ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿನ ದಿಕ್ಕನ್ನೇ ಬದಲಿಸಬಲ್ಲ ನಂಬಿಕೆಗಳು

By * ಗುಣಮುಖ
|
Google Oneindia Kannada News

ನಂಬಿಕೆ ಪರ್ವತಗಳನ್ನೇ ಕದಲಿಸಬಲ್ಲದು ಎಂಬ ಮಾತಿದೆ. ಆ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ನಂಬಿಕೆಗಳು ಪರ್ವತಗಳನ್ನಲ್ಲದಿದ್ದರೂ, ಬದುಕನ್ನು ಖಂಡಿತ ಬದಲಿಸಬಲ್ಲವು. ಒಂದು ಧನಾತ್ಮಕ, ರಚನಾತ್ಮಕ, ಪರಿಶುದ್ಧ ನಂಬಿಕೆ ಬದುಕನ್ನು ಸುಂದರವಾಗಿ, ಸಶಕ್ತವಾಗಿ ರೂಪಿಸಬಲ್ಲದು.

ನಂಬಿಕೆಗಳು ಕಷ್ಟಗಳನ್ನು ಕಡಿಮೆ ಮಾಡದಿದ್ದರೂ, ಅಸಾಧ್ಯವನ್ನು ಸಾಧ್ಯಗೊಳಿಸಬಲ್ಲವು, ಬದುಕನ್ನು ಸಹ್ಯಗೊಳಿಸಬಲ್ಲವು. ಒಂದು ತಪ್ಪು ತಿಳಿವಳಿಕೆಯಿಂದ ಮೂಡಿದ ನಂಬಿಕೆ ಕೂಡ ಜೀವನವನ್ನು ರೂಪಿಸಬಲ್ಲದು ಎಂದು ನೆನೆದರೆ, ನಂಬಿಕೆಗಳ ಅಗಾಧ ಪ್ರಭಾವ ಗೊತ್ತಾಗುತ್ತದೆ. ಈ ಸಾಲನ್ನು ಬರೆಯುತ್ತಿರುವಾಗಲೇ, ನನಗೆ ಉತ್ತರ ಅಮೆರಿಕಾದ ಸಂಗೀತದ ವಿಶಿಷ್ಟ ಪ್ರತಿಭೆ ಹ್ಯಾಸಲ್ ಆಡ್ಕಿನ್ಸ್ (1937-2005) ನೆನಪಾಗುತ್ತಾನೆ.

ಉತ್ತರ ಅಮೆರಿಕಾದ, ವೆಸ್ಟ್ ವರ್ಜೀನಿಯ, ಒಂದು ದೊಡ್ಡ ಕುಟುಂಬದಲ್ಲಿ ಹತ್ತನೇ ಮಗುವಾಗಿ ಜನಿಸಿದ ಹ್ಯಾಸಲ್, ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ಆಸಕ್ತನಾಗಿದ್ದ. ಕಡು ಬಡತನದಲ್ಲಿ ಬೆಳೆದ ಅವನು ಸ್ಕೂಲ್‌ಗೆ ಹೋಗಿದ್ದು ಕಡಿಮೆ. ಅವನೇ ಹೇಳಿಕೊಂಡ ಪ್ರಕಾರ, ಇಡೀ ಜೀವನದಲ್ಲಿ ಅವನು ಸ್ಕೂಲ್‌ಗೆ ಹೋಗಿದ್ದು ಕೇವಲ ನಾಲ್ಕು ದಿನ. ತನ್ನ ಸಂಗೀತ ಆಸಕ್ತಿಯನ್ನು ಪೊರೆಯಲು ಚಿಕ್ಕ ವಯಸ್ಸಿನಿಂದಲೇ ಕಾರ್ ರಿಪೇರಿ, ವಾಶಿಂಗ್ ಮಷಿನ್ ರಿಪೇರಿ ಕಲಿತ. ರಿಪೇರಿ ಕೆಲಸದಿಂದ ಬಂದ ಹಣವನ್ನು ಸಂಗೀತ ಕಲಿಯಲು ಬಳಸಿಕೊಳ್ಳುತ್ತಿದ್ದ. ಕಡು ಬಡತನ, ತುಂಬಿದ ಕುಟುಂಬ... ಊಹುಂ ಯಾವುದೂ ಅವನನ್ನು ತನ್ನ ಗುರಿಯಿಂದ ವಿಚಲಿತಗೊಳಿಸಲಿಲ್ಲ.

