Nitin Gadkari: ಚುನಾವಣಾ ಪ್ರಚಾರದಲ್ಲಿದ್ದ 'ನಿತಿನ್ ಗಡ್ಕರಿ' ಆರೋಗ್ಯದಲ್ಲಿ ಏರುಪೇರು
ಮುಂಬೈ, ಏಪ್ರಿಲ್ 24: ಅಧಿಕ ತಾಪಮಾನವಿರುವ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ವೇದಿಕೆ ಮೇಲೆ ಭಾಷಣ ಮಾಡುವಾಗಲೇ ಆರೋಗ್ಯದಲ್ಲಿ ಏರುಪೇರಾದ ಘಟನೆ ಬುಧವಾರ ನಡೆದಿದೆ.
ದೇಶದ ಅನೇಕ ಕಡೆಗಳಲ್ಲಿ ಇನ್ನೂ ಬಿಸಿಲಿನ ವಾತಾವರಣ ಇದ್ದು, ಮಹಾರಾಷ್ಟ್ರ ಇದಕ್ಕೆ ಹೊರತಾಗಿಲ್ಲ. ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ನಿತಿನ್ ಗಡ್ಕರಿ ಅವರ ಆರೋಗ್ಯದಲ್ಲಿ ತೊಂದರೆ ಆಗಿದೆ. ಹೀಗಾಗಿ ಅವರು ವೇದಿಕೆ ಮೇಲೆ ಅಸ್ವಸ್ಥರಾದರು.

ಕೂಡಲೇ ವೇದಿಕೆ ಮೇಲಿದ್ದ ಕೇಂದ್ರ ಸಚಿವರ ಅಂಗ ರಕ್ಷಕರು, ಬಿಜೆಪಿ ಮುಖಂಡರು, ಸಿಬ್ಬಂದಿ ಅವರನ್ನು ಕೆಳಗೆ ಬೀಳದಂತೆ ಹಿಡಿದುಕೊಂಡು ಸುರಕ್ಷಿತವಾಗಿ ಕೂರಿಸಿದ್ದಾರೆ. ಮಹಾರಾಷ್ಟ್ರದಲ್ಲಿನ ವಿಪರೀತ ಸೆಕೆಯಿಂದ ನಿತಿನ್ ಗಡ್ಕರಿಗೆ ಹೀಗೆ ತೊಂದರೆ ಆಗಿದೆ. ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ ಅವರು ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
2018 ರಲ್ಲೂ ಹೀಗೆಯೇ ಆಗಿತ್ತು
ಈ ಹಿಂದೆ (2018 ರಲ್ಲಿ) ಅಹ್ಮದ್‌ನಗರದಲ್ಲಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಭಾಷಣ ಮಾಡುವಾಗಲೂ ನಿತಿನ್ ಗಡ್ಕರಿ ಅವರು ಮೂರ್ಛೆ ಬಿದ್ದು, ಅನಾರೋಗ್ಯ ಸಮಸ್ಯೆ ಎದುರಿಸಿದ್ದರು. ಅವರ ರಕ್ತದಲ್ಲಿನ ಸಕ್ಕರೆ ಇಳಿಕೆ ಆಗಿತ್ತು. ಹೀಗಾಗಿ ಅವರು ತಲೆ ತಿರುಗಿ ಅಸ್ವಸ್ಥರಾಗಿದ್ದರು.
ತೂಕ ಹೆಚ್ಚಿರುವ ಅವರು, ಆ ಸಮಸ್ಯೆಯಿಂದ ಪರಿಹರಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗಡ್ಕರಿ ಅವರು ನಾಗ್ಪುರದಿಂದ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ನಾಗ್ಪುರ ಲೋಕಸಭಾ ಕ್ಷೇತ್ರದ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಗಡ್ಕರಿ ಅವರು ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಗ್ಪುರದಿಂದ ಸಂಸತ್ತಿಗೆ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಹಿರಿಯ ಬಿಜೆಪಿ ನಾಯಕ, ಪಕ್ಷದ ಕಾರ್ಯಕರ್ತರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ನಾಗ್ಪುರ ಕ್ಷೇತ್ರಕ್ಕೆ ಏಪ್ರಿಲ್ 19 ರಂದು ಮತದಾನ ನಡೆಯಿತು.












Click it and Unblock the Notifications