• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನುಡಿಯರಿಮೆಗೆ ಸೊಲ್ಲೆತ್ತಿದ ಬನವಾಸಿ ಸೆಮಿನಾರ್

By Shami
|

ಫೆಬ್ರವರಿ 7, 2010ರ ಭಾನುವಾರ ಬನವಾಸಿ ಬಳಗ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ "ನುಡಿಯರಿಮೆ ಮತ್ತು ಕಲಿಕೆ" ಎಂಬ ಸಮ್ಮೇಳನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಭಾಷಾ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿರುವ ನಾಡೋಜ ಡಾ. ಡಿ.ಎನ್. ಶಂಕರ್ ಭಟ್, ಡಾ. ಕೆ.ವಿ. ನಾರಾಯಣ ಮತ್ತು ಅಮೇರಿಕದ ನ್ಯೂಯಾರ್ಕದಲ್ಲಿರುವ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಸ್.ಎನ್. ಶ್ರೀಧರ್ ಹಾಗೂ ಹಿರಿಯ ಶಿಕ್ಷಣ ತಜ್ಞ ಡಾ.ಎನ್.ಎಸ್.ರಘುನಾಥ್ ಅವರು ಪಾಲ್ಗೊಂಡು ಉಪನ್ಯಾಸ ನೀಡಿದರು.

ಮೊದಲಿಗೆ "ನುಡಿಯ ಕಲಿಕೆಗೆ ಸೊಲ್ಲರಿಮೆಯ ನೆರವು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಾಡೋಜ ಡಾ. ಡಿ.ಎನ್. ಶಂಕರ್ ಭಟ್ ಅವರು, ಕನ್ನಡದಲ್ಲಿ ಬಳಕೆಯಾಗುತ್ತಿರುವ ಪದಗಳು, ಅವುಗಳ ಒಳರಚನೆ, ಅವುಗಳನ್ನು ಜೋಡಿಸಿ ಬಗೆ ಬಗೆಯ ವಾಕ್ಯಗಳನ್ನು ಮಾಡುವ ಪರಿ, ಆ ವಾಕ್ಯಗಳನ್ನು ಬಳಸಿ ಬರಹವನ್ನು ಬರೆಯುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳುವುದೇ ಸೊಲ್ಲರಿಮೆಯ ಮೂಲ ಗುರಿಯಾಗಿದೆ. ಹಾಗಾಗಿ, ನಿಜಕ್ಕೂ ಕನ್ನಡದ ಸೊಲ್ಲರಿಮೆಯ ಸ್ವರೂಪ ಎಂತಹದು ಎಂಬುದರ ಸರಿಯಾದ ಅರಿವು, ಹೇಗೆ ಕನ್ನಡವನ್ನು ಓದಲು ಬರೆಯಲು ಕಲಿಯುವವರಿಗೆ ಮತ್ತು ಇಂಗ್ಲಿಷ್‍ನಂತಹ ಬೇರೆ ನುಡಿಯೊಂದನ್ನು ಕಲಿಯುವವರಿಗೆ ನೆರವನ್ನು ನೀಡಬಲ್ಲದು ಎಂಬುದರ ಬಗ್ಗೆ ವಿವರಿಸಿ ಈ ದಿಕ್ಕಿನಲ್ಲಿ ಇನ್ನೂ ಹೆಚ್ಚಿನ ಕೆಲಸಗಳಾಗಬೇಕು ಎಂದು ನುಡಿದರು.

"ಕನ್ನಡ ಭಾಷಾ ವಿಜ್ಞಾನ ಮತ್ತು ಕನ್ನಡ ಸಮಾಜ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಕೆ.ವಿ. ನಾರಾಯಣ ಅವರು ಕನ್ನಡ ನುಡಿಯರಿಮೆಗೂ, ಕರ್ನಾಟಕದ ಸಮಾಜಕ್ಕೂ ಇರುವ ನಂಟನ್ನು ಕುರಿತು ತಿಳಿಸುವ ಬರವಣಿಗೆಗಳು ಬರಬೇಕಾದ ಅಗತ್ಯದ ಬಗ್ಗೆ, ಕರ್ನಾಟಕದಲ್ಲಿರುವ ಭಾಷೆಗಳ ಮತ್ತು ಭಾಷಿಕರ ನಡುವಣ ಸಂಬಂಧದ ಕುರಿತಂತೆ ನೀತಿಯೊಂದನ್ನು ರೂಪಿಸಬೇಕಾದ ಅಗತ್ಯದ ಬಗ್ಗೆ ಮತ್ತು ಕನ್ನಡ ನುಡಿಯ ಬೆಳವಣಿಗೆಯ ಬಗ್ಗೆ ರೂಪಿಸುವ ಯೋಜನೆಗಳನ್ನು ಹೇಗೆ ಮತ್ತು ಯಾವ ತಳಹದಿಯ ಮೇಲೆ ಕಟ್ಟಬೇಕು ಎಂಬುದರ ಬಗ್ಗೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೇ, ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತಗಳ ನಡುವೆ ಇರುವ ಮತ್ತು ಇರಬೇಕಾದ ನಂಟನ್ನು ಕುರಿತು ಚರ್ಚಿಸಬೇಕಾದ ಅಗತ್ಯವನ್ನು ವಿವರಿಸಿದರು.

