Get Updates
Get notified of breaking news, exclusive insights, and must-see stories!

ಕವಿ ಸಮಯ : ಕೃಷ್ಣನನ್ನು ಗುರುವೆಂದು ಸ್ವೀಕರಿಸಿದ್ದೇ ತಪ್ಪಾಯಿತೇ

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎನ್ನುವುದನ್ನು ಒಪ್ಪುವ ವ್ಯಕ್ತಿ ಇವೆರಡರ ಪೈಕಿ ಒಂದನ್ನು ಆರಿಸಿಕೊಳ್ಳಬೇಕಾಗಿ ಬಂದಾಗ ಯಾವುದನ್ನು ಆಯ್ದುಕೊಳ್ಳಬೇಕು? ತಾಯಿಯನ್ನೇ ತಾಯಿನಾಡನ್ನೇ?

ಅವನು ತಾಯಿಗೆ ಒಬ್ಬನೇ ಮಗನಾಗಿದ್ದರೆ ತಾಯಿಯನ್ನು ಆರಿಸಿಕೊಳ್ಳಬೇಕು. ಅವನಿಗೆ ಸೋದರರಿದ್ದು ಅವರು ತಾಯಿಯ ಆರೈಕೆ ಮಾಡುತ್ತಾರೆ ಎಂಬ ನಂಬಿಕೆಯಿದ್ದರೆ ತಾಯಿನಾಡಿಗಾಗಿ ಹೊರಟು ನಿಲ್ಲಬೇಕು ಅನ್ನುವ ಉತ್ತರ ಮಹಾಭಾರತದ ಒಂದು ಆಖ್ಯಾನದಲ್ಲಿ ಸಿಗುತ್ತದೆ.

ಅರ್ಜುನನನ್ನು ಕಾಡಿದ ಪ್ರಶ್ನೆಯೂ ಇದೇ. ಆತ ತನ್ನವರನ್ನು ಕೊಲ್ಲುತ್ತೇನೆ ಎಂಬ ವಿಷಾದದಲ್ಲಿ ‘ವಿಸೃಜ್ಯ ಸಶರಂ ಚಾಪಮ್‌ ಶೋಕ ಸಂವಿಗ್ನಮಾನಸ'ನಾಗಿ ಕುಳಿತುಕೊಳ್ಳುತ್ತಾನೆ.

ಇದು ಮೊದಲನೆಯ ಅಧ್ಯಾಯ. ಇಲ್ಲಿರುವುದು ಕರುಣಾರಸ. ಎಲ್ಲವನ್ನೂ ಪ್ರೀತಿ, ದಯೆ ಮತ್ತು ಕರುಣೆಯಿಂದ ನೋಡುತ್ತಾನೆ ಅರ್ಜುನ. ಎರಡೂ ಸೇನೆಗಳ ನಡುವೆ ರಥವನ್ನು ನಿಲ್ಲಿಸು ಎಂದು ಹೇಳಿದ ಅರ್ಜುನನಿಗೆ ಹಾಗೆ ರಥ ನಿಂತಾಗ ಕಂಡದ್ದು ತನ್ನವರು. ಆದರೆ ಕಣ್ಣಿಲ್ಲದ ಧೃತರಾಷ್ಟ್ರನಿಗೆ ಒಳಗಣ್ಣೂ ಇಲ್ಲ ಅನ್ನುವುದನ್ನೂ ಭಗವದ್ಗೀತೆ ಸೂಚಿಸುತ್ತದೆ. ಯಾಕೆಂದರೆ ಆತನಿಗೆ ಯುದ್ಧೋತ್ಸಾಹದಲ್ಲಿ ನೆರೆದಿರುವವರು ತಮ್ಮ ಸಂಬಂಧಿಗಳು ಎನ್ನುವ ಪರಿವೆಯೇ ಇಲ್ಲ. ಆತ ತೀರಾ ನಿರ್ಲಿಪ್ತನಂತೆ, ಇರಾಕ್‌-ಇರಾನ್‌ ಯುದ್ಧ ಏನಾತ್ರೀ? ಎಂದು ಕೇಳುವ ಹುಬ್ಬಳ್ಳಿಯವನಷ್ಟೇ ನಿರ್ಭಾವುಕವಾಗಿ ಸಂಜಯನ ಹತ್ತಿರ ಕೇಳುತ್ತಾನೆ.

ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಸಮವೇತಾ ಯುಯುತ್ಸವಃ।
ಮಾಮಕಾಃ ಪಾಂಡವಾಶ್ಜೆೈವ
ಕಿಮಕುರ್ವತ ಸಂಜಯ।।

ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಸನ್ನದ್ಧರಾದ ಪಾಂಡವರು ಮತ್ತು ನಮ್ಮವರು ಏನು ಮಾಡಿದರು? ಅದಕ್ಕಿಂತ ಹೆಚ್ಚಿನ ಆಸಕ್ತಿಯೂ ಆತನಿಗಿಲ್ಲ. ಹಾಗೆ ನೋಡಿದರೆ ಧೃತರಾಷ್ಟ್ರನ ವಯಸ್ಸು ಮತ್ತು ಮನಸ್ಥಿತಿಯನ್ನು ಊಹಿಸಿದರೆ ಅರ್ಜುನಿಗಿಂತ ಹೆಚ್ಚಿನ ವಿಷಾದ ಅವನಿಗೆ ಆಗಬೇಕಾಗಿತ್ತು. ಪಾಪಪ್ರಜ್ಞೆ ಇರಬೇಕಾದದ್ದು ಆತನಲ್ಲಿಯೇ. ಅದೆಲ್ಲ ಇಲ್ಲದಿದ್ದ ಕಾರಣಕ್ಕೇ ಆತನನ್ನು ಕುರುಡನೆಂದು ವ್ಯಾಸರು ಚಿತ್ರಿಸಿರಬೇಕು!

ಅರ್ಜುನನ ಜೀವನ ಪ್ರೀತಿಯನ್ನೂ ಮಾನವೀಯತೆಯನ್ನೂ ತನ್ನವರನ್ನು ಕೊಲ್ಲಲಾರೆ ಎನ್ನುವ ಸದ್ಭಾವನೆಯನ್ನೂ ಶ್ರೀಕೃಷ್ಣನ ಒಂದೇ ಮಾತಿನ ಮೂಲಕ ತಳ್ಳಿಹಾಕುತ್ತಾರೆ ವ್ಯಾಸರು. ಶ್ರೀಕೃಷ್ಣನಿಗೆ ಅರ್ಜುನನ ವಿಷಾದದಲ್ಲಿ ಅಂಥ ವಿಶೇಷವೇನೂ ಕಾಣಿಸುವುದಿಲ್ಲ. ಅವನ ಪಾಲಿಗೆ ಅದು ಕೆಟ್ಟ ಹೆಸರನ್ನು ತರುವಂಥ ವರ್ತನೆ. ಅದೊಂದು ಖಿನ್ನತೆ. ಕ್ಷುದ್ರ ಹೃದಯದೌರ್ಬಲ್ಯ. ಕ್ಲೈಬ್ಯ.

ಅದೇ ಅರ್ಜುನನ ಮೇಲೆ ಕೃಷ್ಣ ಪ್ರಯೋಗಿಸುವ ಮೊದಲ ಬಾಣ. ಅರ್ಜುನನ ವರ್ತನೆಯನ್ನು ಆತ ಅಧೈರ್ಯ ಅನ್ನುತ್ತಾನೆ. ಅಳುಕು ಎಂದು ಹೀಯಾಳಿಸುತ್ತಾನೆ. ಕರುಣೆ ಮತ್ತು ಹೇಡಿತನದ ನಡುವಿನ ಗೆರೆ ತುಂಬ ತೆಳು. ಕ್ಷಮೆ ಮತ್ತು ಅಧೈರ್ಯದ ನಡುವಿನ ಗಡಿರೇಖೆಯೂ ಅಷ್ಟೇ ತೆಳು.

