Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು
Bengaluru Rent: ಬೆಂಗಳೂರಿನಲ್ಲಿ ಭೂಮಿಯ ಬೆಲೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೇವಲ ಭೂಮಿಯ ಬೆಲೆ ಮಾತ್ರವಲ್ಲದೆ ಪ್ರಾಪರ್ಟಿ ಹಾಗೂ ಬಾಡಿಗೆ ಬೆಲೆಯೂ ಸಹ ಗಗನಮುಖಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮನೆ ಬಾಡಿಗೆಯೂ ಸಹ ದುಬಾರಿ ಆಗುತ್ತಿದೆ. ಮುಂಬೈ ಹಾಗೂ ದೆಹಲಿ ನಗರದಲ್ಲಿನ ಈಗಾಗಲೇ ಬಾಡಿಗೆ ಮನೆಗಳ ಬೆಲೆಯು ದುಬಾರಿ ಆಗಿದೆ. ಅಲ್ಲದೆ ಸಣ್ಣ ಸಣ್ಣ ಜಾಗಗಳಿಗೂ ದೊಡ್ಡ ಮೊತ್ತವನ್ನು ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ಟ್ರೆಂಡ್ ಬೆಂಗಳೂರಿನಲ್ಲೂ ನಿಧಾನವಾಗಿ ಶುರುವಾಗಿದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಬಾಡಿಗೆ ಮನೆಗಳ ಬೆಲೆಯು ದುಬಾರಿ ಆಗುತ್ತಲ್ಲೇ ಇದೆ. ಇನ್ನು ಬೆಂಗಳೂರಿನಲ್ಲಿ ಸಾಂಕ್ರಾಮಿಕ ರೋಗದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇದರ ಹೊರತಾಗಿಯೂ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಇಂದಿಗೂ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ ಆರು ಪ್ರಮುಖ ಪ್ರದೇಶಗಳ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದೆಂದರೆ ನಿಜಕ್ಕೂ ಸವಾಲು. ದುಬಾರಿ ಬಾಡಿಗೆ, ದುಬಾರಿ ಮುಂಗಡ ಹಣ / ಅಡ್ವಾನ್ಸ್ ಸೇರಿದಂತೆ ಹಲವು ಸವಾಲುಗಳು ಬಾಡಿಗೆ ಮನೆ ಹುಡುಕುವಾಗ ಎದುರಾಗುತ್ತಿವೆ. ಬೆಂಗಳೂರು ನಗರದಲ್ಲಿ ಕೈಗೆಟುಕುವ, ಬಜೆಟ್ ಸ್ನೇಹಿ ಬಾಡಿಗೆ ಮನೆಗಳು ಯಾವ ಪ್ರದೇಶದಲ್ಲಿ ಸಿಗುತ್ತವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಹಂತ 2, ಬಿಟಿಎಂ ಲೇಔಟ್ (ಹೊರ ಪ್ರದೇಶಗಳು), ಕೆಂಗೇರಿ, ವೈಟ್‌ಫೀಲ್ಡ್ (ಹೊರವಲಯಗಳು), ಯಲಹಂಕ ಮತ್ತು ರಾಜರಾಜೇಶ್ವರಿ ನಗರ (RR ನಗರ), ಲಗ್ಗೆರೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತಿವೆ. ಅದರಲ್ಲೂ ಬೆಂಗಳೂರಿನ ಕೆಲವು ಪ್ರದೇಶಗಲ್ಲಿ ಕಡಿಮೆ ಬಾಡಿಗೆ ಮನೆಗಳು ಸಿಗುವ ಪ್ರದೇಶಗಳ ಸಮೀಪದಲ್ಲೇ ಮೆಟ್ರೋ ಹಾಗೂ ಬಸ್ ನಿಲ್ದಾಣಗಳ ವ್ಯವಸ್ಥೆಯೂ ಇದೆ. ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಅಥವಾ 5,000 ಸಾವಿರ ರೂಪಾಯಿಯಿಂದ 10,000 ಸಾವಿರ ರೂಪಾಯಿ ಮೊತ್ತದಲ್ಲಿ ಬಾಡಿಗೆ ಮನೆಗಳು ಯಾವ ಭಾಗದಲ್ಲಿ ಸಿಗಲಿವೆ ಎನ್ನುವ ಸಂಪೂರ್ಣ ವಿವರವನ್ನು ನೋಡೋಣ.
1. ಎಲೆಕ್ಟ್ರಾನಿಕ್ ಸಿಟಿ (ಹಂತ 2): ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಐಟಿ - ಬಿಟಿ ಕಂಪನಿಯ ಉದ್ಯೋಗಿಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಭೂಮಿ ಹಾಗೂ ಬಾಡಿಗೆ ಮನೆಗಳ ಬಾಡಿಗೆಯು ದುಬಾರಿ ಆಗಿದೆಯಾದರೂ, ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿ ಬಾಡಿಗೆ ಮನೆಗಳ ಬೆಲೆಯು ಕಡಿಮೆ ಇದೆ. ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿ 1ನೇ ಹಂತಕ್ಕೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಈ ಭಾಗದಲ್ಲಿ ಬಾಡಿಗೆ ಮನೆಗಳ ಬೆಲೆಯು ತಿಂಗಳಿಗೆ 7,000 ರೂ.ದಿಂದ 9,000 ರೂ.ಯಿಂದ ಪ್ರಾರಂಭವಾಗುತ್ತದೆ.
2. ಬಿಟಿಎಂ ಲೇಔಟ್ (ಹೊರ ಪ್ರದೇಶಗಳು): ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಬ್ಯಾಚುಲರ್‌ಗಳಿಗೆ ಇದು ಹೇಳಿ ಮಾಡಿಸಿದ ಪ್ರದೇಶವಾಗಿದೆ. ಬಿಟಿಎಂ ಲೇಔಟ್‌ನ ಒಳಭಾಗಗಳಲ್ಲಿ ಬಾಡಿಗೆ ಮನೆಯು ತುಸು ದುಬಾರಿಯಾಗಿದೆ, ಆದರೆ 1BHK ಬಾಡಿಗೆ ಮನೆಗಳು ಈ ಭಾಗದಲ್ಲಿ 8,000 ರೂ.ರಿಂದ 12,000 ರೂ. ವರೆಗೆ ಲಭ್ಯವಿದೆ.
3. ಕೆಂಗೇರಿ: ಪಶ್ಚಿಮ ಬೆಂಗಳೂರಿನಲ್ಲಿರುವ ಕೆಂಗೇರಿ ಪ್ರದೇಶವು ನೇರಳೆ (ಪರ್ಪಲ್ ಲೈನ್) ಮಾರ್ಗ ಮೆಟ್ರೋ ಮೂಲಕ ನಗರ ಕೇಂದ್ರಕ್ಕೆ ಅತ್ಯುತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಭಾಗದಲ್ಲಿ ಅಗ್ಗದ ವಸತಿ ಪ್ರದೇಶಗಳು ಇವೆ. ಕೆಂಗೇರಿಯಲ್ಲಿ ಬಾಡಿಗೆ ಮನೆ ಬೆಲೆಯು 5,000 ರೂ.ರಿಂದ 10,000 ರೂ.ಗಳ ನಡುವೆ ಇದೆ.
4. ವೈಟ್‌ಫೀಲ್ಡ್ (ಹೊರವಲಯ ಮತ್ತು ಬಾಹ್ಯ ಪ್ರದೇಶಗಳು): ವೈಟ್‌ಫೀಲ್ಡ್ ಬಳಿಯ ಸೀಗೆಹಳ್ಳಿ ಮತ್ತು ವರ್ತೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಡಿಗೆ ಮನೆ ಬೆಲೆಯು ತಿಂಗಳಿಗೆ 12,000 ರೂ.ಗಿಂತ ಕಡಿಮೆ ಇದೆ. ಐಟಿ ಕಾರಿಡಾರ್ ಸಮೀಪದ ಪ್ರದೇಶದ ಹೊರತಾಗಿಯೂ ಈ ಭಾಗದ ಒಳಭಾಗದಲ್ಲಿ 1 ಬಿಎಚ್‌ಕೆ ಬಾಡಿಗೆ ಮನೆಯು ತಿಂಗಳಿಗೆ 10,000 ರೂ.ಗಿಂತಲೂ ಕಡಿಮೆ ಇದೆ.
5. ಯಲಹಂಕ: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆ ಸಿಗುವ ಮತ್ತೊಂದು ಪ್ರದೇಶವೆಂದರೆ ಅದು ಯಲಹಂಕ. ಬೆಂಗಳೂರು ಉತ್ತರ ಭಾಗದ ಈ ಪ್ರದೇಶದಲ್ಲಿ ಕಡಿಮೆ ಜನದಟ್ಟಣೆಯೂ ಸಹ ಇರುವುದರಿಂದ ಈ ಭಾಗದಲ್ಲಿ ಬಾಡಿಗೆ ಮನೆ ಪಡೆಯುವವರ ಸಂಖ್ಯೆಯೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಈ ಪ್ರದೇಶದಲ್ಲೂ 8,000 ರೂ.ದಿಂದ 10,000 ರೂ. ಒಳಗೆ ಬಾಡಿಗೆ ಮನೆಗಳು ಸಿಗುತ್ತಿವೆ.
6. ರಾಜರಾಜೇಶ್ವರಿ ನಗರ (ಆರ್‌ಆರ್ ನಗರ): ಬೆಂಗಳೂರಿನಲ್ಲಿ ಕಡಿಮೆ ಬೆಲೆ ಬಾಡಿಗೆ ಮನೆಗಳು ಸಿಗುವ ಮತ್ತೊಂದು ಪ್ರದೇಶವೆಂದರೆ ಅದು ರಾಜರಾಜೇಶ್ವರಿ ನಗರ. ಈ ಭಾಗದಲ್ಲಿ 6,000ರೂ.ದಿಂದ 12,000 ರೂ. ಒಳಗೆ ಬಾಡಿಗೆ ಮನೆಗಳು ಸಿಗುತ್ತವೆ.
ಬೆಂಗಳೂರಿನ ಈ ಆರು ಪ್ರದೇಶಗಳಲ್ಲಿ ಮಾತ್ರವಲ್ಲ ಬೆಂಗಳೂರಿನ ಹೃದಯಭಾಗ ಅಥವಾ ಬೆಂಗಳೂರಿನ ಕೇಂದ್ರ ಪ್ರದೇಶವನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತಿವೆ.












Click it and Unblock the Notifications