ನೇಪಾಳ ಫಲಿತಾಂಶದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್, ನಂಬರ್ ಗೇಮ್ ಶುರು | Nepal Election 2026
ನೇಪಾಳ ಹೆಸರು ಕೇಳಿದರೆ ಸಾಕು ಇತ್ತೀಚೆಗೆ ನಡೆದಿದ್ದ ಬೃಹತ್ ಜೆನ್-ಝಿ ಪ್ರತಿಭಟನೆ ನೆನಪಾಗುತ್ತದೆ. ಏಕೆಂದರೆ ಭ್ರಷ್ಟ ರಾಜಕೀಯ ನಾಯಕರ ವಿರುದ್ಧ ಸಿಡಿದು, ಇಡೀ ನೇಪಾಳದಲ್ಲಿ ಪ್ರತಿಭಟನೆ ಆರಂಭ ಮಾಡಿದ್ದ ಅಲ್ಲಿನ ಯುವಕ ಹಾಗೂ ಯುವತಿಯರು ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದರು. ಈ ಹೋರಾಟದ ನಂತರ ನೇಪಾಳ ಸರ್ಕಾರ ಬಿದ್ದು ಹೋಗಿ, ಪ್ರಧಾನಿ ಸಮೇತ ಎಲ್ಲರೂ ಓಡಿ ಹೋಗಲು ಪ್ರಯತ್ನ ಮಾಡುವಂತೆ ಆಗಿತ್ತು. ಅಂತಿಮವಾಗಿ ಯುವ ಸಮೂಹದ ಪ್ರತಿಭಟನೆಗೆ ತಲೆದೂಗಿದ್ದ ನೆರೆ ದೇಶ ನೇಪಾಳದ ವ್ಯವಸ್ಥೆ ಈಗ ಚುನಾವಣೆ ಮೂಲಕ ಹೊಸ ನಾಯಕನ ಆಯ್ಕೆಗೆ ಮುಂದಾಗಿದೆ. ಈ ಚುನಾವಣೆಯಲ್ಲಿ ಭಾರಿ ದೊಡ್ಡ ಟ್ವಿಸ್ಟ್ ಕೂಡ ಸಿಕ್ಕುಬಿಟ್ಟಿದೆ ಇದೀಗ.
ಬಾಂಗ್ಲಾದೇಶ ಯುವಕರ ಹೋರಾಟದ ನಂತರ ನೇಪಾಳದಲ್ಲೂ ಭಾರಿ ದೊಡ್ಡ ಹಿಂಸಾಚಾರ ನಡೆದಿತ್ತು. ಭಾರತದ ನೆರೆ ದೇಶ ಮತ್ತು ಜಗತ್ತಿನ ಪ್ರಮುಖ ಹಿಂದೂ ರಾಷ್ಟ್ರ ನೇಪಾಳದಲ್ಲಿ ಹಿಂಸಾಚಾರ ಶುರುವಾದ ಕಾರಣ ಆತಂಕ ಆವರಿಸಿತ್ತು. ಭಾರತದ ಮಿತ್ರ ನೇಪಾಳ ನೆಲದಲ್ಲಿ ಕೆಲ ದಿನಗಳ ಹಿಂದಷ್ಟೇ ಭೀಕರವಾಗಿ ಪ್ರತಿಭಟನೆ ನಡೆದು, ಹೋರಾಟದಲ್ಲಿ ರಕ್ತ ಹರಿದಿತ್ತು. ಈ ಹೋರಾಟದಲ್ಲಿ ಹೊಸ ತಲೆಮಾರಿನ Gen-Z ಹೋರಾಟಗಾರರು ಎಂಟ್ರಿ ಕೊಟ್ಟು ನೇಪಾಳದಲ್ಲಿ ಕ್ರಾಂತಿ ಮಾಡಿದ್ದರು. ಪ್ರಧಾನಿಯನ್ನೇ ಬದಲಾಯಿಸಿ, ಹಂಗಾಮಿ ಪ್ರಧಾನಿ ಆಯ್ಕೆ ಮಾಡುವಂತೆ ಮಾಡಿದ್ದರು. ಇದೀಗ ಚುನಾವಣೆ ಮುಗಿದು ಫಲಿತಾಂಶವೂ ಬಹುತೇಕ ಹೊರಬಿದ್ದಿದ್ದು, ಅಚ್ಚರಿಯ ನಾಯಕನ ಆಯ್ಕೆಗೆ ಸಾಕ್ಷಿ ಆಗುತ್ತಿದೆ ನೇಪಾಳ ದೇಶ.

ಬಾಲೇಂದ್ರ ಶಾ ಪಕ್ಷಕ್ಕೆ ಬಹುಮತ ಪಕ್ಕಾ!
