ಕರ್ನಾಟಕದ ದೇವಾಲಯಗಳ ಆಸ್ತಿ ಒತ್ತುವರಿ ತೆರವಿಗೆ ಮುಂದಾದ ಸರ್ಕಾರ: ಸರ್ವೇಗೆ ಚಾಲನೆ
ಕರ್ನಾಟಕದ ಕೆಲವೊಂದು ದೇವಸ್ಥಾನಗಳ ಆಸ್ತಿ ಒತ್ತುವರಿ ತೆರವಿಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಧಾರ್ಮಿಕ ಇಲಾಖೆಯಲ್ಲಿ ಎ,ಬಿ,ಸಿ ವರ್ಗದ ದೇವಸ್ಥಾನಗಳ ಆಸ್ತಿ ಒತ್ತುವರಿಯಾಗಿರುವುದು ಕಂಡು ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ವೇ ಮಾಡಿ, ಒತ್ತುವರಿಯನ್ನು ತೆರವುಗೊಳಿಸಲು ಪ್ರತಿಯೊಂದು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದೇವಾಲಯದಲ್ಲಿ ಭಕ್ತರಿಗೆ ದರ್ಶನ ಪಡೆಯಲು, ಪ್ರಸಾದ ಸ್ವೀಕಾರಕ್ಕೆ ಮತ್ತು ವಸತಿ ವಿಚಾರದಲ್ಲಿ ತೊಂದರೆಯಾಗಬಾರದು. ದೇವಸ್ಥಾನಕ್ಕೆ ಬರುವ ಹಣವನ್ನು ಪ್ರಾಧಿಕಾರದ ಅನುಮತಿ ಪಡೆದು ಖರ್ಚು ಮಾಡಬೇಕು ಎಂದು ಸೂಚಿಸಿದ್ದೇವೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಖರ್ಚು ಮಾಡಲು ಬಿಡುವುದಿಲ್ಲ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಎಸ್‌ಒಪಿ, ನಿಯಮಗಳನ್ನು ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಭಾಗದ ಸಮಸ್ಯೆಗಳ ಬಗ್ಗೆ, ವಿಶೇಷವಾಗಿ ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ಅನೇಕ ಸಮಸ್ಯೆಗಳು ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ, ಬೆಳೆ ನಾಶದಿಂದಾಗಿ ಜನರ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಬೆಳಗಾವಿ ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸುತ್ತಿದೆ. ಹೀಗಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದೆ. ಜೂನ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ.

ಇದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಕಷ್ಟವಾಗಬಹುದು. ಹೀಗಾಗಿ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಚರ್ಚಿಸಿ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಸಂಬಂಧ ಪ್ಲಾನ್ ಆಫ್ ಆ್ಯಕ್ಷನ್ ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಕಾರ್ಯಗತಗೊಳಿಸುತ್ತಾರೆ. ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ 5 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಂದಾಯ ಇಲಾಖೆಯಲ್ಲಿ ಪೌತಿ ಖಾತೆ, ಹಕ್ಕು ಪತ್ರ ವಿತರಣೆ, ಆಕಾರ್ ಬಂದ್, ಕಂದಾಯ ಗ್ರಾಮಗಳ ಘೋಷಣೆ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಅದನ್ನು ಮತ್ತಷ್ಟು ವೇಗವಾಗಿ ಮಾಡಲು ತೀರ್ಮಾನಿಸಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸುವುದಾಗಿ ಹೇಳಿದರು. ಇನ್ನೂ ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ. ಮೂಲಸೌಕರ್ಯ ವ್ಯವಸ್ಥೆ ಕಡಿಮೆ ಇರುವ ಜಿಲ್ಲಾ ಮಟ್ಟದ ಶಾಲಾ-ಕಾಲೇಜುಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವಂತೆ ಮಾಡಲಾಗುವುದು. ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ. ಗೃಹ ಇಲಾಖೆಯ ನೇಮಕಾತಿಯಲ್ಲಿ ಶೇ. 3ರಷ್ಟು ಮತ್ತು ಬೇರೆ ಇಲಾಖೆಗಳ ನೇಮಕಾತಿಯಲ್ಲಿ ಶೇ. 2ರಷ್ಟು ಮೀಸಲಾತಿ ನೀಡಲಾಗುವುದು ಎಂದರು.
ಬರ ಘೋಷಣೆ ಮಾಡುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬರ ತಾಲ್ಲೂಕು ಅಥವಾ ಜಿಲ್ಲೆ ಎಂದು ಘೋಷಣೆ ಮಾಡಲು ಮಾನದಂಡಗಳಿವೆ. ಮಳೆ ಬೀಳದಿರುವುದು, ಬೆಳೆ ನಷ್ಟ, ನೀರಿನ ಮಟ್ಟ ಲೆಕ್ಕ ಹಾಕಿ ಘೋಷಣೆ ಮಾಡಲಾಗುತ್ತದೆ. ಈ ಬಗ್ಗೆ ಸದ್ಯ ಚರ್ಚೆ ನಡೆದಿಲ್ಲ. ಮೋಡ ಬಿತ್ತನೆ ಬಗ್ಗೆ ಚಿಂತನೆ ಇಲ್ಲ. ಸಂದರ್ಭ ನೋಡಿಕೊಂಡು ಮಾಡಲಾಗುವುದು. ಪ್ರತಿ ಬಾರಿ ಇಂತಹ ಪರಿಸ್ಥಿತಿ ಎದುರಾದಾಗ ಕೇಂದ್ರದ ಗಮನಕ್ಕೆ ತರುತ್ತೇವೆ. ರಾಜಕೀಯವಾಗಿ ಮಾತನಾಡಲು ಹೋಗುವುದಿಲ್ಲ. ನಾವು ಕೊಟ್ಟ ವರದಿಗೆ ಶೇ. 10ರಷ್ಟು ಪರಿಹಾರ ಕೇಂದ್ರದಿಂದ ಸಿಕ್ಕಿಲ್ಲ ಎಂದು ಕೇಂದ್ರದ ಅಸಹಕಾರದ ಬಗ್ಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications