ಪರಸ್ಪರ ಅರಿಯುವ ಜಾಣ್ಮೆ ಪ್ರೀತಿಯಲ್ಲಿದೆ ಅಲ್ಲವೆ?

ಒಂದು ಭಾನುವಾರ ಮನೆಯಲ್ಲಿ ನಡೆದ ಘಟನೆಯಿಂದ, ಸಿದ್ಧೇಶಿ ಲಾಯರ್ ಆಫೀಸ್‌ನಲ್ಲಿ ಕುಳಿತು ವಿಚ್ಛೇದನ ಕೇಳಿದ. ಎಷ್ಟು ಕೇಳಿದರೂ ಕಾರಣ ಮಾತ್ರ ಹೇಳವಲ್ಲ! ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿ ಹಲವು ವರ್ಷಗಳ ಅನುಭವವಿದ್ದ ಹಿರಿಯ ಲಾಯರ್‌ರವರು. ಕೇಸ್ ಕೋರ್ಟ್‌ಗೆ ಹೋಗುವ ಮುನ್ನ ಸುಮಾ ಮತ್ತು ಸಿದ್ಧೇಶಿಗೆ ಕೌನ್ಸೆಲ್ಲಿಂಗ್ ಏರ್ಪಡಿಸಿದರು.
ಆ ಭಾನುವಾರದ ವಿಷಘಳಿಗೆಯಲ್ಲಿ ನಡೆದಿದ್ದಿಷ್ಟು. ನಾಗರ ಪಂಚಮಿಗೆಂದು ಮಾಡಿದ ತಂಬಿಟ್ಟು, ಕಡಲೆಕಾಳು ಮತ್ತು ವಿವಿಧ ರೀತಿಯ ಉಂಡೆಗಳನ್ನ ಸುಮಾಳ ತಾಯಿ, ಅನಿವಾರ್ಯ ಕಾರಣದಿಂದ ಹಬ್ಬಕ್ಕೆ ಊರಿಗೆ ಬರಲಾಗದ ಮಗಳಿಗೆ ಹಿರಿಮಗನ ಕೈಯಲ್ಲಿ ಕಳುಹಿಸಿ ಕೊಟ್ಟಿದ್ದರು. ನಾಲ್ಕಾರು ದಿನ ಅದನ್ನು ಮೆದ್ದು, ಉಂಡೆಗಳನ್ನ ಬಹುವಾಗಿ ಮೆಚ್ಚಿದ್ದ ಸಿದ್ಧೇಶಿ. ಭಾನುವಾರದಂದು ಮತ್ತೆ ಸಿಹಿ ತಿಂಡಿಯ ನೆನಪಾಗಿ, ಸುಮಾ ಮಧ್ಯಾಹ್ನದ ಚಹಾ ಮಾಡುತ್ತಿರುವಾಗ ಅಡುಗೆ ಮನೆಗೆ ಬಂದು ಡಬ್ಬಿ ತೆಗೆದು ಒಂದಿಷ್ಟು ಉಂಡೆಗಳನ್ನ ತೆಗೆದುಕೊಂಡ. ಇದನ್ನು ಗಮನಿಸಿದ ಸುಮಾ ಸರಸವಾಗಿ 'ಉಂಡಿ ಕದಿತಿಯೇನೋ... ಛೀ ಕಳ್ಳ' ಎಂದಳು. ಅಷ್ಟೇ! ಅದೆಲ್ಲಿತ್ತೋ ಕೋಪ ಸಿದ್ಧೇಶಿ ಸರಸರನೆ ಉರಿದು ಬಿದ್ದ. 'ನನ್ನ ಕಳ್ಳ ಅನ್ತಿಯೇನೆ #$@#! ' ಎಂದು ಅಬ್ಬರಿಸಿದ. ಹೊಡೆದೂ ಬಿಟ್ಟ. ಎಲ್ಲಾ ಕೆಟ್ಟ ಕೊಳಕ ಪದಗಳನ್ನು ಬಳಸಿ ಸುಮಾಳನ್ನು ಬೈದ. ಮೈ ಮೇಲೆ ದೆವ್ವ ಬಂದವನಂತೆ ಆಡಿದ. ಯಾಕೆ? ಏನು? ಎಂತ? ಎಂದು ಅರಿಯದ ಸುಮಾ ಶಾಕ್‌ಗೆ ಒಳಗಾಗಿ ಊಟ ತಿಂಡಿ ಬಿಟ್ಟು ಕೋಣೆ ಒಳಗೆ ಸೇರಿದಳು.
ಯಾವುದೇ ರೀತಿ ಯೋಚಿಸಿದರು, ತರ್ಕಿಸಿದರು ತನ್ನ ತಪ್ಪೇನು ಎಂದು ಸುಮಾಗೆ ಹೊಳೆಯಲೇ ಇಲ್ಲ! ಸಿದ್ಧೇಶಿ ಯಾವುದೇ ಮಾತು ಕೇಳಿಸಿಕೊಳ್ಳುವ, ಮಾತಾಡುವ ಪರಿಸ್ಥಿತಿಯಲ್ಲಿರಲಿಲ್ಲ.
