ಅಮೆರಿಕದ ಬಿ2 ವೀಸಾ ಯಾಕೆ, ಪಡೆಯೋದು ಹೇಗೆ? ಬಿ1 ಮತ್ತು ಬಿ2 ವೀಸಾ ವ್ಯತ್ಯಾಸವೇನು?
ಅಮೆರಿಕಕ್ಕೆ ಹೋಗುವುದು ಈಗ ಬಹಳ ಕಾಮನ್. ಪ್ರವಾಸಕ್ಕೆ ಹೋಗುವುದಿದ್ದರೆ ಏಜೆಂಟ್‌ಗಳೇ ನಿಮಗೆ ವೀಸಾ ಮಾಡಿಸಿ ಕೊಡುತ್ತಾರೆ. ಆದರೆ, ಅಮೆರಿಕಕ್ಕೆ ಹೋಗಲು ಯಾವ ವೀಸಾ ಬೇಕು ಇತ್ಯಾದಿ ವಿಚಾರಗಳನ್ನು ಯಾರೇ ಆದರೂ ತಿಳಿದುಕೊಂಡಿರುವುದು ಉತ್ತಮ.
ಅಮೆರಿಕಕ್ಕೆ ಹೋಗಲು ವಿವಿಧ ವೀಸಾಗಳು ಲಭ್ಯ ಇರುತ್ತವೆ. ನೀವು ಯಾವ ಕಾರ್ಯಕ್ಕೆ ಹೋಗುತ್ತೀರಿ ಎಂಬುದರ ಮೇಲೆ ಯಾವ ವೀಸಾ ಪಡೆಯಬೇಕು ಎಂಬುದು ನಿರ್ಧಾರವಾಗುತ್ತದೆ. ಕೆಲಸದ ಮೇಲೆ ಹೋಗುವುದಕ್ಕೆ ಬೇರೆ ವೀಸಾ, ವಿದ್ಯಾಭ್ಯಾಸಕ್ಕೆ ಹೋಗುವುದಕ್ಕೆ ಬೇರೆ ವೀಸಾ, ಪ್ರವಾಸಕ್ಕೆ ಹೋಗುವುದಕ್ಕೆ ಬೇರೆ ವೀಸಾ ಇರುತ್ತದೆ.
ನೀವು ಅಮೆರಿಕಕ್ಕೆ ಪ್ರವಾಸ ಹೋಗಬೇಕೆಂದರೆ ಬಿ2 ವೀಸಾ ಪಡೆಯಬೇಕು. ಇದು ಟೂರಿಸ್ಟ್ ವೀಸಾ ಹೌದು. ಈ ವೀಸಾ ಮೂಲಕ ನೀವು ಅಮೆರಿಕಕ್ಕೆ ಪ್ರವಾಸ ಹೋಗಬಹುದು. ಆ ದೇಶದಲ್ಲಿರುವ ನಿಮ್ಮ ಬಂಧುಗಳು, ಸ್ನೇಹಿತರನ್ನು ಭೇಟಿ ಮಾಡಬಹುದು. ವೈದ್ಯಕೀಯ ಚಿಕಿತ್ಸೆ ಪಡೆಯಬಹುದು, ಅಲ್ಪಾವಧಿ ಶಿಕ್ಷಣ ಕೋರ್ಸ್ ಮಾಡಬಹುದು.
ಹಾಗೆಯೇ, ಅಮೆರಿಕಕ್ಕೆ ಹೋಗಲು ನಿಮ್ಮ ಹಣಕಾಸು ಸ್ಥಿತಿ ಅನುಕೂಲವಾಗಿದೆಯಾ ಎಂಬುದನ್ನು ನಿರೂಪಿಸಬೇಕು. ಯಾಕೆಂದರೆ ನೀವು ಅಮೆರಿಕದಲ್ಲಿ ಇರುವಷ್ಟು ದಿನವೂ ನಿಮ್ಮ ಖರ್ಚನ್ನು ನಿಭಾಯಿಸಿಕೊಳ್ಳುವಷ್ಟು ಸಮರ್ಥರಿದ್ದೀರಾ ಎಂಬುದು ಅಮೆರಿಕದ ಅಧಿಕಾರಿಗಳಿಗೆ ಖಾತ್ರಿಯಾಗಬೇಕು. ಅಲ್ಲದೇ, ನಿಗದಿತ ಅವಧಿಯವರೆಗೆ ಮಾತ್ರ ಅಮೆರಿಕದಲ್ಲಿ ಇರುತ್ತೇನೆ ಹೊರತು ಅಲ್ಲಿಯೇ ವಾಸ ಮುಂದುವರಿಸುವ ಇರಾದೆ ಇಲ್ಲ ಎಂಬುದನ್ನೂ ಖಾತ್ರಿಪಡಿಸಬೇಕು.

