ಚಾಮುಂಡಿ ಬೆಟ್ಟ ಮತ್ತೊಂದು ಜೋಶಿಮಠ ಆಗದಿರಲಿ-ಸಾಹಿತಿ ಡಾ. ಎಸ್.ಎಲ್.ಭೈರಪ್ಪ
ಕೆಲ ವರ್ಷಗಳ ಹಿಂದೆ ಜೋಶಿಮಠಕ್ಕೆ ಭೇಟಿ ನೀಡಿದಾಗ ಅದು ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿತ್ತು. ಬಹುಮಹಡಿ ಕಟ್ಟಡ ಬಂದು ಅಲ್ಲಿಗೆ ಹೋದಾಗ ಉಂಟಾಗುತ್ತಿದ್ದ ಭಾವನೆಯೇ ಈಗ ದೂರವಾಗಿದೆ. ಈ ರೀತಿ ಚಾಮುಂಡಿ ಬೆಟ್ಟವೂ ಆಗಬಾರದು ಎಂದು ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿದ್ದಾರೆ.
ಮೈಸೂರು ಫೆಬ್ರವರಿ 13: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟ, ಜೋಶಿಮಠದಂತೆ ಅಭಿವೃದ್ಧಿ ಕಾರ್ಯಗಳಿಂದ ನಲುಗಬಾರದು ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ತಿಳಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಎಚ್.ವಿ.ರಾಜೀವ ಸ್ನೇಹ ಬಳಗ, ಮೈಸೂರು ಹೊಯ್ಸಳ ಕರ್ನಾಟಕ ಸಂಘ, ನಾನಾ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕಲಾಮಂದಿರದಲ್ಲಿ ಆಯೋಜಿಸಿದ್ದ ವಂದನೆ ಅಭಿನಂದನೆ ಪದ್ಮ ಪುರಸ್ಕೃತರಿಗೆ ಆತ್ಮೀಯ ಗೌರವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಚಾಮುಂಡಿ ಬೆಟ್ಟದ ರಕ್ಷಣೆ ಬಗ್ಗೆ ಮಾತನಾಡಿದ್ದಾರೆ.
ನಾನು ಹಿಮಾಲಯಕ್ಕೆ ಹಲವು ಬಾರಿ ಹೋಗಿದ್ದೇನೆ. ಹಿಂದೆ ಹೋಗಿದ್ದಾಗ ಅಲ್ಲಿ ಜೋಶಿ ಮಠವಿತ್ತು. ಕೆಲ ವರ್ಷಗಳ ಹಿಂದೆ ಜೋಶಿಮಠಕ್ಕೆ ಭೇಟಿ ನೀಡಿದಾಗ ಅದು ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿತ್ತು. ಬಹುಮಹಡಿ ಕಟ್ಟಡ ಬಂದು ಅಲ್ಲಿಗೆ ಹೋದಾಗ ಉಂಟಾಗುತ್ತಿದ್ದ ಭಾವನೆಯೇ ಈಗ ದೂರವಾಗಿದೆ. ಈ ರೀತಿ ಚಾಮುಂಡಿ ಬೆಟ್ಟವೂ ಆಗಬಾರದು ಎಂದು ಸಲಹೆ ನೀಡಿದರು.

ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಚಾಮುಂಡಿ ಬೆಟ್ಟ ಇತ್ತೀಚೆಗೆ ಹಲವು ಬಾರಿ ಕುಸಿದಿದೆ. ಹೀಗಿದ್ದರೂ ಅಭಿವೃದ್ಧಿ ಎಂಬ ವಿಷಯ ಮುಂದಿಟ್ಟುಕೊಂಡು ರೋಪ್ ವೇ ಮಾಡಲು ಹೊರಟ್ಟಿದ್ದಾರೆ. ಪ್ರಕೃತಿ ವಿರುದ್ಧವಾದದ್ದು ಎಂದು ತಿಳಿದಿದ್ದರೂ ಹಾಗೂ ಈಗಾಗಲೇ ಆಗಿರುವ ಬದಲಾ ವಣೆಗಳಿಂದ ಚಾಮುಂಡಿ ಬೆಟ್ಟ ಕುಸಿದಿದ್ದರೂ ರೋಪ್ ವೇ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂದು ಹೇಳುವುದರ ಹಿಂದೆ ಭ್ರಷ್ಟಾಚಾರ ಅಡಗಿದೆ ಎಂದು ಆರೋಪಿಸಿದರು.
ಯಾವುದೇ ವ್ಯಕ್ತಿಗೆ ಪ್ರಶಸ್ತಿ ದೊರೆಯುವುದು ಮುಖ್ಯವಲ್ಲ. ನಾನು ಸತ್ತು 500 ವರ್ಷ ಕಳೆದರೂ ನನ್ನ ಸಾಹಿತ್ಯದ ಬಗ್ಗೆ ಜನರು ಮಾತನಾಡಬೇಕು. ಕುಮಾರವ್ಯಾಸನ ಬರಹವನ್ನು ಇಂದಿಗೂ ಸ್ಮರಿಸುವಂತೆ ನನ್ನ ಬರಹ ಮನ್ನಣೆ ಪಡೆಯಬೇಕೆಂಬುದೇ ನನ್ನ ಆಸೆ. ಪ್ರಶಸ್ತಿ ದೊರೆತಿರುವುದಕ್ಕೆ ನನ್ನ ಸಾಹಿತ್ಯದ ಓದುಗರಿಗೆ ಸಂತೋಷವಾಗುತ್ತದೆ ಎನ್ನುವ ಕಾರಣಕ್ಕೆ ನನಗೂ ಸಂತೋಷ. ಅದೇ ಕಾರಣಕ್ಕೆ ಸಂತೋಷದಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದರು.
ವಂದನೆ ಅಭಿನಂದನೆ ಪದ್ಮ ಪುರಸ್ಕೃತರಿಗೆ ಆತ್ಮೀಯ ಗೌರವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಡಾ.ಎಸ್.ಎಲ್. ಭೈರಪ್ಪ, ಡಾ.ಖಾದರ್ ವಲ್ಲಿ, ಡಾ.ಎಸ್. ಸುಬ್ಬರಾಮನ್, ಜಯಲಕ್ಷಿ ರಾಮ್ ಅವರನ್ನು ಅಭಿನಂದಿಸಲಾಯಿತು. ಇತಿಹಾಸ ಸಂಶೋಧಕ ಡಾ.ಎಚ್.ವಿ. ನಾಗರಾಜರಾವ್, ಪ್ರಾಚೀನ ಇತಿಹಾಸ ತಜ್ಞ ಡಾ. ರೋಹಿತ್ ಈಶ್ವರ್, ನೈಸರ್ಗಿಕ ಕೃಷಿಕ ಹೊನ್ನೂರು ಪ್ರಕಾಶ್ ಅಭಿನಂದಿತರನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ವಿಶ್ರಾಂತ ಮುಖ್ಯಸ್ಥ ಡಾ.ಪ್ರಧಾನ ಗುರುದತ್ತ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications