ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಿನ ಹಬ್ಬ ನಾಗರಪಂಚಮಿ

By Staff
|
Google Oneindia Kannada News

ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ಸರ್ಪಗಳು ನಮ್ಮನ್ನು ಕಚ್ಚದಿರಲಿ, ವಿಷಬಾಧೆ ಪರಿಹಾರವಾಗಲಿ, ಸಂತಾನ ಪ್ರಾಪ್ತವಾಗಲಿ, ಸಂಪತ್ತು ದೊರೆಯಲಿ, ಚರ್ಮರೋಗಗಳು ನಿವಾರಣೆಯಾಗಲಿ ಮತ್ತು ಮರಣಾನಂತರ ಸ್ವರ್ಗಪ್ರಾಪ್ತಿಯಾಗಲಿ ಎಂಬ ಹಲವಾರು ಇಚ್ಛೆಗಳನ್ನು ಇಟ್ಟುಕೊಂಡು ಫಲಪ್ರಾಪ್ತಿಗಾಗಿ ಹಬ್ಬವನ್ನು ಆಚರಿಸುತ್ತಾರೆ.

ತಳಕು ಶ್ರೀನಿವಾಸ, ಮುಂಬಯಿ

Talaku Srinivas, Mumbaiಕಲ್ಲ ನಾಗರ ಕಂಡರೆ ಹಾಲನೆರೆವರು
ನಿಜದಿ ನಾಗರ ಕಂಡರೆ ಕೊಲದಿರುವರೇನಯ್ಯ ...

ಎಂತಹ ಸತ್ಯದ ಮಾತುಗಳಿವು. ವಿಷಭರಿತ ಮಾನವನು ನಿರುಪದ್ರವಿ ಪ್ರಾಣಿಯನ್ನು ವಿಷಪೂರಿತವೆಂದು ಎಣಿಸಿ ಕೊಲುವನು. ಪ್ರಾಯಶ್ಚಿತ್ತವಾಗಿ ಅದರದ್ದೇ ಮೂರ್ತಿಯನ್ನು ಪೂಜಿಸುವನು. ಇಂತಹ ಸುಂದರ ಮಾತುಗಳಿಂದಲ್ಲವೇ ಕನ್ನಡ ಕಸ್ತೂರಿ ಎನಿಸಿರುವುದು.

ಪ್ರತಿಯೊಂದು ಮನೆಯಲ್ಲೂ ನಾಗರಾಜ, ನಾಗೇಶ, ನಾಗರತ್ನ, ನಾಗಮಣಿ ಮುಂತಾದ ನಾಗರ ಹೆಸರನ್ನಿಟ್ಟುಕೊಂಡಿರುವವರು ಕಾಣಬರುವರು. ನಾಗರ ಕರುಣೆಯಿಂದ ಜನಿಸಿದ ಮಕ್ಕಳೆಂದು ತಿಳಿದು ನಾಗರಾಜನ ಸ್ಮರಣೆ ಸದಾಕಾಲವಿರಲೆಂಬ ಉದ್ದೇಶದಿಂದ ಈ ಹೆಸರನ್ನಿಡುವರು.

ನಮ್ಮ ದೇಶದಾದ್ಯಂತವಲ್ಲದೇ ಹೊರದೇಶಗಳಲ್ಲಿಯೂ ನಾಗರಹಾವನ್ನು ಪೂಜಿಸುವುದು, ಅದರ ಮುಖೇನ ದೇವರನ್ನು ಕಾಣುವುದು ಸಾಮಾನ್ಯ ಸಂಗತಿ. ಕೆಲವು ದೇಶಗಳಲ್ಲಿ ಇದನ್ನು ಇತರ ಪ್ರಾಣಿಗಳಂತೆ ತಿನ್ನುವ ಪರಿಪಾಠವೂ ಇದೆ. ನಮ್ಮ ದೇಶದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ನಾಗರ ಹಾವುಗಳನ್ನು ಪೂಜಿಸಿ ನಾಗರ ಪಂಚಮಿ ಎಂದು ವ್ರತಾಚರಣೆಯನ್ನು ಆಚರಿಸುವುದು ಪದ್ಧತಿ.

