• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧ್ಯಾನವಿದ್ದಲ್ಲಿ ಎಲ್ಲವೂ ಇದೆ, ಧ್ಯಾನವಿಲ್ಲದಲ್ಲಿ ಏನೂ ಇಲ್ಲ

By ಓಶೋ ಸನ್ನಿಧಿ, ಮೈಸೂರು
|

‘ಧ್ಯಾನಸೂತ್ರ' ಕೃತಿಯು ಸತಾರಾ ಜಿಲ್ಲೆಯ (ಮಹಾರಾಷ್ಟ್ರ) ಪಶ್ಚಿಮ ಘಟ್ಟಗಳ ಪರ್ವತಶ್ರೇಣಿಯಲ್ಲಿರುವ ಮಹಾಬಲೇಶ್ವರ ಎಂಬ ಗಿರಿಧಾಮದಲ್ಲಿ ಓಶೋ 1965ರ ಫೆಬ್ರವರಿ ತಿಂಗಳಿನಲ್ಲಿ ಮೂರು ದಿನಗಳ ಕಾಲ ನೀಡಿದ ಉಪನ್ಯಾಸಗಳ ಅಪರೂಪದ ಸಂಕಲನವಾಗಿದೆ. ಇದನ್ನು ಓಶೋರ ಸಮಸ್ತ ಚಿಂತನೆಗಳ ಒಂದು ಪ್ರಾತಿನಿಧಿಕ ಕೃತಿಯೆಂದು ಭಾವಿಸಬಹುದು.

ಏಕೆಂದರೆ ಧ್ಯಾನವೇ ಓಶೋರ ಉಪದೇಶಗಳ ಸಮಸ್ತ ಸಾರವಾಗಿದೆ. ಅವರ ಉಳಿದೆಲ್ಲ ಮಾತುಗಳೂ ಸಾಧಕನನ್ನು ಧ್ಯಾನದಲ್ಲಿ ತೊಡಗಿಸಲು ನೆರವಾಗಬಲ್ಲ ಪೂರಕ ವಿಚಾರಗಳಾಗಿವೆ. ಈ ಕೃತಿಯಲ್ಲಿ ಸೂಚಿಸಿರುವ ಧ್ಯಾನ ಸಾಧನೆಯ ವಿಧಿವಿಧಾನಗಳನ್ನು ಜಗತ್ತಿನಾದ್ಯಂತ ವ್ಯಾಪಿಸಿರುವ ಸಾವಿರಾರು ಓಶೋ ಧ್ಯಾನ ಕೇಂದ್ರಗಳಲ್ಲಿ ಲಕ್ಷಾಂತರ ಮಂದಿ ಧ್ಯಾನ ಸಾಧಕರುಗಳು ಇಂದಿಗೂ ಅನುಸರಿಸಿಕೊಂಡು ಬರುತ್ತಿದ್ದಾರೆ.

ಓಶೋ ಅವರ 'ಧ್ಯಾನ ಸೂತ್ರ' ಕನ್ನಡ ಪುಸ್ತಕವು ಧ್ಯಾನದ ಕುರಿತಾಗಿ ಬೈಬಲ್-ವೇದ-ಖುರಾನ್-ಧಮ್ಮಪದ -ಗೀತ-ಎನ್ಸೈಕ್ಲೋಪೀಡಿಯ ಎಲ್ಲವೂ ಆಗಿದೆ. ದೇಹ-ಮನಸ್ಸು-ಭಾವ ಇರುವ ಪ್ರತಿಯೊಬ್ಬರೂ, ಅವರು ಯಾವುದೇ ಧರ್ಮಕ್ಕೆ ಸೇರಿದವರಾದರೂ, ನಾಸ್ತಿಕರೂ ಓದಲೇಬೇಕಾದ ಅತ್ಯುನ್ನತ ಕೃತಿ ಇದು. ವಿಜ್ಞಾನಿ ಮತ್ತು ಅಂತರ್-ವಿಜ್ಞಾನಿ ಇಬ್ಬರೂ ಮೆಚ್ಚುವ, ಅಲ್ಲಗೆಳೆಯಲಾಗದ ಮಹೊನ್ನತ ಗ್ರಂಥವಿದು.