"ಭಾಷಾವಿಜ್ಞಾನ ಮತ್ತು ಶಿಕ್ಷಕರು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎನ್.ಎಸ್. ರಘುನಾಥ್ ಅವರು ಕರ್ನಾಟಕದಲ್ಲಿ ಇಂದಿಗೂ ಬಹುಪಾಲು ಶಿಕ್ಷಕರಲ್ಲಿ ಭಾಷಾ ವಿಜ್ಞಾನ ಎನ್ನುವ ವಿಷಯವೊಂದು ಇರುವುದರ ಮತ್ತು ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಇರುವುದರ ಬಗ್ಗೆ ಅರಿವು ತುಂಬಾ ಕಡಿಮೆಯಿದ್ದು, ಭಾಷಾ ವಿಜ್ಞಾನದ ಬಗ್ಗೆ ಇರುವ ತಿರಸ್ಕಾರ ಭಾವನೆಯು, ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವಲ್ಲಿ ಹೇಗೆ ತೊಡಕುಂಟು ಮಾಡುತ್ತಿದೆ ಎಂಬುದನ್ನು ವಿವರಿಸಿದರು. ವಾಕ್ಯ ರಚನೆ, ಫೊನೆಟಿಕ್ಸ್ ಮುಂತಾದ ಭಾಷಾ ವಿಜ್ಞಾನದ ಮುಖ್ಯ ಭಾಗಗಳ ಅರಿವು ಭಾಷಾ ಶಿಕ್ಷಕರಿಗೆ ಇದ್ದಲ್ಲಿ, ಮಕ್ಕಳ ಭಾಷಾ ಕಲಿಕೆಯ ಮಟ್ಟದಲ್ಲಿ ಆಗಬಹುದಾದ ಲಾಭದಾಯಕ ಪರಿಣಾಮಗಳ ಬಗ್ಗೆ ವಿವರಿಸಿದರು.

ಕೊನೆಯಲ್ಲಿ "ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನ ಏಕೆ ಬೇಕು? ಮತ್ತು ಅದನ್ನು ಬೆಳೆಸುವ ಬಗೆ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎಸ್.ಎನ್. ಶ್ರೀಧರ್. ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಭಾಷಾವಿಜ್ಞಾನ ಇನ್ನೂ ಎಳವೆಯಲ್ಲಿರುವುದನ್ನು, ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನದ ಅವಶ್ಯಕತೆಯಿದೆಯೆನ್ನುವುದೇ ಇಲ್ಲಿಯವರೆಗೆ ಹೆಚ್ಚಿನ ಜನರ ಗಮನಕ್ಕೆ ಬಂದಿಲ್ಲದಂತಿರುವುದು ಇದಕ್ಕೆ ಕಾರಣವೆಂದು ವಿವರಿಸಿದರು. ಭಾಷಾವಿಜ್ಞಾನದಿಂದಲೇ ಕನ್ನಡದ ಸರಿಯಾದ ಸ್ವರೂಪದ ಅರಿವು ನಮಗಾಗಬಲ್ಲುದು ಮತ್ತು ಕನ್ನಡದಿಂದ ಅತಿ ಹೆಚ್ಚಿನ ಲಾಭವನ್ನು ನಾವು ಪಡೆಯಬಲ್ಲೆವು. ಆದ್ದರಿಂದ ಭಾಷಾವಿಜ್ಞಾನವನ್ನು ಒಂದು ಅತಿಮುಖ್ಯವಾದ ವಿಷಯವಾಗಿ ವಿಶ್ವವಿದ್ಯಾಲಯಗಳು ಪರಿಗಣಿಸಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಬೋಧನೆಗಳು ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಪ್ರತಿ ಉಪನ್ಯಾಸದ ನಂತರ ಆಯಾ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆಗಳಾದವು. ಭಾರತದ ಹಲವೆಡೆಯಿಂದ ಬಂದಿದ್ದ ಶಿಕ್ಷಣ ಮತ್ತು ಭಾಷಾ ವಿಜ್ಞಾನದ ವಿಷಯ ಪರಿಣಿತರು ಈ ಚರ್ಚೆಗಳಿಗೆ ಹೊಸ ಮೆರುಗು ತಂದರು.

ಇದೇ ಸಂದರ್ಭದಲ್ಲಿ "ಎಲ್ಲರ ಕನ್ನಡ" ಅನ್ನುವ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಾಯಿತು. ಇದು ಕನ್ನಡಿಗರೆಲ್ಲರೂ ಬಳಸುವ ಕನ್ನಡದ ಭಾಷಾವಿಜ್ಞಾನ ಮತ್ತು ಕನ್ನಡ ಮಾಧ್ಯಮದ ಶಿಕ್ಷಣವ್ಯವಸ್ಥೆಯನ್ನು ಕುರಿತ ತಾಣವಾಗಿದೆ. ಕನ್ನಡ ಭಾಷಾವಿಜ್ಞಾನದ ಬಗ್ಗೆ ಕನ್ನಡಿಗರಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದರಲ್ಲಿ ನಾಡೋಜ ಡಾ. ಡಿ. ಎನ್. ಶಂಕರಭಟ್ಟರ ಕನ್ನಡದ ಹೊತ್ತಗೆಗಳನ್ನೆಲ್ಲ ಉಚಿತವಾಗಿ ಪಿಡಿಎಫ್ ರೂಪದಲ್ಲಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ನುಡಿಗೆ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷಾವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಕೂಡಿ ಕೆಲಸ ಮಾಡಲು ಮುಂದಾಗಬೇಕಾದ ಅವಶ್ಯಕತೆಯನ್ನು ಇಡೀ ಸಮ್ಮೇಳನ ಅರ್ಥಪೂರ್ಣವಾಗಿ ಒಕ್ಕೊರಲಿನ ಅಭಿಪ್ರಾಯದ ಮೂಲ ಹೊರಹೊಮ್ಮಿಸಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more