• search
For Quick Alerts
ALLOW NOTIFICATIONS  
For Daily Alerts

  ವಿಠ್ಠಲಮೂರ್ತಿ ಕಾಲಂ : ಸಂಕಟ ಹಾಗೂ ಸಂತಸದ ಮಧ್ಯೆ ಸಿದ್ದು

  By ಆರ್.ಟಿ. ವಿಠ್ಠಲಮೂರ್ತಿ
  |

  ಕರ್ನಾಟಕದ ರಾಜಕೀಯದ ಬಗ್ಗೆ ಅತ್ಯಂತ ನಿಖರವಾಗಿ, ಅಧಿಕಾರಯುತವಾಗಿ ಬರೆಯಬಲ್ಲಂಥ ಕೆಲವೇ ಪತ್ರಕರ್ತರಲ್ಲಿ ಆರ್ ಟಿ ವಿಠ್ಠಲಮೂರ್ತಿ ಒಬ್ಬರು. ಅವರ ಲೇಖನಗಳನ್ನು ಓದುಗರು ಮಾತ್ರ ಅತ್ಯಂತ ಆಸಕ್ತಿಯಿಂದ ಓದುವುದಿಲ್ಲ, ರಾಜಕಾರಣಿಗಳು ಕೂಡ ಅತ್ಯಂತ ಕೂತೂಹಲಭರಿತ ಎಚ್ಚರಿಕೆಯಿಂದ ಓದುತ್ತಾರೆ. ಕರ್ನಾಟಕ ರಾಜಕೀಯದ ಆಳಅಗಲವನ್ನು ಬಲ್ಲ ವಿಠ್ಠಲಮೂರ್ತಿ ಅವರ ಅಂಕಣ ಒನ್ಇಂಡಿಯಾ ಕನ್ನಡದಲ್ಲಿ ಆರಂಭವಾಗುತ್ತಿದೆ. ರಾಜಕೀಯ ಲೇಖನಗಳ ಸಮೃದ್ಧ ಭೋಜನಕ್ಕೆ ಸಿದ್ಧರಾಗಿ.

  ***
  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಸಂತಸದ ಸಂಗತಿ, ಮತ್ತೊಂದು ಸಂಕಟದ ಸಂಗತಿ ಎದುರಾಗಿದೆ.

  ಕುತೂಹಲದ ಸಂಗತಿ ಎಂದರೆ, ಸಂಕಟದ ಸಂಗತಿಯಿಂದ ಪಾರಾಗುವುದಷ್ಟೇ ಅಲ್ಲ, ಸಂತಸದ ಸಂಗತಿಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಅವರ ಮುಂದಿದೆ. ಮತ್ತು ಅವರು ಈ ಎರಡು ಅಂಶಗಳನ್ನು ಹೇಗೆ ಪರಿವರ್ತಿಸಿಕೊಳ್ಳುತ್ತಾರೆ ಎಂಬುದು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ನ ಭವಿಷ್ಯವನ್ನು ನಿರ್ಧರಿಸಲಿದೆ.

  ಅಂದ ಹಾಗೆ ಸಂತಸದ ಸಂಗತಿ ಎಂದರೆ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು ಐದು ಬಾರಿ ಸರ್ವೇ ಮಾಡಿಸಿದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ವರದಿ ಬರುತ್ತಿದೆ.

  ಸಂಕಟದ ಸಂಗತಿ ಎಂದರೆ, ಅತಂತ್ರ ವಿಧಾನಸಭೆ ನಿರ್ಮಾಣವಾದರೆ ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ನ ಫಸ್ಟ್ ಎಂಡ್ ಲಾಸ್ಟ್ ಚಾಯ್ಸ್ ಬಿಜೆಪಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ ಎಂಬುದು. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊಮ್ಮುವುದು ಅದರ ಶಕ್ತಿಯ ಸಂಕೇತವಾದರೂ, ಸ್ವಯಂಬಲದ ಮೇಲೆ ಅಧಿಕಾರ ಹಿಡಿಯದಿದ್ದರೆ ಅದಕ್ಕೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರದೆ ಬೇರೆ ದಾರಿಯೇ ಇಲ್ಲ.

  ಹೀಗಾಗಿ ಅದು ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವ ಬೆಳವಣಿಗೆಯಿಂದ ಮೈ ಮರೆಯುವ ಹಾಗಿಲ್ಲ. ಬದಲಿಗೆ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಮತ್ತಷ್ಟು ಕಸರತ್ತು ನಡೆಸಲೇಬೇಕು. ಒಂದು ವೇಳೆ ಅದರಲ್ಲಿ ವಿಫಲವಾದರೆ ಸಿದ್ಧರಾಮಯ್ಯ ಸೇರಿದಂತೆ ಇವತ್ತು ಕಾಂಗ್ರೆಸ್‌ನಲ್ಲಿರುವ ಸಿಎಂ ಹುದ್ದೆಯ ಆಕಾಂಕ್ಷಿಗಳೆಲ್ಲ ರಾಜಕೀಯದ ಪರದೆಯ ಹಿಂದೆ ಅಡ್ಡ ಮಲಗುವ ಸ್ಥಿತಿ ನಿರ್ಮಾಣವಾಗಲಿದೆ.

  ಸಂಕಟದ ಸಂಗತಿ ಎಂದರೆ, ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್‌ನ ಏಕೈಕ ಆಯ್ಕೆ ಬಿಜೆಪಿ ಎಂಬುದು. ಒಂದು ವೇಳೆ ಅದರ ಮಾರ್ಗ ಮುಕ್ತವಾಗಿದ್ದರೆ, ಕನಿಷ್ಟಪಕ್ಷ ಕಾಂಗ್ರೆಸ್ ಅಧಿಕಾರದಲ್ಲಿ ಪಾಲುದಾರನಾಗಬಹುದು. ಆದರೆ ಅಂತಹ ಸಾಧ್ಯತೆಗಳೇ ಕಾಣಿಸುತ್ತಿಲ್ಲ. ಹೀಗಾಗಿ ಇದು ಕಾಂಗ್ರೆಸ್ ಪಾಲಿಗೆ ಸಂಕಟದ ವಿಷಯ.

  ಕಾಂಗ್ರೆಸ್ ಮೇಲೆ ಗೌಡರಿಗೇಕೆ ಸಿಟ್ಟು? : ಯಾವ ಕಾರಣಕ್ಕಾಗಿ ಜೆಡಿಎಸ್ ಈ ನಿಲುವಿಗೆ ಬಂದಿದೆ ಎಂಬುದು ರಹಸ್ಯದ ವಿಷಯವೇನೂ ಅಲ್ಲ. ಮೊದಲನೆಯದಾಗಿ, ಕಾಂಗ್ರೆಸ್ ಪಕ್ಷ ನಿರಂತರವಾಗಿ ಜೆಡಿಎಸ್ ಪಕ್ಷವನ್ನು ನುಂಗುವ ಯತ್ನ ಮಾಡುತ್ತಲೇ ಬಂದಿದೆ. 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಇದ್ದಾಗ ಅದನ್ನು ಅಸ್ಥಿರಗೊಳಿಸಿದ್ದು ಕೈ ಪಾಳೆಯದ ನಾಯಕರೇ. ಅವತ್ತು ಉಪಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರ ಜತೆ ವಿದೇಶದಲ್ಲಿ ರಹಸ್ಯ ಮಾತುಕತೆ ನಡೆಸಿದ ಕಾಂಗ್ರೆಸ್ ನಾಯಕರು ಆಳದಲ್ಲಿ ಜೆಡಿಎಸ್ ಅನ್ನು ಹೋಳು ಮಾಡುವ ಉದ್ದೇಶ ಹೊಂದಿದ್ದು ರಹಸ್ಯವೇನೂ ಅಲ್ಲ.

  ವಸ್ತುಸ್ಥಿತಿ ಎಂದರೆ, ಜೆಡಿಎಸ್ ಪಕ್ಷವನ್ನು ನುಂಗದೆ ಬಿಜೆಪಿಯೇತರ ಮತಗಳನ್ನು ಕನ್‌ಸಾಲಿಡೇಟ್ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸದಿದ್ದರೆ ಜೆಡಿಎಸ್‌ಗೂ ಭವಿಷ್ಯ ಎಂಬುದಿಲ್ಲ.
  ಆದರೆ ರಾಷ್ಟ್ರೀಯ ಪಕ್ಷವಾದುದರಿಂದ ಕಾಂಗ್ರೆಸ್ ಹಲವು ಮೂಲಗಳಿಂದ ಜೆಡಿಎಸ್ ಅನ್ನು ನುಂಗುವ ಯತ್ನ ನಡೆಸುತ್ತಲೇ ಬರುತ್ತಿದೆ. ಸಿದ್ಧರಾಮಯ್ಯ ಪ್ರಕರಣದ ನಂತರ ಕರ್ನಾಟಕದಲ್ಲಿ ಎಬಿಪಿಜೆಡಿ ಹುಟ್ಟಿಕೊಂಡಿತು. ಎಂ.ಪಿ.ಪ್ರಕಾಶ್ ಅವರು ಜೆಡಿಎಸ್ ವತಿಯಿಂದ ಉಪಮುಖ್ಯಮಂತ್ರಿಯಾದ ಬೆಳವಣಿಗೆಯೂ ನಡೆಯಿತು.

  ಕುತೂಹಲದ ಸಂಗತಿ ಎಂದರೆ ಎಂ.ಪಿ.ಪ್ರಕಾಶ್ ನೇತೃತ್ವದಲ್ಲೂ ಜೆಡಿಎಸ್‌ನ ಒಂದು ಪಡೆ ಕಾಂಗ್ರೆಸ್ ಕಡೆ ಬರುವ ಕುರಿತು ಕೈ ಪಾಳೆಯದ ನಾಯಕರು ಮಾತುಕತೆ ನಡೆಸಿದರು. ಇದರ ವಿವರ ದೇವೇಗೌಡರಿಗೆ ತಲುಪುವುದು ಕಷ್ಟವಾಗಲಿಲ್ಲ. ಮುಂದೆ ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರ ಕೈ ಹಿಡಿದು ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಿದರು.

  ಇದಾದ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇತ್ತು. ಅವತ್ತು ಕೂಡಾ ಕುಮಾರಸ್ವಾಮಿ ಅವರನ್ನು ಪ್ರಚೋದಿಸಿ ಪದೇ ಪದೇ ಬಿಜೆಪಿ ಸರ್ಕಾರವನ್ನು ಉರುಳಿಸುವ ಯತ್ನಕ್ಕೆ ಕಾಂಗ್ರೆಸ್‌ನ ಕೇಂದ್ರ ನಾಯಕರು ಕೈ ಹಾಕಿದರು.

  ಕೇಳಿದರೆ, ಸೋನಿಯಾ ಗಾಂಧಿ ಅವರು ದೇವೇಗೌಡರನ್ನು ನಂಬುವುದಿಲ್ಲ. ಆದರೆ ಕುಮಾರಸ್ವಾಮಿ ಅವರನ್ನು ಕಂಡರೆ ಬಹಳ ಪ್ರೀತಿ ಎಂದು ರಾಜ್ಯದ ಕಾಂಗ್ರೆಸ್ ನಾಯಕರು ಕತೆ ಹೇಳುತ್ತಿದ್ದರು. ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಬೇರೆಯಾಗಿತ್ತು. ಕುಮಾರಸ್ವಾಮಿ ಅವರನ್ನು ಬಳಸಿಕೊಂಡು ಬಿಜೆಪಿ ಸರ್ಕಾರವನ್ನು ಅಲುಗಾಡಿಸಿದರೆ ಜನಾಕ್ರೋಶ ಜೆಡಿಎಸ್ ವಿರುದ್ಧ ತಿರುಗುತ್ತದೆ. ನಾವು ಅದರ ಲಾಭ ಪಡೆಯಬಹುದು ಎಂಬುದು ಅದರ ಲೆಕ್ಕಾಚಾರ.

  ಕಾಂಗ್ರೆಸ್‌ನ ಈ ತಂತ್ರಗಾರಿಕೆ ಜೆಡಿಎಸ್‌ಗೆ ಅರ್ಥವಾದರೂ ಕಾಲ ಮೀರಿತ್ತು. 2013ರಲ್ಲಿ ಕೈ ಪಾಳೆಯ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಿತು. ಇದಾದ ನಂತರದ ಬೆಳವಣಿಗೆಗಳು ಕೇವಲ ಕುಮಾರಸ್ವಾಮಿ ಅವರನ್ನಷ್ಟೇ ಅಲ್ಲ, ದೇವೇಗೌಡರನ್ನೂ ಕೆರಳಿಸಿವೆ.

