Bengaluru: ಪಬ್‌ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ

ಬೆಂಗಳೂರಿನ ಇಂದಿರಾನಗರದಲ್ಲಿರುವ ಪ್ರಸಿದ್ಧ ಪಬ್‌ವೊಂದರಲ್ಲಿ ಗ್ರಾಹಕನೊಬ್ಬನಿಗೆ ಆದ ಅನುಭವ ಇದೀಗ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 'ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್' (Chilly Dusted Gold Fingers) ಎಂಬ ಆಕರ್ಷಕ ಹೆಸರಿನ ತಿಂಡಿಯನ್ನು ಆರ್ಡರ್ ಮಾಡಿದ ಗ್ರಾಹಕನಿಗೆ, ಸಂಡಿಗೆ ರೀತಿಯ ಹಳದಿ ಬಣ್ಣದ ಬೋಟಿ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಬಗ್ಗೆ ಅರುಣ್‌ರಾಜ್ ಪತ್ತಾರ್ ಎಂಬುವವರು ಎಕ್ಸ್ ಖಾತೆಯಲ್ಲಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಇಂದಿರಾನಗರದಲ್ಲಿರುವ ಟಾಯ್ಟ್ (Toit) ಪಬ್‌ಗೆ ಭೇಟಿ ನೀಡಿದ್ದ ಅರುಣ್‌ರಾಜ್, ಮೆನುವಿನಲ್ಲಿ 150 ರೂಪಾಯಿ ಬೆಲೆಯ 'ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್' ಎಂಬ ಖಾದ್ಯವನ್ನು ನೋಡಿ, ಅದೇನೋ ವಿಶೇಷವಾದ ತಿಂಡಿ ಇರಬಹುದು ಎಂದು ಆರ್ಡರ್ ಮಾಡಿದ್ದರು. ಆದರೆ, ವೈಟರ್ ತಂದುಕೊಟ್ಟ ತಟ್ಟೆಯಲ್ಲಿ ಕೇವಲ ಮನೆಯಲ್ಲಿ ಕರಿಯುವ ಸಾಮಾನ್ಯ ಸಂಡಿಗೆ ರೀತಿಯ ಬೋಟಿ ಇದ್ದದ್ದನ್ನು ಕಂಡು ಅವರು ಅಕ್ಷರಶಃ ದಂಗಾಗಿದ್ದಾರೆ. ಈ ಬಗ್ಗೆ ತಾವು ಆರ್ಡರ್ ಮಾಡಿದ ಮೆನು ಕಾರ್ಡ್ ಮತ್ತು ತಮಗೆ ನೀಡಿದ ಫ್ರೈಯಮ್ಸ್ ಚಿತ್ರವನ್ನು ಹಂಚಿಕೊಂಡಿರುವ ಅವರು, "ಇಂದಿರಾನಗರದ ಟಾಯ್ಟ್ ಪಬ್‌ನಲ್ಲಿ ನಾನು ಆರ್ಡರ್ ಮಾಡಿದ್ದು ಇದು. ಇದಕ್ಕೆ 150 ರೂಪಾಯಿ ತೆತ್ತ ನನ್ನ ವಂಶಾವಳಿಯ ಮೊದಲ ವ್ಯಕ್ತಿ ನಾನೇ ಇರಬೇಕು," ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

Bengaluru

ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮಗೂ ಆದ ಇಂತಹುದೇ ಅನುಭವಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. ದುಬಾರಿ ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳಲ್ಲಿ ಸಾಮಾನ್ಯ ತಿಂಡಿಗಳಿಗೆ ಆಕರ್ಷಕ ಹೆಸರುಗಳನ್ನು ಇಟ್ಟು, ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನನ್ನಂತೆಯೇ ಮೋಸ ಹೋದ ಮತ್ತೊಬ್ಬ ವ್ಯಕ್ತಿ ಸಿಕ್ಕಿದ್ದಕ್ಕೆ ಖುಷಿಯಾಯಿತು," ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು "ಉತ್ತಮ ಮಾರ್ಕೆಟಿಂಗ್ ತಂತ್ರದ ಮೂಲಕ ಸಾಮಾನ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ," ಎಂದು ಟೀಕಿಸಿದ್ದಾರೆ.

ಕೆಲವು ನೆಟ್ಟಿಗರು ಬೆಂಗಳೂರಿನ ಊಟದ ಸಂಸ್ಕೃತಿಯನ್ನು ಲೇವಡಿ ಮಾಡಿದ್ದಾರೆ. "ಬೆಂಗಳೂರಿನಲ್ಲಿ ಏನನ್ನು ಬೇಕಾದರೂ, ಎಷ್ಟು ಬೆಲೆಗೆ ಬೇಕಾದರೂ ಮಾರಾಟ ಮಾಡಬಹುದು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್ - ಜನರಿಗೆ ಗೊಂದಲ ಮೂಡಿಸಿ, ಅವರು ಇದನ್ನು ಆರ್ಡರ್ ಮಾಡುವಂತೆ ಪ್ರೇರೇಪಿಸುವ ಇಂತಹ ಆಕರ್ಷಕ ಹೆಸರು ನೀಡಿದವರ ಸೃಜನಶೀಲತೆಯನ್ನು ಮೆಚ್ಚಲೇಬೇಕು," ಎಂದು ತಮಾಷೆ ಮಾಡಿದ್ದಾರೆ.

ಒಟ್ಟಾರೆಯಾಗಿ, ದುಬಾರಿ ಹೋಟೆಲ್‌ಗಳಲ್ಲಿ ಕೇವಲ ಮೆನು ಕಾರ್ಡ್‌ನಲ್ಲಿರುವ ಹೆಸರು ನೋಡಿ ಆರ್ಡರ್ ಮಾಡುವ ಮುನ್ನ ಎಚ್ಚರ ವಹಿಸುವುದು ಒಳಿತು ಎಂಬ ಪಾಠವನ್ನು ಈ ಘಟನೆ ನೆಟ್ಟಿಗರಿಗೆ ಕಲಿಸಿದೆ. ಮನೆಯಲ್ಲಿ ಕೇವಲ ಹತ್ತು ರೂಪಾಯಿಗೆ ಸಿಗುವ ಹಪ್ಪಳ, ಸಂಡಿಗೆಗಳಿಗೆ ಪಬ್‌ಗಳಲ್ಲಿ ನೂರಾರು ರೂಪಾಯಿ ವಸೂಲಿ ಮಾಡುವುದು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ತಂತ್ರವಷ್ಟೇ ಎಂಬುದು ಈ ವೈರಲ್ ಪೋಸ್ಟ್‌ನಿಂದ ಸಾಬೀತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+