ಮಾನವನು ದೇಹ-ಮನಸ್ಸು-ಭಾವ ಇವುಗಳ ಒಟ್ಟು ಮೊತ್ತ. ಒಂದು ಸರಿ ಇಲ್ಲವಾದರೆ ಮತ್ತೊಂದೂ ಕೂಡ ಹದಗೆಡುವುದು. ಧಾರ್ಮಿಕ ಬದುಕು ಅಥವಾ ಜೀವನವನ್ನು ಸಂಭ್ರಮಿಸುವುದು ಎಂದರೆ ಆರೋಗ್ಯಪೂರ್ಣ ದೇಹ, ಸ್ವಸ್ತ ಮನಸ್ಸು ಮತ್ತು ಪ್ರೇಮಮಯ ಹೃದಯ ಇವುಗಳನ್ನು ಗಳಿಸುವುದು. ಇದನ್ನು ಸಾಧಿಸಿ ಬದುಕುವ ಕುರಿತು ರಹಸ್ಯದರ್ಶಿ ಮತ್ತು ಮಾರ್ಗದರ್ಶಿ ಸೂತ್ರಗಳಿರುವ ಈ ಪುಸ್ತಕವು ಧ್ಯಾನದ ಕುರಿತು ಎಲ್ಲವನ್ನೂ ವಿವರಿಸಿದೆ.

ದೇಹದ ಆರೋಗ್ಯ ಕಂಡುಕೊಳ್ಳುವ ಬಗೆ, ಮನಸ್ಸಿನ ಕಲ್ಮಶಗಳನ್ನು ನಿವಾರಿಸಿಕೊಳ್ಳುವ ಸೂತ್ರ, ಭಾವವನ್ನು ಪ್ರೇಮಮಯವಾಗಿಸಿಕೊಳ್ಳುವ ರಹಸ್ಯ ಮತ್ತು ತನ್ಮೂಲಕ 'ಸ್ತಿತಪ್ರಜ್ಞ' ಸ್ತಿತಿಯನ್ನು ಕಂಡುಕೊಳ್ಳುವ ವಿಧಾನ, ಇವುಗಳೇ ಅಲ್ಲದೇ ಧ್ಯಾನದ ಬಗೆಗಿನ ಎಲ್ಲ ಪ್ರಶ್ನೆಗಳಿಗೂ 'ಧ್ಯಾನ ಸೂತ್ರ' ದಲ್ಲಿ ಉತ್ತರವಿದೆ; ಅದಕ್ಕೆ ಸಂಬಂಧಿಸಿದಂತೆ ಮಾಡಬೇಕಾದ ಟೆಕ್ನಿಕ್ ಗಳನ್ನೂ ವಿವರಿಸಲಾಗಿದೆ.