ಅವನ ಕಲಿಕೆಯ ಶ್ರದ್ಧೆಯ ಮಟ್ಟ ಹೇಗಿತ್ತೆಂದರೆ, ಸೃಶಾವ್ಯವಾಗಿ ಹಾಡುತ್ತಿದ್ದ, ಗಿಟಾರ್ ಕರಗತ ಮಾಡಿಕೊಂಡಿದ್ದ, ಗಿಟಾರ್ ಬಾರಿಸುತ್ತಲೇ ಕಾಲಿನಿಂದ ಡ್ರಮ್ಸ್ ಬಾರಿಸುತ್ತಿದ್ದ, ಆಗಾಗ ಪಿಯಾನೊ, ಪಿಟೀಲು, ಹಾರ್ಮೋನಿಯಂ ಮತ್ತು ಹಾರ್ಪ್ ಎಂಬ ತಂತಿ ವಾದ್ಯ. ಹೀಗೆ ಏಕಕಾಲಕ್ಕೆ ಹಾಡುತ್ತ, ಹಲವು ವಾದ್ಯಗಳನ್ನು ನುಡಿಸುತಿದ್ದ. ಅದ್ಭುತವೆಂದರೆ ನೋಡಿ ಹಾಡುವುದೇ ಕಷ್ಟ, ಒಂದು ವಾದ್ಯವನ್ನು ಕರಗತ ಮಾಡಿಕೊಳ್ಳುವುದೇ ಕಷ್ಟ... ಅಂತದ್ದರಲ್ಲಿ ಹ್ಯಾಸಲ್ ಆಡ್ಕಿನ್ಸ್ ಸಕಲ ವಾದ್ಯವನ್ನು ಹಾಡಿಗೆ ತಕ್ಕಂತೆ ನುಡಿಸುತ್ತಿದ್ದ. ಹೀಗೆ ಸಕಲ ವಾದ್ಯ ವಲ್ಲಭನಾಗಿದ್ದ.

ಇದು ಹೇಗೆ ಸಾಧ್ಯವಾಯಿತೆಂದರೆ... ಹ್ಯಾಸಲ್ ಆಡ್ಕಿನ್ಸ್ ಚಿಕ್ಕ ವಯಸ್ಸಿನಲ್ಲಿ ರೇಡಿಯೋದಲ್ಲಿ ಸಂಗೀತ ಕೇಳುತ್ತಾ ಬೆಳದವ. ರೇಡಿಯೋದಲ್ಲಿ ಪ್ರತಿ ಹಾಡಿನ ನಂತರ ರೇಡಿಯೋ ಜಾಕಿ 'ನೀವೀಗ ಕೇಳಿದ್ದು ಹ್ಯಾಂಕ್ ವಿಲಿಯಮ್ಸ್ ಸಂಗೀತ...' ಎಂದು ಹೇಳುತ್ತಿದ್ದರೆ, ಚಿಕ್ಕ ಹುಡುಗ ಹ್ಯಾಸಲ್ ರೇಡಿಯೋದಲ್ಲಿ ಹಾಡಿದ್ದು ಮತ್ತು ಎಲ್ಲಾ ವಾದ್ಯಗಳನ್ನು ನುಡಿಸಿದ್ದು ಹ್ಯಾಂಕ್ ವಿಲಿಯಮ್ಸ್ ಎಂದು ನಂಬಿಬಿಟ್ಟಿದನಂತೆ.

ಆ ತಪ್ಪು ತಿಳಿವಳಿಕೆಯಿಂದ ಮೂಡಿದ ನಂಬಿಕೆ ಎಷ್ಟು ಬಲವಾಗಿತ್ತೆಂದರೆ, ನಾನೂ ಸಂಗೀತಗಾರನಾಗಬೇಕೆಂದರೆ ಹಾಡುವುದರೊಂದಿಗೆ ಎಲ್ಲಾ ವಾದ್ಯಗಳನ್ನು ಕಲಿಯಬೇಕು ಎಂದು ಬಲವಾಗಿ ನಂಬಿಬಿಟ್ಟನಂತೆ ಪುಟ್ಟ ಹ್ಯಾಸಲ್. ಹೀಗೆ ಕಲಿಕೆಯ ತಿರುಗಣಿಗೆ ಬಿದ್ದ ಹ್ಯಾಸಲ್, ಕೊನೆಗೆ ಏಕ ವ್ಯಕ್ತಿ ಸಂಗೀತ ಕಚೇರಿ ನಡೆಸುವುದರ ಮಟ್ಟಿಗೆ ಪರಿಣಿತನಾದ. ತನ್ನ ಸಂಗೀತ ಕಚೇರಿಯಲ್ಲಿ ಹಾಡುತ್ತ, ಹಾಡಿಗೆ ತಕ್ಕಂತೆ ಸಕಲ ವಾದ್ಯಗಳನ್ನು ನುಡಿಸುತ್ತಾ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದ್ದ!