  ವಾಸ್ತವದಲ್ಲಿ ದೇವೇಗೌಡರಿಗೆ ಕಾಂಗ್ರೆಸ್ ಬಗ್ಗೆ ಪುರಾತನವಾದ ಸಿಟ್ಟಿದೆ. 1996ರಲ್ಲಿ ಅವರು ಪ್ರಧಾನಿಯಾದಾಗ ಕುಂಟು ನೆಪ ಹೇಳಿ ಅವರನ್ನು ಪದಚ್ಯುತಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಆದರೂ ಕಮ್ಯೂನಿಸ್ಟರಿಗಾಗಿ ಅವರು ಕಾಂಗ್ರೆಸ್ ಪಕ್ಷದ ವಿಷಯದಲ್ಲಿ ಸಹನೆಯಿಂದ ನಡೆದುಕೊಂಡರು.

  2004ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆ ಮಾಡುವ ಪ್ರಸ್ತಾಪ ಇವತ್ತು ಕೇಂದ್ರದ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ ಅವರಿಂದ ಬಂದಾಗ, ಮತ್ತು ಕುಮಾರಸ್ವಾಮಿ ಅವರು ಸಿಎಂ ಆಗಲಿ, ಅನಂತಕುಮಾರ್ ಡಿಸಿಎಂ ಆಗಲಿ ಎಂದು ಪರಿ ಪರಿಯಾಗಿ ಅವರು ಕಾಡಿದಾಗ ದೇವೇಗೌಡರು ಅದನ್ನೊಪ್ಪಲಿಲ್ಲ. ಕಾರಣ? ಅವರಿಗೆ ಕಮ್ಯೂನಿಸ್ಟರ ದೃಷ್ಟಿಯಲ್ಲಿ ಕೆಟ್ಟವರಾಗುವ ಬಯಕೆ ಇರಲಿಲ್ಲ.

  ದೇವೇಗೌಡರು ಅಂದೇ ಒಪ್ಪಿದ್ದರೆ... : ಒಂದು ವೇಳೆ ಅವತ್ತೇ ಅವರು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಗೆ ಒಪ್ಪಿದ್ದರೆ ಕುಮಾರಸ್ವಾಮಿ ಸಿಎಂ, ಅನಂತಕುಮಾರ್ ಡಿಸಿಎಂ ಆಗಿ ವಿರಾಜಮಾನರಾಗುತ್ತಿದ್ದರು. ಆದರೆ ಮಗನಿಗೆ ಸಿಎಂಗಿರಿ ಕೊಡಲು ಬಿಜೆಪಿ ಮುಂದೆ ಬಂದರೂ ಆ ಪ್ರಸ್ತಾಪವನ್ನು ತಿರಸ್ಕರಿಸಿದ ದೇವೇಗೌಡರಿಗೆ ನಂತರದ ದಿನಗಳಲ್ಲಿ ಕಾಂಗ್ರೆಸ್ ಬಗ್ಗೆ ತಿರಸ್ಕಾರದ ಬಾವನೆ ಬೆಳೆಯಿತು.

  ಮುಂದೆ ಸಿದ್ಧರಾಮಯ್ಯ ಅವರು ಸಿಎಂ ಆದ ನಂತರವೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಸುಮಧುರ ಸಂಬಂಧವೇನೂ ಬೆಳೆಯಲಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಒಗ್ಗೂಡಿ ಅಧಿಕಾರ ಹಿಡಿದರೂ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ನ ಎಂಟು ಮಂದಿ ಶಾಸಕರನ್ನು ಕಾಂಗ್ರೆಸ್ ಹೈಜಾಕ್ ಮಾಡಿತು.

  ಇದೇ ರೀತಿ ಕುಮಾರಸ್ವಾಮಿ ಅವರನ್ನು ಬಂಧಿಸಲು ಜಂತಕಲ್ ಮೈನಿಂಗ್ ಹಗರಣವನ್ನು ಸೃಷ್ಟಿಸಲಾಯಿತು ಅನ್ನುವುದು ದೇವೇಗೌಡರ ಸಿಟ್ಟು. ಯಡಿಯೂರಪ್ಪ ಅವರ ರೀತಿ, ಕುಮಾರಸ್ವಾಮಿ ಅವರೂ ಜೈಲಿಗೆ ಹೋಗಿ ಬಂದಿದ್ದರೆ ಚುನಾವಣಾ ಪ್ರಚಾರದ ವೇಳೆ ಎರಡು ಪಕ್ಷಗಳನ್ನು ಟೀಕಿಸುವಾಗ ಜೈಲು ಹಕ್ಕಿಗಳ ಪಕ್ಷ ಎಂದು ಬಣ್ಣಿಸುವುದು ಸಿದ್ಧರಾಮಯ್ಯ ಅವರಿಗೆ ಸುಲಭವಾಗುತ್ತಿತ್ತು.

  ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಜೈಲಿಗೆ ಹೋಗಿ ಬಂದವರು, ಬೇಲಿನ ಮೇಲೆ ಹೊರಗಿರುವವರು ಕಾಂಗ್ರೆಸ್ ವಿರುದ್ಧ ಹೋರಾಡುವ ಮಾತನಾಡುತ್ತಿದ್ದಾರೆ ಎಂದು ಟೀಕಿಸಬೇಕಾಗಿದೆ. ಕಾಂಗ್ರೆಸ್ ವಿಷಯದಲ್ಲಿ ದೇವೇಗೌಡರಿಗಿರುವ ಪ್ರಮುಖ ಸಿಟ್ಟುಗಳಲ್ಲಿ ಇದು ಕೂಡಾ ಒಂದು.

  ಹಾಗೆಯೇ ದಶಕಗಳ ಕಾಲದಿಂದ ತಮ್ಮ ಕೈಲಿದ್ದ ರೇಸ್‌ಕೋರ್ಸ್ ರಸ್ತೆಯ ಪಕ್ಷದ ಕಛೇರಿಯಿಂದ ಜೆಡಿಎಸ್ ಪಕ್ಷವನ್ನು ಒಕ್ಕಲೆಬ್ಬಿಸಲು ಸಿದ್ದರಾಮಯ್ಯ ವಿಶೇಷ ಶ್ರಮ ವಹಿಸಿದರು. ಇವತ್ತಲ್ಲ, ನಾಳೆ ಪಕ್ಷದ ಕಛೇರಿಯನ್ನು ಕಾಂಗ್ರೆಸ್ ಪಕ್ಷದವರಿಗೆ ಬಿಟ್ಟುಕೊಡಲೇಬೇಕಿತ್ತು ಎಂಬುದು ಬೇರೆ ವಿಷಯ.

  ಆದರೆ ಕಾನೂನಿನ ಸರಪಳಿಯಲ್ಲಿದ್ದ ಈ ವಿಷಯದ ಬಗ್ಗೆ ಹಿಂದಿದ್ದ ಕಾಂಗ್ರೆಸ್ ನಾಯಕರು ಸರಳ ಧೋರಣೆ ಅನುಸರಿಸಿದರೆ ಸಿದ್ಧರಾಮಯ್ಯ ಸರ್ಕಾರ ಬಿಗು ಧೋರಣೆ ಅನುಸರಿಸಿ ರೇಸ್ ಕೋರ್ಸ್ ರಸ್ತೆಯಲ್ಲಿನ ಪಕ್ಷದ ಕಛೇರಿಯಿಂದ ತಮ್ಮನ್ನು ತೆರವುಗೊಳಿಸಿತು ಎಂಬುದು ದೇವೇಗೌಡರ ಮತ್ತೊಂದು ಸಿಟ್ಟು.

  ಹೀಗೆ ಹೇಳುತ್ತಾ ಹೋದರೆ ಬಿಜೆಪಿಯ ವಿಷಯ ಬಂದರೆ ಯಡಿಯೂರಪ್ಪ ಅವರೊಬ್ಬರೇ ದೇವೇಗೌಡ-ಕುಮಾರಸ್ವಾಮಿ ಅವರ ವಿರೋಧದ ಮೂಲ. ಉಳಿದಂತೆ ಬಿಜೆಪಿಯನ್ನು ಅವರು ವಿರೋಧಿಸಲು ಕಾರಣಗಳಿಲ್ಲ. ಅಂದ ಹಾಗೆ ಸೆಕ್ಯೂಲರ್, ನಾನ್ ಸೆಕ್ಯೂಲರ್ ಪದಗಳು ಕಾಲಕ್ಕೆ ತಕ್ಕಂತೆ ಬಳಕೆಯಾಗುವ ನಾಣ್ಯಗಳೇ ಹೊರತು ಬೇಕು ಬೇಕಾದಾಗ ಚಲಾವಣೆಗೆ ಬಳಸಬಲ್ಲ ನಾಣ್ಯವಲ್ಲ ಎಂಬ ಲೆಕ್ಕಾಚಾರಕ್ಕೆ ಜೆಡಿಎಸ್ ಬಂದಿದೆ.

  ಒಳಹೊಡೆತ ಮತ್ತು ಹೊರಹೊಡೆತ : ಅದೇ ರೀತಿ ಮುಂದಿನ ದಿನಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಜತೆ ಹೋಗುವುದರಲ್ಲೇ ಅದಕ್ಕೆ ಲಾಭ ಹೆಚ್ಚು. ಕಾಂಗ್ರೆಸ್ ಜತೆ ಹೋದರೆ ಯಥಾ ಪ್ರಕಾರ ಒಳ ಹೊಡೆತವನ್ನು ಎದುರಿಸಬೇಕು. ಹೀಗೆ ಒಳಹೊಡೆತವನ್ನು ಎದುರಿಸುವುದಕ್ಕಿಂತ ಹೊರಹೊಡೆತಕ್ಕೆ ಸಜ್ಜಾಗುವುದೇ ಒಳ್ಳೆಯದು ಎಂಬುದು ಜೆಡಿಎಸ್ ಲೆಕ್ಕಾಚಾರ.

  ಹಾಗಂತ ಬಹಿರಂಗವಾಗಿ ಹೇಳಿ ಚುನಾವಣೆಗೆ ಹೋಗುವುದು ಕಷ್ಟ. ಯಾಕೆಂದರೆ ಜೆಡಿಎಸ್‌ಗೆ ಒಕ್ಕಲಿಗರು ಮಾತ್ರವಲ್ಲದೆ ಅಲ್ಪಸಂಖ್ಯಾತ ಮತ್ತು ದಲಿತರ ಮತಗಳ ಮೇಲೂ ಕಣ್ಣಿದೆ. ಹೇಗಾದರೂ ಮಾಡಿ ನಲವತ್ತೈದರಿಂದ ಐವತ್ತು ಸೀಟುಗಳನ್ನು ಗಳಿಸಿದರೆ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎಂಬುದು ಅದರ ಲೆಕ್ಕಾಚಾರ.

  ಹೀಗಾಗಿ ಸಿದ್ಧರಾಮಯ್ಯ ಅವರು ಏಕಕಾಲಕ್ಕೆ ಸಂತಸ ಮತ್ತು ಸಂಕಟವನ್ನು ಎದುರಿಸಲೇಬೇಕು. ಅರ್ಥಾತ್, ಸಂಕಟವನ್ನು ಕಡಿಮೆ ಮಾಡಿಕೊಂಡು, ಸಂತಸವನ್ನು ಹೆಚ್ಚಿಸಿಕೊಳ್ಳುವಂತಹ ಅನಿವಾರ್ಯತೆಗೆ ಅವರು ಸಿಲುಕಿದ್ದಾರೆ. ಇದರಲ್ಲಿ ಒಂದೋ ಅವರು ಗೆಲ್ಲಬೇಕು, ಇಲ್ಲವೇ ಸೋಲಲೇಬೇಕು. ಮಾಡು ಇಲ್ಲವೇ ಮಡಿ ಎಂಬ ಗಾದೆಯ ಮಾತು ಅವರಿಗೀಗ ಹೆಚ್ಚೆಚ್ಚು ನೆನಪಿಗೆ ಬರುತ್ತಿದ್ದರೆ ಅದು ಅಸಹಜವೇನೂ ಅಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  One good and one bad news is awaiting chief minister of Karnataka. Good news is many internal surveys conducted by BJP leaders say Congress will emerge as leading party. Bad news is, if no party gets majority, JDS will chose BJP as alliance, not Congress. Here is the first article by Senior Kannada journalist R T Vittalmurthy on Oneindia Kannada in his column Vittalmurthy Column.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more