ಬಾಹ್ಯಲೋಕದಲ್ಲಿನ ಅನುಭವಗಳು ಹಾಗು ಮನೋಲೋಕದ ಚಿತ್ತವೃತ್ತಿಗಳು ಮನುಷ್ಯನಲ್ಲಿ ಕೆಲವು ಸಂಸ್ಕಾರಗಳನ್ನು ಅಥವಾ ಗ್ರಂಥಿಗಳನ್ನು ಉಳಿಸಿಬಿಡುತ್ತವೆ. ಈ ಗ್ರಂಥಿಗಳು ಮನುಷ್ಯನ ವರ್ತನೆ, ಆಲೋಚನೆ ಮತ್ತು ಪ್ರತಿ ಕ್ಷಣದ ಅನುಭವಗಳನ್ನು ಸತತವಾಗಿ ನಿಯಂತ್ರಿಸುತ್ತಿರುತ್ತವೆ ಹಾಗು ಎಲ್ಲ ಅವಸ್ಥೆಗಳಲ್ಲೂ (ನಿದ್ರೆ, ಎಚ್ಚರ, ಕನಸು) ಮನಸ್ಸನ್ನು ಭೂತದಂತೆ ಆವರಿಸಿ ಕಾಡುತ್ತಿರುತ್ತವೆ. ಕ್ರಮೇಣ ಮನುಷ್ಯನ ಸಂವೇದನೆಯು ಜಡಗೊಂಡು ಬದುಕಿನ ಪ್ರತಿಕ್ಷಣದ ಅನುಭವಗಳಿಗೆ ಸ್ಪಂದಿಸಲಾರದೆ ತನ್ನ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತದೆ. ಮನುಷ್ಯನು ಪ್ರಜ್ಞಾಪೂರ್ಣನಾದಾಗ, ಈ ಪೂರ್ವಸಂಸ್ಕಾರಗಳಿಂದ ವಿಮೋಚನೆ ಹೊಂದಿದಾಗ ಮಾತ್ರ ಎಲ್ಲ ಮಾನವೀಯ ಮೌಲ್ಯಗಳಿಗೂ ಅರ್ಥ ಸಿಗುತ್ತದೆ ಮತ್ತು ಮನುಷ್ಯನ ಎಲ್ಲ ವ್ಯಕ್ತಿಗತ ಹಾಗು ಸಾಮಾಜಿಕ ಸಮಸ್ಯೆಗಳಿಗೂ ಪರಿಹಾರ ಕಾಣಿಸುತ್ತದೆ.

ಹಾಗಲ್ಲದೆ ಪ್ರಜ್ಞಾವಂತಿಕೆಯ ಗೈರು ಹಾಜರಿಯಲ್ಲಿ ಪಾಲಿಸಲಾಗುವ ಎಲ್ಲ ಮೌಲ್ಯಗಳೂ ಪಿಡುಗಾಗಿ, ಒಂದು ಹೇರಿಕೆಯಾಗಿ ಪರಿಣಮಿಸುತ್ತವೆ ಎಂದು ಓಶೋ ಅಭಿಪ್ರಾಯ ಪಡುತ್ತಾರೆ. ಇಂಥದೊಂದು ಪ್ರಜ್ಞೆಯನ್ನು ಸಿದ್ಧಿಸಿಕೊಂಡವನನ್ನು ಪರಂಪರೆಗಳು ‘ಅನುಭಾವಿ', ‘ಪೂರ್ಣಪ್ರಜ್ಞ', ‘ಸ್ಥಿತಪ್ರಜ್ಞ' ಇತ್ಯಾದಿಯಾಗಿ ಕರೆಯುತ್ತವೆ, ಪತಂಜಲಿಯ ಯೋಗಸೂತ್ರಗಳಿಂದ ಹಿಡಿದು ಸ್ವಾಮಿ ವಿವೇಕಾನಂದರ ‘ರಾಜಯೋಗ'ದವರೆಗೆ ಲೆಕ್ಕವಿಲ್ಲದಷ್ಟು ಶಾಸ್ತ್ರ ಸಂಹಿತೆಗಳು ಈ ಪ್ರಜ್ಞೆಯನ್ನು ಸಂಪಾದಿಸಿಕೊಳ್ಳುವ ವಿಧಾನಗಳನ್ನು ವಿವರಿಸುವವಾದರೂ ‘ಧ್ಯಾನಸೂತ್ರ'ಕ್ಕೊಂದು ವಿಶಿಷ್ಟತೆ ಇದೆ. ಇದರಲ್ಲಿ ಓಶೋ ಯಾವುದೇ ಪರಂಪರೆಯ ಹಂಗಿಗೊಳಗಾಗದೆ ಅಥವಾ ಶಾಸ್ತ್ರಾಧಾರದ ಮೊರೆಹೋಗದೆ ಸರಳವಾದ ಮತ್ತು ಆಪ್ತವಾದ ಮಾತುಗಳಲ್ಲಿ ಸಾಧಕರುಗಳಿಗೆ ಧ್ಯಾನದ ಮಹತ್ವವನ್ನು ಹಾಗು ವಿಧಿವಿಧಾನಗಳನ್ನು ವಿವರಿಸುತ್ತಾರೆ.

ತಮ್ಮ ಪ್ರವಚನದಲ್ಲಿ ಧ್ಯಾನಸೂತ್ರವನ್ನು ನಾನು ಕಂಡುಹಿಡಿದದ್ದಲ್ಲ, ಅದು ಸನಾತನವಾದುದು. ಮನುಷ್ಯನೊಳಗೆ ಬದುಕಿನ ನಿಗೂಢಗಳನ್ನು ತಿಳಿಯುವ ಬಯಕೆ ಎಂದು ಜನಿಸಿತೋ ಅಂದೇ ಧ್ಯಾನಸೂತ್ರವೂ ಸಕ್ರಿಯಗೊಂಡಿತು. ಯಾವುದೇ ಮತಧರ್ಮಗಳು ಇರದಂದು, ಶಾಸ್ತ್ರಾಚಾರಗಳಿರದಂದು ಅದು ಇದ್ದಿತು ಮತ್ತು ಎಲ್ಲ ಧರ್ಮಗಳು, ಶಾಸ್ತ್ರಾಚಾರಗಳು, ಗುಡಿ ಚರ್ಚು ಮಸೀದಿಗಳು ಇಲ್ಲವಾದ ಮೇಲೂ ಅದು ಇದ್ದೇ ಇರುವುದು. ನಾನು ನನ್ನ ಅಂತರಂಗವನ್ನು ಯಾವ ಹಾದಿಯಲ್ಲಿ ಪ್ರವೇಶಿಸಿ ಹೇಗೆ ಕಂಡುಕೊಂಡೆನೋ ಅದೇ ಹಾದಿಯನ್ನು ಕುರಿತು ನಾನು ನಿಮ್ಮೊಂದಿಗೆ ನುಡಿಯುತ್ತಿದ್ದೇನೆ'' (ಧ್ಯಾನಸೂತ್ರ 2) - ಎಂದಿದ್ದಾರೆ. ಓಶೋ ಒಂದು ಪುಟ್ಟ ಸೂಫೀ ಕತೆಯೊಂದಿಗೆ ಧ್ಯಾನಸಾಧನೆಯ ಕುರಿತ ತಮ್ಮ ಕಾಳಜಿಯನ್ನು ನಿವೇದಿಸಿಕೊಳ್ಳುವರು:

ಒಂದು ಮುಂಜಾನೆ ಮರುಭೂಮಿಯ ಚಳಿಗೆ ಸೆಟೆದುಕೊಂಡು ಉದ್ದವಾಗಿ ಮಲಗಿದ್ದ ಒಂದು ಹಾವನ್ನು ಕುರುಡನೊಬ್ಬನು ಊರುಗೋಲೆಂದು ಭಾವಿಸಿ ಕೈಗೆತ್ತಿಕೊಳ್ಳುವನು. ಅವನ ಸಂಗಡಿಗರು ಗಾಬರಿಯಿಂದ "ಅದು ಊರುಗೋಲಲ್ಲ, ಅದೊಂದು ವಿಷಸರ್ಪ ಕೂಡಲೆ ಎಸೆ" ಎಂದು ಕೂಗಿಕೊಂಡರೂ ಅವರ ಮಾತಿಗೆ ಕಿವಿಗೊಡದೆ ಅದನ್ನು ಹಿಡಿದೇ ಅವನು ತನ್ನ ಹಾದಿಯಲ್ಲಿ ಮುಂದುವರಿಯುವನು. ಕೊನೆಗೆ ಸೂರ್ಯೋದಯವಾದ ಮೇಲೆ ಹಾವು ಮೈತಿಳಿದು ಎಚ್ಚೆತ್ತು ಅವನ ಕೈಯನ್ನು ಕಚ್ಚುತ್ತದೆ.

