• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಮೆರಿಕ ಗ್ರೇಟ್' ಮಾಡಲು ಹೊರಟ ಟ್ರಂಪ್ ಸೋಲಿನಲ್ಲಿ ಈ ಪಾಠಗಳು ಇವೆಯೇ?

By ಅನಿಲ್ ಆಚಾರ್
|

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಇಡೀ ಜಗತ್ತಿನ ಪಾಲಿಗೆ ಒಂದು ಸ್ಥಿತ್ಯಂತರದ ದ್ಯೋತಕವಾಗಿ ಕಾಣುತ್ತಿದೆ. ಇದರಲ್ಲಿ 'ವ್ಯಕ್ತಿ ಪೂಜೆ' ಹಾಗೂ ದೇಶ- ಜನರ ವಿಚಾರ ಬಂದಾಗ ಭಾವನಾತ್ಮಕ ಸಂಗತಿಗಳ ರಾಜಕೀಯ ಮಾಡುವ ಭಾರತ ಸೇರಿ ಹಲವು ದೇಶಗಳ ರಾಜಕಾರಣಿಗಳಿಗೆ ಪಾಠ ಇದೆ.

ಇದನ್ನು ಹಲವರು ಒಪ್ಪಬಹುದು. ಕೆಲವರು ಹೀಗಳೆಯಬಹುದು. ಏಕೆಂದರೆ, ಕೊರೊನಾ ಬಿಕ್ಕಟ್ಟನ್ನು ನಿರ್ವಹಿಸಿದ ಬಗೆ ಡೊನಾಲ್ಡ್ ಟ್ರಂಪ್ ಸೋಲಿನಲ್ಲಿ ಅತಿ ಮುಖ್ಯ ಪಾತ್ರ ವಹಿಸಿದೆ.

ಸೋತರೂ ಸುಮ್ಮನಾಗದ ಟ್ರಂಪ್ ಟ್ವೀಟ್ ರಂಪಾಟ ಶುರು

ಆತ ಕೂಡ ಅಮೆರಿಕನ್ನರ ಜತೆ ರಾಷ್ಟ್ರೀಯತೆ ವಿಷಯವನ್ನೇ ಮುಂದೆ ಮಾಡಿಕೊಂಡು ರಾಜಕೀಯ ದಾಳ ಉರುಳಿಸುತ್ತಿದ್ದರು. ಇನ್ನೇನು ಚುನಾವಣೆಗೆ ಎಂಟು ಹತ್ತು ತಿಂಗಳು ಇರುವಾಗ ಕೊರೊನಾದಿಂದ ಅಮೆರಿಕನ್ನರು ತತ್ತರಿಸಿ ಹೋದರು. ಆಗಲೂ ಈ ವ್ಯಕ್ತಿ, ಅಧ್ಯಕ್ಷನಾಗಿ ಮಾಡಿದ್ದು ರಾಜಕಾರಣವನ್ನೇ. ಕೊನೆಗೆ ಟ್ರಂಪ್ ಗೇ ಕೊರೊನಾ ಪಾಸಿಟಿವ್ ಆಗಿದ್ದು ಇದೆಯಲ್ಲಾ ಅಲ್ಲಿಂದ ಆಚೆಗೆ ಸೋಲು ಖಾತ್ರಿಯಾಯಿತು.

ಆ ಘಟನೆಯನ್ನು ಪ್ರಚಾರ, ಚುನಾವಣೆ ಅಂತ ಮಾತ್ರ ನೋಡುವ ಅಗತ್ಯ ಇಲ್ಲ. ಅಷ್ಟು ಹೊತ್ತಿಗೆ ಅಮೆರಿಕನ್ನರ ಸ್ಥಿತಿ ಏನಾಗಿತ್ತು ಅಂತ ಆಲೋಚಿಸಿದರೂ ಸಾಕು. ಅಮೆರಿಕದಲ್ಲಿ ಜೆಫ್ ಬೆಜೋಸ್, ಟೆಸ್ಲಾದ ಎಲಾನ್ ಮಸ್ಕ್ ಇಂಥವರದೇ ರಾಜ್ಯಭಾರ. ಅಲ್ಲಿನ ಬಂಡವಾಳಶಾಹಿಗಳ ವಿರುದ್ಧ ಭಾರೀ ಪ್ರತಿಭಟನೆಗಳಾದವು.

ನಾನು ಈ ಚುನಾವಣೆಯಲ್ಲಿ ಬಹಳಷ್ಟು ಗೆದ್ದಿದ್ದೇನೆ: ಡೊನಾಲ್ಡ್ ಟ್ರಂಪ್ ಟ್ವೀಟ್

ಇನ್ನು ಟ್ರಂಪ್ ನದು ವ್ಯಾಪಾರವೇ ವೃತ್ತಿ. ಜನರ ಜೀವ- ಜೀವನಕ್ಕಿಂತ ಹೆಚ್ಚು ಮಹತ್ವ ಪಡೆದದ್ದು ವ್ಯಾಪಾರ- ವ್ಯವಹಾರ ಇಂಥವೇ. ಕೊನೆಗೂ ಇನ್ನೊಂದು ಸುತ್ತಿನ ಕೊರೊನಾ ಆರ್ಥಿಕ ಪ್ಯಾಕೇಜ್ ಅನ್ನು ಟ್ರಂಪ್ ಘೋಷಣೆ ಮಾಡಲೇ ಇಲ್ಲ.

ಟ್ರಂಪ್ ನಿಂದ ಅಮೆರಿಕ ಗ್ರೇಟ್ ಆಗಬೇಕಿರಲಿಲ್ಲ

ದಿನದ ಕೊನೆಗೆ ಜನ ಸಾಮಾನ್ಯರಿಗೆ ಮುಖ್ಯ ಆಗುವುದು ತಮ್ಮ ಮನೆ ಬಾಗಿಲಿಗೆ ಬಂದು ನಿಂತ ಸಮಸ್ಯೆಗಳನ್ನು ನಾಯಕನಾದ ವ್ಯಕ್ತಿ ಹೇಗೆ ನಿರ್ವಹಿಸುತ್ತಿದ್ದಾನೆ ಎಂಬ ಸಂಗತಿಯೇ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕೊರೊನಾ ಸ್ಥಿತಿ ಬಗ್ಗೆ ಮಾತನಾಡದೆ ಅಮೆರಿಕವನ್ನು ಗ್ರೇಟ್ ಮಾಡ್ತೀನಿ, ವಲಸಿಗರನ್ನು ದೂರವಿಡ್ತೀನಿ ಎಂಬ ಸಂಗತಿಗಳನ್ನೇ ಟ್ರಂಪ್ ಚುನಾವಣೆ ವಿಷಯ ಮಾಡಿಕೊಂಡಿದ್ದರ ಫಲ ಇದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಏಕೆಂದರೆ, ಟ್ರಂಪ್ ನಿಂದ ಅಮೆರಿಕ ಗ್ರೇಟ್ ಆಗಬೇಕಿರಲಿಲ್ಲ. ಅದಾಗಲೇ ಗ್ರೇಟ್ ಆಗಿತ್ತು. ಬಲಪಂಥೀಯವೋ ಅಥವಾ ಎಡಪಂಥೀಯವೋ ಯಾವ ವಿಚಾರಧಾರೆಯೇ ಆಗಿರಲಿ, ಭಾವನಾತ್ಮಕ ವಿಚಾರಗಳಿಂದ ಮನೆ ಅಡುಗೆಗೆ ಬದನೇಕಾಯಿ ತರುವುದಕ್ಕೆ ಕೂಡ ಆಗುವುದಿಲ್ಲ. ಅದಕ್ಕಾಗಿಯೇ ಅಮೆರಿಕನ್ನರು ನೀಡಿರುವ ಫಲಿತಾಂಶ ನಮ್ಮೆದುರು ಇರುವ ಉತ್ತರ.

ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆ

ನಿರುದ್ಯೋಗ, ಜಿಡಿಪಿ, ಹಸಿವು, ಪೆಟ್ರೋಲ್- ಡೀಸೆಲ್ ದರ, ಕೊರೊನಾದಂಥ ಸಂದರ್ಭದಲ್ಲಿ ಆರೋಗ್ಯ ವ್ಯವಸ್ಥೆ, ದೇಶವನ್ನು ಮುನ್ನಡೆಸುವ ರೀತಿ, ಬ್ಯಾಂಕಿಂಗ್ ವ್ಯವಸ್ಥೆ ಈ ಎಲ್ಲವೂ ಗಣನೆಗೆ ಬರುತ್ತದೆ.

ಆದರೆ, ಏನು ಮಾಡ್ತೀರಿ? ಇದು ಆಳುವ ವರ್ಗಕ್ಕೇ ಇರುವ ಸಮಸ್ಯೆ. ಒಂದು ಭಯವನ್ನು ಸೃಷ್ಟಿಸಿ, ಅದನ್ನು ಬೆದರು ಬೊಂಬೆಯಂತೆ ತೋರಿಸಿ, ತಮ್ಮ ಅಧಿಕಾರವನ್ನು ಗಟ್ಟಿ ಮಾಡಿಕೊಳ್ಳುತ್ತಾರೆ.

ಬಿಜೆಪಿ ಹಾಗೂ ರಿಪಬ್ಲಿಕನ್ ಪಾರ್ಟಿ ಒಂದೇ ಥರ: ವೈಎಸ್ ವಿ ದತ್ತ

ಆದರೆ, ನಿಜವಾಗಿಯೂ ಸಮಸ್ಯೆಯೇ ಬಂದಾಗ ಅದನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಅಸಮರ್ಥರಾದರೆ ಅದಕ್ಕೆ ಜನರೇ ಹೇಗೆ ಉತ್ತರ ಕೊಡುತ್ತಾರೆ ಎಂಬುದಕ್ಕೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಉತ್ತರವಾಗಿ ನಮ್ಮೆದುರು ಇದೆ. ಹಾಗೆ ನೋಡಿದರೆ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ (ಉಪ ಚುನಾವಣೆಗಳನ್ನು ಹೊರತುಪಡಿಸಿ) ಕೂಡ ಭವಿಷ್ಯದ ರಾಜಕೀಯ ಬದಲಾವಣೆಗೆ ದಿಕ್ಸೂಚಿ ಆಗಲಿದೆ.

ಜೆಡಿಎಸ್ ಮುಖಂಡರಾದ ವೈಎಸ್ ವಿ ದತ್ತ ಅವರು ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿ, "ಜೋ ಬೈಡೆನ್ ಗೆಲುವನ್ನು ನಾವು ಸ್ವಾಗತಿಸುತ್ತೇವೆ. ರಿಪಬ್ಲಿಕನ್ ಹಾಗೂ ಬಿಜೆಪಿಯ ಅಜೆಂಡಾ ಒಂದೇ ಥರಾ. ಎರಡೂ ಸಾಂಪ್ರದಾಯಿಕ ಪಕ್ಷಗಳು. ಆದ್ದರಿಂದ ಟ್ರಂಪ್ ಸೋಲು ಸಂತೋಷ ತಂದಿದೆ. ಆದರೆ ಅದೇ ರೀತಿಯ ಬದಲಾವಣೆ ಭಾರತದಲ್ಲೂ ಆಗಬಹುದು ಎಂಬ ನಂಬಿಕೆ ನನಗಿಲ್ಲ," ಎಂದರು.

"ಭಾರತದಲ್ಲಿ ರಾಜಕೀಯ ವ್ಯಕ್ತಿಗಳು ಮಾತ್ರ ಭ್ರಷ್ಟರಾಗಿಲ್ಲ. ವ್ಯವಸ್ಥೆಯೂ ಭ್ರಷ್ಟವಾಗಿದೆ. ಚುನಾವಣೆಗಳಲ್ಲಿ ಜನರು ಹಣ ಪಡೆದು, ಮತ ಹಾಕುತ್ತಾರೆ. ಈಗ ಕರ್ನಾಟಕದಲ್ಲಿನ ಉಪ ಚುನಾವಣೆಯ ಸಮೀಕ್ಷೆಗಳನ್ನು ನೋಡಿದರೆ ಅದು ಗೊತ್ತಾಗುತ್ತದೆ," ಎಂದು ಹೇಳಿದರು.

ಬಿಹಾರ ಚುನಾವಣೆಯಲ್ಲಿ ಪ್ರಾಮುಖ್ಯ ಪಡೆದ ನಿರುದ್ಯೋಗ ವಿಚಾರ

ವೈಎಸ್ ವಿ ದತ್ತ ಮುಂದುವರಿದು, "ಬಿಹಾರದಲ್ಲಿ ತೇಜಸ್ವಿ ಯಾದವ್ ಯುವಕರ ನಿರುದ್ಯೋಗ ಸಮಸ್ಯೆ ವಿಚಾರವನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದರು. ಅದರ ಫಲಿತಾಂಶ ಸಮೀಕ್ಷೆಗಳಿಂದ ಗೊತ್ತಾಗುವಂತಿದೆ. ಬಿಹಾರದಲ್ಲಿ ರಾಜಕೀಯ ನಾಯಕರು ಭ್ರಷ್ಟರಾದರು. ಲಾಲೂ ಪ್ರಸಾದ್ ಯಾದವ್ ಜೈಲಲ್ಲಿ ಇದ್ದಾರೆ. ಆದರೆ ಜನರು ಭ್ರಷ್ಟರಾಗಲಿಲ್ಲ. ಆ ಕಾರಣಕ್ಕೆ ಮೋದಿ- ನಿತೀಶ್ ವಿರುದ್ಧ ಯುವಕ ತೇಜಸ್ವಿ ಮೇಲುಗೈ ಸಾಧಿಸಲು ಸಾಧ್ಯವಾಯಿತು," ಎಂದು ಅಭಿಪ್ರಾಯ ಪಟ್ಟರು.

ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಕೇಳಿದ್ದಕ್ಕೆ, ಯಡಿಯೂರಪ್ಪ ಅವರ ನಾಯಕತ್ವ ಇಲ್ಲದ ಬಿಜೆಪಿ ಶೂನ್ಯ. ಅದು ಈ ಹಿಂದೆಯೂ ಸಾಬೀತಾಗಿದೆ. ಆ ಪಕ್ಷಕ್ಕೆ ಯಡಿಯೂರಪ್ಪ ಅವರನ್ನು ಹೊರತುಪಡಿಸಿ, ಬೇರೆಯವರನ್ನು ನಾಯಕ ಎಂದು ಘೋಷಿಸುವ ಧೈರ್ಯ ಕೂಡ ಇಲ್ಲ ಎಂದರು.

ಈಗಿನ ಸ್ಥಿತಿಗೆ ರಾಷ್ಟ್ರೀಯ ಪಕ್ಷಗಳ ಮೇಲೆ ಅವಲಂಬನೆ ಆಗದ ಪ್ರಾದೇಶಿಕ ಪಕ್ಷಗಳು ಭಾರತದಲ್ಲಿ ಗಣನೀಯವಾಗಿ ಹಾಗೂ ಗಮನೀಯವಾಗಿ ಕಾಣಿಸಿಕೊಳ್ಳುತ್ತಿವೆ. ಜನರ ಅಪೇಕ್ಷೆ ಕೂಡ ಅದೇ ಇರುವಂತಿದೆ. ತಂತಮ್ಮ ರಾಜ್ಯಗಳಲ್ಲಿ ಪ್ರಾದೇಶಿಕ ಶಕ್ತಿ ಬಲವಾಗಿರಲಿ ಎಂದು ಬಯಸುತ್ತಿರುವುದಕ್ಕೆ ಆಂಧ್ರ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಲ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ಉದಾಹರಣೆ ಸಿಗುತ್ತವೆ.

ಇನ್ನಾದರೂ ಚುನಾವಣೆಯಲ್ಲಿ ಸಮಸ್ಯೆಗಳು ವಿಷಯವಾಗಿರಲಿ, ಜನರ ಭಾವನೆಗಳಲ್ಲ ಎಂಬುದನ್ನು ನೀವು ಒಪ್ತೀರಾ?

English summary
Donald Trump defeat rising many questions. Is it a lesson for many? Here is an analysis of contemporary politics analysis from US to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X