ನೇಪಾಳ ಒಂದು ಪುಟಾಣಿ ದೇಶವೇ ಆಗಿದ್ದರೂ ಭಾರತದ ಪಾಲಿಗೆ ನೇಪಾಳ ಅತ್ಯಗತ್ಯ, ಏಕೆಂದರೆ ಈ ವಿಚಾರದಲ್ಲಿ ಭಾರತವು ಈಗಿನ ಪರಿಸ್ಥಿತಿಯಲ್ಲಿ ಚೀನಾ ಎದುರಿಸಿ ನಿಲ್ಲಲು ನೇಪಾಳದ ಅಗತ್ಯತೆ ಇದೆ. ಆದರೆ ನೇಪಾಳದಲ್ಲಿ ರಾಜಕೀಯ ನಾಯಕರು ಭ್ರಷ್ಟಾಚಾರ ಮಾಡುತ್ತಾ, ಅಭಿವೃದ್ಧಿ ಮಾಡದೇ ತಮ್ಮದೇ ಲೋಕದಲ್ಲಿ ಇದ್ದಾರೆ ಎಂಬ ಆಕ್ರೋಶ ಮೊಳಗಿತ್ತು. ಕೊನೆಗೆ ಹೊಸ ತಲೆಮಾರಿನ ಯುವಕರು ಹಾಗೇ ಯುವತಿಯರು ಹೋರಾಟ ಆರಂಭಿಸಿ ಸರ್ಕಾರವನ್ನೇ ಬೀಳಿಸಿದ್ದರು. ಇದೀಗ ಹೊಸ ಚುನಾವಣೆಯನ್ನ ಕೂಡ ನಡೆಸಲಾಗಿದ್ದು, ಫಲಿತಾಂಶ ಪ್ರಕಟವಾಗುತ್ತಿದೆ. ಮಾಜಿ ರ‍್ಯಾಪರ್ ಬಾಲೇಂದ್ರ ಶಾ ಕಟ್ಟಿರುವ, ರಾಷ್ಟ್ರೀಯ ಸ್ವತಂತ್ರ ಪಕ್ಷ ಸ್ಪಷ್ಟವಾಗಿ ಬಹುಮತ ಪಡೆಯುವತ್ತ ಮುಂದೆ ನುಗ್ಗಿದೆ. ಈಗಿರುವ ಟ್ರೆಂಡ್ ಪ್ರಕಾರ ಸುಮಾರು 90 ಸ್ಥಾನದಲ್ಲಿ ಮುನ್ನಡೆ ಹಾಗೂ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಬಾಲೇಂದ್ರ ಶಾ ಅವರ ಪಕ್ಷ.
ಕಾರ್ಯಕರ್ತರ ಸಂಭ್ರಮ ಬಲು ಜೋರು
ನೇಪಾಳ ದೇಶದ ಒಟ್ಟು 275 ಸಂಸತ್ ಸ್ಥಾನಗಳ ಪೈಕಿ ಇದೀಗ 165 ಸ್ಥಾನಗಳಿಗೆ ಮಾತ್ರ ಚುನಾವಣೆಯನ್ನ ನಡೆಸಲಾಗಿದ್ದು, ನೇರ ಚುನಾವಣೆ ಮೂಲಕ 165 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಮತದಾರ ಪ್ರಭುಗಳು ಆಯ್ಕೆ ಮಾಡಿದ್ದಾರೆ. ಒಟ್ಟು 3,406 ಸ್ಪರ್ಧಿಗಳ ರಾಜಕೀಯ ಭವಿಷ್ಯವನ್ನು ಈ ಚುನಾವಣೆ ನಿರ್ಧಾರ ಮಾಡುತ್ತಿದ್ದು, ಮಾಜಿ ರ‍್ಯಾಪರ್ ಬಾಲೇಂದ್ರ ಶಾ ನೇಪಾಳ ದೇಶದ ಮುಂದಿನ ಮುಖ್ಯಸ್ಥರಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಇದೀಗ ನೇಪಾಳದಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷದ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಬಾಂಗ್ಲಾ ಬಳಿಕ ಮತ್ತೊಂದು ಗೆಲುವು!
ನೇಪಾಳ ದೇಶದಲ್ಲಿ ಇದೀಗ ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದುವ ಸರ್ಕಾರ ರಚನೆ ಆಗುವ ನಿರೀಕ್ಷೆ ಇದೆ. ಇದೀಗ ನೇಪಾಳ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿರುವ ಮಾಜಿ ರ‍್ಯಾಪರ್ ಹಾಗೂ ರಾಷ್ಟ್ರೀಯ ಸ್ವತಂತ್ರ ಪಕ್ಷದ ಮುಖ್ಯಸ್ಥ ಬಾಲೇಂದ್ರ ಶಾ ಅವರು ಭಾರತದ ಜೊತೆಯಲ್ಲಿ ಉತ್ತಮ ಸ್ನೇಹ ಇಟ್ಟುಕೊಂಡಿದ್ದು, ಬಾಂಗ್ಲಾದೇಶದಲ್ಲಿ ಕೂಡ ಈಗ ಭಾರತ ಬಯಸಿದ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಮತ್ತೊಮ್ಮೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೆಲುವು ಕಂಡಿದೆ, ಎಂಬ ವಿಶ್ಲೇಷಣೆ ಕೂಡ ಶುರುವಾಗಿದೆ.












Click it and Unblock the Notifications