ಧ್ಯಾನವನ್ನು ಕಲಿಸುವ ಓಶೋ ತಮ್ಮ ಜೀವಿತದ ಸಂಕಲ್ಪವನ್ನು ಕುರಿತು ವಿವರಿಸುತ್ತ "ಲೌಕಿಕದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಅಹಂಕಾರ, ಮಮಕಾರ, ವ್ಯಾಮೋಹಗಳೆಂಬ ಅಂತಹ ಘಟಸರ್ಪಗಳನ್ನು ಹಿಡಿದು ನಡೆದಾಡುತ್ತಿರುವುದು ನನ್ನ ಕಣ್ಣಿಗೆ ಕಾಣಿಸುತ್ತಿದೆ, ಆ ಕುರುಡನಿಗೆ ಒದಗಿದ ಗತಿಯನ್ನು ಕಂಡು ಮರುಗಿದ ಅವನ ಸಂಗಡಿಗನಂತೆ ನಾನೂ ಲೋಕದ ಜನರ ಅವಸ್ಥೆಯನ್ನು ಕಂಡು ಮರುಗುತ್ತಿದ್ದೇನೆ, ಆ ಮರುಕವೇ ನನ್ನೀ ಪ್ರಯತ್ನದ ಮೂಲ ಪ್ರೇರಣೆಯಾಗಿದೆ. ನಾನು ಒಡನೆಯೇ ಹಾವನ್ನು ಎಸೆಯಿರಿ ಎಂದು ನೇರವಾಗಿ ಹೇಳದೇ ಅದಕ್ಕಿಂತ ಉತ್ತಮವಾದ ಊರುಗೋಲನ್ನು ನೀಡಲು ಪ್ರಯತ್ನಿಸುತ್ತಿದ್ದೇನೆ" ಎನ್ನುವರು.

ಇದರಲ್ಲಿ ಧ್ಯಾನಸಾಧನೆಯ ವಿಧಿವಿಧಾನಗಳ ವಿವರಣೆಗಳ ಜೊತೆಜೊತೆಗೆ ಧ್ಯಾನಕ್ಕೆ ಸಂಬಂಧಿಸಿದಂತೆ ನಾನಾ ತರಹದ ಪ್ರಶ್ನೆಗಳಿಗೂ ಉತ್ತರವಿದೆ. ಹಲವು ಒಳನೋಟಗಳನ್ನು ಒಳಗೊಂಡಿರುವ ‘ಧ್ಯಾನಸೂತ್ರ' ಎಂಬ ಈ ಕಿರುಕೃತಿಯು ಬರೀ ಮಾಹಿತಿಗಷ್ಟೇ ಸೀಮಿತವಾಗದೆ ಓದುಗನ ಜೀವನದೃಷ್ಟಿಯಲ್ಲಿ ಹಾಗು ಆಲೋಚನಾ ಕ್ರಮದಲ್ಲಿ ನಿಸ್ಸಂಶಯವಾಗಿ ಮಹತ್ವದ ಪರಿವರ್ತನೆಯನ್ನು ತರಬಲ್ಲ ಕೃತಿ ಇದಾಗಿದೆ.

ಪುಸ್ತಕ ದೊರೆಯುವ ಸ್ಥಳ : ಓಶೋ ಸನ್ನಿಧಿ, ಓಶೋ-ಅಲ್ಲಮ ಇನ್ಸೈಟ್ ಫೌಂಡೇಶನ್. ಉತ್ತನಹಳ್ಳಿ ಗ್ರಾಮ, ಮೈಸೂರು. ದೂರವಾಣಿ : 8722006633, 8722227766.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dhyan Sutra : Acharya Rajanish Book review. The acclaimed book by Osho, the philosopher, spiritual teacher is available at Osho Sannidhi, Osho-Allama insight Foundation, Uttanahalli village, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more