ವಿರೋಧಿಗಳ ನಡುವೆ ಮೈತ್ರಿ: ಶಿವಸೇನಾ-ಕಾಂಗ್ರೆಸ್ 'ಹಸ್ತಲಾಘವ' ಸಾಧ್ಯವೇ?
ಮಹಾರಾಷ್ಟ್ರದಲ್ಲಿ ಸೈದ್ಧಾಂತಿಕವಾಗಿ ತನ್ನ ಬದ್ಧ ವೈರಿಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆಗೆ ಶಿವಸೇನಾ ಕೈಜೋಡಿಸಿ ಸರ್ಕಾರ ರಚಿಸುವ ವಿಚಾರವೇ ಅಚ್ಚರಿ ಮೂಡಿಸಿತ್ತು. ಎನ್‌ಸಿಪಿ ಜತೆಗೆ ರಾಜಕೀಯವಾಗಿ ಉತ್ತಮ ಬಾಂಧವ್ಯ ಹೊಂದಿದ್ದರೂ, ಬಿಜೆಪಿ ಅಥವಾ ಶಿವಸೇನಾ, ಸರ್ಕಾರ ರಚನೆಗೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರ ಅಸಾಧ್ಯ ಎಂಬುದು ಅವುಗಳ ರಾಜಕೀಯ ವಿಚಾರಧಾರೆಗಳನ್ನು ಬಲ್ಲವರಿಗೆ ತಿಳಿದ ವಿಚಾರ. ಆದರೆ ಮುಖ್ಯಮಂತ್ರಿ ಗಾದಿಗಾಗಿ ಪಟ್ಟು ಹಿಡಿದಿದ್ದ ಶಿವಸೇನಾ, ಬಿಜೆಪಿಯೊಂದಿಗಿನ ಸುಮಾರು 35 ವರ್ಷಗಳ ಸಖ್ಯ ತೊರೆದು ತನ್ನ ರಾಜಕೀಯ ಕಡು ವೈರಿಯ ಜತೆಗೂಡಿ ಸರ್ಕಾರ ರಚನೆಗೆ ಮುಂದಾಗಿದೆ.
ಶಿವಸೇನಾ ಸಂಸ್ಥಾಪಕ ಬಾಳ ಠಾಕ್ರೆ ತಮ್ಮ ಬದುಕಿನುದ್ದಕ್ಕೂ ಕಾಂಗ್ರೆಸ್‌ಅನ್ನು ವಿರೋಧಿಸಿಕೊಂಡೇ ಬಂದಿದ್ದರು. ಮಹಾರಾಷ್ಟ್ರದಲ್ಲಿ ತಮ್ಮ ಕುಟುಂಬದವರು ಮುಖ್ಯಮಂತ್ರಿಯಾಗುವುದು ಖಚಿತ ಎಂದು ತಂದೆಗೆ ನೀಡಿದ್ದ ಮಾತನ್ನು ಈಡೇರಿಸುವುದಾಗಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳುತ್ತಿದ್ದಾರೆ. ಆದರೆ ಅದಕ್ಕಾಗಿ ಅವರು ತಂದೆ ತೀವ್ರವಾಗಿ ವಿರೋಧಿಸುತ್ತಿದ್ದ ಕಾಂಗ್ರೆಸ್ ಜತೆಗೆ ಸೇರಿಕೊಳ್ಳುತ್ತಿರುವುದು ಸರಿಯೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಚುನಾವಣೆಗೂ ಮುನ್ನ ಬಿಜೆಪಿ-ಶಿವಸೇನಾ ನಡುವೆ ನಡೆದಿದ್ದ ಮೈತ್ರಿ ಫಲಿತಾಂಶ ಬಂದ ದಿನದಿಂದಲೇ ಮುರಿದುಬಿದ್ದಂತಾಗಿತ್ತು.
ಈ ರೀತಿಯ ವಿಭಿನ್ನ ವಿಚಾರಧಾರೆಯುಳ್ಳ ರಾಜಕೀಯ ಪಕ್ಷಗಳು ಸೇರಿ ಸರ್ಕಾರ ರಚಿಸಿರುವುದು ಇದು ಮೊದಲ ಸಲವೇನಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಬದ್ಧ ವಿರೋಧಿಗಳೊಂದಿಗೆ ಮೈತ್ರಿ ಮಾಡಿಕೊಂಡ ಉದಾಹರಣೆಗಳಿವೆ. ಸ್ವತಃ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೂ ಮೈತ್ರಿ ನಡೆದಿದೆ. ಅಂತಹ ಕೆಲವು ಮೈತ್ರಿಗಳ ಮಾಹಿತಿ ಇಲ್ಲಿದೆ.

ಕಾಂಗ್ರೆಸ್-ಬಿಜೆಪಿ ಮೈತ್ರಿ
ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಅಸಹಜ ಎನಿಸುವ ಮೈತ್ರಿ ನಡೆದಿರುವುದು ಮಿಜೋರಾಂನ ಚಕ್ಮಾ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ನಲ್ಲಿ. ಇಲ್ಲಿ 2018ರಲ್ಲಿ 20 ಸದಸ್ಯರ ಕೌನ್ಸಿಲ್‌ಗೆ ಚುನಾವಣೆ ನಡೆದಿತ್ತು. ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಪ್ರಭುತ್ವ ಮೈತ್ರಿಕೂಟ (ಎನ್‌ಇಡಿಎ) ಎಂಟು ಸ್ಥಾನಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಗೆದ್ದಿದ್ದರೆ ಬಿಜೆಪಿ ಐದರಲ್ಲಿ ಗೆಲುವು ಸಾಧಿಸಿತ್ತು. ಇಲ್ಲಿ ಬದ್ಧ ವೈರಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜತೆಗೂಡಿ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದ್ದವು.

ಬಿಜೆಪಿ-ಪಿಡಿಪಿ ಮೈತ್ರಿ
2014ರಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಬಳಿಕ ಎರಡು ವಿಭಿನ್ನ ಸಿದ್ಧಾಂತಗಳ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಬಿಜೆಪಿ ಅಚ್ಚರಿಯ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಪಿಡಿಪಿ ಪ್ರತ್ಯೇಕತಾವಾದಿಗಳ ಪರವಾದ ಪಕ್ಷ ಎಂದು ಚುನಾವಣೆಗೂ ಮುನ್ನ ಬಿಜೆಪಿ ಗಂಭೀರ ಆರೋಪಗಳನ್ನು ಮಾಡಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಬಿಜೆಪಿ ಹೇಳುತ್ತಿದ್ದರೆ, ಭಾರತದೊಂದಿಗಿನ ಇತರೆ ಭಾಗಗಳೊಂದಿಗೆ ಸಂಬಂಧ ಇರಿಸಿಕೊಳ್ಳಲು ಆ ವಿಧಿ ನೆರವಾಗುತ್ತಿದೆ ಎಂದು ಪಿಡಿಪಿ ಪ್ರತಿಪಾದಿಸುತ್ತಿತ್ತು. ಇಂತಹ ವೈರುಧ್ಯ ಚಿಂತನೆಗಳ ನಡುವೆಯೂ ಬಿಜೆಪಿ ನಾಯಕ ರಾಮ್ ಮಾಧವ್ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. 2018ರಲ್ಲಿ ಒಡಕು ಮೂಡಿದ ಕಾರಣ ಮೈತ್ರಿ ಮುರಿದುಬಿತ್ತು.

