ಪತ್ರಕರ್ತರ ಆಸ್ತಿಪಾಸ್ತಿ ಬಯಲಾಗಲಿ

Should journalists declare assets voluntarily?
ಪ್ರಜಾತಂತ್ರದ ನಾಲ್ಕನೇ ಸ್ಥಂಭ ಮಾಧ್ಯಮರಂಗ. ಇತರ ಮೂರು ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಿಂದ ಪಾರದರ್ಶಕತೆಯನ್ನು ಬಯಸುವ ಪತ್ರಕರ್ತರು ತಮ್ಮ ಆಸ್ತಿ ವಿವರಗಳನ್ನು ಸ್ವಪ್ರೇರಣೆಯಿಂದ ಬಹಿರಂಗಗೊಳಿಸಲಿ ಎನ್ನುವುದೇ ಈ ಕೆಳಗಿನ ಬರಹದ ಅನ್ನಾಂಗ-ದಟ್ಸ್ ಕನ್ನಡ.

ನಮ್ಮ ನಾಡಿನ ಹಿರಿಯ ಹುದ್ದೆಗಳಲ್ಲಿ ಇರುವ ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಯಿಂದ ಸ್ವಯಂಪ್ರೇರಿತರಾಗಿ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸುವುದು ಯಾವಾಗ? ಇತ್ತೀಚೆಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಬಂದ ನ್ಯಾಯಮೂರ್ತಿ ಶ್ರೀ ಶೈಲೇಂದ್ರಕುಮಾರ್ ಲೇಖನಗಳನ್ನು ಓದುತ್ತಿದ್ದಾಗಲೇ ಈ ಪ್ರಶ್ನೆ ನನ್ನೊಳಗೆ ಮೂಡಿತ್ತು. ಈಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ಎಲ್ಲ ನ್ಯಾಯಮೂರ್ತಿಗಳೂ ತಮ್ಮ ಆಸ್ತಿ ವಿವರಗಳನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟಿನಲ್ಲಿಯೇ ಪ್ರಕಟಿಸಲು ಮುಂದಾಗಿದ್ದಾರೆ.

ಈ ಕ್ರಮಕ್ಕೆ ಕಾರಣವಾದ ಲೇಖನ ಪ್ರಕಟಿಸಿದ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ದೊಡ್ಡ ಥ್ಯಾಂಕ್ಸ್ ಹೇಳಲೇಬೇಕು. ದೇಶದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಇದಕ್ಕೆ ಪ್ರಮುಖ ಚಾಲನೆ ನೀಡಿದ್ದು ಈ ಲೇಖನವೇ. ಲೇಖನ ಬರೆದ ಶೈಲೇಂದ್ರಕುಮಾರ್ ನಿಜಕ್ಕೂ ನಮ್ಮೆಲ್ಲರ ಅಭಿನಂದನೆಗೆ ಪಾತ್ರರು.

ಮಾಧ್ಯಮರಂಗವು ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭ ಎಂದೇ ಎಲ್ಲರೂ ಕರೆಯುತ್ತಾರೆ. ಹೀಗೆ ಕರೆಯುವುದಕ್ಕೆ ದೊಡ್ಡ ಇತಿಹಾಸವೇ ಇದೆ. ಭಾರತದಲ್ಲಿ ಮಾಧ್ಯಮವು ಪ್ರಜಾತಂತ್ರದ ರಕ್ಷಣೆಯಲ್ಲಿ ವಹಿಸುತ್ತಿರುವ ಪಾತ್ರವನ್ನು ಯಾರೂ ತೆಗೆದು ಹಾಕುವಂತಿಲ್ಲ. ಕಳೆದ ವರ್ಷ ಕರ್ನಾಟಕದಲ್ಲಿ ಸಕಾಲಕ್ಕೆ ಸರಿಯಾಗಿ ವಿಧಾನಸಭಾ ಚುನಾವಣೆ ನಡೆಯಲು 'ದಿ ಹಿಂದೂ" ಪತ್ರಿಕೆಯ ವಿಶ್ಲೇಷಣಾ ಸುದ್ದಿಯೇ ಪ್ರಮುಖ ಕೆಟಲಿಸ್ಟ್ ಆಗಿತ್ತು ಎನ್ನುವುದನ್ನು ಮರೆಯಲಾಗದು. ಈಗಿನ ಸರ್ಕಾರವು ಕೊಟ್ಟ ಭಾಷೆಯೇನು ಎಂದು ಮತ್ತೆ ಮತ್ತೆ ಮುಷ್ಟಿ ಬಿಗಿದು ಕೇಳಿದ 'ವಿಜಯ ಕರ್ನಾಟಕ"ದ ಪ್ರಶ್ನೆಗಳಿಗೆ ಮುಖ್ಯಮಂತ್ರಿಯವರೇ ಸ್ಪಂದಿಸಿ ಕೊಟ್ಟ ಮಾತಿನಂತೆ ನಡೆಯುವುದಾಗಿ ಮತ್ತೊಮ್ಮೆ ಭರವಸೆ ನೀಡಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇವೆಲ್ಲ ಈಗಿನ ಕೆಲವು ಅತಿಚಿಕ್ಕ ಉದಾಹರಣೆಗಳು.

ಈಗ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮುಖ್ಯಸ್ಥರು ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸುತ್ತಿದ್ದಾರೆ. ಕಾರ್ಯಾಂಗದಲ್ಲಿ ಹಾಗೆ ಆಸ್ತಿ ವಿವರ ಪ್ರಕಟಿಸದವರ ವಿವರಗಳನ್ನು ಲೋಕಾಯುಕ್ತವು ಕಾಲಕಾಲಕ್ಕೆ ಪ್ರಕಟಿಸುತ್ತಿದೆ! ನಾಲ್ಕನೆಯ ಆಧಾರಸ್ತಂಭವಾದ ಮಾಧ್ಯಮದ ಪ್ರಮುಖರು ತಮ್ಮ ಆಸ್ತಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದು ಯಾವಾಗ ಎಂಬುದೊಂದೇ ಪ್ರಶ್ನೆ ಈಗ ಉಳಿದುಕೊಂಡಿದೆ.

ಪತ್ರಕರ್ತರು ಹೇಗಿರಬೇಕು? ಎಂಬ ಬಗ್ಗೆ ಹಲವು ನೀತಿ ಸಂಹಿತೆಗಳು ಜಾರಿಯಲ್ಲಿವೆ. ಏಷ್ಯಾದ ದೇಶಗಳಲ್ಲಿ ಇರುವ ಮಾಧ್ಯಮ ಸಂಹಿತೆ, ಭಾರತೀಯ ಪ್ರೆಸ್ ಕೌನ್ಸಿಲ್ ಹೇಳಿದಂತೆ ಇರುವ ಪತ್ರಕರ್ತರ ನಡತೆ ಕುರಿತ ನೀತಿಗಳು, ಇವುಗಳೇನೋ ಅತ್ಯಂತ ಮುತುವರ್ಜಿಯಿಂದ ರೂಪಿಸಿದ ದಾಖಲೆಗಳು. ಆದರೆ ಇಲ್ಲೆಲ್ಲೂ ಆಸ್ತಿ ಪ್ರಕಟಣೆಯ ಬಗ್ಗೆ ಮಾತಿಲ್ಲ.

ಈ ಮಧ್ಯೆ ಎಕನಾಮಿಕ್ ಟೈಮ್ಸ್‌ನ ಆಡಳಿತ ಮಂಡಳಿಯು ತನ್ನ ಪತ್ರಕರ್ತ ಸಿಬ್ಬಂದಿಗಳ ಬಗ್ಗೆ ಒಂದು ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿರುವುದಾಗಿ ಪ್ರಕಟಿಸಿ ಹಲವು ದಿನಗಳಾಗಿವೆ. ಈ ನೀತಿಯಲ್ಲಿ ತನ್ನ ಸಿಬ್ಬಂದಿ ಪತ್ರಕರ್ತರ ಹೂಡಿಕೆ ವಿಚಾರದಲ್ಲೂ ಆಡಳಿತ ಮಂಡಳಿಯು ನೀತಿಗಳನ್ನು ರೂಪಿಸಿರುವುದು ಅತ್ಯಂತ ಸ್ವಾಗತಾರ್ಹ. ಬಹುಶಃ ವಿಮರ್ಶಕಿಯ ಈ ಲೇಖನಕ್ಕೆ ಇದೇ ದಿಕ್ಸೂಚಿ.

ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸುವಾಗ ಯಾವುದೇ ಹಿತಾಸಕ್ತಿ ಇರಬಾರದು. ಹಾಗೆ ಲಾಭದಾಯಕ ಪ್ರಚಾರ ಪಡೆಯುವ ವ್ಯಕ್ತಿಗಳಿಂದ ಪತ್ರಕರ್ತರು ಯಾವುದೇ ಉಡುಗೊರೆಗಳನ್ನು ಸ್ವೀಕರಿಸಿರಬಾರದು ಎಂಬುದೇ ಸಾಮಾನ್ಯ ತಿಳಿವಳಿಕೆ.ಈ ಎಲ್ಲ ಬೆಳವಣಿಗೆಗಳನ್ನು ನೋಡಿದಾಗ, ಆಸ್ತಿ ವಿವರ ಪ್ರಕಟಣೆಯ ಬಗ್ಗೆ ಪತ್ರಿಕಾ ಸಂಘಟನೆಗಳು, ಆಡಳಿತ ಮಂಡಳಿಗಳು (ಪ್ರಕಾಶಕರು) ಒಂದು ನೀತಿ ಸಂಹಿತೆಯನ್ನು ರೂಪಿಸಬಹುದು. ಈ ನೀತಿ ಸಂಹಿತೆಯಲ್ಲಿ ಏನಿರಬಹುದು ಎಂದು ವಿಮರ್ಶಕಿಯು ಈ ಕೆಳಗಿನಂತೆ ತನ್ನ ಅಭಿಪ್ರಾಯಗಳನ್ನು ವಿನಮ್ರವಾಗಿ ಮಂಡಿಸುತ್ತಿದ್ದಾಳೆ.

ಮುಂದೆ ಓದಿ : ನೀತಿ ಸಂಹಿತೆಯಲ್ಲಿ ಏನೇನಿರಬೇಕು? »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+