ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಹತಾಶರಾಗುತ್ತಿದ್ದಾರಾ ಮೈತ್ರಿ ನಾಯಕರು!

|
Google Oneindia Kannada News

ಅದ್ಯಾಕೋ ಗೊತ್ತಿಲ್ಲ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಹವಾ ಒಂದು ರೀತಿಯ ಸುನಾಮಿ ರೀತಿ ಅಪ್ಪಳಿಸಿದೆ. ಬಹುಶಃ ಅದರ ಪರಿಣಾಮ, ಚುನಾವಣೆ ಕಳೆದು ಫಲಿತಾಂಶ ಬಂದು ತಿಂಗಳಾಗುತ್ತಾ ಬಂದರೂ ಅದರ ಗುಂಗಿನಿಂದ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಹೊರ ಬಂದಿಲ್ಲ.

ಸೋಲಿನ ಹತಾಶೆ ಆ ಪಕ್ಷದ ನಾಯಕರನ್ನು ಹೇಗೆ ಕಾಡುತ್ತಿದೆ ಎಂಬುದಕ್ಕೆ ನಾಯಕರು ಒಬ್ಬರ ಮೇಲೆ ಒಬ್ಬರಂತೆ ವಾಗ್ದಾಳಿ ನಡೆಸುತ್ತಿರುವುದೇ ಸಾಕ್ಷಿ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಆಡಳಿತಕ್ಕೆ ಬಂದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವುದು ಅದೆರಡು ಪಕ್ಷಗಳ ನಾಯಕರನ್ನು ಕಂಗೆಡಿಸಿದೆ.

 ರಾಹುಲ್ ಗಾಂಧಿ ಭೇಟಿಯಾಗಿ ಸಿದ್ದು ವಿರುದ್ಧ ದೂರು ನೀಡಿದ ಗೌಡ್ರು! ರಾಹುಲ್ ಗಾಂಧಿ ಭೇಟಿಯಾಗಿ ಸಿದ್ದು ವಿರುದ್ಧ ದೂರು ನೀಡಿದ ಗೌಡ್ರು!

ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಆಡಳಿತವನ್ನು ಜನ ಒಪ್ಪುತ್ತಿಲ್ಲ ಎಂಬ ಸಂದೇಶವನ್ನು ಮತದಾರರು ನೀಡಿದ್ದಾರೆ ಎಂಬಂತೆ ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಸಂಕಷ್ಟ ತಪ್ಪಿದಲ್ಲ ಎಂಬ ಭಯವೂ ಕೈ ಮತ್ತು ತೆನೆ ನಾಯಕರನ್ನು ಕಾಡುತ್ತಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಹಳಷ್ಟು ನಷ್ಟವಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

jds and congress party leaders frustrated in the state

ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟ ಪರಿಣಾಮ ಕಾಂಗ್ರೆಸ್ ಸೋಲು ಕಂಡಿತು ಎಂಬ ಮಾತುಗಳನ್ನು ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಜತೆಗೆ ಚುನಾವಣೆ ವೇಳೆ ಕುಟುಂಬ ರಾಜಕಾರಣವೂ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದು ಯುವ ಮತದಾರರ ಮೇಲೆ ಹೆಚ್ಚಿನ ಪರಿಣಾಮವನ್ನುಂಟು ಮಾಡಿತ್ತು. ಕುಟುಂಬ ರಾಜಕಾರಣವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ರವಾನೆಯಾದವು. ಅದರ ಪರಿಣಾಮ ಜೆಡಿಎಸ್ ತಕ್ಕ ಬೆಲೆ ತೆರಬೇಕಾಯಿತು.

ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಹೆಚ್ಚಿನ ಕಡೆಗಳಲ್ಲಿ ಎರಡು ಪಕ್ಷಗಳ ಮುಖಂಡರು ಒಟ್ಟಾಗಿ ಪ್ರಚಾರ ನಡೆಸಲೇ ಇಲ್ಲ. ಹೀಗಾಗಿ ಸೋಲು ಕಾಣಬೇಕಾಯಿತು ಎಂಬುದಾಗಿ ರಾಜಕೀಯ ನಾಯಕರು ಸೋಲುಗಳಿಗೆ ಸಮಜಾಯಿಷಿ ನೀಡುತ್ತಿದ್ದಾರೆ.

 ರೋಷನ್ ಬೇಗ್ ವಿರುದ್ಧ ಹೈಕಮಾಂಡಿಗೆ ದೂರು ಸಲ್ಲಿಸಿದ ಕೆಪಿಸಿಸಿ ರೋಷನ್ ಬೇಗ್ ವಿರುದ್ಧ ಹೈಕಮಾಂಡಿಗೆ ದೂರು ಸಲ್ಲಿಸಿದ ಕೆಪಿಸಿಸಿ

ಕರ್ನಾಟಕದ ಮಟ್ಟಿಗೆ ಉತ್ತಮ ಕೆಲಸಗಾರ ಮತ್ತು ಸಜ್ಜನ ರಾಜಕಾರಣಿ ಎಂಬ ಹೆಸರು ಪಡೆದಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಆರ್.ಧ್ರುವನಾರಾಯಣ್ ಅವರ ಸೋಲನ್ನು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಬಹುಶಃ ಯಾರೂ ಅವರ ಸೋಲನ್ನು ಊಹಿಸಿರಲಿಲ್ಲ. ಆದರೆ ಪರಾಭವಗೊಂಡ ಅಭ್ಯರ್ಥಿ ಧ್ರುವನಾರಾಯಣ್ ಪ್ರಕಾರ ಕರ್ನಾಟಕದ ಇತಿಹಾಸದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ರಾಷ್ಟೀಯ ವಿಚಾರಗಳು, ಭಾವನಾತ್ಮಕವಾಗಿ ಕೆಲಸ ಮಾಡಿದ್ದೇ ಕಾರಣವಂತೆ. ಆದರೆ ಅದೊಂದೇ ಸೋಲಿಗೆ ಕಾರಣ ಎನ್ನಲಾಗುವುದಿಲ್ಲ.

ಸಿದ್ದರಾಮಯ್ಯ ಅವರು ಆರ್. ಧ್ರುವನಾರಾಯಣ್ ವಿರುದ್ಧ ಸ್ಪರ್ಧಿಸಿದ್ದ ತನ್ನ ರಾಜಕೀಯ ವೈರಿ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದರಲ್ಲದೆ, ಧ್ರುವನಾರಾಯಣ್ ಅವರ ಪರವಾಗಿ ಶ್ರೀನಿವಾಸಪ್ರಸಾದ್ ವಿರುದ್ಧವಾಗಿ ಪ್ರಚಾರ ಸಭೆಗಳಲ್ಲಿ ಮಾತನಾಡಿದರು. ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು.

ಇನ್ನೊಂದು ಬಹು ಮುಖ್ಯ ವಿಚಾರವೆಂದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಗೆಲ್ಲಿಸಲು ಬೇಕಾದ ಕಸರತ್ತು ಮಾಡಿಕೊಂಡು ಮಂಡ್ಯದಲ್ಲಿ ಉಳಿದು ಬಿಟ್ಟರೆ ವಿನಃ ಇತರೆ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಲೇ ಇಲ್ಲ. ಚಾಮರಾಜನಗರದಲ್ಲಿ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಿ ಕೊನೆಗಳಿಗೆಯಲ್ಲಿ ರದ್ದುಗೊಳಿಸಿದರು. ಇದೆಲ್ಲವೂ ಧ್ರುವನಾರಾಯಣ್ ಸೋಲಿಗೆ ಕಾರಣವಾಯಿತು ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

ಧ್ರುವನಾರಾಯಣ್ ಸೋಲಿನ ನಂತರವೂ ಕೈಕಟ್ಟಿ ಕುಳಿತಿಲ್ಲ. ಈಗ ಅವರು ಕ್ಷೇತ್ರದ ತುಂಬಾ ಅಡ್ಡಾಡುತ್ತಾ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಸೋಲಿನ ಬಗ್ಗೆಯೂ ಆತ್ಮಾವಲೋಕನ ಸಭೆ ನಡೆಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನ ಹೆಚ್ಚಿನ ನಾಯಕರಿಗೆ ಗೊತ್ತಾಗಿರುವ ಒಂದೇ ಒಂದು ವಿಚಾರ ಏನೆಂದರೆ ಅದು ಜೆಡಿಎಸ್ ‌ನೊಂದಿಗೆ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂಬುದು.

ಹೈಕಮಾಂಡ್ ತೀರ್ಮಾನಕ್ಕೆ ಮಣಿದಿರುವ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಹಲ್ಲು ಕಿತ್ತ ಹಾವಿನಂತಾಗಿದೆ. ಈಗಿನ ಮೈತ್ರಿ ಸರ್ಕಾರದ ಡೋಲಾಯಮಾನ ಸ್ಥಿತಿಯಿಂದ ಮುಂದಿನ ರಾಜಕೀಯ ಜೀವನದ ಮೇಲೆ ಪರಿಣಾಮವಾಗುತ್ತದೆ ಎಂಬ ಭಯ ಹೆಚ್ಚಿನ ನಾಯಕರನ್ನು ಕಾಡತೊಡಗಿದೆ. ಹೀಗಾಗಿ ಅವರು ತಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗುವ ಪ್ರಯತ್ನ ಮಾಡುತ್ತಿದ್ದಾರೆ. ಎದುರಾಳಿಗಳನ್ನು ದೂರುವ ಪರಿಸ್ಥಿತಿಯಲ್ಲಿಲ್ಲದ ಕಾರಣ ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಿಜಕ್ಕೂ ಇಂತಹದೊಂದು ಪರಿಸ್ಥಿತಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಬರಬಾರದಿತ್ತು.

English summary
Even though the Congress and the JDS allied themselves, two parties did not campaign together. so, it is also said that With the JDS,the Congress has lost more than the profit from the alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X