ಗೋವಿನ ಬಾಳು : ನೀನಾರಿಗಾದೆಯಾ ಎಲೆ ಮಾನವಾ

ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು ।।1।।
ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ ।।2।।
ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ ।।3।।
ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ ।।4।।
ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯಾ ಎಲೆ ಮಾನವಾ ।।5।।












Click it and Unblock the Notifications