ಕೊನೆಗೆ ಕೌನ್ಸೆಲ್ಲಿಂಗ್ ಮಾಡಿದವರಿಗೂ ಸುಮಾ ಹೇಳಿದ್ದು ಕೇಳಿ ಗಾಬರಿಯಾಯಿತು. ಮೊದಲಿಗೆ ಅವರಿಗೂ ಏನೂ ಹೊಳೆಯಲಿಲ್ಲ. ಕೊನೆಗೆ ಸಿದ್ಧೇಶಿಯನ್ನು ವಿವಿಧ ರೀತಿ ಪ್ರಶ್ನೆ ಮಾಡಿದಾಗ ಹೊರ ಬಂದಿದ್ದು ಅವನ ಬಾಲ್ಯದಲ್ಲಿ ನಡೆದ ಕಹಿ ನೆನಪು. ಬಾಲ್ಯದಲ್ಲಿ ಸಿದ್ಧೇಶಿಯ ಮೇಲೆ ಸುಳ್ಳು ಕಳ್ಳತನ ಆರೋಪ ಹೊರಿಸಲಾಗಿತ್ತು. ಕೊನೆಗೆ ಅವನು ನಿರಪರಾಧಿ ಎಂದು ಸಾಬಿತಾಗಿತ್ತು. ನಿರಪರಾಧಿ ಎಂದು ಗೊತ್ತಾಗುವ ಹೊತ್ತಿಗೆ ಸಾಕಷ್ಟು ತಡವಾಗಿತ್ತು. ಅವನಿಗೆ ಸಾಕಷ್ಟು ಅವಮಾನವಾಗಿತ್ತು. ಅಂದಿನಿಂದ ಯಾರು ಏನೇ ಬೈದರೂ ಸಹಿಸಿ ಕೊಂಡಾನು, ಕಳ್ಳ ಎಂಬ ಶಬ್ದ ಕಿವಿಗೆ ಬಿದ್ದೊಡನೆ ಸಿಡಿದು ಬೀಳುತಿದ್ದ. ದೆವ್ವ ಮೈಮೇಲೆ ಬಂದವನಂತೆ ಆಡುತಿದ್ದ, ಸಿಟ್ಟಿನಲ್ಲಿ ಮೈಮರೆಯುತಿದ್ದ. ಸಿಟ್ಟಿನಲ್ಲಿ, ಅವಮಾನದ ನೆನಪಿನಲ್ಲಿ ಪುರಪುರನೆ ಉರಿದು ಬೀಳುತಿದ್ದ.
ವಿಷಯ ತಿಳಿದ ನಂತರ ಇಬ್ಬರ ಕಣ್ಣಲ್ಲೂ ನೀರು, ಪರಸ್ಪರ ಕ್ಷಮೆ ಯಾಚನೆ ಮತ್ತು ಪಶ್ಚಾತಾಪ. ಕೌನ್ಸೆಲ್ಲಿಂಗ್ ನಂತರ ಸಿದ್ಧೇಶಿ-ಸುಮಾಳ ವಿಚ್ಛೇದನದ ಕೇಸು ಸುಖಾಂತವಾಯಿತು ಎನ್ನಿ. ನಂತರ ನುರಿತ ತಜ್ಞರಿಂದ ಕೌನ್ಸೆಲ್ಲಿಂಗ್ ಚಿಕಿತ್ಸೆ ಪಡೆದ ಸಿದ್ಧೇಶಿ ಬಾಲ್ಯದಲ್ಲಿ ನಡೆದ ಅವಮಾನವನ್ನು ಮೀರಿದ, ನಂತರ ಸುಮಾಳ ಜೊತೆ ಸುಖಿ ಸಂಸಾರ ನಡೆಸಿದ.
ಈಗ ಹೇಳಿ, ತರ್ಕ ಬದ್ಧವಾಗಿ ನೋಡಿದರೆ ಇಬ್ಬರು ಅಚ್ಚ ಕನ್ನಡಿಗರು, ಮಾತೆಲ್ಲ ಕನ್ನಡದಲ್ಲೇ, ಇಬ್ಬರಿಗೂ ವಿದ್ಯೆಯಿದೆ, ಮೂರನೆಯವರ ಪ್ರವೇಶವಿಲ್ಲ. ಅದರೂ ಅವರ ನಡುವೆ ಒಂದು ಚಿಕ್ಕ ಕಮ್ಯುನಿಕೇಷನ್ ಗ್ಯಾಪ್ ಹೇಗೆ ಉಂಟಾಯಿತು? ಉತ್ತರ ಪರಸ್ಪರ ಅರಿಯುವ ತಾಳ್ಮೆ, ಜಾಣ್ಮೆ, ಸಹನೆ ಮತ್ತು ಪ್ರೀತಿಯಲ್ಲಿದೆ ಅಲ್ಲವೇ? ಮತ್ತೆ ಮಾತೇ ಬರದ ಹಸು ಕಂದನ ಜೊತೆ ತಾಯಿಗೆ ಸಂವಹನ ಸಾಧ್ಯವಾಗುವುದು ಇದರಿಂದಲೇ ಅಲ್ಲವೇ? ಸಮಸ್ತ ಓದುಗರಿಗೆಲ್ಲಾ ಅಮ್ಮಂದಿರ ದಿನದ ಶುಭಾಶಯಗಳು! (ಲೇಖಕರ ಈಮೇಲ್ : [email protected])












Click it and Unblock the Notifications