ಉದ್ರೇಕಿಸದೇ ಯಾರನ್ನೂ ಎಂದೂ ಕಚ್ಚದ ತೊಂದರೆಗೀಡು ಮಾಡದ, ಹಾವನ್ನು ಕಂಡೊಡನೆಯೇ ಭಯಭೀತರಾದ ಜನಗಳು ಕಲ್ಲು ಹೊಡೆದು, ಕೋಲಿನಿಂದ ಹೊಡೆದು ಸಾಯಿಸುವುದೂ ಕಂಡು ಬರುವುದು. ಇದಲ್ಲದೇ ಹಾಗೆ ಸಾಯಿಸಿದ ಹಾವಿಗೆ ಶ್ರಾದ್ಧವನ್ನೂ ಮಾಡುವರು. ಆದರಿಲ್ಲಿ ಹಾವನ್ನು ಪೂಜಿಸುವ, ನಾಗರ ಪಂಚಮಿ ಎಂಬ ಈ ವ್ರತದ ಬಗ್ಗೆ ನನಗೆ ತಿಳಿದ ಒಂದೆರಡು ಮಾತುಗಳನ್ನು ಹೇಳಲಿಚ್ಛಿಸುವೆ.

ನಾಗರಾಜನಿಗೆ ನಮನ :

ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಈ ವ್ರತವನ್ನು ಆಚರಿಸುತ್ತಾರೆ. ಸರ್ಪಗಳು ನಮ್ಮನ್ನು ಕಚ್ಚದಿರಲಿ, ವಿಷಬಾಧೆ ಪರಿಹಾರವಾಗಲಿ, ಸಂತಾನ ಪ್ರಾಪ್ತವಾಗಲಿ, ಸಂಪತ್ತು ದೊರೆಯಲಿ, ಚರ್ಮರೋಗಗಳು ನಿವಾರಣೆಯಾಗಲಿ ಮತ್ತು ಮರಣಾನಂತರ ಸ್ವರ್ಗಪ್ರಾಪ್ತಿಯಾಗಲಿ ಎಂಬ ಹಲವಾರು ಇಚ್ಛೆಗಳನ್ನು ಇಟ್ಟುಕೊಂಡು ಫಲಪ್ರಾಪ್ತಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ಗುಜರಾತ ಪ್ರಾಂತದಲ್ಲಿ ಈ ವ್ರತವನ್ನು ಇದೇ ತಿಂಗಳ ಕೃಷ್ಣ ಪಕ್ಷದ ಪಂಚಮಿಯಂದು ಆಚರಿಸುತ್ತಾರೆ.

ಬಂಗಾಳ ದೇಶದಲ್ಲಿ ಕಶ್ಯಪ ಋಷಿಗಳ ಮಾನಸಪುತ್ರಿಯಾದ ಸರ್ಪದೇವಿ ಮನಸಾದೇವಿ ಎಂದು ಆಚರಿಸುತ್ತಾರೆ. ಇದಲ್ಲದೇ ಜೇಷ್ಠ ಮಾಸ ಶುಕ್ಲ ಪಕ್ಷದ ದಶಮಿಯಂದು ಹಸ್ತಾ ನಕ್ಷತ್ರವು ಬಂದರೆ ಅಂದು ನಾಗದೇವತೆ ಮನಸಾದೇವಿಯನ್ನು ಪೂಜಿಸುವರು. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಸರ್ಪಬಲಿ ಎಂಬ ನಾಗಪೂಜೆಯನ್ನೂ ನಡೆಸುವರು. ಕೆಲವೆಡೆ ನಾಗದೇವತೆಯನ್ನು ಚತುರ್ಥಿ ತಿಥಿಯಂದು ಪೂಜಿಸಿ, ಪಂಚಮಿಯಂದು ಗರುಡ ಪಂಚಮಿ ಎಂದು ಆಚರಿಸುವರು.

ಹಬ್ಬದ ಆಚರಣೆ :

ಕೆಲವೆಡೆ ಅಕ್ಕಿಯ ಹಿಟ್ಟಿನಿಂದ ತೊಟ್ಟಿಲನ್ನು ಅಥವಾ ಬಟ್ಟಲನ್ನು ಮಾಡಿ, ಅದರಲ್ಲಿ ನಾಗದೇವತೆಯ ವಿಗ್ರಹವನ್ನು ಇಟ್ಟು ಪೂಜಿಸುವರು. ಕೆಲವರು ಬೆಳ್ಳಿಯ ನಾಗರ ಪ್ರತಿಮೆಯನ್ನು ಇಟ್ಟರೆ, ಇನ್ನು ಕೆಲವರು ಹುತ್ತದ ಮಣ್ಣಿನಿಂದ ಮಾಡಿದ ನಾಗರ ಪ್ರತಿಮೆಗೆ ಹಾಲನ್ನು ಚಿಮುಕಿಸುವರು. ಇದನ್ನು ತನಿ ಎರೆಯುವುದು ಎಂದೂ ಹೇಳುವರು. ಈ ಪೂಜೆಯಲ್ಲಿ ತಾಳೆಯ ಹೂವಿನ ಬಳಕೆಯು ವಿಶೇಷವಾದುದು. ನೈವೇದ್ಯಕ್ಕೆ ಹಾಲು, ಅಕ್ಕಿಯ ಹಿಟ್ಟು, ಅರಳು, ಕಡಲೆಕಾಯಿ, ಚಿಗಳಿ, ತಂಬಿಟ್ಟು, ಸಿಹಿಕಡುಬು ಮತ್ತು ಉದ್ದಿನ ಕಡುಬುಗಳನ್ನು ಇಡುವರು.

ಹುತ್ತಗಳಿಗೆ ಹಾಲನ್ನೆರೆದು, ಅರಿಶಿನ, ಕುಂಕುಮ ಮತ್ತು ಹತ್ತಿಯಿಂದ ಮಾಡಿದ ಗೆಜ್ಜೆ ವಸ್ತ್ರಗಳನ್ನು ಇಟ್ಟು ಪೂಜಿಸುವರು. ಇದಲ್ಲದೇ ಸೋದರಿಯರು ಸೋದರರಿಗೆ ಹೊಕ್ಕಳು ಮತ್ತು ಬೆನ್ನಿನ ಮೇಲೆ ತಾಳೆ ಹೂವಿನಿಂದ ಹಾಲು ಚಿಮುಕಿಸಿ, ಅವು ತಂಪಾಗಿರಲಿ ಎಂದು ನಮಸ್ಕಾರವನ್ನು ಅಥವಾ ಆಶೀರ್ವಾದವನ್ನು ಮಾಡುವರು. ಈ ಸಂದರ್ಭದಲ್ಲಿ ಇದಕ್ಕೆ ಪ್ರತಿಯಾಗಿ ಸೋದರರು ಸೋದರಿಯರಿಗೆ ಉಡುಗೊರೆಯನ್ನು ಕೊಡುವರು. ಊರುಗಳಲ್ಲಿರುವ ನಾಗರಕಲ್ಲಿಗೂ ಹಾಲೆರೆದು, ಹಾಲಿನಿಂದ ಅಭಿಷೇಕ ಮಾಡಿ, ಪೂಜಿಸುವುದು ಸಾಮಾನ್ಯದ ದೃಶ್ಯ. ಕೆಲವೆಡೆ ಅರಳು, ಪಾಯಸ ಮತ್ತು ಉಪ್ಪು ಹಾಕದ ದೋಸೆಗಳನ್ನು ನೈವೇದ್ಯಕ್ಕಿಡುವರು. ಹೀಗೆ ಪೂಜಿಸಿದ ಮೇಲೆ ಯಥೋಕ್ತವಾಗಿ ಚಿನ್ನದಿಂದ ಅಥವಾ ಬೆಳ್ಳಿಯಿಂದ ಮಾಡಿದ ನಾಗರ ವಿಗ್ರಹಗಳನ್ನು ದಾನವಾಗಿ ಕೊಡುವರು.

ಮನೆಗಳಲ್ಲಿ ಅಕ್ಕಿಯ ಹಿಟ್ಟಿನಿಂದ ನಾಗರ ಚಿತ್ರಗಳನ್ನು ನೆಲದ ಮೇಲೆ ಮತ್ತು ಗೋಡೆಗಳ ಮೇಲೆ ಚಿತ್ರಿಸಿ ಪೂಜಿಸುವರು. ಈ ವ್ರತವನ್ನು ಆಚರಿಸುವವರು ವಿಶೇಷವಾದ ಸಂಯಮದಿಂದಿರಬೇಕು. ಚತುರ್ಥಿಯ ದಿನದಂದು ಒಂದು ಹೊತ್ತು ಮಾತ್ರ ಆಹಾರ ಸೇವಿಸಿ, ಪಂಚಮಿಯಂದು ಸಂಪೂರ್ಣ ಉಪವಾಸವಿದ್ದು ರಾತ್ರಿಯ ಹೊತ್ತು ಊಟ ಮಾಡಬೇಕು. ಈ ಆಹಾರದಲ್ಲಿ ಉಪ್ಪನ್ನು ಉಪಯೋಗಿಸದಿರುವುದು ಆರೋಗ್ಯಕ್ಕೂ ಒಳ್ಳೆಯದು.

ಸಂಜೆಯ ವೇಳೆಯಲ್ಲಿ ಊರ ಮುಂದಿರುವ ಮರಗಳಿಗೆ ಜೋಕಾಲಿ ಕಟ್ಟಿ ಮಕ್ಕಳನ್ನು ಅದರಲ್ಲಿ ಕುಳ್ಳಿರಿಸಿ ತೂಗುವುದಿನ್ನೊಂದು ಪರಿ. ಇಂತಹ ಹಬ್ಬಗಳು ಮತ್ತೆ ಮತ್ತೆ ಬರಲಿ, ಬಂದು ಎಲ್ಲರ ಮನವನ್ನೂ ತಣಿಸಲಿ, ಊರಿನ ಎಲ್ಲರೂ ಒಂದಾಗಿ ಬಾಳಲಿ ಎಂದು ಎಲ್ಲರೂ ಹಾತೊರೆಯುವುದು ಸಾಮಾನ್ಯ. ಬೆಂಗಳೂರಿನ ಹತ್ತಿರದಲ್ಲಿರುವ ಘಾಟಿ ಸುಬ್ರಹ್ಮಣ್ಯ ಮತ್ತು ವಿದುರಾಶ್ವತ್ಥದಲ್ಲಿ ಈ ದಿನದಂದು ವಿಶೇಷ ಪೂಜೆ ನಡೆಯುವುದನ್ನು ಹೆಸರಿಸಲು ಮರೆಯುವಂತಿಲ್ಲ.

ಮನಸಾದೇವಿಯನ್ನು ಪೂಜಿಸುವವರು "ಸರ್ಪಭಯ ನಿವಾರಣೆಗಾಗಿ ಮನಸಾದೇವಿಯನ್ನು ಆರಾಧಿಸುತ್ತೇನೆ" ಎಂದು ಸಂಕಲ್ಪ ಮಾಡಿ, ಸ್ನುಹೀ ಎಂಬ ಕ್ಷೀರವೃಕ್ಷದಲ್ಲಾಗಲೀ ಅಥವಾ ಜಲಕುಂಭದಲ್ಲಾಗಲೀ ಆ ದೇವತೆಯನ್ನು ಆವಾಹಿಸಿ, ಇತರ ನಾಗದೇವತೆಗಳನ್ನೂ ಜೊತೆಯಾಗಿ ಆವಾಹಿಸಿ ಪೂಜಿಸುವರು. ಬೇವಿನ ಎಲೆಗಳನ್ನು ದೇವತೆಗಳಿಗೆ ನಿವೇದಿಸಿ ಅವುಗಳನ್ನು ಬ್ರಾಹ್ಮಣರಿಗೆ ಉಣಬಡಿಸಿ ತಾವೂ ಸೇವಿಸಬೇಕು.

ಇನ್ನು ಕೆಲವೆಡೆ ಮರದ ಹಲಗೆಯ ಮೇಲೆ ಕೆಂಪುಬಣ್ಣದ ಗಂಧದಿಂದ ಸರ್ಪವಿಗ್ರಹಗಳನ್ನು ಇಟ್ಟು ಪೂಜಿಸುವರು. ಅಂದು ಮನೆಯ ಮುಂದೆ ಬರುವ ಹಾವಾಡಿಗರಿಗೆ ಕರಿ, ಖಾರ, ಒಗರು ಮತ್ತು ಸಿಹಿ ರಸಗಳ ಪದಾರ್ಥಗಳನ್ನು ಪ್ರಸಾದವಾಗಿ ಕೊಡುವರು.

ಅಂದು ಪೂಜಿಸುವ ಎಂಟು ನಾಗದೇವತೆಗಳ ಹೆಸರುಗಳು ಹೀಗಿವೆ. ವಾಸುಕಿ, ತಕ್ಷಕ, ಕಾಲಿಯ, ಮಣಿಭದ್ರಕ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ ಮತ್ತು ಧನಂಜಯ. ಇನ್ನು ಕೆಲವೆಡೆ ಹನ್ನೆರಡು ತಿಂಗಳುಗಳ ಪ್ರತೀಕವಾಗಿ ಹನ್ನೆರಡು ನಾಗದೇವತೆಗಳನ್ನು ಪೂಜಿಸುವರು. ಅವುಗಳ ಹೆಸರುಗಳೂ ಹೀಗಿವೆ - ಅನಂತ, ವಾಸುಕಿ, ಶಂಖ, ಪದ್ಮ, ಕಂಬಲ, ಕಾರ್ಕೋಟಕ, ಧೃತರಾಷ್ಟ್ರ, ಶಂಖಕ, ಕಾಲಿಯ, ತಕ್ಷಕ, ಪಿಂಗಳ ಮತ್ತು ಮಣಿಭದ್ರಕ.

ನಾಗ ಮತ್ತು ನಾವು :

ವರುಷವೆಲ್ಲವೂ ಹಿಂಸಿಸಿ, ಕೊಲ್ಲುವ ಆ ಪಾಪದ ಪ್ರಾಣಿಯನ್ನು ಒಂದು ದಿನವಾದರೂ ಪೂಜಿಸುವ ನೆವದಲ್ಲಿ ನೆಮ್ಮದಿಯಾಗಿರಲು ಬಿಡಬೇಕು. ಆದರೇನು ಪೂಜೆಯ ನೆಪದಲ್ಲಿ ಅಂದೂ ಕೂಡಾ ಅದಕ್ಕೆ ಹಿಂಸಿಸುವುದು ನಿರಂತರವಾಗಿ ನಡೆದೇ ಇದೆ. ನಮ್ಮ ದೇಶದ ಸಂಸ್ಕೃತಿಯ ಪ್ರಕಾರ ಹಾವುಗಳನ್ನು ಪೂಜಿಸುವ ಸಂಪ್ರದಾಯವಾದರೂ ಏಕೆ ಬಂದಿದೆ? ಹಳ್ಳಿಗಳಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟಿರುವ ಜಾಗಗಳಲ್ಲಿ ಉಪದ್ರವ ಕೊಡುವ ಇಲಿ ಮತ್ತು ಹುಳು ಹುಪ್ಪಟೆಗಳನ್ನು ಹಾವುಗಳು ತಿಂದು ಜನತೆಗೆ ಸಹಕರಿಸುವುದು. ಅಲ್ಲದೇ ವಿಷದ ಹಲ್ಲುಗಳಿರುವ ಈ ಜಂತುಗಳ ಉಪಶಮಿಸಲು ಪೂಜಿಸಿ ಹಾಲೆರೆದರೆ ನಮ್ಮನ್ನು ಕಚ್ಚುವುದಿಲ್ಲವೆಂಬ ನಂಬಿಕೆಯೂ ಇದೆ.

ಪುರಾಣ ಪುಣ್ಯಕಥೆಗಳಲ್ಲಿ ಹೆಸರಿಸಿರುವಂತೆ ದೇವತೆಗಳೊಂದಿಗೆ ಹಾವಿನ ಸಖ್ಯವಿದ್ದೇ ಇದೆ. ಈಶ್ವರನು ಹಾವನ್ನು ತನ್ನ ಕೊರಳಿಗೆ ಸುತ್ತಿಕೊಂಡಿದ್ದರೆ, ವಿಷ್ಣುವು ಹಾವನ್ನು ಹಾಸುಗೆಯಂತೆ ಉಪಯೋಗಿಸುತಿಹನು. ಗಣಪತಿಯು ಹಾವನ್ನು ತನ್ನ ಹೊಟ್ಟೆಗೆ ಸುತ್ತಿಕೊಂಡು ಒಡೆದ ಹೊಟ್ಟೆಯನ್ನು ರಕ್ಷಿಸಿಕೊಂಡರೆ, ಸುಬ್ರಹ್ಮಣ್ಯನು ಸ್ವತ: ನಾಗಸ್ವರೂಪಿಯು. ಇದಲ್ಲದೇ ಹಾವಿನ ವಿಷವನ್ನು ಔಷಧಿಯಾಗಿಯೂ ಬಳಸುವರು.

ಚೆನ್ನೈ ಸಮೀಪದಲ್ಲಿ ಹಾವುಗಳದ್ದೇ ಒಂದು ಉದ್ಯಾನವನವಿದೆ. ಅದಲ್ಲದೇ ತಮಿಳುನಾಡಿನ ನಾಗರಕೋಯಿಲ್‌ನಲ್ಲಿ ಹಾವಿಗಾಗಿಯೇ ದೇವಾಲಯವನ್ನೂ ನಿರ್ಮಿಸಿದ್ದಾರೆ. ಇದರ ಚರ್ಮವನ್ನು ಉಪಯೋಗಿಸಿ ದುಬಾರಿ ಚೀಲಗಳನ್ನು ತಯಾರಿಸಿದರೆ, ಚೀನಾ, ಜಪಾನ, ಸಿಂಗಪೂರ, ಕೊರಿಯ ಮತ್ತಿತರೇ ದೇಶಗಳ ಹೋಟೆಲ್‌ಗಳಲ್ಲಿ ಪ್ರತ್ಯಕ್ಷವಾಗಿ ಹಾವಿನ ಚರ್ಮ ಸುಲಿದು ಉಣಬಡಿಸುವರು.

ಇತರೇ ದೇಶಗಳ ಕ್ರೂರ ಕೃತ್ಯಗಳನ್ನು ಗಮನಿಸಿದರೆ, ನಮ್ಮ ದೇಶದಲ್ಲಿ ಈ ನಿರುಪದ್ರವಿಯನ್ನು ಪೂಜಿಸುವುದು ಉತ್ತಮ ಕಾರ್ಯವಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X