ನೀತಿ ಸಂಹಿತೆಯಲ್ಲಿ ಏನೇನಿರಬೇಕು?

Journalists asset declaration, code of conduct
* ಮಾಧ್ಯಮ ಕುರಿತ ಎಲ್ಲ ಸಂಘಟನೆಗಳೂ ಒಟ್ಟಾಗಿ ಸೇರಿ ಈ ನೀತಿ ಸಂಹಿತೆಯನ್ನು ರೂಪಿಸಿ ಸಹಮತ ವ್ಯಕ್ತಪಡಿಸಿ ಪ್ರಕಟಿಸಬೇಕು.
* ಪ್ರತಿಯೊಂದೂ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಿಂದ ಮೇಲ್ಪಟ್ಟ ಎಲ್ಲ ಸಂಪಾದಕೀಯ ಸಿಬ್ಬಂದಿಗಳ ಆಸ್ತಿ ವಿವರಗಳನ್ನು ಆಯಾ ಪತ್ರಿಕೆಗಳ ವೆಬ್‌ಸೈಟಿನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಬೇಕು. ಉಳಿದಂತೆ ಎಲ್ಲಾ ಸಿಬ್ಬಂದಿಗಳ (ಸಂಪಾದಕೀಯ ಮತ್ತು ಸಂಪಾದಕೀಯೇತರ) ಆಸ್ತಿ ವಿವರಗಳನ್ನು ಆಡಳಿತ ಮಂಡಳಿಯು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಅನುಮಾನಾಸ್ಪದ ಸನ್ನಿವೇಶಗಳಲ್ಲಿ ಇತರೆ ಯಾವುದೇ ಸಿಬ್ಬಂದಿಯ ಆಸ್ತಿವಿವರಗಳನ್ನೂ ಪ್ರಕಟಿಸಲು ಆಡಳಿತ ಮಂಡಳಿಯು ಮಾಹಿತಿಯುಕ್ತವಾಗಿರಬೇಕು.
* ಪತ್ರಿಕಾ ಸಂಘಟನೆಗಳು ಕಾಯ್ದೆ / ಸಂಹಿತೆ ಮಾಡುವ ಮುನ್ನವೇ, ಹಿರಿಯ ಪತ್ರಕರ್ತರು ತಮ್ಮ ಆಸ್ತಿ ವಿವರಗಳನ್ನು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕು. (ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಮಾಡಿದ್ದೂ ಹೀಗೇನೇ ಅಲ್ಲವೆ?)
* ಆಡಳಿತ ಮಂಡಳಿಯು ಸಾರ್ವಜನಿಕವಾಗಿ (ದಿ ಎಕನಾಮಿಕ್ ಟೈಮ್ಸ್ ಆಡಳಿತ ಮಂಡಳಿ ಪ್ರಕಟಿಸಿದಂತೆ) ಪ್ರಕಟಿಸಬೇಕು.
* ಎಲ್ಲ ಪತ್ರಕರ್ತರ ಸಂಘಟನೆಗಳೂ (ಪ್ರೆಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವರದಿಗಾರರ ಕೂಟ, ಪ್ರೆಸ್‌ಗಿಲ್ಡ್, ಇತ್ಯಾದಿ) ತಮ್ಮ ಸದಸ್ಯರ ಆಸ್ತಿ ವಿವರಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರಬೇಕು.
* ಆಸ್ತಿ ವಿವರವನ್ನೇ ಆಧಾರ ಮಾಡಿಕೊಂಡು ವಿವಾದ ಹುಟ್ಟಿಸುವುದರಿಂದ ಪತ್ರಕರ್ತರಿಗೆ ರಕ್ಷಣೆ ಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಪ್ರೆಸ್ ಕೌನ್ಸಿಲ್ ಕೂಡಾ ಒಂದು ರಕ್ಷಣಾತ್ಮಕ ನೀತಿಸೂತ್ರಗಳನ್ನು ರಚಿಸಬೇಕು. ಸೂಕ್ತ ವಿಚಾರಣೆ ಮಾಡಿ ಈ ಬಗೆಯ ವ್ಯಾಜ್ಯಗಳ ಬಗ್ಗೆ ತೀರ್ಮಾನ ಕೊಡಬೇಕು. ಪ್ರೆಸ್ ಕೌನ್ಸಿಲ್‌ಗೆ ಈ ನಿಟ್ಟಿನಲ್ಲಿ (ಮತ್ತು ಇನ್ನೂ ಹಲವು ಕೊರತೆಗಳ, ಲೋಪದೋಷಗಳ ಹಿನ್ನೆಲೆಯಲ್ಲಿ) ಇನ್ನಷ್ಟು ನ್ಯಾಯಾಧಿಕರಣದ ಹಕ್ಕುಗಳನ್ನು ಕೊಡಬೇಕು.
* ಪ್ರತೀ ವರ್ಷವೂ ಹಿರಿಯ ಪತ್ರಕರ್ತರು ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಬೇಕು. ಆಡಳಿತ ಮಂಡಳಿಗಳೂ ಹೀಗೆ ವರ್ಷಕ್ಕೊಮ್ಮೆ ತಮ್ಮ ಲೆಕ್ಕಪರಿಶೋಧಿತ ಆಸ್ತಿ ವಿವರಗಳನ್ನು ಪ್ರಕಟಿಸಬೇಕು.
* ಯಾವುದಾದರೂ ಸುದ್ದಿಯಲ್ಲಿ ಪತ್ರಕರ್ತರು ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಯಾವುದೇ ಓದುಗನಿಗೆ ಅನ್ನಿಸಿದ್ದರೆ ಅದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಪ್ರೆಸ್ ಕೌನ್ಸಿಲ್‌ಗೆ ದೂರು ನೀಡಲು ಯಾವುದೇ ಓದುಗನಿಗೆ ಸ್ವಾತಂತ್ರ್ಯ ಇರಬೇಕು. ಕೇವಲ ಬಾಧಿತ ವ್ಯಕ್ತಿ/ ಸಂಸ್ಥೆಗಳು ಮಾತ್ರವಲ್ಲ. (ಮಾನನಷ್ಟ ಮೊಕದ್ದಮೆಗಳ ಹಾಗೆ ಸಾಮಾನ್ಯವಾಗಿ ಪ್ರೆಸ್ ಕೌನ್ಸಿಲ್‌ನಲ್ಲಿ ಬಾಧಿತ / ಸುದ್ದಿ ಸಂಬಂಧಿತ ವ್ಯಕ್ತಿಗಳು ಮಾತ್ರವೇ ದೂರು ಸಲ್ಲಿಸಬೇಕು).
* ಮಾಧ್ಯಮರಂಗವನ್ನು ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭ ಎಂದು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ ಎಂಬ ನಂಬುಗೆಯಿಂದ ಈ ಸಲಹೆಗಳನ್ನು ವಿಮರ್ಶಕಿ ನೀಡಿದ್ದಾಳೆ. ಪತ್ರಿಕೆಗಳೇನೋ ಎಲ್ಲ ರಾಜಕಾರಣಿಗಳ ಆಸ್ತಿಗಳ ಬಗ್ಗೆ, ನ್ಯಾಯಾಧೀಶರ ಕುರಿತ ಕಾಯ್ದೆಯ ಬಗ್ಗೆ, ಅಧಿಕಾರಿಗಳ ಮನೆಗಳ ಮೇಲಿನ ಲೋಕಾಯುಕ್ತ ರೈಡ್‌ಗಳ ಬಗ್ಗೆ ಬರೆಯಬಹುದು; ಆದರೆ ಮಾಧ್ಯಮದ ಸಿಬ್ಬಂದಿ – ಅಧಿಕಾರಿಗಳು (ಸಂಪಾದಕೀಯ ಮತ್ತು ಸಂಪಾದಕೀಯೇತರ) ಹೊಂದಿದ ಆಸ್ತಿಯ ಬಗ್ಗೆ ಯಾರು ಮಾಹಿತಿ ನೀಡಬೇಕು? ಅವು ಎಲ್ಲಿ ಪ್ರಕಟವಾಗಬೇಕು?