ನೋಡಿ ಸಾಮಾನ್ಯವಾಗಿ ನಾವೆಲ್ಲಾ 'ನನ್ನ ಕೈಯಲ್ಲಿ ಇದು ಸಾಧ್ಯವಿಲ್ಲ, ನನಗೆ ಇದು ಆಗಿ ಬರುವುದಿಲ್ಲ, ಇಲ್ಲ ಇಲ್ಲ ನನ್ನ ಮನೋಭಾವಕ್ಕೆ ಇದು ಒಗ್ಗುವುದಿಲ್ಲ, ನನಗಿರುವ ಸೌಕರ್ಯಕ್ಕೆ ಇದು ಆಗುವುದಿಲ್ಲ, ಬಡತನ ದೊಡ್ಡ ಕುಟುಂಬ, ಜವಾಬ್ದಾರಿ ಹೆಚ್ಚು, ಸಮಯ ಅಭಾವ ಕಣ್ರೀ...'. ಹೀಗೆ ಹಲವು 'ಇಲ್ಲಗಳನ್ನೇ... ಅಸಾಧ್ಯಗಳನ್ನೇ... ಪರಿಮಿತಿಗಳನ್ನೇ... ನೆಪಗಳನ್ನೇ... ಸಮರ್ಥನೆಗಳನ್ನೇ...' ನಮ್ಮ ತಲೆ ಮತ್ತು ಎದೆ ತುಂಬಾ ತುಂಬಿಕೊಳ್ಳುತ್ತಾ ಬದುಕುತ್ತೇವೆ. ನಮಗೆ ಗೊತ್ತಿಲ್ಲದೆ ಋಣಾತ್ಮಕ ಚಿಂತನೆಗಳಿಗೆ, ಭಾವನೆಗಳಿಗೆ ಅಡಿಯಾಳಾಗಿರುತ್ತೇವೆ ಮತ್ತು ಕಣ್ಣಿಗೆ ಕಾಣದ ಸರಪಳಿಯಲ್ಲಿ ಬಂಧಿಯಾಗಿರುತ್ತೇವೆ. ನಮ್ಮ ಬದುಕು ಬದಲಾಗಬೇಕಾದರೆ ನಮ್ಮ ಚಿಂತನೆ, ಭಾವನೆಗಳು ಬದಲಾಗಬೇಕು. ನಮ್ಮ ಚಿಂತನೆ, ಭಾವನೆಗಳು ಬದಲಾಗಬೇಕಿದ್ದರೆ ನಮ್ಮ ನಂಬಿಕೆಗಳು ಬದಲಾಗಬೇಕು. ನಮ್ಮ ನಂಬಿಕೆಗಳು ಬದಲಾದಂತೆ ನಮ್ಮ ಬದುಕು ಕೂಡ ಬದಲಾಗುತ್ತದೆ ಅಲ್ಲವೇ?

ಬನ್ನಿ ಈ ಕ್ಷಣದಿಂದಲೇ ಅನುಕೂಲ ಸಿಂಧು ಋಣಾತ್ಮಕ ನಂಬಿಕೆಗಳನ್ನು ನಮ್ಮ ಮನದಿಂದ ಕಿತ್ತುಹಾಕಿ, ಒಂದು ಪುಟ್ಟ ರಚನಾತ್ಮಕ ಮತ್ತು ಧನಾತ್ಮಕ ನಂಬಿಕೆಗಳನ್ನು ನಮ್ಮ ಮನದಂಗಳದಲ್ಲಿ ಬಿತ್ತೋಣ! [ಲೇಖಕರ ಈಮೇಲ್ : [email protected]]

English summary
Beliefs can bring lot of changes in your life. In fact, beliefs can change the trajectory of life. But, always believe in positive things. Read the inspirational story of American rock and roll, and blues musician one-man band Hasil Adkins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X