
ಶಬರಿಮಲೆಯಲ್ಲಿ ಪುನೀತ್ ಫೋಟೊ ಹಿಡಿದು ಸರತಿ ಸಾಲಿನಲ್ಲಿ ನಿಂತ ಭಕ್ತ
ಬೆಂಗಳೂರು, ನವೆಂಬರ್ 28: ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರು ತೀರಿ ಹೋಗಿ ಒಂದು ವರ್ಷವೇ ಕಳೆದಿದೆ. ಆದರೂ, ಅವರ ಅಭಿಮಾನಿಗಳಲ್ಲಿ ನೋವು ಮಾತ್ರ ಹಾಗೇ ಉಳಿದಿದೆ. ಪುನೀತ್ ರಾಜ್‌ಕುಮಾರ್ ಅವರ ಬಗೆಗಿನ ಕಾರ್ಯಕ್ರಮಗಳು, ಸಮಾರಂಭಗಳು ರಾಜ್ಯದ ಎಲ್ಲೆಡೆ ನಡೆಯುತ್ತಿವೆ. ಈಗ ಪುನೀತ್ ಅಭಿಮಾನಿಯೊಬ್ಬ ತನ್ನ ಅಭಿಮಾನವನ್ನು ಶಬರಿಮಲೆಯಲ್ಲಿ ಮೆರೆದಿದ್ದಾನೆ.
ಶಬರಿಮಲೆಗೆ ತೆರೆಳಿರುವ ಅಪ್ಪು ಅಭಿಮಾನಿಯೊಬ್ಬ, ಪುನೀತ್ ಅವರ ಫೋಟೊವನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಈ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಕುಟುಂಬ ಸಮೇತರಾಗಿ ಪುನೀತ್ 'ಗಂಧದ ಗುಡಿ' ವೀಕ್ಷಿಸಿದ ಯಡಿಯೂರಪ್ಪ
ಆಂದ್ರಪ್ರದೇಶದ ಟ್ವಿಟರ್ ಬಳಕೆದಾರ ಸುದರ್ಶನ್. ಕೆ ಎಂಬುವವರು ಈ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 'ಕರ್ನಾಟಕದ ಅಭಿಮಾನಿಯೊಬ್ಬರು ಶಬರಿಮಲೆಯಲ್ಲಿ ಅಪ್ಪುವಿನ ಫೋಟೋವನ್ನು ಪ್ರದರ್ಶಿಸುತ್ತಿದ್ದಾನೆ' ಎಂದು ತಿಳಿಸಿದ್ದಾರೆ.
A fan from Karnataka carried the Photo of #Appu in Sabarimala #appuliveson pic.twitter.com/pgc6ODdzvj
— Sudharshan.K 🦅 (@Sudharshan793) November 27, 2022

ಅಯ್ಯಪ್ಪ ದರ್ಶನ ಸಮಯ ಬದಲಾವಣೆ
ದೇಶದಾದ್ಯಂತ ಕೋಟ್ಯಾಂತರ ಭಕ್ತರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಲು ತೆರಳಿದ್ದಾರೆ. ಹೀಗಾಗಿ, ಶಬರಿಮಲೆ ದೇವಸ್ಥಾನದ ದರ್ಶನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಸಂಬಂಧ ಆಡಳಿತ ಮಂಡಳಿ ನಿರ್ಧರಿಸಿದೆ. ಮಧ್ಯಾಹ್ನ 3ರಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ 11ರ ವರೆಗೂ ದರ್ಶನ ಪಡೆಯಬಹುದಾಗಿದೆ ಎನ್ನುವ ಮಾಹಿತಿಯನ್ನು ಆಡಳಿತ ಮಂಡಳಿ ಹಂಚಿಕೊಂಡಿದೆ.
ಈ ಮೊದಲು ಬೆಳಗ್ಗೆ 3ರಿಂದ ಮಧ್ಯಾಹ್ನ 1ರವರೆಗೆ ಮತ್ತು ಸಂಜೆ 4ರಿಂದ ಮಧ್ಯರಾತ್ರಿಯವರೆಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನವು ನವೆಂಬರ್ 16ರಿಂದ ಬಾಗಿಲು ತೆರೆದಿದ್ದು, ಈ ವರ್ಷದ ಯಾತ್ರೆ ಆರಂಭವಾಗಿದೆ.

ಶಬರಿಮಲೆ ಯಾತ್ರಿಗಳಿಗೆ ಪ್ರತ್ಯೇಕ ರೈಲಿನ ವ್ಯವಸ್ಥೆ
ಶಬರಿಮಲೆ ಯಾತ್ರಿಗಳಿಗೆ ಪ್ರತ್ಯೇಕ ರೈಲಿನ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಪ್ರತ್ಯೇಕವಾಗಿ ರೈಲು ಓಡಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧಾರ ಮಾಡಿತ್ತು. ಈ ಎರಡೂ ಕಡೆಗಳಿಂದಲೂ ಶಬರಿಮಲೆ ಸಮೀಪದ ಕೊಲ್ಲಂಗೆ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿತ್ತು. ಬೆಳಗಾವಿ- ಕೊಲ್ಲಂ ರೈಲು (07357/07358) ನ. 20ರಂದು (07357) ಬೆಳಗ್ಗೆ 11:30ಕ್ಕೆ ಬೆಳಗಾವಿಯಿಂದ ಹೊರಟಿತ್ತು. ನವೆಂಬರ್ 21ರಂದು ಮಧ್ಯಾಹ್ನ 3:15ಕ್ಕೆ ಕೊಲ್ಲಂ ತಲುಪಿತ್ತು.
ಇದೇ ರೈಲು (07358) ನ. 21ರಂದು ಸಂಜೆ 5:10ಕ್ಕೆ ಕೊಲ್ಲಂನಿಂದ ಹೊರಟು ಮರು ದಿನ ರಾತ್ರಿ 11ಕ್ಕೆ (ನವೆಂಬರ್ 22) ಬೆಳಗಾವಿಗೆ ಆಗಮಿಸಿತ್ತು. ಇನ್ನು ಇದೇ ರೀತಿ ಡಿಸೆಂಬರ್ 4 ರಿಂದ ಜನವರಿ 15 ರವರೆಗೆ ಬೆಳಗಾವಿ - ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು (07361) ಪ್ರತಿ ಭಾನುವಾರದಂದು ಬೆಳಗ್ಗೆ 11:30ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಹಾಗೂ ಮರು ದಿನ ಮಧ್ಯಾಹ್ನ 3:15ಕ್ಕೆ ಕೊಲ್ಲಂ ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಭಕ್ತರಿಗೆ ಆರೋಗ್ಯ ಇಲಾಖೆ ಸೂಚನೆ ಏನು?
ರಾಜ್ಯದಲ್ಲಿ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದಾರೆ. ಅವರೀಗ ಶಬರಿ ಮಲೆಗೆ ತೆರಳಲು ಸಜ್ಜಾಗುತ್ತಿದ್ದಾರೆ. ಶಬರಿಮಲೆಗೆ ತೆರಳುವ ಭಕ್ತರಿಗೆ ಆರೋಗ್ಯ ಇಲಾಖೆ ಸೂಚನೆಗಳನ್ನು ನೀಡಿದೆ. ಉಸಿರಾಟದ ತೊಂದರೆ, ಹೃದ್ರೋಗ, ಅಸ್ತಮಾ ಸೇರಿ ಉಸಿರಾಟ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆ ಇರುವವರು ಶಬರಿ ಮಲೆ ಬೆಟ್ಟ ಏರಬಾರದು ಎಂದು ಅರೋಗ್ಯ ಇಲಾಖೆ ಸೂಚಿಸಿದೆ.
ಇನ್ನು ಕೆಮ್ಮು, ಜ್ವರ, ಶೀತದ ಲಕ್ಷಣ ಹಾಗೂ ಗಂಟಲು ನೋವು ಇರುವ ಭಕ್ತಾಧಿಗಳು ಅಧಿಕ ಪ್ರಯಾಣ ಮಾಡಬಾರದು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿರುವ ಭಕ್ತಾರು ವೈದ್ಯರು ಸೂಚಿಸಿರುವ ಔಷಧಿ ಹಾಗೂ ಚಿಕಿತ್ಸೆಯ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ.

ಶಬರಿಮಲೆ ಅಯ್ಯಪ್ಪ ಭಕ್ತ 'ಅಪ್ಪು'
ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರಾಗಿದ್ದರು. ಅವರು ಚಿಕ್ಕಂದಿನಲ್ಲಿಯೇ ತಮ್ಮ ತಂದೆಯೊಂದಿಗೆ ಶಬರಿಮಲೆ ಯಾತ್ರೆಗೆ ಜೊತೆಯಾಗುತ್ತಿದ್ದರು. ಇದನ್ನು ಹಲವಾರು ವರ್ಷಗಳ ಕಾಲ ಮುಂದುವರಿಸಿದ್ದರು. ಪುನೀತ್ ಅವರು ಚಿಕ್ಕಂದಿನಲ್ಲಿದ್ದಾಗ ಶಬರಿಮಲೆಗೆ ಭೇಟಿ ನೀಡಿದ ಸಂದರ್ಭವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಅವರು ಹಂಚಿಕೊಂಡಿದ್ದರು.