್ನು ಶಮನ ಮಾಡುತ್ತದಂತೆ. ಅಗಸೆ ಸೊಪ್ಪಂತೂ ಇನ್ನೂ ಉತ್ತಮ ಆರೋಗ್ಯ ನೀಡುತ್ತದಂತೆ. ಅಗಸೆ ಸೊಪ್ಪು ಅಲೋಪತಿಯ ಆ್ಯಂಟಿ ಬಯೋಟಿಕ್‌ ರೀತಿಯಲ್ಲಿ ವರ್ತಿಸುತ್ತದೆ ಎನ್ನುತ್ತಾರೆ ಅಳಲೆಕಾಯಿ ಪಂಡಿತರು.

ನೀವು ಈ ಸಿದ್ಧಾಂತವನ್ನು ಒಪ್ಪುವುದಾದರೆ ಏಕಾದಶಿಯಂದು ಉಪವಾಸ ಮಾಡಿ. ಇದೊಂದು ಕಾಗಕ್ಕ ಗುಬ್ಬಕ್ಕನ ಕಥೆ ಎಂದು ನೀವೆನ್ನುವುದಾದರೆ, ಓದಿ ಮರೆತುಬಿಡಿ. ಇಲ್ಲವೇ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಶೋಧನಗೆ ಸಿದ್ಧರಾಗಿ.

ಬಾಲಂಗೋಚಿ : ಉಪವಾಸದ ಬಗ್ಗೆ ಜನಪ್ರಿಯ ಗೀತೆಯಾಂದು ಹೀಗಿದೆ - ಆಚೆ ಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ, ಎಲ್ಲೋ ಸ್ವಲ್ಪ ತಿಂತಾರಷ್ಟೆ, ಉಪ್ಪಿಟ್ಟು, ಅವಲಕ್ಕಿ, ಪಾಯಸ...

English summary
Ekadashi upavasa - scientific analysis
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X