ಮುಂಬಯಿಯಲ್ಲಿ ಕನ್ನಡ ಡಿಂಡಿಮ ಬಾರಿಸಿದ ಜಿ. ವಿ. ರಂಗಸ್ವಾಮಿ
- ಡಾ।। ‘ಜೀವಿ’ ಕುಲಕರ್ಣಿ, ಮುಂಬಯಿ
jeevi@vsnl.com

ರೌದ್ರಿ ನಾಮ ಸಂವತ್ಸರದ ಫಾಲ್ಗುಣ ಬಹುಳ ದ್ವಾದಶಿಯ ದಿನ (5.4.1921) ರಂಗಸ್ವಾಮಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಗರ್ಗೇಶ್ವರಿ ವಾರಣಾಶಯ್ಯ, ತಾಯಿ ಶ್ರೀಮತಿ ನರಸಮ್ಮ. ಮೈಸೂರಿನ ಬನುಮಯ್ಯ ಹೈಸ್ಕೂಲಿನಲ್ಲಿ ಇವರ ವಿದ್ಯಾಭ್ಯಾಸ. ತಮ್ಮ ಹದಿನೆಂಟರ ಹರಯದಲ್ಲಿ ಅಣ್ಣಂದಿರಾದ ಈಶ್ವರ ಮತ್ತು ವೆಂಕಟರಾಮ್ ಅವರೊಂದಿಗೆ ತಮ್ಮ ಭವಿಷ್ಯ ರೂಪಿಸಲು ಮುಂಬೈಗೆ ಬಂದರು (1939). ಮೊದಲು ‘ಮೈಸೂರು ಕನ್ಸರ್ನ್ಸ್’ ಎಂಬ ಪ್ರಾವಿಜನ್ ಹಾಗೂ ಜನರಲ್ ಸ್ಟೋರ್ಸ್ ಪ್ರಾರಂಭಿಸಿದರು. ಮೊದ ಮೊದಲು ಇವರು ಜಿ.ವಿ.ಈಶ್ವರ ಸಹೋದರರೆಂದೇ ಪ್ರಸಿದ್ಧರಾದರು. ತಿಂಗಳಿಗೆ ಮನೆಗೆ ಬೇಕಾದ ಪಟ್ಟಿಯನ್ನು ಕೊಟ್ಟರೆ ಸಾಕು ಮನೆಗೆ ತಲುಪಿಸುವ ವಿನೂತನ ಪದ್ಧತಿಯನ್ನು 58 ವರ್ಷಗಳ ಹಿಂದೆಯೇ ಪ್ರಾರಂಭಿಸಿದ ಕೀರ್ತಿ ಈ ಸೋದರರಿಗೆ ಸೇರಿದ್ದು. ಆ ಕಾಲದಲ್ಲಿ ಅವರು ಒಂದು ಡೆಲಿವರಿ ವ್ಯಾನ್ ಬಳಸಿ ವಸ್ತುಗಳ ಸರಬರಾಜು ಮಾಡುತ್ತಿದ್ದರು. ನಂತರ ‘ಮೈಸೂರು ಬೋರ್ಡಿಂಗ್ ಎಂಡ್ ಲಾಡ್ಜಿಂಗ್’, ‘ಮೈಸೂರು ಟ್ರಾನ್ಸ್‌ಪೋರ್ಟ್’ ಹಾಗೂ ‘ಮೈಸೂರು ಟೇಲರ್ಸ್’ ಎಂಬ ಹೆಸರಿನ ಸಂಸ್ಥೆಗಳನ್ನು ಅವರು ಆರಂಭಿಸಿದರು.
1948ರಲ್ಲಿ ಸೋದರರು ಮೈಸೂರು ಪ್ರಿಂಟಿಂಗ್ ಪ್ರೆಸ್ ಪ್ರಾರಂಭಿಸಿದರು. ಅದನ್ನು ನಡೆಸುವ ಹೊಣೆ ರಂಗಸ್ವಾಮಿಯವರದಾಗಿತ್ತು. ಸ್ವಲ್ಪೇ ಸಮಯದಲ್ಲಿ ಇವರ ಪ್ರೆಸ್ಸು ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಪರಿಣಮಿಸಿತು. ಕನ್ನಡಾಭಿಮಾನಿಗಳ ಒತ್ತಾಸೆಯ ಫಲವಾಗಿ ಅವರು ‘ಆದರ್ಶ’ವೆಂಬ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಹೊರನಾಡಿಗೆ, ಮುಂಬೈಗೆ, ಮಾತ್ರ ಸೀಮಿತವಾಗಿ ಉಳಿಯದೇ ಕರ್ನಾಟಕದ ಒಳನಾಡಿನಲ್ಲೂ ಖ್ಯಾತಿ ಗಳಿಸಿತು. ಕುಮಾರಿ ದೋಶಿ ವೆಂಕಟಲಕ್ಷ್ಮಿಯ ಪ್ರಥಮ ಕಥೆ ‘ವಿಜಯ’ ಪ್ರಕಟವಾದದ್ದು ಈ ಪತ್ರಿಕೆಯಲ್ಲಿ. ಇದೇ ಲೇಖಕಿ ಮುಂದೆ ಅನುಪಮಾ ನಿರಂಜನ ಹೆಸರಿನಲ್ಲಿ ಖ್ಯಾತಿ ಪಡೆದಳು. ಮಳಿಯ ತಿಮ್ಮಪ್ಪಯ್ಯ, ಗೋವಿಂದ ಪೈ, ಮಿರ್ಜಿ ಅಣ್ಣಾರಾಯ, ಸಾಲಿ ರಾಮಚಂದ್ರರಾಯರು, ಅ.ನ.ಕೃಷ್ಣರಾಯ, ಕು.ಶಿ.ಹರಿದಾಸಭಟ್ಟ, ಹ.ವೆಂ.ನಾಗರಾಜರಾಯ, ವಿ.ಸೀತಾರಾಮಯ್ಯ, ಚದುರಂಗ, ಬಸವರಾಜ ಕಟ್ಟೀಮನಿ, ಚಲನಚಿತ್ರ ಸಾಹಿತಿಯಾದ ಉದಯಶಂಕರ, ಕುಮಾರ ವೆಂಕಣ್ಣ, ಸಿಂಪಿ ಲಿಂಗಣ್ಣ, ಸೇವ ನೇಮಿರಾಜ ಮಲ್ಲ ಮುಂತಾದ ಲೇಖಕರು ಈ ಪತ್ರಿಕೆಗೆ ಬರೆಯುತ್ತಿದ್ದರು. ಈ ಪತ್ರಿಕೆ ಮೂರು ವರ್ಷ ಮಾತ್ರ ಬದುಕಿತ್ತು. ಈ ನಿಮಿತ್ತದಿಂದ ಅನೇಕ ಸಾಹಿತಿಗಳ ನಿಕಟ ಪರಿಚಯ ರಂಗಸ್ವಾಮಿಯವರಿಗಾಯ್ತು. ನೂರಾರು ಸಿಹಿ-ಕಹಿ ಪ್ರಸಂಗ, ಸಾಹಿತಿಗಳ ಬಗ್ಗೆ ರೋಚಕ ಕಥೆ, ರಂಗಸ್ವಾಮಿಯವರ ಬಾಯಿಯಿಂದ ಕೇಳಬೇಕು.
ಮೈಸೂರು ಪ್ರಿಂಟಿಂಗ್ ಪ್ರೆಸ್ಸು ಅಂದಿನ ಮುಂಬೈ ಸರಕಾರದ ಮಾನ್ಯತೆ ಪಡೆದ ಪ್ರಥಮ ಕನ್ನಡ ಅಚ್ಚುಕೂಟವಾಗಿತ್ತು. ಕನ್ನಡ, ತಮಿಳು, ಗುರುಮುಖಿ (ಪಂಜಾಬಿ), ಇಂಗ್ಲೀಷ್ ಭಾಷೆಗಳಲ್ಲಿ ಮುದ್ರಣ ಕಾರ್ಯ ಕೈಗೊಳ್ಳುತ್ತಿತ್ತು. ಅಲ್ಲದೆ ನಗರಪಾಲಿಕೆ ಆಡಳಿತದಲ್ಲಿರುವ ಸುಮಾರು ಎಂಬತ್ತು ಶಾಲೆಗಳ ಪಠ್ಯಸಾಮಗ್ರಿ, ಪ್ರಶ್ನೆ ಪತ್ರಿಕೆ ಮುಂತಾದವುಗಳ ಮುದ್ರಣ ಕಾರ್ಯ ಕೈಗೊಳ್ಳುತ್ತಿತ್ತು.
ಈಶ್ವರ ಸಹೋದರರು ಇನ್ನೊಂದು ಸಾಹಸಕ್ಕೆ ಕೈ ಹಾಕಿದರು. ಕನ್ನಡ ಚಲನಚಿತ್ರ ನಿರ್ಮಿಸುವ ಸಾಹಸ. ‘ಆಶಾ-ನಿರಾಶ’ ಎಂಬ ಚಿತ್ರ ಆ ಸಂಸ್ಥೆಯಿಂದ ಪ್ರಾರಂಭಗೊಂಡು ನಿರಾಶೆಯಲ್ಲಿ ಮುಕ್ತಾಯವಾಯಿತು (1956). ಅಮೀರಬಾಯಿ ಕರ್ನಾಟಕಿ, ಲತಾ ಮಂಗೇಶ್ಕರ್, ಮಹಮ್ಮದ್ ರಫಿ, ಹಿನ್ನಲೆ ಗಾಯಕರಿಂದ ಕನ್ನಡ ಹಾಡು ಹಾಡಿಸಿ ರೆಕಾರ್ಡಿಂಗ್ ಮಾಡಿದರು. ಈ ಚಿತ್ರದ ನಾಯಕ ಕಲ್ಯಾಣ ಕುಮಾರ್ ನಾಯಕಿ ವಿದ್ಯಾ ಹಾಗೂ ಇನ್ನೊಂದು ಮುಖ್ಯಪಾತ್ರದಲ್ಲಿ ಸಂಧ್ಯಾ (ಜಯಲಲಿತಾ ರವರ ಚಿಕ್ಕಮ್ಮ ಹಾಗೂ ತಾಯಿ, ಕ್ರಮವಾಗಿ). ಸಿನಿಮಾ ಸಾಹಸದಿಂದ ಆದ ನಷ್ಟದಿಂದಾಗಿ ಮೈಸೂರು ಬೋರ್ಡಿಂಗ್, ಮೈಸೂರು ಟೇಲರ್ಸ್, ಮೈಸೂರು ಟ್ರಾನ್ಸ್ ಪೋರ್ಟ್ ಹಾಗೂ ‘ಆದರ್ಶ’ ಪತ್ರಿಕೆಗಳನ್ನು ಮುಚ್ಚಬೇಕಾಯಿತು. ಅವರು ಪಟ್ಟ ಪಾಡು ಹಾಡಿನ ರೂಪದಲ್ಲಿ ಮಾತ್ರ ಉಳಿಯಿತು.
ಟಿ.ಪಿ.ಕೈಲಾಸಂ ಮುಂಬೈಯಲ್ಲಿದ್ದು ಕೆಲ ನಾಟಕಗಳನ್ನು ಬರೆದರು. ಅವರು ವಾಸ್ತವ್ಯ ಹೂಡಿದ್ದು ಈಶ್ವರ ಸಹೋದರರ ಮನೆಯಲ್ಲಿ. ಕೆಲ ನಾಟಕಗಳನ್ನು ಬರೆದುಕೊಳ್ಳುವ ಭಾಗ್ಯ ಇವರ ಪಾಲಿಗಿತ್ತು. ಆಗ ಟಿ.ಪಿ.ಕೈಲಾಸಂ ಭೇಟಿಗೆ ಬರುತ್ತಿದ್ದ ಹರೇಂದ್ರನಾಥ ಚಟ್ಟೋಪಾಧ್ಯಾಯ, ಕೆ.ಎ.ಅಬ್ಬಾಸ, ಆಚಾರ್ಯ ಪಿ.ಕೆ. ಅತ್ರೆಯವರೊಡನೆ ನಡೆದ ಸಂಭಾಷಣೆಗಳನ್ನು ಬಹುಕಾಲ ನೆನೆಸಿಕೊಳ್ಳುತ್ತಿದ್ದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗುವುದೆಂದರೆ ರಂಗಸ್ವಾಮಿಯವರಿಗೆ ಎಲ್ಲಿಲ್ಲದ ಅಭಿಮಾನ. ಸುಮಾರು 50 ಸಮ್ಮೇಳನಗಳಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದರು. ಮುಂಬೈಯಲ್ಲಿಯ 30ಕ್ಕೂ ಮಿಗಿಲಾದ ಕನ್ನಡ ಸಂಘ ಸಂಸ್ಥೆಗಳ ನಿಕಟ ಪರಿಚಯ ರಂಗಸ್ವಾಮಿಯವರಿಗಿತ್ತು. ‘ಕನ್ನಡ ಸಾಹಿತ್ಯ ಸಂಗೀತ ಕಲಾಕ್ಷೇತ್ರ’ವೆಂಬ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ರಂಗಸ್ವಾಮಿ ಒಬ್ಬರು. ಪ್ರಥಮ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಹಿರಿಯ ಸಾಹಿತಿಗಳ ಭಾಷಣ, ಹಿರಿಯ ಕಲಾವಿದರ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸುವಲ್ಲಿ ಈ ಸಂಸ್ಥೆ ದೊಡ್ಡ ಹೆಸರು ಗಳಿಸಿತು. ಮೈಸೂರು ಎಸೋಸಿಯೇಶನ್ ಮಾಟುಂಗಾ, ಕರ್ನಾಟಕ ಸಂಘ ಮಾಹಿಂ, ಮುಂಬಯಿ ಕನ್ನಡ ಸಂಘ ಮಾಟುಂಗಾ, ಆಸ್ಥಿಕ ಸಮಾಜ ರಾಮ ಮಂದಿರ ಮಾಟುಂಗಾ, ಶ್ರೀ ಶಂಕರ ಮಠ ಮಾಟುಂಗಾ, ಕರ್ನಾಟಕ ಸಂಘ ಡೋಂಬಿವಲಿ, ಕರ್ನಾಟಕ ಸಂಘ ಗೋರೇಗಾಂ, ಕರ್ನಾಟಕ ಸಂಘ ಮುಳುಂದ, ಕರ್ನಾಟಕ ಸಂಘ ಮದ್ರಾಸ್, ಕರ್ನಾಟಕ ಸಂಘ ದೆಹಲಿ, ಕರ್ನಾಟಕ ಸಾಹಿತ್ಯ ಮಂದಿರ ಹೈದ್ರಾಬಾದ್, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಹೊಯ್ಸಳ ಕರ್ನಾಟಕ ಸಂಘ ಮೈಸೂರು, ಷಣ್ಮುಖಾನಂದ ಫೈನ್ ಆರ್ಟ್ಸ್ ಸಂಗೀತ ಸಭಾ ಮುಂಬಯಿ ಮುಂತಾದ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಸ್ಥೆಗಳ ಆಜೀವ ಸದಸ್ಯರಾಗಿದ್ದರು, ಪೋಷಕರಾಗಿದ್ದರು. ಬ್ರಹನ್ ಮುಂಬಯಿ ಮುದ್ರಕರ ಸಂಘದ ಸದಸ್ಯರಾಗಿದ್ದರು.
ರಂಗಸ್ವಾಮಿಯವರ ಕನ್ನಡ ಅಭಿಮಾನ ಮೆಚ್ಚುವಂತಹದು. ಡೋಂಬಿವಲಿ ಮಂಜುನಾಥ ವಿದ್ಯಾಲಯದಲ್ಲಿ ಕನ್ನಡ ಮಾಧ್ಯಮದಿಂದ ಕಲಿತು ಎಸ್.ಎಸ್.ಸಿ. ಪರೀಕ್ಷೆಯಲ್ಲಿ ಉಚ್ಚ ಅಂಕ ಗಳಿಸಿದ ವಿದ್ಯಾರ್ಥಿಗೆ ನಗದು ಬಹುಮಾನ ಕೊಟ್ಟರು; ಕನ್ನಡದಲ್ಲೇ ಪತ್ರ ವ್ಯವಹಾರ ಮಾಡುತ್ತಿದ್ದರು. ಕನ್ನಡ ಧ್ವನಿಸುರುಳಿ ಕೇಳುತ್ತಿದ್ದರು. ತಮ್ಮ ಮನೆಯ ಗೋಡೆಗೆ ಹಾಕಿದ ಗಡಿಯಾರದಲ್ಲಿ ಕನ್ನಡ ಅಂಕೆಯಿತ್ತು. ಮನೆಯ ಮುಂದೆ ಕನ್ನಡ ನಾಮಫಲಕ ಹಾಕಿದ್ದರು. (ಮುಂಬಯಿ ನಿವಾಸಿಗಳಿಗೆ ಇದೊಂದು ಹೊಸ ಸಂಗತಿ, ಕರ್ನಾಟಕದಲ್ಲಾಗಿದ್ದರೆ ಇದು ಸಾಮಾನ್ಯವಾಗಿರುತ್ತಿತ್ತು).
ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರದಾತೃಗಳಾಗಿದ್ದರು. ಅಲ್ಲದೆ 1990 ದಶಕದ ದಿನಗಳಲ್ಲೇ ರೂ.5000/- ನೀಡಿ ಅದರ ನಿಧಿಯಿಂದ ಮುಂಬೈಯಲ್ಲಿ ಅಥವಾ ತಮ್ಮ ಹುಟ್ಟೂರಾದ ಮೈಸೂರಿನಲ್ಲಿ ಹರಿದಾಸರ ಬಗ್ಗೆ ಇಲ್ಲವೆ ಭಕ್ತಿ ಸಾಹಿತ್ಯದ ಬಗ್ಗೆ ಅಥವಾ ಸಂಗೀತ ಕಲೆಯ ಬಗ್ಗೆ ಉಪನ್ಯಾಸ ಅಥವಾ ಕಮ್ಮಟ ನಡೆಸಲು ಮುಂದಾಗಿದ್ದರು.
1996ರ ಮಾರ್ಚ್ ಹದಿನೆಂಟರಂದು ಇವರ ಅಮೃತ ಮಹೋತ್ಸವ ಸದ್ದು ಗದ್ದಲವಿಲ್ಲದೆ ಮಾತುಂಗಾದ ಶಂಕರ ಮಠದಲ್ಲಿ ನಡೆಯಿತು. ಇವರದು ಸುಖೀ ಸಂಸಾರ. ಶ್ರೀಮತಿ ಶಾಂತಾ ರಂಗಸ್ವಾಮಿಗಳೇ ಇವರ ಎಲ್ಲ ಕೆಲಸಗಳಿಗೆ ಸ್ಫೂರ್ತಿ. ಮೂವರು ಮಕ್ಕಳು ವಿದ್ಯಾರಣ್ಯ, ರಮೇಶ, ಶುಭಾ. ಹಿರಿಯ ಮಗ ರೇಡಿಯೋ ಆಫೀಸರ್ ಆಗಿ ಹಡಗುಗಳಲ್ಲಿ ಕಂಪ್ಯೂಟರ್ ನೆಟ್‌ವರ್ಕ್ ಜೋಡಿಸುವ ಕೆಲಸಮಾಡುತ್ತಿದ್ದಾರೆ. ಎರಡನೆಯ ಮಗ ತಂದೆಯ ಉದ್ಯೋಗವನ್ನೇ ಬೆಳೆಸಿದರು. ಮುದ್ರಣ ಕೆಲಸದ ಜೊತೆ ಎಸ್.ಟಿ.ಡಿ./ಐ.ಎಸ್.ಡಿ., ಕಂಪ್ಯೂಟರ್, ಫ್ಯಾಕ್ಸ್, ಜೆರಾಕ್ಸ್ ಬಳಸುತ್ತಾರೆ. ಮಗಳು ಶುಭಾ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಹಿರಿಯ ಸಹಾಯಕರಾಗಿ ಬೆಂಗಳೂರಲ್ಲಿದ್ದಾಳೆ.
ರಂಗಸ್ವಾಮಿಯವರಿಗೆ 77 ವರ್ಷವಾಗಿದ್ದಾಗ, ಮೈಸೂರ್ ಪ್ರಿಂಟಿಂಗ್ ಪ್ರೆಸ್‌ಗೆ ಸುವರ್ಣ ವರ್ಷ. ಇದರಿಂದ ರಂಗಸ್ವಾಮಿಯವರಿಗೆ ಎಲ್ಲಿಲ್ಲದ ಹರ್ಷ. ಈ ಇಳಿವಯಸ್ಸಿನಲ್ಲೂ ಯಾವುದೇ ಕನ್ನಡ ಸಭೆ ಜರುಗಿದರೆ ಪ್ರೇಕ್ಷಕರ ಮೊದಲ ಸಾಲಿನಲ್ಲಿ ರಂಗಸ್ವಾಮಿ ಕುಳಿತಿರುತ್ತಿದ್ದರು. ಅವರ ಕನ್ನಡ ಪ್ರೇಮ ಅಳಿದಿರಲಿಲ್ಲ, ಉತ್ಸಾಹಕ್ಕೆ ಕುಂದಿರಲಿಲ್ಲ.
***
ರಂಗಸ್ವಾಮಿಯವರ ಆರೊಗ್ಯ ಉತ್ತಮವಾಗಿಲ್ಲದಿದ್ದರೂ ಸಹ ಅವರ ಕನ್ನಡ ಪ್ರೇಮ ಬಲವಾಗಿದ್ದರಿಂದ 1998, 1999 ರ ಸಾಹಿತ್ಯ ಸಮ್ಮೇಳನಕ್ಕೆ ಹಾಜರಾಗಿದ್ದರು. ಕನ್ನಡ ಸಾಹಿತ್ಯದ ಚರ್ಚೆಯೆಂದರೆ ಊಟ-ತಿಂಡಿ ಬಿಟ್ಟು ಭಾಗವಹಿಸುವಷ್ಟು ಹುಮ್ಮಸ್ಸು. ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಸಾಹಿತ್ಯದ ಚರ್ಚೆಗಿಂತ ಹೆಚ್ಚಾಗಿ ಅಲ್ಲಿಯ ಇತರ ವಿಷಯದ ವ್ಯಾಖ್ಯಾನ, ಸಾಹಿತಿಗಳೊಂದಿಗೆ, ಇತರ ಗಣ್ಯರೊಂದಿಗೆ ಅವರು ನಡೆಸಿದ ಸಂಭಾಷಣೆ, ಅಲ್ಲಿದ್ದ ಊಟ-ವಸತಿ ವ್ಯವಸ್ಥೆ, ಸಿಡಿದ ನಗೆ ಚಟಾಕಿಗಳನ್ನು ಕೇಳಲು ಅವರ ಮಿತ್ರರು ಮನೆಗೆ ಬರುತ್ತಿದ್ದರು. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಎಂ.ಎ. ಹಾಗೂ ಪಿ.ಎಚ್.ಡಿ. ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಇವರಿಂದ ಪ್ರಕಾಶನಗೊಳ್ಳದ ಕೆಲವು ಮಾಹಿತಿಗಾಗಿ ಇವರನ್ನು ಭೇಟಿಮಾಡುತ್ತಿದ್ದರು. ಹಲವು ಮಿತ್ರರು ಇವರನ್ನು ಚಲಿಸುವ ಜ್ಞಾನಭಂಡಾರವೆಂದು ಕರೆಯುತ್ತಿದ್ದರು.
ಸತತವಾಗಿ 52 ಸಾಹಿತ್ಯ ಸಮ್ಮೇಳನಕ್ಕೆ ಹಾಜರಾಗಿ ಒಂದು ದಾಖಲೆಯನ್ನೇ ಮಾಡಿದ ಇವರಿಗೆ ಅನಾರೋಗ್ಯದಿಂದಾಗಿ ಸನ್ 2000 ಹಾಗೂ 2001 ರ ಸಮ್ಮೇಳನದಲ್ಲಿ ಭಾಗವಹಿಸಲು ಆಗಲಿಲ್ಲ. ಆದರೆ ಸುದೈವವಶಾತ್ ಕನ್ನಡ ಟಿ.ವಿ.ಚಾನೆಲ್‌ಗಳ ಕೃಪೆಯಿಂದಾಗಿ ಸಮ್ಮೇಳನದ ನೇರ ಹಾಗೂ ನಂತರ ಎಲ್ಲಾ ಪ್ರಸಾರವನ್ನು ಚಾಚೂತಪ್ಪದೆ ವೀಕ್ಷಿಸಿ ತಮ್ಮ ವ್ಯಾಖ್ಯಾನ ಕೊಡುತ್ತಿದ್ದರು. ಹೆಚ್ಚಿಗೆ ಬರೆಯಲು ಆಗುತ್ತಿರಲಿಲ್ಲ ಹಾಗಾಗಿ ಬರೆಯುವುದನ್ನು ನಿಲ್ಲಿಸಿದ್ದರು. ಕಂಪ್ಯೂಟರ್ ತಂತ್ರಜ್ಞಾನ ಮಹಾಕ್ರಾಂತಿಯಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದ್ದರೂ ಸಹ ಕನ್ನಡದಲ್ಲಿ ‘ವಾಯ್ಸ್ ರೆಕೊಗ್ನಿಷನ್’ ತಂತ್ರಾಶ ಬರದೆ ಇದ್ದುದು ಇವರಿಗೆ ಬೇಸರವಾಗಿತ್ತು. ತಮ್ಮ ಹೇಳಿಕೆಯನ್ನು ರೆಕಾರ್ಡ್ ಮಾಡುವುದಕ್ಕಿಂತ ಹೆಚ್ಚಾಗಿ ಕೈಲಾಸಂರವರ ಎಷ್ಟೋ ನಾಟಕಗಳು (ಕೈಲಾಸಂ ತಮ್ಮ ಕೈಯ್ಯಾರೆ ಬರೆಯುವ ಸ್ಥಿತಿಯಲ್ಲಿ ಇಲ್ಲದ್ದಿದ್ದರೂ, ಅವರ ತಲೆಯಲ್ಲಿ ನಡೆಯುತ್ತಿದ್ದ ನಾಟಕಗಳ ಪಾತ್ರಗಳ ಸಂಭಾಷಣೆ ಸತತವಾಗಿ ಅವರ ಬಾಯಿಯಿಂದ ಹೊಮ್ಮುತ್ತಿದ್ದರೂ) ಸರಿಯಾದ ‘ರೈಟರ್’ ಒಬ್ಬರು ಇಲ್ಲದೆ ಅವು ಪ್ರಕಟಿತವಾಗದೇ ಹೋದವು. ಟಿ.ಪಿ.ಕೈಲಾಸಂ ಇದ್ದಾಗ ಇಂತಹ ‘ವಾಯ್ಸ್ ರೆಕೊಗ್ನಿಷನ್’ ತಂತ್ರಾಂಶ ಕನ್ನಡದಲ್ಲಿ ಇದ್ದಿದ್ದರೆ ಎಷ್ಟು ಉಪಯೋಗವಾಗುತ್ತಿತ್ತು ಎಂದು ರಂಗಸ್ವಾಮಿಯವರು ಪೇಚಾಡಿದ್ದುಂಟು. ಕನ್ನಡವನ್ನು ರಕ್ಷಿಸಲು ಬೇಕಾದ 10 ಅಂಶಗಳ ಕಾರ್ಯಕ್ರಮವನ್ನು ರಚಿಸಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಿದ್ದರು. ತಮ್ಮ ಮೂವರೂ ಮಕ್ಕಳನ್ನು ಮುಂಬಯಿಯಲ್ಲಿ ಕನ್ನಡ ಶಾಲೆಗೆ ಕಳುಹಿಸಿದ್ದರು. ಆದರೂ ‘ನಾನು ಕನ್ನಡ ಸೇನಾನಿಯಲ್ಲ, ಕೇವಲ ಒಬ್ಬ ಸೈನಿಕ’ ಎಂದು ಮಾತ್ರ ಪರಿಗಣಿಸಿ ಎನ್ನುತ್ತಿದ್ದರು.
ದಿನಾಂಕ ಜುಲೈ 30 2001ರಂದು (ಶ್ರಾವಣ ಶುದ್ಧ ಏಕಾದಶಿ) ಸೋಮವಾರ ಬೆಳಗಿನ ಜಾವ 5.00ರ ಸುಮಾರಿಗೆ ನಿದ್ದೆಯಲ್ಲೇ ಚಿರನಿದ್ರೆಗೈದರು, ಮುಂಬೈಯಲ್ಲಿ ಕನ್ನಡ ಡಿಂಡಿಮ ಬಾರಿಸಿದ ಈ ಜಿ.ವಿ.ರಂಗಸ್ವಾಮಿ ಅವರು.
(ಟಿಪ್ಪಣಿ: ಇದು ಪ್ರಾಧ್ಯಾಪಕ ಜಿ.ವಿ.ಕುಲಕರ್ಣಿಯವರು ಹಿಂದೆ ಬರೆದಿದ್ದ ಲೇಖನದ ಪರಿಷ್ಕೃತ ರೂಪ. ಜಿ.ವಿ.ರಂಗಸ್ವಾಮಿಯವರ ಬಗ್ಗೆ ಕೆಲವು ವಿಶೇಷ ವಿವರಗಳನ್ನೂ, 1998ರ ನಂತರದ ವಿಷಯವನ್ನು ಅವರ ಮಗ ಜಿ. ಆರ್. ವಿದ್ಯಾರಣ್ಯ ಅವರು ಒದಗಿಸಿದ್ದಾರೆ.)