‘ಧುರಂಧರ್’ಗೆ ಪಾಕಿಸ್ತಾನದ ‘ಮೇರಾ ಲಿಯಾರಿ’ ಕೌಂಟರ್: ಸಿನಿಮಾರಂಗಕ್ಕೂ ವ್ಯಾಪಿಸಿದ ಭಾರತ-ಪಾಕ್ ಸಂಘರ್ಷ

ಭಾರತ ಮತ್ತು ಪಾಕಿಸ್ತಾನದ ನಡುವಿನ ಪೈಪೋಟಿ ಕೇವಲ ಗಡಿ ಅಥವಾ ಕ್ರಿಕೆಟ್ ಮೈದಾನಕ್ಕೆ ಸೀಮಿತವಾಗಿಲ್ಲ, ಅದು ಈಗ ಚಿತ್ರರಂಗಕ್ಕೂ ವ್ಯಾಪಿಸಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ಬಿಗ್ ಬಜೆಟ್ ಸಿನಿಮಾ 'ಧುರಂಧರ್' (Dhurandhar) ಸದ್ದು ಮಾಡಿದ ಬೆನ್ನಲ್ಲೇ, ಪಾಕಿಸ್ತಾನದ ನೆಟ್ಟಿಗರು 'ಮೇರಾ ಲಿಯಾರಿ' (Mera Lyari) ಚಿತ್ರವನ್ನು ಅದಕ್ಕೆ ಪ್ರಬಲ ಪೈಪೋಟಿ ಎಂದು ಬಿಂಬಿಸುತ್ತಿದ್ದಾರೆ.

ಆದಿತ್ಯ ಧರ್ ಈ ಹಿಂದೆ 'ಉರಿ: ದ ಸರ್ಜಿಕಲ್ ಸ್ಟ್ರೈಕ್' ಮೂಲಕ ಸಂಚಲನ ಮೂಡಿಸಿದ್ದರು. ಈಗ ಅವರ 'ಧುರಂಧರ್' ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್ ಮತ್ತು ಆರ್. ಮಾಧವನ್ ಅವರಂತಹ ದೊಡ್ಡ ತಾರಾಗಣವಿದ್ದು, ಇದು ಭಾರತದ ಗುಪ್ತಚರ ಸಂಸ್ಥೆಗಳ ಸಾಹಸಗಾಥೆಯನ್ನು ಹೇಳಿದೆ.

Dhurandhar vs Mera Lyari

ಮತ್ತೊಂದೆಡೆ, ಪಾಕಿಸ್ತಾನದ 'ಮೇರಾ ಲಿಯಾರಿ' ಚಿತ್ರವು ಕರಾಚಿಯ ಅತ್ಯಂತ ಸಂಘರ್ಷಮಯ ಪ್ರದೇಶವಾದ 'ಲಿಯಾರಿ'ಯ ಹಿನ್ನೆಲೆಯಲ್ಲಿ ಮೂಡಿಬಂದಿದೆ. ಅಲ್ಲಿನ ಗ್ಯಾಂಗ್‌ವಾರ್‌ಗಳು, ಫುಟ್‌ಬಾಲ್ ಕ್ರೇಜ್ ಮತ್ತು ಜನರ ಸಂಕಷ್ಟಗಳನ್ನು ಈ ಸಿನಿಮಾ ನೈಜವಾಗಿ ಚಿತ್ರಿಸಿದೆ ಎಂದು ಹೇಳಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಪಾಕಿಸ್ತಾನದ ಸಿನಿಮಾ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ "ಭಾರತದ ಸ್ಪೈ ಥ್ರಿಲ್ಲರ್‌ಗಳಿಗೆ ನಮ್ಮ ಕಡೆಯಿಂದ ಇದು ಸರಿಯಾದ ಉತ್ತರ" ಎಂದು ಪೋಸ್ಟ್ ಮಾಡುತ್ತಿದ್ದಾರೆ. ಭಾರತೀಯ ಸಿನಿಮಾಗಳು ಪಾಕಿಸ್ತಾನವನ್ನು ಅತಿಯಾಗಿ ವಿಲನ್‌ನಂತೆ ಬಿಂಬಿಸುತ್ತಿವೆ ಎಂಬ ಅಸಮಾಧಾನ ಹೊರಹಾಕಿರುವ ಪಾಕ್‌ ಜನ, ತನ್ನದೇ ನೆಲದ ಕಥೆಯನ್ನು ಜಗತ್ತಿಗೆ ಸಾರಲು ಪಾಕಿಸ್ತಾನ ಈ ಚಿತ್ರವನ್ನು ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.

'ಧುರಂಧರ್' ತನ್ನ ಅದ್ದೂರಿತನದಿಂದ ಗಮನ ಸೆಳೆಯುತ್ತಿದ್ದರೆ, 'ಮೇರಾ ಲಿಯಾರಿ' ತನ್ನ ನೈಜ ಕಥೆಯ ಮೂಲಕ ಬಾಲಿವುಡ್ ಚಿತ್ರಕ್ಕೆ 'ಕೌಂಟರ್' ನೀಡಲು ಸಜ್ಜಾಗಿದೆ. ಈ ಸಿನಿಮಾ ಸಮರದಲ್ಲಿ ಪ್ರೇಕ್ಷಕರ ಮನ ಗೆಲ್ಲುವವರು ಯಾರು ಎಂಬುದು ಬಿಡುಗಡೆಯ ನಂತರವಷ್ಟೇ ತಿಳಿಯಲಿದೆ. ಮೇ 8ರಂದು ಪಾಕಿಸ್ತಾನದಾದ್ಯಂತ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.

ಆದಿತ್ಯ ಧರ್ ಅವರ ಆಕ್ಷನ್ ಥ್ರಿಲ್ಲರ್ 'ಧುರಂಧರ್', ಲಿಯಾರಿ ಪ್ರದೇಶವನ್ನು ತನ್ನ ಕಥೆಯ ಪ್ರಮುಖ ಹಿನ್ನೆಲೆಯನ್ನಾಗಿ ಬಳಸಿಕೊಂಡಿದೆ. ಈ ಚಿತ್ರವು ಲಿಯಾರಿಯನ್ನು ಭೂಗತ ಜಗತ್ತಿನ ಕೇಂದ್ರವಾಗಿ, ಅಂದರೆ ಗ್ಯಾಂಗ್‌ಗಳ ಸಂಘರ್ಷ, ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಗಳ ತಾಣವಾಗಿ ಚಿತ್ರಿಸಿದೆ. ಒಬ್ಬ ಗೂಢಚಾರಿಯ ದೃಷ್ಟಿಕೋನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಲಿಯಾರಿಯ ಗಲ್ಲಿಗಳಲ್ಲಿ ನಡೆಯುವ ಕ್ರೈಂ ನೆಟ್‌ವರ್ಕ್ ಅನ್ನು ರೋಚಕವಾಗಿ ತೆರೆಯ ಮೇಲೆ ತಂದಿದೆ.

ಭಾರತೀಯ ಚಿತ್ರದಲ್ಲಿ ಲಿಯಾರಿಯನ್ನು ಕೇವಲ 'ಅಪರಾಧದ ಅಡ್ಡೆ'ಯಾಗಿ ತೋರಿಸಿರುವುದಕ್ಕೆ ಪಾಕಿಸ್ತಾನದ ನೆಟ್ಟಿಗರು ಮತ್ತು ಚಿತ್ರರಂಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರವಾಗಿ 'ಮೇರಾ ಲಿಯಾರಿ' ಚಿತ್ರವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಚರ್ಚೆಯಾಗುತ್ತಿದೆ. ಪಾಕಿಸ್ತಾನದ ಈ ಚಿತ್ರವು ಲಿಯಾರಿಯ ಕೇವಲ ಕರಾಳ ಮುಖವನ್ನಷ್ಟೇ ಅಲ್ಲದೆ, ಅಲ್ಲಿನ ನೈಜ ಸಂಸ್ಕೃತಿ, ಕ್ರೀಡಾ ಪ್ರೇಮ ವಿಶೇಷವಾಗಿ ಫುಟ್‌ಬಾಲ್ ಮತ್ತು ಸಾಮಾನ್ಯ ಜನರ ಸಂಕಷ್ಟಗಳನ್ನು ಚಿತ್ರಿಸಲು ಪ್ರಯತ್ನಿಸಿದೆ.

"ನಮ್ಮ ನೆಲದ ಕಥೆಯನ್ನು ಹೊರಗಿನವರು ತಪ್ಪಾಗಿ ಬಿಂಬಿಸುತ್ತಿದ್ದಾರೆ, ಅದನ್ನು ಸರಿಪಡಿಸಲು ಇದು ನಮ್ಮ ಪ್ರಯತ್ನ" ಎಂಬ ದನಿ ಲಿಯಾರಿಯ ಸ್ಥಳೀಯರಿಂದ ಕೇಳಿಬರುತ್ತಿದೆ. ಬಾಲಿವುಡ್‌ನ 'ಧುರಂಧರ್' ಸಿನಿಮಾವು ಲಿಯಾರಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ನೀಡಿದ್ದರೂ, ಅದು ನಕಾರಾತ್ಮಕ ಚಿತ್ರಣ ಎಂಬುದು ಪಾಕಿಸ್ತಾನಿಗಳ ವಾದ.

ಹೀಗಾಗಿ, 'ಮೇರಾ ಲಿಯಾರಿ' ಚಿತ್ರವನ್ನು ಅವರು ಆದಿತ್ಯ ಧರ್ ಅವರ ಚಿತ್ರಕ್ಕೆ ನೀಡುತ್ತಿರುವ 'ಕೌಂಟರ್' ಅಥವಾ 'ಸರಿಯಾದ ಉತ್ತರ' ಎಂದು ಕರೆಯುತ್ತಿದ್ದಾರೆ. ಆದಿತ್ಯ ಧರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದರೆ, ಸ್ಥಳೀಯ ಅಸ್ಮಿತೆ ಉಳಿಸಿಕೊಳ್ಳುವ ಹಂಬಲದಲ್ಲಿ 'ಮೇರಾ ಲಿಯಾರಿ' ಚರ್ಚೆಯಲ್ಲಿದೆ. ಲಿಯಾರಿಯ ಈ ಎರಡು ಭಿನ್ನ ರೂಪಗಳು ಈಗ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+