ದೇಶ ಹೇಗಿರಬೇಕು, ಯಾರು ಹೇಗೆ ನಡೆದುಕೊಳ್ಳಬೇಕು, ಪಕ್ಷಗಳು ತಮ್ಮ ಸಿದ್ಧಾಂತವನ್ನು ಹೇಗೆ ಶುದ್ಧವಾಗಿ ಇಟ್ಟುಕೊಳ್ಳಬೇಕು, ಅಧಿಕಾರಿಗಳು ಹೇಗೆ ಪ್ರಾಮಾಣಿಕರಾಗಿರಬೇಕು, ಯಾವ ತೀರ್ಪು ಸರಿ, ಯಾವ ತೀರ್ಮಾನ ದೋಷಪೂರಿತ, ಯಾವ ರಾಜಕಾರಣಿಗೆ ಗೆಲುವು ನಿಶ್ಚಿತ, ಯಾರು ಮಣ್ಣು ಮುಕ್ಕುತ್ತಾರೆ, ಯಾವ ಮಂತ್ರಿ ಹಗರಣ ಮಾಡಿದ್ದಾನೆ, ಯಾವ ಲ್ಯಾಂಡ್ ಮಾಫಿಯಾಗೆ ಯಾರು ಕುಮ್ಮಕ್ಕು, ಯಾವ ಕಾಯ್ದೆ ಸರಿ, ಯಾವುದು ತಪ್ಪು, ಸರ್ಕಾರ ಏನು ಮಾಡಬೇಕು, ಮಾಡಬಾರದು, ಓದುಗರು ಏನು ಖರೀದಿಸಬೇಕು, ಯಾವ ಉತ್ಪನ್ನ ಹೇಗಿದೆ, ಅವರು ಹೇಗೆ ಬಾಳಬೇಕು, ಬದುಕಬೇಕು……… ಎಲ್ಲವನ್ನೂ ಅತ್ಯಂತ ಕಾಳಜಿಯಿಂದ ಬರೆಯುವ ಪತ್ರಕರ್ತರು, ಪ್ರಕಾಶನ ಮಾಡುವ ಮಾಧ್ಯಮ ಸಂಸ್ಥೆಗಳು ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಿದರೆ ಓದುಗರಲ್ಲಿ ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ವಿಶ್ವಾಸ ಹೆಚ್ಚುತ್ತದೆ.

ಬಹುಶಃ ಇಂಥ ಕ್ರಮವನ್ನು ನಾಡಿನ ಪ್ರಮುಖ ಕನ್ನಡ ಪತ್ರಿಕೆಗಳ ಸಂಪಾದಕರುಗಳು ಕೂಡಲೇ ಕೈಗೊಂಡು, ಆಸ್ತಿ ವಿವರಗಳನ್ನು ಪ್ರಕಟಿಸಿ ದೇಶಕ್ಕೇ ಒಂದು ಮಾದರಿಯಾಗಬಹುದು. ಎಷ್ಟೆಂದರೂ ನ್ಯಾಯಮೂರ್ತಿ ಕಣ್ಣನ್ ಜೊತೆಗೂಡಿ ಈ ವಿಷಯದ ಬಗ್ಗೆ ಚಳವಳಿ ರೂಪದ ಅಭಿಪ್ರಾಯವನ್ನು ರೂಪಿಸಿದ್ದೂ ನಮ್ಮ ನಾಡಿನ ನ್ಯಾಯಮೂರ್ತಿಗಳೇ ಅಲ್ಲವೆ?

(ವೃತ್ತಿ ಸಂಬಂಧ : ವಿಮರ್ಶಕಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+