ಕಾಂಗ್ರೆಸ್-ಎಎಪಿ ಸರ್ಕಾರ
ಲೋಕಪಾಲ್ ರಚನೆಗಾಗಿ ನಡೆದ ಬೃಹತ್ ಹೋರಾಟ ಮುಂದೆ ಆಮ್ ಆದ್ಮಿ ಪಕ್ಷದ (ಎಎಪಿ) ಉಗಮಕ್ಕೂ ವೇದಿಕೆಯಾಯಿತು. ದೇಶದಾದ್ಯಂತ ಸಂಚಲನ ಮೂಡಿಸಿದ ಈ ಚಳವಳಿ ನಡೆದಾಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿತ್ತು. 2013ರಲ್ಲಿ ದೆಹಲಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಮುಖ್ಯವಾಗಿ ಕಾಂಗ್ರೆಸ್ ಅನ್ನು ಗುರಿಯಾಗಿರಿಸಿಕೊಂಡು ಪ್ರಚಾರ ನಡೆಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ ಎಎಪಿ ಎರಡನೆಯ ಸ್ಥಾನ ಪಡೆದಿತ್ತು. ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಎದುರು ಅರವಿಂದ್ ಕೇಜ್ರಿವಾಲ್ ಜಯಗಳಿಸುವ ಮೂಲಕ ಕಾಂಗ್ರೆಸ್‌ಅನ್ನು ಮೂರನೇ ಸ್ಥಾನಕ್ಕೆ ಇಳಿಸಿದ್ದರು. ಆದರೆ ಬಹುಮತವಿಲ್ಲದ ಬಿಜೆಪಿ ಸರ್ಕಾರ ರಚಿಸಲು ಮುಂದಾಗಲಿಲ್ಲ. ಹೀಗಾಗಿ ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ಎಎಪಿ ಸರ್ಕಾರ ರಚಿಸಿತು.

ಜೆಡಿಎಸ್-ಕಾಂಗ್ರೆಸ್ ಸರ್ಕಾರ
2004ರಲ್ಲಿ ಕರ್ನಾಟಕಲ್ಲಿ ಬಿಜೆಪಿ 79 ಸೀಟುಗಳೊಂದಿಗೆ ದೊಡ್ಡ ಪಕ್ಷವಾಗಿ ಮೂಡಿತ್ತು. ಆದರೆ 65 ಶಾಸಕರಿದ್ದ ಕಾಂಗ್ರೆಸ್ ಮತ್ತು 58 ಸದಸ್ಯರಿದ್ದ ಜೆಡಿಎಸ್ ಸೇರಿ ಸರ್ಕಾರ ರಚಿಸಿದ್ದವು. ಎರಡು ವರ್ಷದೊಳಗೇ ಜೆಡಿಎಸ್ ಬೆಂಬಲ ಹಿಂಪಡೆದುಕೊಂಡು ಸರ್ಕಾರ ಉರುಳಿಸಿತು. ತನ್ನ ಮತ್ತೊಂದು ವಿರೋಧಿ ಪಕ್ಷ ಬಿಜೆಪಿ ಜತೆಗೂಡಿ 20-20 ಸರ್ಕಾರ ರಚಿಸಿತು. ಆದರೆ 20 ತಿಂಗಳು ಕಳೆದ ಬಳಿಕ ಜೆಡಿಎಸ್ ಅಧಿಕಾರ ಹಸ್ತಾಂತರ ಮಾಡದ ಕಾರಣ ಸರ್ಕಾರ ಪತನಗೊಂಡಿತು. 2018ರಲ್ಲಿ ಕೂಡ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದ ಬೆನ್ನಲ್ಲೇ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಸರ್ಕಾರ ರಚಿಸಿತು. ಶಾಸಕರ ರಾಜೀನಾಮೆ ಪ್ರಹಸನ ನಡೆದು ಒಂದು ವರ್ಷದ ಬಳಿಕ ಆ ಸರ್ಕಾರ ಕೂಡ ಪತನಗೊಂಡಿತು.

ಬಿಜೆಪಿ-ಬಿಎಸ್‌ಪಿ ಸರ್ಕಾರ
1993ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದರು. 1995ರಲ್ಲಿ ಮಾಯಾವತಿ ತಮ್ಮ ಶಾಸಕರೊಂದಿಗೆ ಅತಿಥಿಗೃಹ ಒಂದರಲ್ಲಿ ಸಭೆ ನಡೆಸುವ ವೇಳೆ ಎಸ್‌ಪಿಯ ಬೆಂಬಲಿಗರು ಅವರ ಮೇಲೆ ದಾಳಿ ನಡೆಸಿತ್ತು. ಈ ಘಟನೆ ಬಳಿಕ ಎಸ್‌ಪಿ-ಬಿಎಸ್‌ಪಿ ಮೈತ್ರಿ ಮುರಿದುಬಿತ್ತು. ಬಿಜೆಪಿ ಮತ್ತು ಜನತಾದಳದ ಬಾಹ್ಯ ಬೆಂಬಲದೊಂದಿಗೆ ಮಾಯಾವತಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications