Dr.Rajkumar: ಹುಟ್ಟೂರಲ್ಲಿ ಮುತ್ತುರಾಜಣ್ಣನ ನೆನಪುಗಳು ನೂರಾರು.. ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ
ಚಾಮರಾಜನಗರ, ಏಪ್ರಿಲ್, 24: ಕನ್ನಡಿಗರೇ ತುಂಬಿರುವ ಆದರೂ ತಮಿಳುನಾಡಿಗೆ ಸೇರಿರುವ ತಾಳವಾಡಿ ಕೂಗಳತೆ ದೂರದಲ್ಲಿರುವ ದೊಡ್ಡಗಾಜನೂರಿನ ರಸ್ತೆಗಳು, ನಾಡಹೆಂಚಿನ ಮನೆಗಳಿಂದ ಆರ್‌ಸಿಸಿ ಕಟ್ಟಡಕ್ಕೆ ಹೊರಳಿರುವ ಬೀದಿಗಳು, ರಾಮಮಂದಿರ, ಮಂಟೇಸ್ವಾಮಿ ಗುಡಿಗಳಲ್ಲಿ ಮುತ್ತುರಾಜಣ್ಣನ ನೆನಪುಗಳು ಈಗಲೂ ಹಸಿರಾಗಿವೆ. ಅಣ್ಣಾವ್ರು ನಮ್ಮೂರುವರೆಂಬ ಅಭಿಮಾನ ಇಲ್ಲಿನ ಜನರಿಗೆ ಬೆಟ್ಟದಷ್ಟಿದೆ. ಹಾಗಾದರೆ ಅವರ ಏನೆಲ್ಲ ನೆನಪುಗಳು ಇಲ್ಲಿವೆ ಎನ್ನುವ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಈಗಿನ ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಗ್ರಾಮದಿಂದ ಪುಟ್ಟಸ್ವಾಮಯ್ಯನವರು ದೊಡ್ಡಗಾಜನೂರಿಗೆ ಬಂದು ನೆಲೆಸಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ನಾಟಕಗಳನ್ನು ಕಲಿಸುವ ಮೂಲಕ ಹೆಸರುವಾಸಿಯಾಗಿದ್ದರು. ಆ ರೀತಿ ನಾಟಕ ಕಲಿಸುವಾಗ ಹಿರಿಯೂರು ಗ್ರಾಮದವರು ಗೌರವಾರ್ಥವಾಗಿ ಕೊಟ್ಟ ಜಮೀನು ಅಣ್ಣಾವ್ರ ನೆಚ್ಚಿನ ತಾಣವಾಗಿತ್ತು. ಅಪ್ಪ ಕುಳಿತು ಧ್ಯಾನಿಸುತ್ತಿದ್ದ, ವಿಚಾರ ಲಹರಿಯಲ್ಲಿ ಮುಳುಗಿರುತ್ತಿದ್ದ ಆಲದಮರ ನೆರಳು ಕೊನೆಯವರೆಗೂ ಅಣ್ಣಾವ್ರಿಗೆ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಈಗಲೂ, ಇಲ್ಲಿನ ಆಲದ ಮರದ ಕೆಳಗಿನ ಕಲ್ಲುಬಂಡೆಗಳ ಮೇಲೆ ಕುಳಿತು ಯುವಕರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ, ಭಾವಲಹರಿಯಲ್ಲಿ ಮುಳುಗುತ್ತಾರೆ.

ಊರವರ ಬಾಯಲ್ಲಿ ಮುತ್ತುರಾಜಣ್ಣ: ಡಾ.ರಾಜ್‌ಕುಮಾರ್, ಅಣ್ಣಾವ್ರು ಎಂದು ಪ್ರಪಂಚದ ಜನರು ಕರೆದರೂ ಊರಿನವರಿಗೆ ಮಾತ್ರ ಮುತ್ತುರಾಜಣ್ಣನೇ ಆಗಿದ್ದಾರೆ. ಈಗಲೂ, ಊರಿನ ಬಹುಪಾಲು ಮಂದಿ ಮುತ್ತುರಾಜಣ್ಣ ಎಂದೇ ಸಂಭೋಧಿಸಿ ಮಾತನಾಡುತ್ತಾರೆ. ದೂರದ ಊರುಗಳಿಂದ ಬರುವ ಅಭಿಮಾನಿಗಳಿಗೆ ಮುತ್ತುರಾಜಣ್ಣನ ಮನೆ ತೋರಿಸಿ ಸಂತಸಪಡುತ್ತಾರೆ.
ದೊಡ್ಡಗಾಜನೂರಿಗೆ ಯಾವಾಗ ಬಂದರೂ ತಲೆಗೆ ಪೇಟಾ ಸುತ್ತಿ ನಡೆದುಕೊಂಡು ಬರುತ್ತಿದ್ದ ಅಣ್ಣಾವ್ರು ಪ್ರತಿಯೊಬ್ಬರನ್ನೂ ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. ತಾವು ಹುಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ಜನರ ಯೋಗಕ್ಷೇಮ ಕೇಳುತ್ತಿದ್ದರು. ಅವರು ಪೇಟ ಕಟ್ಟಿ ನಡೆದುಕೊಂಡು ಬರುತ್ತಿದ್ದರೇ ಫಿಲಂ ಹೀರೋ ಅಂಥಾ ಅನಿಸುತ್ತಲೇ ಇರಲಿಲ್ಲ. ನಮ್ಮೂರಿನವರೊಬ್ಬರು, ಬಂಧುಗಳು ಎಂಬ ಭಾವ ಬರುತ್ತಿತ್ತು.
ಅವರು ಯಾವಾಗ ಬಂದರೂ ಆಲದಮರ, ಈ ಹಳೇ ಮನೆಗೆ ಮಾತ್ರ ಭೇಟಿ ನೀಡದೇ ಹೋಗುತ್ತಿರಲಿಲ್ಲ. ಬೆಳಗ್ಗೆನೂ ಬರೋರು, ಸಂಜೆನೂ ಬರೋರು, ತಂದೆ-ತಾಯಿ ಫೋಟೋಗೆ ದೀಪ ಹಚ್ಚಿ ಎಲ್ಲರನೂ ಮಾತನಾಡಿಸಿಕೊಂಡು ಹೋಗುತ್ತದ್ದರು. ಈಗೆಲ್ಲಾ ಬರಿ ನೆನಪು ಎಂದು ಅಣ್ಣಾವ್ರ ಹಳೇ ಮನೆ ಮುಂಭಾಗ ಕುಳಿತಿದ್ದ ವೃದ್ಧೆ ಚಿಕ್ಕಮ್ಮ ನೆನಪಿಸಿಕೊಂಡರು.
ಮನೆ-ಮನೆಗೆ ನುಗ್ಗುತ್ತಿದ್ದ ಮುತ್ತುರಾಜಣ್ಣ: ಗಾಜನೂರಿಗೆ ಬಂದಾಗಲೆಲ್ಲಾ ಅಣ್ಣಾವ್ರು ಇಲ್ಲಿನ ರಾಮಮಂದಿರಕ್ಕೆ ಭೇಟಿ ಕೊಡುತ್ತಿದ್ದರು. ಕಡ್ಲೆಪುರಿಯನ್ನು ಜೊತೆಗೆ ತಂದು ಪೂಜೆ ಮಾಡಿಸಿ, ದಾರಿಯುದ್ದಕ್ಕೂ ಊರಿನ ಚಿಣ್ಣರಿಗೆ ಕಡ್ಲೆಪುರಿ ಹಂಚಿಕೊಂಡು ಹೋಗುತ್ತಿದ್ದರು. ಇಂತಹವರು-ಅಂತಹವರು ಅಂಥಲ್ಲಾ ಎಲ್ಲರ ಮನೆಗೂ ಹೋಗುತ್ತಿದ್ದರು.
ಆಗೆಲ್ಲಾ ನಾವು ಮಡಕೆಯಲ್ಲಿ ಮುದ್ದೆ ಮಾಡುತ್ತಿದ್ದೆವು, ಮುದ್ದೆ-ಅಣ್ಣೆ ಸೊಪ್ಪಿನ ಸಾರು ನಮಗೆ ನಿತ್ಯದ ಊಟವಾಗಿತ್ತು. ಹಮ್ಮು-ಬಿಮ್ಮು ಇಲ್ಲದೇ ಮನೆ-ಮನೆಗೆ ಬರುತ್ತಿದ್ದ ಮುತ್ತುರಾಜಣ್ಣನಿಗೆ ಹಿಟ್ಟಿನ ಸೀಕಲು ಕಂಡ್ರೆ ಬಹಳ ಇಷ್ಟ. ಮುದ್ದೆ ಕೊಟ್ಟರೂ ಸೀಕಲನ್ನು ತಾವೆ ತೆಗೆದು ತಿನ್ನುತ್ತಿದ್ದರು. ನಮ್ಮ ಮನೆಗೂ ಬಂದು ಮದ್ದೆ ತಿಂದಿದ್ದಾರೆ. ಹಿಟ್ಟಿನ ಸೀಕಲನ್ನು ಅಣ್ಣೆ ಸೊಪ್ಪಿನ ಸಾರಿನ ಜೊತೆ ತಿಂದು ಎಷ್ಟು ಹಣ ಕೊಟ್ಟರೂ ಇಂತಹ ಊಟ ನಗರಗಳ್ಲಿ ಸಿಗತ್ತಾ ಅಂತಿದ್ರು ಎಂದು ಅಣ್ಣಾವ್ರ ನಿರಂಹಕಾರ, ಊರಿನವರ ಜೊತೆಗಿದ್ದ ಆತ್ಮೀಯತೆ ಬಗ್ಗೆ ರಾಮಮಂದಿರದ ಮುಂದೆ ಕುಳಿತಿದ್ದ ವೆಂಕಟರಣ ಮೆಲುಕು ಹಾಕಿದರು.
ಊರಿಗೆ ಬಂದರೆ ಅವರಿಗೆ ಆಲದ ಮರದ ನೆರಳು, ಹಳೇ ಮನೆನೇ ನೆಚ್ಚಿನ ತಾಣ. ಹಲವು ವರ್ಷಗಳ ಕಾಲ ಯುಗಾದಿ ಸಮಯದಲ್ಲಿ ನಡೆಯುವ ಕೊಂಡೊತ್ಸವಕ್ಕೆ ಊರಿಗೆ ಬರುತ್ತಿದ್ದರು. ಆಗ ಏನಯ್ಯ-ಅವ್ವ, ಅಮ್ಮ ಅಂಥಾ ಮಾತನಾಡಿಸೋರು. ಪಂಚೆ-ಶರ್ಟ್, ತಲೆಗೊಂದು ಟವೆಲ್ ಕಟ್ಟಿ ಬೀದಿಯಲ್ಲೆಲ್ಲಾ ಸುತ್ತಾಡಿ ಎಲ್ಲರ ಹತ್ರನೂ ಮಾತನಾಡಿಸುತ್ತಿದ್ದರು.
ಇನ್ನು ತೋಟದ ಮನೆಯಲ್ಲಿ ಎಷ್ಟು ದಿನ ಇರುತ್ತಿದ್ದರೋ ಅಷ್ಟು ದಿನವೂ ಗಾಜನೂರಿನ ಹಳೇ ಮನೆ, ರಾಮಮಂದಿರಕ್ಕೆ ಬರುತ್ತಿದ್ದರು. ಪುಟ್ಟಸ್ವಾಮಯ್ಯ ಅವರು ಕುಳಿತುಕೊಳ್ಳುತ್ತಿದ್ದ ಆಲದ ಮರದ ಕೆಳಗೆ ಗಂಟೆಗಟ್ಟಲೆ ಇರೋರು, ಅಪ್ಪು ಕೂಡ ಅಲ್ಲೆಲ್ಲಾ ಓಡಾಡುತ್ತಿದ್ದರು. ಮನೆಯವರಿಗಿಂತ ಹೆಚ್ಚಿನ ವಿಶ್ವಾಸ, ಪ್ರೀತಿಯ ಮಾತುಗಳು ಅವರಲ್ಲಿ ಕಾಣುತ್ತಿದೆವು ಎನ್ನುತ್ತಾರೆ ವೆಂಕಟರಮಣ.
ಅಪ್ಪು ನಿಧನದ ಬಳಿಕ ಊರಿಗೆ ಭೇಟಿ ಕೊಡುವರ ಸಂಖ್ಯೆ ಹೆಚ್ಚಳ: ಅಪ್ಪನಂತೆ ಅಪ್ಪು ಕೂಡ ನಿಗರ್ವಿ, ಅಣ್ಣಾವ್ರ ಹಳೇ ಮನೆಗೆ ಅಪ್ಪು ಭೇಟಿ ನೀಡಿದ ಕೆಲವೇ ತಿಂಗಳಲ್ಲಿ ಪುನೀತ್ ನಿಧನರಾದರು. ಇನ್ನಯ ಹಳೇ ಮನೆಯಲ್ಲಿ ತೆಗೆಸಿಕೊಂಡ ಫೋಟೋಗಳು ಭಾರೀ ವೈರಲ್ಲಾದ್ದವು. ಮುತ್ತುರಾಜಣ್ಣನ ಮನೆ ನೋಡಲು ಅಪ್ಪು ಅಭಿಮಾನಿಗಳು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಒಮ್ಮೊಮ್ಮೆಯಂತೂ ಬೀದಿಯುದ್ದಕ್ಕೂ ವಾಹನಗಳ ಸಾಲೇ ಇರುತ್ತದೆ. ಈಗ ಮನೆಯೆಲ್ಲಾ ದುರಸ್ತಿ ಮಾಡಿದ್ದು, ಹಳೇ ಮನೆಯ ರೂಪವೇ ಉಳಿಸಿಕೊಂಡು ನಾಡಹಂಚನ್ನೇ ಹೊದಿಸಲಾಗಿದೆ. ಇತ್ತೀಚೆಗೆ ಈ ಮನೆ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ. ಎಷ್ಟೋ ದೂರದಿಂದ ಬಂದು ಮನೆ ನೋಡಿಕೊಂಡು ಹೋಗಲಿದ್ದು, ಇದೊಂದು ರೀತಿ ಈಗ ಯಾತ್ರಸ್ಥಳವಾಗಿದೆ, ಪ್ರವಾಸಿತಾಣವಾಗಿ ಬದಲಾಗುತ್ತಿದೆ ಎನ್ನುತ್ತಾರೆ ಗಾಜನೂರಿನ ಹಳೇಮನೆ ಎದುರಿಗೆ ವಾಸ ಮಾಡುವ ಗಿರಿಜಮ್ಮ.