ಆದರೆ ಅದರಿಂದೇನೂ ಅರ್ಜುನ ವಿಚಲಿತನಾಗುವುದಿಲ್ಲ. ಅವನ ಮುಂದಿನ ವಾದದಲ್ಲಿ ಅರ್ಥವಿದೆ, ಭಯವಿದೆ. ಪೂಜಾರ್ಹರಾದ ಬಂಧುಗಳನ್ನು ಕೊಂದರೆ ಅದರಿಂದ ದೊರಕುವ ಭೋಗಗಳೂ ರಕ್ತ ಸಿಕ್ತವಾಗುತ್ತವೆ- ಭೋಗಾನ್‌ ರುರಪ್ರದಿಗ್ಧಾನ್‌- ಎನ್ನುತ್ತಾನೆ ಆತ. ಅದರ ಜೊತೆಗೇ ಆತ ಇನ್ನೊಂದು ಮಾತನ್ನೂ ಹೇಳುತ್ತಾನೆ. ಕೌರವ ಮತ್ತು ಪಾಂಡವರಲ್ಲಿ ಯಾರ ಶಕ್ತಿ ಹೆಚ್ಚಿದೆಯೋ ಅನ್ನುವುದು ಗೊತ್ತಿಲ್ಲ. ನಾವು ಗೆಲ್ಲುತ್ತೇವೋ ಸೋಲುತ್ತೇವೋ ತಿಳಿದಿಲ್ಲ. ಆದರೆ ಯಾರನ್ನು ಕೊಂದರೆ, ಆ ನಂತರ ನಮ್ಮ ಬದುಕಿಗೆ ಅರ್ಥವೇ ಇರುವುದಿಲ್ಲವೋ ಅಂಥವರನ್ನು ಕೊಲ್ಲುವುದಕ್ಕೆ ನಾವು ಸಿದ್ಧರಾಗಿದ್ದೇವಲ್ಲ. ಅದಕ್ಕಿಂತ ದುರಂತ ಮತ್ತೊಂದಿಲ್ಲ.

ಅಷ್ಟು ಹೇಳಿ ಅರ್ಜುನ ರಥದಿಂದಿಳಿದು ಹೋಗಿಬಿಡಬಹುದಾಗಿತ್ತು. ಆದರೆ ಅವನ ದಯೆಯನ್ನೂ ಧರ್ಮದ ವಿಚಾರದಲ್ಲಿ ಬೋಧಿಸುವುದಕ್ಕೆ ಭಗವದ್ಗೀತೆ ಬಳಸಿಕೊಂಡಿದೆ. ಇನ್ನೇನು ಯುದ್ಧ ಶುರುವಾಗಬೇಕು ಅನ್ನುವಷ್ಟರಲ್ಲಿ ಒಂದು ಆ್ಯಂಟಿ ಕ್ಲೈಮ್ಯಾಕ್ಸ್‌ ತಂತ್ರವನ್ನು ತಂದಿಟ್ಟು ಕುತೂಹಲ ತುಂಬುವ ಕಥನ ತಂತ್ರ, ಕೇವಲ ತಂತ್ರವಾಗಷ್ಟೇ ಕುತೂಹಲಕಾರಿ.

ಅರ್ಜುನ ಒಂದು ನಿರುದ್ಯಿಶ್ಯ, ಅನಗತ್ಯ ಮತ್ತು ಅಪಾಯಕಾರಿ ಪ್ರಶ್ನೆಯನ್ನು ಕೇಳುತ್ತಾನೆ. ಇಡೀ ಗೀತೋಪದೇಶಕ್ಕೆ ಮೂಲವಾಗುವುದು ಅದೇ ಪ್ರಶ್ನೆ. ಯಾರನ್ನೂ ಏನನ್ನ ಸಲಹೆ ಕೇಳಬಾರದು ಎಂದು ಸೂಚಿಸುವಂತಿದೆ ಅದು.

ಅರ್ಜುನ ಕೇಳುತ್ತಾನೆ;

ಕಾರ್ಪಣ್ಯದೋಷೋಪಹತಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮಸಂಮೂಢಚೇತಾಃ।

ಧರ್ಮಸಂಮೂಢ ಮನಸ್ಸಿನವನಾಗಿ ನಾನು ಕೇಳುತ್ತಿದ್ದೇನೆ. ಇಂಥ ಸ್ಥಿತಿಯಲ್ಲಿ ನಾನು ಏನು ಮಾಡಬೇಕು, ಯಾವುದು ನನಗೆ ಒಳ್ಳೆಯದು. ನನಗೇನೂ ತೋಚುತ್ತಿಲ್ಲ. ನಾನು ನಿನ್ನ ಶಿಷ್ಯ. ನೀನೇ ಹೇಳಬೇಕು.

ಒಂದೊಂದು ಸಲ ನಮ್ಮ ದುಃಖವನ್ನು ಯಾವ ಸರಿಸಂಪತ್ತು ಸೌಭಾಗ್ಯವೂ ಪರಿಹರಿಸಲಾರದು ಅಂತ ನಮಗೆ ಅನ್ನಿಸುತ್ತದೆಯಲ್ಲ. ಅರ್ಜುನನಿಗೂ ಆ ಕ್ಷಣ ಹಾಗನ್ನಿಸಿತ್ತೋ ಏನೋ? ಆತ ಹೇಳುತ್ತಾನೆ;

ನನ್ನನ್ನು ಬಾಧಿಸುತ್ತಿರುವ ಈ ದುಃಖವನ್ನು ಹೊಡೆದೋಡಿಸುವ ಮಾರ್ಗವೇ ನನಗೆ ತೋಚುತ್ತಿಲ್ಲ. ಇಡೀ ಜಗತ್ತೇ ನನ್ನದಾದರೂ ಈ ದುಃಖ ನೀಗುತ್ತದೆ ಎಂಬ ಭರವಸೆ ನನಗಿಲ್ಲ.

ಇಲ್ಲಿ ಒಂದು ಪುಟ್ಟ ಕಾಮೆಂಟರಿ ಬರುತ್ತದೆ. ಇದೆಲ್ಲವನ್ನೂ ಧೃತರಾಷ್ಟ್ರನಿಗೆ ವರದಿ ಮಾಡುತ್ತಿರುವ ಸಂಜಯನ ಮಾತುಗಳಲ್ಲಿ ವ್ಯಾಸರು ಏನಾಯಿತು ಅನ್ನುವುದನ್ನು ಹೇಳುತ್ತಾರೆ;

ನಾನು ಯುದ್ಧ ಮಾಡುವುದಿಲ್ಲ ಎಂದು ಶತ್ರುಗಳನ್ನು ಸೋಲಿಸಬಲ್ಲ ಅರ್ಜುನನು ಕೃಷ್ಣನಿಗೆ ಹೇಳಿ ಸುಮ್ಮನಾದನು.

ಅರ್ಜುನನು ಹೀಗೆ ಎರಡೂ ಸೇನೆಗಳ ನಡುವೆ ನಿಂತು ಬಂಧುಬಾಂಧವರನ್ನು ಕೊಲ್ಲಲಾರೆ ಎಂದು ಆರ್ದ್ರನಾಗಿ ಹೇಳಿಕೊಳ್ಳುತ್ತಿರುವ ಹೊತ್ತಿಗೆ ಉಳಿದವರಿಗೆ ಏನನ್ನಿಸಿತ್ತು? ಭೀಷ್ಮದ್ರೋಣರಿಗೂ ಹಾಗನ್ನಿಸಿತ್ತೇ? ಅವರು ಅರ್ಜುನನ ಈ ಸ್ಥಿತಿಯನ್ನು ಕಂಡು ಹಾಸ್ಯಮಾಡಿ ನಕ್ಕರೇ? ಮರುಗಿದರೇ? ಸಹಾನುಭೂತಿ ವ್ಯಕ್ತಪಡಿಸಿದರೇ?

ಅದನ್ನು ಮಹಾಭಾರತ ಹೇಳುವುದಿಲ್ಲ. ಅದು ಕೇವಲ ಅರ್ಜುನ ಮತ್ತು ಕೃಷ್ಣ ಇಬ್ಬರ ನಡುವೆ ನಡೆದ ಹೃದಯ ಸಂವಾದವಷ್ಟೇ ಆಗಿತ್ತೇ?

(ಸ್ನೇಹ ಸೇತು: ಓ ಮನಸೇ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+