• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ ಎಲ್ ಭೈರಪ್ಪ ಹೊಸ ಕಾದಂಬರಿ ಉತ್ತರ ಕಾಂಡ ವಿಮರ್ಶೆ

By ವಿಜಯರಾಘವನ್
|

ಭಾರತೀಯ ಲೇಖಕರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವಂಥ, ಕನ್ನಡದ ಲೇಖಕ ಎಸ್.ಎಲ್.ಭೈರಪ್ಪ ಅವರ ಹೊಸ ಕಾದಂಬರಿ ಉತ್ತರ ಕಾಂಡದ ವಿಮರ್ಶೆಯನ್ನು ಕೋಲಾರ ಮೂಲದ ಲೇಖಕರಾದ ವಿಜಯ ರಾಘವನ್ ಅವರು ಮಾಡಿದ್ದಾರೆ. ಕಂತುಗಳಲ್ಲಿ ಪ್ರಕಟವಾಗಿರುವ ಈ ವಿಮರ್ಶೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ- ಸಂಪಾದಕ

ತಿಣುಕಿದನು ಫಣಿರಾಯ ರಾಮಾಯಣದ ಕಥೆಗಳ ಭಾರದಲ್ಲಿ ಅಂತ ಅನ್ನಿಸಿ ಗದುಗಿನ ನಾರಣಪ್ಪ 'ಕರ್ನಾಟ ಭಾರತ ಕಥಾಮಂಜರಿ'ಯನ್ನು ಬರೆದರು. ಹಾಗೆ ಅವರು ಹೇಳಿ ಶತಮಾನಗಳು ಗತಿಸಿದರೂ ನಮ್ಮ ಕವಿಗಳು ರಾಮಾಯಣ ಬರೆಯುವುದನ್ನು ನಿಲ್ಲಿಸಲೇ ಇಲ್ಲ. ರಾಮಾಯಣ ಅಂಥ ಅದಮ್ಯ ಆಕರ್ಷಣೆಯನ್ನು ಉಳಿಸಿಕೊಂಡು ಬಂದ ಮಹಾಕಾವ್ಯ. ಅದರಲ್ಲಿನ ಪಾತ್ರಗಳ ಮಹೋನ್ನತಿಕೆಯೇನು, ಅಲ್ಲಿನ ಅತಿಮಾನುಷ ಘಟನೆಗಳೇನು, ದೇವಪ್ರಸಾದಗಳೇನು, ವಿಧಿಲಿಖಿತದ ಆಖ್ಯಾನಗಳೇನು, ಮಾನಸಿಕ ಸಂಘರ್ಷಗಳೇನು? ಎಲ್ಲವೂ ಮಹೋಪಮೆಗಳೆಂಬ ಅಭಿವಾದನಕ್ಕೆ ಅರ್ಹವಾದವು.

ಮಹಾಭಾರತದಲ್ಲಿನ ಸಂಬಂಧಗಳ ಸಂಕೀರ್ಣತೆ ಮತ್ತು ಭೂಮಿಕೆಯ ಹರವು ರಾಮಾಯಣದಲ್ಲಿ ಇಲ್ಲದಿರಬಹುದು. ಅದರ ಮೊದಲ ಕಾಂಡವೂ ಉತ್ತರಕಾಂಡವೂ ವಾಲ್ಮೀಕಿಯದಲ್ಲ, ಪ್ರಕ್ಷಿಪ್ತಗಳಿರಬಹುದು. ಯಾರಾದರೂ ಹಾಡಿಕೊಂಡು ಅಂದೊಂದಾಗಿದ್ದ ಭಾರತದ ಭೂಗೋಳ ಸುತ್ತುತ್ತಿದ್ದ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ಗ್ರಂಥರೂಪದಲ್ಲಿ ಬರೆದ ಮೇಲೆ ಯಾರು ಯಾರಿಗೋ ಅಲ್ಲಲ್ಲಿ ಕೊರತೆಗಳು ಕಂಡುಬಂದು ಅವರು ಅದರಲ್ಲಿ ತಮ್ಮದನ್ನೂ ಸೇರಿಸಿದರು. ನಮ್ಮಲ್ಲೇ ರಾಮಾಯಣವನ್ನೇ ಕುವೆಂಪು ಅವರು ಪುನಾರಚಿಸಿದ್ದಾರೆ. ಮೊಯಿಲಿಯವರೂ ಶ್ರೀ ರಾಮಾಯಣ ಮಹಾನ್ವೇಷಣಂ ಬರೆದರು. ಹೀಗೆ ರಾಮಾಯಣದ ಕತೆಗಳ ಕಾವ್ಯದ ಪರಂಪರೆಯೇ ಭಾರತೀಯ ಸಾಹಿತ್ಯದಲ್ಲಿದೆ.

ಅದಕ್ಕೊಂದು ಹೊಸ ಸೇರ್ಪಡೆ ಎಸ್‍ಎಲ್. ಭೈರಪ್ಪನವರು ಬರೆದಿರುವ ಉತ್ತರಕಾಂಡವೆಂಬ ಕಾದಂಬರಿ. ಭೈರಪ್ಪನವರಿಗೆ ರಾಮಾಯಣ ಬಲು ಭಾರವೆಂದು ತೋರಿದ್ದರಿಂದ ಅವರು ಕತೆಯನ್ನು ಯಥಾಶಕ್ತಿ ಕತ್ತರಿಯಾಡಿಸಿ ನೇರ ಮಾಡಿದ್ದಾರೆ. ಅದರಲ್ಲಿನ ಅತಿಮಾನುಷ ಅಂಶಗಳನ್ನು ಹುಷಾರಾಗಿ ತೆಗೆದು, ಸರಳವಾಗಿ ಅದನ್ನು ನಮ್ಮ ಯಾವುದಾದರೂ ಸಂಸಾರಗಳಲ್ಲಿ ಕೆಲ ಕಾಲದ ಹಿಂದೆ ನಡೆದಿರಬಹುದಾದ ಘಟನೆಯಂತೆ ಚಿತ್ರಿಸಲು ಪ್ರಯತ್ನಪಟ್ಟಿದ್ದಾರೆ. ಒಂದೆರಡು ಕಡೆ ಸ್ವಲ್ಪ ಮೊಯಿಲಿಯವರು ಮಾಡಿಕೊಂಡ ಬದಲಾವಣೆಯ ಛಾಯೆ ಕಂಡರೂ ಇದನ್ನು ರಾಮಾಯಣದ ಸಮಗ್ರ ಪುನರ್ವ್ಯಾಖ್ಯೆ ಎಂದು ಕರೆಯಲು ಬರುವುದಿಲ್ಲ.

ಆ ಅರ್ಥದ ಹಿನ್ನೆಲೆಯಲ್ಲಿ ಪುರಾಣ ಕೃತಿಯ ಮರುಶೋಧನೆಗೆ ಭೈರಪ್ಪನವರು ತೊಡಗಿಕೊಂಡಿಲ್ಲ. ಏಕೆಂದರೆ ಇವತ್ತಿನ ರಾಮಾಯಣ ಚಾಲ್ತಿಗೆ ಬಂದದ್ದರ ಇತಿಹಾಸಗಳನ್ನು ರಾಮಾನುಜನ್, ವೆಂಡಿ ಡೋನಿಗರ್ ಮುಂತಾದವರು ಮತ್ತು ಅನೇಕ ದೇಶ ವಿದೇಶಗಳ ವಿದ್ವಾಂಸರು ರಚಿಸಿದ್ದಾರೆ, ಪುನಾರಚಿಸಿದ್ದಾರೆ. ಅವೆಲ್ಲವೂ ನಮಗೆ ಲಭ್ಯವಿದೆ.

ಭೈರಪ್ಪನವರ ಉತ್ತರಕಾಂಡ ಹೆಸರಿನ ಉತ್ತರ ರಾಮಾಯಣದ ಕೃತಿಯಲ್ಲಿನ ಕತೆಯನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ಮಿಥಿಲೆಯ ಅರಸ ಜನಕ. (ಅಲ್ಲಿನ ರಾಜರೆಲ್ಲರ ಹೆಸರೂ ಜನಕನೇ.) ಅವನಿಗೆ ವಯಸ್ಸಾಗಿದೆ. ಮಕ್ಕಳಾಗಿಲ್ಲ. ಅದಕ್ಕಾಗಿ ಅವನೊಂದು ಯಾಗವನ್ನು ಮಾಡಲು ಬಯಸಿದ್ದಾನೆ. ಕೃಷಿ ಮುಖ್ಯವಾದುದು; ಉಳುವುದು ಬಿತ್ತುವುದಕ್ಕಾಗಿ. ಬಿತ್ತುವುದು ಬೆಳೆಯುವುದಕ್ಕಾಗಿ. ಸಸಿ ತನ್ನ ರೂಪ ಕಳೆದುಕೊಂಡು ಬೆಳೆಯ ಜನ್ಮ ತಳೆಯುವುದು ನೆಲದಲ್ಲಿಯೇ. ಯಾಗಕ್ಕೂ ಮುನ್ನ ಉಳಲು ಅಣಿ ಮಾಡಿದ್ದ ಜಾಗದಲ್ಲಿ ಯಾಗದ ಸರಿಸುಮಾರು ಆದಿಯಲ್ಲಿಯೇ ಒಂದು ಹೆಣ್ಣು ಮಗು - ಸೀತೆ - ಅವನಿಗೆ ದೋಣಿಸಾಲಿನಲ್ಲಿ ದೊರೆಯುತ್ತಾಳೆ. ಅದು ಪರಿತ್ಯಜಿಸಿದ ಮಗುವಿರಬೇಕು. ಅದಕ್ಕೆ ಮೊದಲಿಂದ ಕೊನೆಯವರೆಗೂ ಆ ಪರಿತ್ಯಜಿಸಿದ ಮಗುವಿನ ಬಾಳಿನಂತೆ ಸೀತೆಯದು ಸಹ ರೂಪುಗೊಳ್ಳುತ್ತದೆ. ಇದು ವಿಧಿಯ ಲಿಖಿತ. ಮುಂದುವರಿಯುವುದು....

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada wellknown novelist, Indian writer SL Bhyrappa's new novel Uttarakhanda review by Vijayaraghavan, writer from Kolar district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more