ವೀಸಾ ಪಡೆಯುವುದು ಹೇಗೆ?
ಅಮೆರಿಕ ರಾಯಭಾರ ಕಚೇರಿಯಲ್ಲಿ ನೀವು ಫಾರ್ಮ್ ಡಿಎಸ್-160 ಅನ್ನು ಸಲ್ಲಿಸಬೇಕು. ಆನ್‌ಲೈನ್‌ನಲ್ಲೇ ಫಾರ್ಮ್ ಸಲ್ಲಿಸುವ ಅವಕಾಶ ಇರುತ್ತದೆ. ನಿಗದಿತ ಶುಲ್ಕ ಪಾವತಿಸಿದರೆ ಸಂದರ್ಶನಕ್ಕೆ ಒಂದು ಸಮಯ ನೀಡಲಾಗುತ್ತದೆ. 14-79 ವರ್ಷ ವಯಸ್ಸಾದವರು ರಾಯಭಾರ ಕಚೇರಿಯಲ್ಲೇ ನಿಗದಿತ ಸಮಯದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಇಲ್ಲಿ ಅರ್ಜಿ ಶುಲ್ಕ 160 ಡಾಲರ್ ಇದೆ. ಅಂದರೆ ಸುಮಾರು 12 ಸಾವಿರ ರೂಪಾಯಿ ಅಪ್ಲಿಕೇಶನ್ ಫೀಸ್ ಇರುತ್ತದೆ.

ಎಷ್ಟು ದಿನ ಅಮೆರಿಕದಲ್ಲಿರಬಹುದು?
ಬಿ2 ವೀಸಾ ಸಿಕ್ಕಾ ಕ್ಷಣ ಇಷ್ಟ ಬಂದಷ್ಟು ದಿನ ಅಮೆರಿಕದಲ್ಲಿ ಇರಲು ಆಗುವುದಿಲ್ಲ. ಬಿ2 ವೀಸಾ ಅವಧಿ ಗರಿಷ್ಠ ಆರು ತಿಂಗಳು ಮಾತ್ರ ಇರುತ್ತದೆ. ಅದರ ಒಳಗೆ ನೀವು ಅಮೆರಿಕದಿಂದ ನಿರ್ಗಮಿಸಬೇಕು. ಇಲ್ಲದಿದ್ದರೆ ಅಕ್ರಮವಾಗಿ ವಾಸಿಸುತ್ತಿದ್ದೀರೆಂದು ಕಾನೂನು ರೀತ್ಯ ಕ್ರಮ ಎದುರಿಸಬೇಕಾಗುತ್ತದೆ.
ಒಂದು ವೇಳೆ ಅಮೆರಿಕದಲ್ಲಿ ಬಿ2 ವೀಸಾ ಅವಧಿಯಾದ ಆರು ತಿಂಗಳೂ ಮೀರಿ ಹೆಚ್ಚು ದಿನ ಇರಬೇಕೆಂದರೆ ಅವಕಾಶ ಇರುತ್ತದೆ. ಅದಕ್ಕೆ ನೀವು ವೀಸಾ ವಿಸ್ತರಣೆ ಕೋರಿ ಅರ್ಜಿ ಹಾಕಬಹುದು.

ಬಿ1 ವೀಸಾ ಯಾಕೆ?
ಅಮೆರಿಕ ನೀಡುವ ಬಿ ವೀಸಾಗಳಲ್ಲಿ ಬಿ1 ಮತ್ತು ಬಿ2 ಇವೆ. ಬಿ2 ವೀಸಾ ಪ್ರವಾಸ ಮತ್ತಿತರ ಕಾರ್ಯಕ್ಕಾಗಿ ನೀಡಲಾಗುತ್ತದೆ. ಬಿ1 ವೀಸಾವನ್ನು ವ್ಯವಹಾರಕ್ಕಾಗಿ ನೀಡಲಾಗುತ್ತದೆ. ನೀವು ಅಮೆರಿಕಕ್ಕೆ ಯಾವುದಾದರೂ ಬಿಸಿನೆಸ್ ಟ್ರಿಪ್ ಹೋಗುವುದಿದ್ದರೆ ಬಿ1 ವೀಸಾ ಮಾಡಿಸಬೇಕು. ಅಥವಾ ನಿಮ್ಮ ವೃತ್ತಿಗೆ ಸಂಬಂಧಿಸಿದ ಸಮಾವೇಶ, ಶಿಕ್ಷಣ ಸಮಾವೇಶ, ಉದ್ಯಮ ಸಮಾವೇಶ ಇತ್ಯಾದಿಗಾಗಿಯೂ ನೀವು ಬಿ1 ವೀಸಾ ಪಡೆಯಬಹುದು.
ಬಿ1 ವೀಸಾ ಮತ್ತು ಬಿ2 ವೀಸಾಗಳು ಕೇವಲ ತಾತ್ಕಾಲಿಕ ಮಾತ್ರ. ಇವು ನಿಮಗೆ ಅಮೆರಿಕದ ಖಾಯಂ ವಾಸಕ್ಕೆ ಅನುಮತಿಸುವುದಿಲ್ಲ. ಆದರೆ, ಇರುವಷ್ಟು ದಿನ ನೀವು ಗ್ರೀನ್ ಕಾರ್ಡ್ ಪಡೆಯಬಹುದು.

ದಾಖಲೆಗಳು ಏನು ಬೇಕು?
ಬಿ1 ಮತ್ತು ಬಿ2 ವೀಸಾಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಕಾಣಿಸಿದ ದಾಖಲೆಗಳ ಅಗತ್ಯ ಬೀಳುತ್ತದೆ.
* ನೀವು ಅಮೆರಿಕದಿಂದ ಯಾವಾಗ ಮರಳುತ್ತೀರಿ ಆ ದಿನದಿಂದ ಆರು ತಿಂಗಳ ಆಚೆಯವರೆಗಾದರೂ ನಿಮ್ಮ ಪಾಸ್‌ಪೋರ್ಟ್ ಅವಧಿ ಇರಬೇಕು.
* ಇತ್ತೀಚಿನ ನಿಮ್ಮ ಭಾವಚಿತ್ರ
* ಅಮೆರಿಕಕ್ಕೆ ನೀವು ಹಿಂದೆ ಪ್ರವಾಸ ಹೋಗಿದ್ದರೆ ಅದರ ವಿವರ ನೀಡಬೇಕು.
* ನಿಮ್ಮ ಇಡೀ ಪ್ರವಾಸಕ್ಕೆ ಖರ್ಚು ಮಾಡುವಷ್ಟು ಹಣ ನಿಮ್ಮಲ್ಲಿದೆ ಎಂಬುದಕ್ಕೆ ದಾಖಲೆ ಒದಗಿಸಬೇಕು. ಪ್ರಯಾಣ ವೆಚ್ಚ, ವಸತಿ, ಊಟ ವಗೈರೆ ವಗೈರೆ ಎಲ್ಲಾ ವೆಚ್ಚವೂ ಇಲ್ಲಿ ಸೇರುತ್ತದೆ.
* ಭಾರತದಲ್ಲಿ ನಿಮ್ಮದು ಉದ್ಯೋಗ, ಅಥವಾ ಆಸ್ತಿ ಅಥವಾ ಕುಟುಂಬ ಇದೆ ಎನ್ನುವುದಕ್ಕೆ ಪ್ರೂಫ್ ಒದಗಿಸಬೇಕು. ಇದು ಯಾಕೆಂದರೆ ನೀವು ಭಾರತವನ್ನು ಬಿಟ್ಟು ಅಮೆರಿಕಕ್ಕೆ ವಲಸೆ ಹೋಗುವ ಉದ್ದೇಶದಿಂದ ಬರುತ್ತಿಲ್ಲ ಎಂಬುದು ರಾಯಭಾರ ಕಚೇರಿಗೆ ಖಾತ್ರಿಯಾಗಬೇಕು.
(ಒನ್ಇಂಡಿಯಾ ಸುದ್ದಿ)











Click it and Unblock the Notifications