• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿ ಲೋಕಸಭಾ ಕ್ಷೇತ್ರದ ಪರಿಚಯ : ಯಾರ ಬಾಯಿಗೆ ಕುಂದಾ ಕರದಂಟು?

By ಪ್ರಸಾದ ನಾಯಿಕ
|
   Lok Sabha Election 2019 : ಬೆಳಗಾವಿ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

   1951ರಲ್ಲಿ ಮುಂಬಯಿ ರಾಜ್ಯ ಇದ್ದಾಗಿಂದಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿಡಿತದಲ್ಲೇ ಇದ್ದಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಕಳೆದೆರಡು ಚುನಾವಣೆಗಳಿಂದ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ಸಿಕ್ಕಿದೆ. ಬಿಜೆಪಿಯ ಸುರೇಶ್ ಅಂಗಡಿ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧಿಸುವ ಯತ್ನದಲ್ಲಿದ್ದಾರೆ.

   ವೇಣುಗ್ರಾಮ ಎಂದು ಮೂಲ ಹೆಸರು ಹೊಂದಿದ್ದ ಬೆಳಗಾವಿ ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಮಾತ್ರವಲ್ಲ, ಉತ್ತರ ಕರ್ನಾಟಕದ ಕೇಂದ್ರಬಿಂದುವಾಗಿ ಎರಡನೇ ರಾಜಧಾನಿಯಾದರೂ ಅಚ್ಚರಿಯಿಲ್ಲ. ಆರ್ಥಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಕನ್ನಡ ಮರಾಠಿ ಮತ್ತು ಉರ್ದು ಭಾಷಾ ಸಂಗಮವಾಗಿ, ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರವಾಗಿ ವೈಶಿಷ್ಟ್ಯತೆ ಹೊಂದಿರುವ ಬೆಳಗಾವಿಯಲ್ಲಿ ರಾಜಕೀಯ ಅಧಿಪತ್ಯ ಸಾಧಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಮತ್ತೆ ಸೆಣಸಾಡಲಿವೆ.

   ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?

   ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತದಾರ ಮಣೆ ಹಾಕಲಿದ್ದಾನೆ ಎಂಬುದು ಭಾರೀ ಕುತೂಹಲದ ಸಂಗತಿಯಾಗಿದೆ. ಕಳೆದ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರು ಕಾಂಗ್ರೆಸ್ ನ ಮಹತ್ವಾಕಾಂಕ್ಷಿ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು 75,860 ಮತಗಳ ಅಂತರದಿಂದ ಸೋಲಿಸಿದ್ದರು. ಶೇ.73ರಷ್ಟು ಹಿಂದೂಗಳು ಮತ್ತು ಶೇ.21ರಷ್ಟು ಮುಸ್ಲಿಮರಿರುವ ಬೆಳಗಾವಿಯಲ್ಲಿ ಲಿಂಗಾಯತರೇ ನಿರ್ಣಾಯಕ ಮತದಾರರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಸಭೆಗೆ ಆಯ್ಕೆಯಾಗಿರುವುದರಿಂದ ಈ ಬಾರಿ ಸ್ಪರ್ಧಿಸುವುದು ಅನುಮಾನ.

   8 ವಿಧಾನಸಭಾ ಕ್ಷೇತ್ರಗಳು : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅರಭಾವಿ, ಗೋಕಾಕ್, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ್, ಸೌದತ್ತಿ ಯಲ್ಲಮ್ಮ ಮತ್ತು ರಾಮದುರ್ಗ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

   ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ

   ಕಿತ್ತೂರು ಚೆನ್ನಮ್ಮ ಆಳಿದ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಮಡಿದ ನಾಡಿನಲ್ಲಿ ತಲತಲಾಂತರಗಳಿಂದ ಕನ್ನಡ ಮತ್ತು ಮರಾಠಿ ಭಾಷಿಕರ ನಡುವಿನ ಕದನ ಬೂದಿ ಮುಚ್ಚಿದ ಕೆಂಡದಂತೆ ಯಾವಾಗಲೂ ಉರಿಯುತ್ತಲೇ ಇರುತ್ತದೆ. ಇದು ಮತಗಳನ್ನು ಸೆಳೆಯುವಲ್ಲಿ ಕೂಡ ಭಾರೀ ಮಹತ್ವ ಪಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಪ್ರಭುತ್ವ ಪಡೆದಿದ್ದರೆ, ನಗರ ಪ್ರದೇಶದಲ್ಲಿ ಮರಾಠಿಗರೇ ಹುರಿಯಾಳುಗಳ ಮತಬ್ಯಾಂಕ್. ಅದರಲ್ಲೂ ಬೆಳಗಾವಿ ನಗರ ಶೇ.60ರಷ್ಟು ಮರಾಠಿಗರಿಂದ ತುಂಬಿದ್ದಾರೆ. ಇಲ್ಲಿನ ಕನ್ನಡಿಗರಿಗೆಲ್ಲ ಮರಾಠಿ ಮಾತಾಡುತ್ತಾರೆ, ಆದರೆ, ಎಲ್ಲ ಮರಾಠಿಗರಿಗೆ ಕನ್ನಡ ಬರುತ್ತದೆಂದು ವಿಶ್ವಾಸದಿಂದ ಹೇಳಲಾಗದು. ಬೆಳಗಾವಿ ಪಾಲಿಕೆಯ ಕಟ್ಟಡದಲ್ಲಿ ಭಗವಾಧ್ವಜ ಹಾರಿಸಲು ಯತ್ನಿಸಿ ಸುರೇಶ್ ಅಂಗಡಿ ಭಾರೀ ವಿವಾದವನ್ನೇ ಸೃಷ್ಟಿಸಿದ್ದರು. ಅಂಗಡಿ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತವಾದ ನಂತರ ಕೈಜೋಡಿಸಿ ಕ್ಷಮೆ ಯಾಚಿಸಿದ್ದರು.

   ಸುರೇಶ್ ಅಂಗಡಿಗೆ ಟಕ್ಕರ್ ಕೊಡುವವರು ಯಾರು? : ಸಂಸತ್ತಿನಲ್ಲಿ ಶೇ.91ರಷ್ಟು ಹಾಜರಾತಿ ಹೊಂದಿರುವ 63 ವರ್ಷದ ಹಾಲಿ ಸಂಸದ ಸುರೇಶ್ ಅಂಗಡಿ ಅವರು ಬಿಕಾಂ ಮಾಡಿ ಕಾನೂನು ಪದವಿಯನ್ನೂ ಪಡೆದಿದ್ದಾರೆ. ಸುರೇಶ್ ಅಂಗಡಿ ಎಜ್ಯುಕೇಷನ್ ಫೌಂಡೇಷನ್ ನ ಅಧ್ಯಕ್ಷರಾಗಿರುವ ಅವರು ಒಟ್ಟು 26 ಪ್ರಶ್ನೆಗಳನ್ನು ಕೇಳಿದ್ದಾರೆ. ಕರ್ನಾಟಕದ ಮಾಜಿ ಸಚಿವ ವಿಎಸ್ ಕೌಜಲಗಿ ಅವರ ಹತ್ತಿರದ ಸಂಬಂಧಿಯಾಗಿರುವ ಅಂಗಡಿ ಅವರು ಸಂಸತ್ತಿನಲ್ಲಿ ಕೇವಲ 37 ಬಾರಿ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗೆಗಿನ ಚರ್ಚೆಗಳ ಪ್ರಮಾಣ ಶೇ.45.6ರಷ್ಟಾದರೆ, ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಗಳ ಪ್ರಮಾಣ ಶೇ.63.8.

   2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶೇ.68ರಷ್ಟು ಮತದಾನವಾಗಿತ್ತು. 570,120 ಪುರುಷರು ಮತ ಚಲಾವಣೆ ಮಾಡಿದ್ದರೆ, 508,427 ಮಹಿಳೆಯರು ತಮ್ಮ ಮತ ಹಕ್ಕು ಚಲಾಯಿಸಿದ್ದರು. ಸುರೇಶ್ ಅಂಗಡಿಯವರು 554,417 ಮತ ಪಡೆದು ಜಯಭೇರಿ ಬಾರಿಸದರೆ, ಕಾಂಗ್ರೆಸ್ ಹುರಿಯಾಳು, ಪ್ರಭಾವಶಾಲಿ ಮಹಿಳಾ ಅಭ್ಯರ್ಥಿ, ಕಾಂಗ್ರೆಸ್ಸಿನ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು 478,557 ಮತ ಗಳಿಸಿ ಅಂಗಡಿಯವರಿಗೆ ಪೈಪೋಟಿ ನೀಡಿದ್ದರು. ಇದೀಗ ವಿಧಾನಸಭೆಗೆ ಆಯ್ಕೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಾರೆ ಎಂದು ಕೈ ಎತ್ತಿದ್ದಾರೆ. ಹೀಗಾಗಿ ಅಂಗಡಿಯವರಿಗೆ ಸವಾಲೊಡ್ಡಲು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲಕರ ಸಂಗತಿಯಾಗಿದೆ.

   ಕರ್ನಾಟಕದ ತುತ್ತತುದಿಯ ಕ್ಷೇತ್ರದಲ್ಲಿ ಗೆಲುವಿನ ಗರಿ ಯಾರ ಮುಡಿಗೆ?

   ಅನುದಾನ ಎಷ್ಟು ಬಳಕೆಯಾಗಿದೆ? : ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಸಂಸದರಿಗೆ ದೊರೆಯುವ 25 ಕೋಟಿ ರುಪಾಯಿ ಅನುದಾನದಲ್ಲಿ ಸುರೇಸ್ ಅಂಗಡಿಯವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆಂದು ಬಿಡುಗಡೆಯಾಗಿರುವುದು 17.5 ಕೋಟಿ ರುಪಾಯಿ ಮಾತ್ರ. ಅದರಲ್ಲಿ ಜಿಲ್ಲಾ ಅಧಿಕಾರಿಗಳಿಂದ ಬಳಸಲಾಗಿದ್ದು 13.25 ಕೋಟಿ ರುಪಾಯಿ. ಮತ್ತೊಂದು ಚುನಾವಣೆ ಹತ್ತಿರ ಬಂದಿದ್ದರೂ ಸುರೇಶ್ ಅಂಗಡಿಯವರು 4.53 ಕೋಟಿ ರುಪಾಯಿಯನ್ನು ಉಳಿಸಿಕೊಂಡಿದ್ದಾರೆ. ಆದರೆ, ಬಳಸಲಾದಷ್ಟು ಹಣಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆಯಾ? ಮತದಾರರೇ ಹೇಳಬೇಕು.

   ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2,219,346 ಜನಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ಜನರ ಪಾಲೇ ಹೆಚ್ಚು. ಕೃಷಿಯೇ ಪ್ರಧಾನವಾಗಿರುವ ಈ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಶೇ.59.86ರಷ್ಟು ಹಳ್ಳಿಗರು ವಾಸವಾಗಿದ್ದರೆ, ಶೇ.40.14ರಷ್ಟು ಮಾತ್ರವೇ ಪಟ್ಟಣದ ಜನರ ವಾಸವಿದೆ. ಅದರಲ್ಲಿ ಶೇ.9.74ರಷ್ಟು ಪರಿಶಿಷ್ಟ ಜಾತಿ ಜನರಿದ್ದರೆ, ಶೇ. 7.03ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ. ಇಲ್ಲಿ ಭಾಷೆ ಯಾವುದೇ ಇರಲಿ ಹಳ್ಳಿಗರ ಮತವೇ ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ.

   ಲೋಕಸಭೆ ಚುನಾವಣೆ 2019 : ಬಳ್ಳಾರಿ ಕ್ಷೇತ್ರ ಪರಿಚಯ

   ಎದುರಿಸುತ್ತಿರುವ ಸಮಸ್ಯೆಗಳು : ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲಿಕರಿಂದ ಬರಬೇಕಾಗಿರುವ ಬಾಕಿ ಈ ಚುನಾವಣೆಯಲ್ಲಿ ಪ್ರಮುಖ ಸಂಗತಿಯಾದರೂ ಅಚ್ಚರಿಯಿಲ್ಲ. ಹಲವಾರು ಸಕ್ಕರೆ ಕಾರ್ಖಾನೆಗಳು ಎಲ್ಲ ರಾಜಕೀಯ ಪಕ್ಷಗಳ ನಾಯಕರ ಹಿಡಿತದಲ್ಲಿದ್ದು, ಚುನಾವಣೆ ಗಮನದಲ್ಲಿಟ್ಟು ಏನೇನು ಆಟವಾಡುತ್ತಾರೆ ನೋಡೋಣ. ಅಲ್ಲದೆ, ಬೈಲಹೊಂಗಲ್, ರಾಮದುರ್ಗ, ಸೌದತ್ತಿಯಂಥ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೆ ತಾಂಡವವಾಡುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ರೈತರು ತಮಗೆ ಬರಬೇಕಾದ ಬಾಕಿಗಾಗಿ ಭಾರೀ ಪ್ರತಿಭಟನೆ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದನ್ನೇ ಭಾರತೀಯ ಜನತಾ ಪಕ್ಷ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಬಂಡವಾಳ ಮಾಡಿಕೊಂಡು ಮೈತ್ರಿಯನ್ನು ಹಣಿಯಲು ಯತ್ನಿಸಿದರೂ ಅಚ್ಚರಿಯಿಲ್ಲ.

   English summary
   Lok Sabha Elections 2019 : Belagavi (Belgaum) Lok Sabha constituency is one of the biggest of the 28 Lok Sabha constituencies in Karnataka. Language and caste have always ruled the elections here, which was once ruled by Kittur Rani Chennamma. Suresh Angadi of BJP is the sitting member of parliament. Suresh Angadi had defeated Lakshmi Hebbalkar of Congress in 2014 election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X