Ugadi 2026: ಹೊಸ ವರ್ಷದ ಸ್ವಾಗತಕ್ಕೆ ಮನೆ ಬೆಳಗಲಿ: ಯುಗಾದಿ ಹಬ್ಬಕ್ಕೆ ಮನೆ ಶುಚಿಗೊಳಿಸಲು ಇಲ್ಲಿವೆ 10 ಸರಳ ಟಿಪ್ಸ್
ಬೆಂಗಳೂರು: ಕನ್ನಡಿಗರ ಪಾಲಿಗೆ ಯುಗಾದಿ ಕೇವಲ ಹಬ್ಬವಲ್ಲ, ಹೊಸ ವರ್ಷದ ಸಂಭ್ರಮ. ಬೇವು-ಬೆಲ್ಲ ಸವಿಯುವ ಮೂಲಕ ಹೊಸ ವರುಷವನ್ನು ಬರಮಾಡಿಕೊಳ್ಳುವ ಈ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹಬ್ಬದ ಸಿದ್ಧತೆ ಎಂದರೆ ಮೊದಲಿಗೆ ನೆನಪಾಗುವುದೇ ಇಡೀ ಮನೆಯ ಸ್ವಚ್ಛತೆ. ಹೊಸ ವರ್ಷವನ್ನು ಸ್ವಾಗತಿಸಲು ಮನೆಯ ಪ್ರತಿಯೊಂದು ಮೂಲೆಯೂ ಶುಭ್ರವಾಗಿರಬೇಕು, ಆ ಮೂಲಕ ಮನೆಗೆ ಸಕಾರಾತ್ಮಕ ಶಕ್ತಿ ಪ್ರವೇಶಿಸಬೇಕು ಎಂಬುದು ಪ್ರತಿಯೊಬ್ಬರ ನಂಬಿಕೆ.
ಪ್ರೊಫೆಷನಲ್ ಕ್ಲೀನಿಂಗ್ ಸೇವೆಗಳು ಲಭ್ಯವಿದ್ದರೂ, ನಮ್ಮ ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ನಾವೇ ಸ್ವತಃ ಮನೆಯನ್ನು ಅತ್ಯಂತ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಬಹುದು. ಹೊಳೆಯುವ ಕಿಟಕಿಗಳಿಂದ ಹಿಡಿದು, ಕಲೆಮುಕ್ತ ಅಡುಗೆಮನೆ ಹಾಗೂ ಬ್ಯಾಕ್ಟೀರಿಯಾ ಮುಕ್ತ ಸ್ನಾನಗೃಹದವರೆಗೆ ಪ್ರತಿಯೊಂದನ್ನೂ ಕ್ಲೀನ್ ಮಾಡಲು ಇಲ್ಲಿದೆ 10 ಸರಳ ಟಿಪ್ಸ್. ಮುಂಬರುವ ಯುಗಾದಿ ಹಬ್ಬಕ್ಕೆ ನಿಮ್ಮ ಮನೆಯನ್ನು ಸಜ್ಜುಗೊಳಿಸಲು ಈ ವಿಧಾನಗಳು ಖಂಡಿತಾ ಸಹಾಯ ಮಾಡುತ್ತವೆ.

ಮೈಕ್ರೋವೇವ್ ಮತ್ತು ಅಡುಗೆಮನೆ ಉಪಕರಣಗಳ ಸ್ವಚ್ಛತೆಗೆ ನಿಂಬೆಹಣ್ಣು
ಅಡುಗೆಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತುಗಳಲ್ಲಿ ಮೈಕ್ರೋವೇವ್ ಕೂಡ ಒಂದು. ಇದರಲ್ಲಿ ಜಿಡ್ಡು ಮತ್ತು ವಾಸನೆ ಉಳಿದುಕೊಳ್ಳುವುದು ಸಾಮಾನ್ಯ. ಇದನ್ನು ಸ್ವಚ್ಛಗೊಳಿಸಲು, ಮೈಕ್ರೋವೇವ್-ಸೇಫ್ ಬೌಲ್‌ನಲ್ಲಿ ಅರ್ಧ ನಿಂಬೆಹಣ್ಣಿನ ರಸ ಮತ್ತು ನಾಲ್ಕು ಚಮಚ ನೀರನ್ನು ಸೇರಿಸಿ. ಈ ಮಿಶ್ರಣವನ್ನು ಸುಮಾರು ಹತ್ತು ನಿಮಿಷಗಳ ಕಾಲ ಹೈ-ಪವರ್‌ನಲ್ಲಿ ಬಿಸಿ ಮಾಡಿ. ಇದರಿಂದ ಉತ್ಪತ್ತಿಯಾಗುವ ಉಗಿ ಒಳಭಾಗದ ಜಿಡ್ಡನ್ನು ಸಡಿಲಗೊಳಿಸುತ್ತದೆ. ನಂತರ ಶುದ್ಧವಾದ ಬಟ್ಟೆಯಿಂದ ಒರೆಸಿ. ಈ ನೈಸರ್ಗಿಕ ವಿಧಾನವು ಕಠಿಣ ಕಲೆಗಳನ್ನು ತೆಗೆದುಹಾಕುವುದಲ್ಲದೆ, ಬ್ಯಾಕ್ಟೀರಿಯಾವನ್ನು ನಾಶಪಡಿಸಿ ತಾಜಾ ಅನುಭವ ನೀಡುತ್ತದೆ.
ಗ್ಲಾಸ್ ಮತ್ತು ಕಿಟಕಿಗಳ ಹೊಳಪಿಗೆ ಬಿಳಿ ವಿನೆಗರ್
ಮನೆಯ ಕಿಟಕಿ ಗ್ಲಾಸ್ ಮತ್ತು ಕನ್ನಡಿಗಳನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಅತ್ಯುತ್ತಮ ಪರಿಹಾರ. ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಕೊಳ್ಳಿ. ಇದನ್ನು ಕಿಟಕಿಗಳು, ಕನ್ನಡಿಗಳು ಅಥವಾ ಗಾಜಿನ ಬಾಗಿಲುಗಳ ಮೇಲೆ ಸ್ಪ್ರೇ ಮಾಡಿ ಕೆಲವು ನಿಮಿಷ ಬಿಡಿ. ನಂತರ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿದರೆ ಯಾವುದೇ ಕಲೆಗಳಿಲ್ಲದೆ ಗ್ಲಾಸ್‌ಗಳು ಹೊಳೆಯುತ್ತವೆ. ಇದು ರಾಸಾಯನಿಕ ಮುಕ್ತ ವಿಧಾನವಾಗಿದೆ.
ನೀರಿನ ಕಲೆ ನಿವಾರಣೆಗೆ ಆಪಲ್ ಸೈಡರ್ ವಿನೆಗರ್ ಮತ್ತು ನಿಂಬೆ
ಸಿಂಕ್, ನಲ್ಲಿಗಳು ಮತ್ತು ಬಾತ್ರೂಮ್ ಟೈಲ್ಸ್‌ಗಳ ಮೇಲಿನ ನೀರಿನ ಕಲೆ (Hard water stains) ಗಳು ನೋಡಲು ಅಂದಗೆಡಿಸುತ್ತವೆ. ಆಪಲ್ ಸೈಡರ್ ವಿನೆಗರ್ ಮತ್ತು ನಿಂಬೆ ರಸದ ಮಿಶ್ರಣವು ಈ ಖನಿಜ ನಿಕ್ಷೇಪಗಳನ್ನು ಕರಗಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಕಲೆ ಇರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಿ 10-15 ನಿಮಿಷ ಬಿಟ್ಟು, ನಂತರ ಬಟ್ಟೆಯಿಂದ ಉಜ್ಜಿ ಒರೆಸಿದರೆ ಮೂಲ ಹೊಳಪು ಮರಳಿ ಬರುತ್ತದೆ.
ಟೈಲ್ಸ್ ಗ್ಯಾಪ್ ಕ್ಲೀನ್ ಮಾಡಲು ಬೇಕಿಂಗ್ ಸೋಡಾ
ಬಾತ್ರೂಮ್ ಮತ್ತು ಅಡುಗೆಮನೆಯ ಟೈಲ್ಸ್‌ಗಳ ಮಧ್ಯದ ಗ್ಯಾಪ್‌ನಲ್ಲಿ ಕೊಳೆ ಶೇಖರಣೆಯಾಗಿ ಕಪ್ಪಾಗಿರುತ್ತದೆ. ಇದನ್ನು ಸ್ವಚ್ಛಗೊಳಿಸಲು ಬೇಕಿಂಗ್ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್‌ನ ಪೇಸ್ಟ್ ತಯಾರಿಸಿ. ಹಳೆಯ ಟೂತ್ ಬ್ರಷ್ ಬಳಸಿ ಈ ಪೇಸ್ಟ್ ಅನ್ನು ಟೈಲ್ಸ್ ಗ್ಯಾಪ್‌ಗಳಿಗೆ ಹಚ್ಚಿ ನಿಧಾನವಾಗಿ ಉಜ್ಜಿ. ಇದು ಕೊಳೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ, ಫಂಗಸ್ ಬೆಳೆಯದಂತೆ ತಡೆಯುತ್ತದೆ.
ಬಾತ್ರೂಮ್ ಫಿಟ್ಟಿಂಗ್‌ಗಳಿಗೆ ಬೇಕಿಂಗ್ ಸೋಡಾದ ಮ್ಯಾಜಿಕ್
ನಲ್ಲಿಗಳು ಮತ್ತು ಶವರ್‌ಹೆಡ್‌ಗಳ ಮೇಲಿನ ಜಿಡ್ಡು ತೆಗೆಯಲು ಬೇಕಿಂಗ್ ಸೋಡಾ ರಾಮಬಾಣ. ಸ್ವಲ್ಪ ಬೇಕಿಂಗ್ ಸೋಡಾ ಹಾಗೂ ಡಿಶ್ ವಾಶ್ ಲಿಕ್ವಿಡ್ ಸೇರಿಸಿ ಸ್ಪಾಂಜ್‌ನಿಂದ ಉಜ್ಜಿದರೆ ಕಠಿಣ ಕಲೆಗಳು ನಿವಾರಣೆಯಾಗಿ ಫಿಟ್ಟಿಂಗ್‌ಗಳು ಹೊಳೆಯುತ್ತವೆ.
ಡಿಸ್‌ಇನ್‌ಫೆಕ್ಟಂಟ್ ಬಳಸಿ ಸ್ಯಾನಿಟೈಸ್ ಮಾಡಿ
ಯುಗಾದಿಗೆ ಅತಿಥಿಗಳು ಬರುವ ಮುನ್ನ ಮನೆಯೆಲ್ಲಾ ಕ್ರಿಮಿನಾಶಕದಿಂದ (Disinfectant) ಶುಚಿಯಾಗುವುದು ಅಗತ್ಯ. ಅಡುಗೆಮನೆ, ಹಾಲ್ ಮತ್ತು ಸ್ನಾನಗೃಹದ ಮೇಲ್ಮೈಗಳನ್ನು ಉತ್ತಮ ಕ್ರಿಮಿನಾಶಕ ದ್ರಾವಣದಿಂದ ಒರೆಸಿ. ಇದು ಕೀಟಗಳು ಮತ್ತು ಬ್ಯಾಕ್ಟೀರಿಯಾಗಳನ್ನು ದೂರವಿಡುತ್ತದೆ.
ದೇವರ ಮನೆ ಹಾಗೂ ವಿಗ್ರಹಗಳ ಹೊಳಪು ಹೆಚ್ಚಿಸಿ
ಯುಗಾದಿ ಹಬ್ಬದ ದಿನ ಪೂಜೆಗೆ ವಿಶೇಷ ಮಹತ್ವವಿದೆ. ಹೀಗಾಗಿ ದೇವರ ಮನೆ ಸ್ವಚ್ಛತೆ ಅತಿ ಮುಖ್ಯ. ತಾಮ್ರ ಮತ್ತು ಹಿತ್ತಾಳೆಯ ವಿಗ್ರಹಗಳು ಕಪ್ಪಾಗಿದ್ದರೆ, ಸಿಟ್ರಿಕ್ ಆಸಿಡ್, ಉಪ್ಪು ಅಥವಾ ಹುಣಸೆಹಣ್ಣು ಬಳಸಿ ಉಜ್ಜಿ ತೊಳೆಯಿರಿ. ಇದರಿಂದ ವಿಗ್ರಹಗಳು ಹೊಸದರಂತೆ ಕಂಗೊಳಿಸುತ್ತವೆ.
ಫ್ಯಾನ್ ಮತ್ತು ಲೈಟ್‌ಗಳ ಮೇಲಿನ ಜೇಡರಬಲೆ ನಿವಾರಣೆ
ಮಾವಿನ ತೋರಣ ಕಟ್ಟುವ ಮುನ್ನ ಮನೆಯ ಮೇಲ್ಛಾವಣಿ, ಲೈಟ್ಸ್ ಹಾಗೂ ಫ್ಯಾನ್‌ಗಳ ಮೇಲಿರುವ ದೂಳು ಮತ್ತು ಜೇಡರಬಲೆಗಳನ್ನು ಒದ್ದೆ ಬಟ್ಟೆ ಅಥವಾ ಉದ್ದನೆಯ ಡಸ್ಟರ್ ಬಳಸಿ ಸ್ವಚ್ಛಗೊಳಿಸಿ. ಇದು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ, ಗಾಳಿಯ ಗುಣಮಟ್ಟವನ್ನೂ ಸುಧಾರಿಸುತ್ತದೆ.
ಹಾಸಿಗೆ ಕ್ಲೀನಿಂಗ್
ಹಾಸಿಗೆಗಳಲ್ಲಿ ಕಣ್ಣಿಗೆ ಕಾಣದ ದೂಳು ಮತ್ತು ಕೀಟಾಣುಗಳಿರುತ್ತವೆ. ಇದರ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಉದುರಿಸಿ, ವಿನೆಗರ್ ಸ್ಪ್ರೇ ಮಾಡಿ ಒಂದೆರಡು ಗಂಟೆಗಳ ಕಾಲ ಬಿಡಿ. ನಂತರ ವ್ಯಾಕ್ಯೂಮ್ ಕ್ಲೀನರ್ (Vacuum cleaner) ಬಳಸಿ ಸ್ವಚ್ಛಗೊಳಿಸಿದರೆ, ವಾಸನೆ ಮತ್ತು ದೂಳು ಸಂಪೂರ್ಣ ನಿವಾರಣೆಯಾಗುತ್ತದೆ.
ಕರ್ಟನ್ ಮತ್ತು ಸೋಫಾಗಳ ಸ್ವಚ್ಛತೆ
ಹಬ್ಬಕ್ಕೆ ಮನೆ ಹೊಸದಾಗಿ ಕಾಣಲು ಸೋಫಾ ಹಾಗೂ ಕರ್ಟನ್‌ಗಳ ಸ್ವಚ್ಛತೆ ಮುಖ್ಯ. ಸಾಧ್ಯವಾದಷ್ಟು ಹೊಸ ಕರ್ಟನ್‌ಗಳನ್ನು ಹಾಕಿ ಅಥವಾ ಹಳೆಯದನ್ನು ಫ್ಯಾಬ್ರಿಕ್ ಸಾಫ್ಟ್‌ನರ್ ಬಳಸಿ ತೊಳೆಯಿರಿ. ಸೋಫಾಗಳನ್ನು ವ್ಯಾಕ್ಯೂಮ್ ಮಾಡಿ. ಇದರಿಂದ ಹಾಲ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.
ಈ ಎಲ್ಲಾ ಸ್ವಚ್ಛತಾ ಕಾರ್ಯಗಳ ಜೊತೆಗೆ, ಜಿರಳೆ ಅಥವಾ ಇರುವೆಗಳ ಕಾಟವಿದ್ದರೆ ಪ್ರೊಫೆಷನಲ್ ಪೆಸ್ಟ್ ಕಂಟ್ರೋಲ್ (Pest control) ಮಾಡಿಸುವುದು ಒಳಿತು. ಈ ಸರಳ ಹ್ಯಾಕ್ಸ್‌ಗಳನ್ನು ಬಳಸಿ ನಿಮ್ಮ ಮನೆಯನ್ನು ಯುಗಾದಿಗೆ ಸಿದ್ಧಗೊಳಿಸಿ, ಹೊಸ ವರುಷವನ್ನು ಸಂತಸದಿಂದ ಸ್ವಾಗತಿಸಿ.












Click it and Unblock the Notifications