ಬಂಗಾರವನ್ನೇ ಹಾಕುತ್ತಿರಲಿಲ್ಲ: ತಾಳವಾಡಿಯ ಕೂಗಳತೆ ದೂರದಲ್ಲಿರುವ ದೊಡ್ಡಗಾಜನೂರಿನ ಮನೆಯನ್ನು ಅಣ್ಣಾವ್ರು ಬಹಳಷ್ಟು ಅಕ್ಕರೆಯಿಂದ ಕಟ್ಟಿಸಿದ್ದರು. ತಮ್ಮ ವಿಶ್ರಾಂತಿ ಕಾಲವನ್ನು ಇಲ್ಲೇ ಕಳೆಯಬೇಕೆಂದು ಅವರಿಗೆ ಬಹಳ ಆಸೆಯಿತ್ತು. ಏನ್ ಮಾಡೋದು, ಆ ಕಟುಕ ಕಿಡ್ನಾಪ್ ಮಾಡದೇ ಇದ್ದಿದ್ರೇ ಅಣ್ಣಾವ್ರು ಇಲ್ಲೇ ಇರುತ್ತಿದ್ದರು. ಈ ಮನೆ ಗೃಹಪ್ರವೇಶದ ವೇಳೆ ತರಾತುರಿಯಲ್ಲಿ ಮನೆಗೆ ಸುಣ್ಣ ಹಚ್ಚಿಸಿದ್ದೆವು. ಈಗ್ಗೆ ಒಂದು ವರ್ಷದ ಹಿಂದೆ ಪೇಂಟ್ ಮಾಡಿಸಿದ್ದೇವೆ ಎಂದು ರಾಜ್ ಸಹೋದರಿ ನಾಗಮ್ಮ ಅವರ ಮಗ ಗೋಪಾಲ್ ಹೇಳಿದರು.
ಗಾಜನೂರು ಅಂದ್ರೆ ರಾಜನೂರು, ಬಂಗಾರವನ್ನೇ ಹಾಕದ ಬಂಗಾರದ ಮನುಷ್ಯ ಅವರು. ದೊಡ್ಡಸ್ಥಿಕೆ ಇರಲಿಲ್ಲ, ಬದಲಿಗೆ ವಿಶಾಲ ಹೃದಯವಂತಿಕೆ ಅವರಿಲ್ಲಿತ್ತು. ಕಾಲಚಕ್ರ ಉರುಳುತ್ತಿದೆ, ಆದ್ರೆ ಅಣ್ಣಾವ್ರು ನೆನಪು ಮತ್ತಷ್ಟು ಗಟ್ಟಿಯಾಗುತ್ತಿದೆ. ಊರಿನ ಬೀದಿಗಳು, ದೇವಾಲಯ, ಆಲದ ಮರ, ಈ ಮನೆಯ ಯಾವ ಮೂಲೆಗೆ ಹೋದರೂ ಅವರು ನೆನಪಾಗುತ್ತಾರೆ. ಜನರು ಈಗಲೂ ನೆನೆಸಿಕೊಳ್ಳುತ್ತಾರೆ ಎನ್ನುತ್ತಾರೆ ರಾಜ್ ಸಹೋದರಿ ನಾಗಮ್ಮ ಅವರ ಮಗ ಗೋಪಾಲ್.
ಹುಟ್ಟಿದ ಮನೆ ತೀರಾ ಶಿಥಿಲಾವಾಸ್ಥೆಗೆ ಬಂದು ತಲುಪಿತ್ತು, ಅಪ್ಪು ಕಾಲವಾದ ಬಳಿಕ ಮನೆಯನ್ನು ದುರಸ್ತಿ ಮಾಡಲಾಗಿದೆ. ಈ ಹಿಂದೆ ಹೇಗಿತ್ತೋ ಆದೇ ರೀತಿ ನಾಡಹೆಂಚಿನ ಮನೆಯಾಗಿ ಉಳಿಸಿದ್ದೇವೆ. ಹೊಸ ಮನೆಗೆ ಶಿವಣ್ಣ, ರಾಘಣ್ಣ ಬಂದರೆ ಅಭಿಮಾನಿಗಳು ಇಲ್ಲಿಗೆ ಬರುತ್ತಾರೆ. ಉಳಿದಂತೆ ಹಳೇ ಮನೆಗೆ ಹೆಚ್ಚು ಜನರು ಹೋಗುತ್ತಾರೆ ಎಂದು ಗೋಪಾಲ್ ಹೇಳಿದರು.
ಯುವಕರಿಗೂ ಅಚ್ಚುಮೆಚ್ಚು ಅಣ್ಣಾವ್ರು: ತಮಿಳು ಚಿತ್ರಗಳ ಪ್ರಭಾವ, ಯುವ ನಟರ ಭರಾಟೆ ನಡುವೆಯೂ ಇಲ್ಲಿನ ಯುವಕರಿಗೆ ಅಣ್ಣಾವ್ರು ನೆಚ್ಚಿನ ಹೀರೋ ಆಗಿದ್ದಾರೆ. ಯುವಜನತೆ ಬಾಯಲ್ಲೂ ಅಣ್ಣಾವ್ರು ಮುತ್ತುರಾಜಣ್ಣನಾಗೇ ಉಳಿದಿದ್ದಾರೆ. ಅಣ್ಣಾವ್ರ ಜೊತೆ ಇವರು ನೇರವಾಗಿ ಬೆರೆಯದಿದ್ದರೂ, ನೋಡದಿದ್ದರೂ ಮಹಾನ್ ನಟ ತಮ್ಮೂರಿನವರು ಎಂಬ ಹೆಮ್ಮೆ ಇಲ್ಲಿನ ಯುವಜನತೆಗಿದೆ.
ಅರ್ಧಕ್ಕೆ ನಿಂತ ವರನಟನ ಪ್ರತಿಮೆ: ಜಗತ್ತಿನಲ್ಲೆಡೆ ಮಹಾತ್ಮಾ ಗಾಂಧಿ ಹೆಸರಿನ ರಸ್ತೆಗಳು, ಪ್ರತಿಮೆಗಳು ಇರುವಂತೆ ರಾಜ್ಯದ ವಿವಿಧ ಮೂಲೆಗಳಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಪುತ್ಥಳಿಗಳು, ರಾಜ್ ಹೆಸರಿನ ರಸ್ತೆ, ಉದ್ಯಾನವನಗಳಿವೆ. ಈ ಭಾಗ್ಯ ರಾಜ್ ಹೂಟ್ಟೂರಿಗೆ ಒದಗಿಲ್ಲ. ದೊಡ್ಡಗಾಜನೂರು ಮುಂಭಾಗ ಸ್ಥಾಪಿಸಲು ಉದ್ದೇಶಿಸಿದ್ದ ಪುತ್ಥಳಿ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ. ಊರಿನ ಮುಂಭಾಗವೇ ಡಾ.ರಾಜ್‌ಕುಮಾರ್ ವೃತ್ತ ಎಂದು ಪುತ್ಥಳಿ ಕಾಮಗಾರಿಗೆ ಚಾಲನೆ ದೊರೆತು 7-8 ವರ್ಷವಾಗಿದ್ದರೂ, ಇನ್ನು ಮುಗಿಯದೇ ನನೆಗುದಿಗೆ ಬಿದ್ದಿದೆ.
ಕಲಾವಿದನಿಗೆ ಸಾವಿದೆಯೇ ಹೊರತು, ಕಲೆಗಲ್ಲ ಎಂಬ ಮಾತು ಅಕ್ಷರಶಃ ಗಾಜನೂರಲ್ಲಿ ಸತ್ಯವಾಗಿದ್ದು. ಮೂರನೇ ತಲೆಮಾರಿನ ಯುವಕರೂ ಅಣ್ಣಾವ್ರ ಅಭಿನಯಕ್ಕೆ ಮಾರು ಹೋಗಿದ್ದಾರೆ. ಗಾಜನೂರಿನಲ್ಲಿ ಮುತ್ತು ರಾಜಣ್ಣನ ನೂರಾರು ನೆನಪುಗಳು ಜನಪದದಂತೆ ವರ್ಗವಾಗುತ್ತಲೇ ಇದೆ. ರಾಜ್‌ಕುಮಾರ್ ಇಲ್ಲಿ ಎಲ್ಲವೂ ಆಗಿದ್ದಾರೆ, ಎಲ್ಲರಲ್ಲೂ ಇದ್ದಾರೆ, ಮುಂದೆಯೂ ಇರಲಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications