ಟ್ರಾನ್ಸ್‌ಲಿಟರೇಷನ್ - ರೇಷನ್ ಇಲ್ಲದಷ್ಟು ಫನ್!
![]() | *ಶ್ರೀವತ್ಸ ಜೋಶಿ |
‘ಜಬ್‌ಹೀ ಮೈ ಆಟ್ಟಾ ಹೂಂ ತೊ ವೋ ರೋಟಿ ಹೈ...’
ಹಿಂದಿ ಮಾತಾಡುವ ಪುಟ್ಟ ಹುಡುಗನೊಬ್ಬ ತೊದಲ್ನುಡಿಯಲ್ಲಿ ಹೇಳಿದ ಮಾತಿದು. ಅದೊಂದು ಜೋಕ್; ಮತ್ತು ಆ ಹುಡುಗ ಒಬ್ಬ ಜೋಕುಮಾರ ಎಂದು ಬೇಕಿದ್ದರೂ ಅನ್ನಿ ಪರವಾ ಇಲ್ಲ. ಪಕ್ಕದ ಮನೆಯಲ್ಲಿನ ಸಣ್ಣ ಮಗು ತಾನು ಬಂದಾಗೆಲ್ಲ ಅಳತೊಡಗುತ್ತದೆ (ಜಬ್‌ಹೀ ಮೈ ಆತಾ ಹೂಂ ತೊ ವೋ ರೋತೀ ಹೈ... ) ಎಂಬುದನ್ನು ಮುದ್ದುಮುದ್ದಾಗಿ ಹೇಳಿದಾಗ ನ್ಯಾಚುರಲ್ಲಾಗಿ ಉದ್ಭವಿಸಿದ ನಗೆಬುಗ್ಗೆ ! ‘ತ’ ಬದಲಿಗೆ ‘ಟ’ ಎಂದು ಉಚ್ಚರಿಸುವ ಹುಡುಗನಿಂದಾಗಿ ಆಟ್ಟಾ-ರೋಟಿ ಮುಫತ್ತಾಗಿ ಸಿಕ್ತು ಆ ಮನೆಯವರಿಗೆ!
ಹುಡುಗನ ತೊದಲ್ನುಡಿ ಹಾಗಿರಲಿ, ನಾವೆಲ್ಲ ಬಾಲ್ಯದಲ್ಲಿ ರ ಬದಲಿಗೆ ಲ, ಸ ಬದಲಿಗೆ ಚ/ಛ ಹೇಳಲಾರಂಭಿಸಿ ಆಮೇಲೆ ಕಲಿತೇ ದೊಡ್ಡವರಾದವರು. ಇದಕ್ಕೂ ಟ್ರಾನ್ಸ್‌ಲಿಟರೇಷನ್‌ಗೂ ಏನು ಸಂಬಂಧ ಎಂದಿರಾ? ಮೊದಲು ಟ್ರಾನ್ಸ್‌ಲಿಟರೇಷನ್ ಬಗ್ಗೆ ಬ್ರೀಫಾಗಿ ತಿಳಿದುಕೊಂಡು ಆಮೇಲೆ ಟ್ರಾನ್ಸ್‌ಲಿಟರೇಷನ್‌ನಲ್ಲಿ ಕಂಡುಬರುವ ತಮಾಷೆಯ ಸಂಗತಿಗಳನ್ನು ಆನಂದಿಸೋಣ.
ಟ್ರಾನ್ಸ್‌ಲಿಟರೇಷನ್ ಅರ್ಥವಾಗಬೇಕಾದರೆ ನಾವು-ನೀವು ಉಪಯೋಗಿಸುವ ‘ಕಂಗ್ಲಿಷ್’ ಭಾಷೆಯ ಬಗ್ಗೆ ಉಲ್ಲೇಖಿಸಬೇಕು. ಭಾಷಾಭಿಮಾನ ಗುಲಗಂಜಿಯಷ್ಟಾದರೂ ಜಾಸ್ತಿಯೇ ಇರುವ ನಮಗೆ (ಅದಕ್ಕೇ ತಾನೆ ನಾವೆಲ್ಲ ದಟ್ಸ್‌ಕನ್ನಡವನ್ನು ರೆಗ್ಯುಲರಾಗಿ ಬ್ರೌಸಿಸುವುದು?) ಕನ್ನಡದಲ್ಲೇ ಬರೆಯಬೇಕು, ಓದಬೇಕು ಎಂಬ ಒಲವು ಹೆಚ್ಚು. ಬರಹ, ನುಡಿ ಇತ್ಯಾದಿ ಸಾಫ್ಟ್‌ವೇರ್‌ಗಳನ್ನು ಕರಗತಮಾಡಿಕೊಳ್ಳುವಷ್ಟು ವ್ಯವಧಾನವಿರದಿದ್ದರೂ ಕನ್ನಡ ಕಾಳಜಿಯ ಕಾರಣದಿಂದ ಮತ್ತು ಆತ್ಮೀಯತೆ ಇರಲೆಂದು ಎಷ್ಟೋ ಸಲ ಕಂಗ್ಲಿಷ್‌ನಲ್ಲಿ ಈಮೈಲ್ ಬರೀತೇವೆ, ಚಾಟಿಸುತ್ತೇವೆ. ಅದು ಬೇರೆ ಇನ್ಫಾರ್ಮಲ್ ಆದ್ದರಿಂದ ಸಜಹವಾಗಿಯೇ ಅಕ್ಷರಗಳ ಮಿಕ್ಸ್‌ಅಪ್ ಬಗ್ಗೆ ನೆವರ್ ಮೈಂಡ್. ಅಂಥಾ ಕಂಗ್ಲಿಷ್ ಟೈಪಿಂಗ್‌ನಲ್ಲಿ ಮನೋರಂಜನೆಯ ಪ್ರಧಾನ ಪಾತ್ರಿಗಳೆಂದರೆ ತ-ಟ, ದ-ಡ, ಲ-ಳ ಅಕ್ಷರಗಳುಳ್ಳ ಪದಗಳು. ಏಕೆಂದರೆ ಇಂಗ್ಲಿಷ್‌ನ ಕ್ಯಾಪಿಟಲ್ ಲೆಟರ್ ಬಳಸಿದರೆ ಒಂದಕ್ಷರ ಮತ್ತು ಸ್ಮಾಲ್ ಲೆಟರ್ ಬಳಸಿದರೆ ಇನ್ನೊಂದಕ್ಷರ ಆಗುವುದರಿಂದ ತುಂಬಾ ಸಲ ‘ಬರೆಯುವುದು ಒಂದು... ಓದುವುದು ಇನ್ನೊಂದು... ನಂಬುವುದು ಹೇಗೋ ಕಾಣೆ...’ ಆಗುತ್ತದೆ.
ತ-ಟ, ದ-ಡ, ಲ-ಳ ವ್ಯತ್ಯಾಸಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಹಿರಿಯ ಸ್ನೇಹಿತ ಹಂ.ಕ.ರಾಮಪ್ರಿಯನ್ ಬರೆದ ಮನೋರಂಜಕ ಕವಿತೆಗಳು (ಅವೆಲ್ಲ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿವೆ) ನಿಮಗಿವತ್ತು ನೆನಪಾಗಬಹುದು. ಅವರ ಕವಿತೆಗಳೂ ಈ ಲೇಖನಕ್ಕೆ ಪ್ರೇರಣೆ ಎಂದರೂ ಸರಿಯೇ. ಅಂತೆಯೇ ಇನ್ನೊಂದು ಡಿಸ್‌ಕ್ಲೈಮರ್ ಏನೆಂದರೆ ಅಷ್ಟು ಅಭಿಮಾನದಿಂದ ಇಂಗ್ಲಿಷ್ ಅಕ್ಷರಗಳಲ್ಲಾದರೂ ಸರಿ, ಕನ್ನಡ ಭಾಷೆಯಲ್ಲಿ ಓದಿ-ಬರೆದು ಮಾಡಿ ಭಾಷಾಬಂಧವನ್ನುಳಿಸಿಕೊಳ್ಳುತ್ತೇವೆ ಎನ್ನುವವರ ಪ್ರಾಮಾಣಿಕ ಅಭಿಮಾನವನ್ನು ಲೇವಡಿ ಮಾಡುವುದು ಇಲ್ಲಿಯ ಉದ್ದೇಶ ಸುತಾರಾಂ ಅಲ್ಲ. (ಸಂತ ತುಕಾರಾಂ ಗೊತ್ತು, ಯಾರೀತ ಸುತಾರಾಂ ಎಂದು ಕೇಳಬೇಡಿ. ಸುತಾರಾಂ, ಮುದ್ದಾಂ ... ಇವೆಲ್ಲ ವಿವಿಧ ಪ್ರಾಂತೀಯ ಪದಪ್ರಯೋಗಗಳು :-).
ಇದೇನಿದ್ದರೂ ಅಕ್ಷರಜಾಲದಲ್ಲಿ ಅಕ್ಕರೆಯ ನಗೆಜಾಲ. ಓದಿ ನಸುನಕ್ಕು ಮರೆತುಬಿಡಿ.
* * *
- ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು... ಮೇಟಿಯಿಂ ರಾಟಿ ನಡೆದುದಲ್ಲದೆ ದೇಶದಾಟವೆ ಕೆಡುಗು ಸರ್ವಜ್ಞ...’ - ಕೃಷಿಕೆಲಸದಷ್ಟು ಶ್ರೇಷ್ಠವಾದುದು ಯಾವುದೂ ಇಲ್ಲ ಎಂಬ ಸತ್ಯವನ್ನು ಸರ್ವಜ್ಞನು, ‘ರೈತರೇ ದೇಶದ ಬೆನ್ನೆಲುಬು...’ ಎನ್ನುವ ರಾಜಕಾರಣಿಗಳ ಸೋಗಿನ ಮಾತುಗಳಿಗಿಂತ ಎಷ್ಟೋ ಮೊದಲೇ ಹೇಳಿದ್ದಾನೆ. ಇಷ್ಟು ಗಂಭೀರವಾದ ವಿಷಯ ಕೂಡ ಟ್ರಾನ್ಸ್‌ಲಿಟರೇಷನ್‌ಗೊಳಗಾದಾಗ ಎಂಥ ತಮಾಷೆ ನೋಡಿ! ಏಕಾಏಕಿ ಅಡುಗೆಮನೆಗೆ ನುಗ್ಗಿದ ಮಂಗವೊಂದು ಸಿಕ್ಕಿದ್ದನ್ನೆಲ್ಲ ತಿಂದುಹಾಕುವುದು ಬಿಟ್ಟು ಮೇತಿಪರೋಠಾ ಮಾಡಲಾರಂಭಿಸಿದರೆ!? ಇಮ್ಯಾಜಿನ್ ಮಾಡಿಕೊಳ್ಳಬಹುದೇ ‘ಕೋತಿವಿದ್ಯೆಗಳಲ್ಲಿ ಮೇತಿವಿದ್ಯೆಯೇ ಮೇಲು...’ ಎಂಬುದನ್ನು ?
- ಅಮೆರಿಕದ ಊರುಗಳಿಗೆ ಕನ್ನಡ ಹೆಸರುಗಳನ್ನಿಟ್ಟು ಆನಂದಪಡುವ ಮೋಜನ್ನಾರಂಭಿಸಿದವರು ಕನೆಕ್ಟಿಕಟ್‌ನಲ್ಲಿರುವ ವಿಚಿತ್ರಾನ್ನ ಓದುಗ ರಾಜೇಶ್ ಚೆಲುವ ಮತ್ತವರ ಗೆಳೆಯರ ಬಳಗ. ಕನೆಕ್ಟಿಕಟ್‌ಅನ್ನು ಅವರೆಲ್ಲ ಕನಕನಕಟ್ಟೆ ಎನ್ನುತ್ತಾರಂತೆ. ರಾಜೇಶ್ ಒಮ್ಮೆ ಈಮೈಲ್‌ನಲ್ಲಿ ನನಗೆ ಈ ವಿಷಯ ತಿಳಿಸಿದ್ದರು. ಕನೆಕ್ಟಿಕಟ್ ಕನಕನಕಟ್ಟೆಯಾದರೆ ನಮ್ಮ ವಾಷಿಂಗ್‌ಟನ್ ‘ಅಗಸನ ಕಟ್ಟೆ’ ಯಾಕಾಗಬಾರದು ಎಂಬುದು ನನ್ನ ಲಾಜಿಕ್! (Washing tonnes of clothes - where else? in Washington!ಅಂತ ಅದಕ್ಕೆ ಜಸ್ಟಿಫಿಕೇಷನ್). ಈಗ ನಾನು ‘ಕನಕನ ಕಟ್ಟೆ ರಾಜೇಶ್ ಅವರಿಗೆ ನಮಸ್ಕಾರಗಳು...’ ಎಂದು ಬರೆದರೆ ಅವರು ನನಗೆ ‘ಅಗಸನ ಕಟ್ಟೆ ಜೋಶಿಯವರಿಗೆ ನಮಸ್ಕಾರಗಳು...’ ಎಂದು ಉತ್ತರಿಸುತ್ತಾರೆ. ಏತನ್ಮಧ್ಯೆ ಅವರು ಕನಕನ ಕತ್ತೆ ಮತ್ತು ನಾನು ಅಗಸನ ಕತ್ತೆ ಆಗಿರುತ್ತೇವೆ ಕಂಗ್ಲಿಷ್ ಪ್ರಯೋಗದಿಂದಾಗಿ!
- ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ‘ಟಾಟಾ ಇನ್ಸ್‌ಟಿಟ್ಯೂಟ್’ ಎಂದುಕೂಡ ಹೆಸರಿದೆ, ಸಂಸ್ಥಾಪಕ ಜೇಮ್‌ಶೇಡ್ಜಿ ಟಾಟಾ ಅವರ ನೆನಪಿಗಾಗಿ. ಮೊನ್ನೆಮೊನ್ನೆ ಒಂದು ಅಂತರ್ಜಾಲಕನ್ನಡಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ‘ಬೆಂಗಳೂರಿನ ತಾತಾ ಇನ್ಸ್‌ಟಿಟ್ಯೂಟ್...’ ಎಂದು ಇತ್ತು ! ಇದ್ಯಾವುದಪ್ಪಾ ಹೊಸದೊಂದು ಸಂಸ್ಥೆ ? ತಾತ ಕಲಿತ ಅಥವಾ ತಾತ ಕಲಿಸುವ ವಿದ್ಯಾಸಂಸ್ಥೆಯೇ ತಾತಾ ಇನ್ಸ್‌ಟಿಟ್ಯೂಟ್ ಇರಬಹುದೆ ?
- ತಾತಾ-ಟಾಟಾ ಫನ್ ಇನ್ನೊಂದಿದೆ. ಬೆಂಗಳೂರಲ್ಲಿರುವ ತಾತನಿಗೆ ಕೂಡ ಅರ್ಥವಾಗಲೆಂದು ಕಂಗ್ಲಿಷ್‌ನಲ್ಲಿ ಈಮೈಲ್ ಬರೆಯುತ್ತಾರೆ ಕೊಲಂಬಸ್ (ಓಹಾಯಾ)ದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಕನ್ನಡತಿಯಾಬ್ಬರು. ಈಮೈಲ್‌ನ ಮೊದಲ ಲೈನಲ್ಲೇ ‘ಓ ಹಾಯ್ ಟಾಟಾ...’ ಎಂದು ಓದಿದರೆ ಏನಪ್ಪಾ ಹಾಯ್ ಹೇಳಿ ಟಾಟಾ ಎಂದುಬಿಟ್ಟಳಲ್ಲಾ ಓಹಾಯಾದಲ್ಲಿನ ನಮ್ ಮೊಮ್ಮಗಳು ಎಂದುಕೊಳ್ಳಬಹುದು ಆ ಪ್ರೀತಿಯ ತಾತ!
- ಮಹಾಭಾರತದಲ್ಲಿ ಧೃತರಾಷ್ಟ್ರ ಕುರುಡ. ಅವನಿಗೋಸ್ಕರ ತನ್ನ ಕಣ್ಣುಗಳಿಗೂ ಬಟ್ಟೆ ಕಟ್ಟಿಕೊಂಡಳು ಗಾಂಧಾರಿ. ಇದೆಲ್ಲ ಹೌದು, ಆದರೆ ಟ್ರಾನ್ಸ್‌ಲಿಟರೇಷನ್ ಪರ್ವದಲ್ಲಿ ಪಾಂಡವರ ಮಹಾತಾಯಿ ಕುಂತಿ, ‘ಕುಂಟಿ’ ಆಗುವ ಅಪಾಯವಿರುತ್ತದೆ!
- ಕುಂತಿಯ ಪಾಡು (ಪಾಂಡು ಅಲ್ಲಾ !) ಅದಾದರೆ ರಾಮಾಯಣದ ನಿರುಪದ್ರವಿ ಅಜ್ಜಿ ಶಬರಿಯನ್ನು, ‘ಕಾದಿರುವಳು ಶಬರಿ... ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು...’ ಎನ್ನುವಾಗ ಸುಖಾಸುಮ್ನೆ ‘ಕಾಡಿರುವಳು ಶಬರಿ...’ ಎಂದಂತಾಗಬಹುದು ಕಂಗ್ಲಿಷ್ ಟೈಪಿಂಗ್‌ನಲ್ಲಿ . ಪಾಪ ಯಾರನ್ನೂ ಕಾಡಿ ಬೇಡದ ಆ ಹಣ್ಣುಹಣ್ಣು ಮುದುಕಿಗೆ ಇದು ಗೊತ್ತಾದರೆ ರಾಮ ರಾಮಾ ಎಂದಾಳು!
- ‘ಬೆಳಿಗ್ಗೆ ಏನು ತಿಂಡಿ?’ ಎಂದು ಬರೆದದ್ದು ‘ಬೆಳಿಗ್ಗೆ ಏನು ತಿಂದಿ?’ ಎಂದೂ ಸರಿಯಾಗಿಯೇ ಓದಬಹುದು. ಆದರೂ ‘ನಾನು ದಿನಾ ಬೆಳಿಗ್ಗೆ ಎದ್ದು ಅರ್ಧಗಂಟೆಯಾದರೂ ಓದುತ್ತೇನೆ...’ ಎಂದು ಬರೆದದ್ದನ್ನು ಓದುವವನು ‘ಈ ಮನುಷ್ಯ ಜಾಗಿಂಗ್ ಅಭ್ಯಾಸದವನಿರಬಹುದು, ಆರೋಗ್ಯವಾಗಿರಲು ದಿನಾ ಬೆಳಿಗ್ಗೆ ಅರ್ಧಗಂಟೆ ಓಡುತ್ತಾನೆ...’ ಎಂದುಕೊಳ್ಳುವ ಚಾನ್ಸ್ ಇದೆ! ಬೆಳಿಗ್ಗೆಬೆಳಿಗ್ಗೆ (ಮಾರ್ನಿಂಗ್ ಮಾರ್ನಿಂಗ್?) ನ್ಯೂಸ್‌ಪೇಪರ್ ಓದುತ್ತ ಓಡುವವರೂ ಇರುತ್ತಾರಲ್ಲ ! ಅಂದಹಾಗೆ ಟ್ರೇಡ್‌ಮಿಲ್‌ಗೇ ಒಂದು ಇಂಟರ್‌ನೆಟ್ ಕನೆಕ್ಟೆಡ್ ಕಂಪ್ಯೂಟರ್ ಅಳವಡಿಸಿದರೆ, ಓಡು-ಓದು ಏಕಕಾಲದಲ್ಲಿ ಆರಾಮಾಗಿ ಮಾಡಬಹುದೇನೊ!
- ಹೈದರಾಬಾದ್‌ನಲ್ಲಿರುವಾಗಿನ ಐದಾರು ವರ್ಷಗಳೂ ನಾನು ‘ದಿ ಹಿಂದು’ ಪತ್ರಿಕೆಯನ್ನು ತರಿಸುತ್ತಿದ್ದೆ. ನನ್ನ ಪಕ್ಕದ ಮನೆಯವ್ರು ‘ಡೆಕ್ಕನ್ ಕ್ರೋನಿಕಲ್’ ತರಿಸೋರು. ಭಾನುವಾರಗಳಂದು ಕ್ರೋನಿಕಲ್ ಓದಿ ಆದ ಮೇಲೆ ‘ಕ್ಯಾನ್ ಐ ಬೊರ್ರೊ ಯುವರ್ ಹಿಂಡು?’ ಅಂತ ಕೇಳಿ ಹಿಂದು ಇಸ್ಕೊಂಡ್ಹೋಗಿ ಓದಿಕೊಡುವುದು ಅವರ ಅಭ್ಯಾಸ. ಪಕ್ಕಾ ಹಿಂದುಧರ್ಮದ ಅವರೂ ಯಾಕೆ ‘ಹಿಂಡು’ ಎಂದು ಪ್ರೊನೌನ್ಸಿಸುತ್ತಿದ್ದರೆನ್ನುವುದು ನನಗಿನ್ನೂ ಅರ್ಥವಾಗಿಲ್ಲ . ಹಿಂದು-ಹಿಂಡು ಸಂಬಂಧವು ಪುರಂದರದಾಸರ ಒಂದು ಕೀರ್ತನೆಯಲ್ಲಿ ಚೆನ್ನಾಗಿ ವಿವರಿಸಲ್ಪಟ್ಟಿದೆ. ‘ಜೋ ಜೋ ಶ್ರೀಕೃಷ್ಣ...’ ಲಾಲಿ ಹಾಡಿನಲ್ಲಿ ಪುರಂದರದಾಸರು ‘ಅಂಡಜವಾಹನ ಅನಂತಶಯನ ಪುಂಡರೀಕಾಕ್ಷ ಶ್ರೀ ಪರಮಪಾವನ... ಹಿಂಡು ದೈವದ ಗಂಡ ಉದ್ದಂಡನೆ ನಮ್ಮ ಪಾಂಡುರಂಗ ಶ್ರೀ ಪುರಂದರ ವಿಠಲ...’ ಎಂದಿದ್ದಾರೆ ಪ್ರಾಸಬದ್ಧವಾಗುವಂತೆ. ಹಿಂದು ದೈವಗಳೆಂದರೆ ಹಿಂಡು ದೈವಗಳೆಂಬುದನ್ನು ಅದೆಷ್ಟು ಸೂಕ್ಷ್ಮವಾಗಿ ಹೇಳಿಬಿಟ್ಟಿದ್ದಾರೆ!
- ‘ಟಾರ್ಟಾಯ್ಸ್ ಬ್ರಾಂಡ್ ಮಾಸ್ಕಿಟೋ ಕಾಯ್ಲ್‌ಗಳನ್ನು ಕೊಳ್ಳಿ; ನಿಮ್ಮನ್ನು ಕಾಡುವ ಸೊಳ್ಳೆಗಳನ್ನು ಕೊಲ್ಲಿ !’ ಎಂಬ ಜಾಹೀರಾತು ಕಂಗ್ಲಿಷ್‌ನಲ್ಲಿ ಮೂಡಿದಾಗ ಮಾಸ್ಕಿಟೊಕಾಯ್ಲನ್ನು ಕೊಳ್ಳಬೇಕೊ ಕೊಲ್ಲಬೇಕೊ, ಮಾಸ್ಕಿಟೊಗಳನ್ನು ಕೊಲ್ಲಬೇಕೊ ಕೊಳ್ಳಬೇಕೊ ಎಂದು ತಬ್ಬಿಬ್ಬುಗೊಳಿಸೀತು!
- ‘ಅವನಿಗೆ ಚೆನ್ನಾಗಿ ಬುದ್ಧಿ ಕಲಿಸಿದೆ...’ ಎಂದದ್ದು ‘ಅವನಿಗೆ ಚೆನ್ನಾಗಿ ಬುದ್ಧಿ ಕಳಿಸಿದೆ...’ ಎಂದು ಓದಿ, ಬುದ್ಧಿ ಕಳಿಸಿದ್ದು ಓವರ್‌ನೈಟ್ ಕೊರಿಯರ್‌ನಲ್ಲೋ, ಫೆಡ್‌ಎಕ್ಸ್‌ನಲ್ಲೋ, ವೈರ್‌ಟ್ರಾನ್ಸ್‌ಫರ್ ಮೆಥಡ್‌ನಲ್ಲೋ ಅಥವಾ ಈಮೈಲ್ ಆ್ಯಟಾಚ್‌ಮೆಂಟ್‌ನಲ್ಲೋ ಎಂಬ ತರ್ಕ ಬರಬಹುದು. ಅಂಥ ಕುತರ್ಕ ಮಾಡಿ ಕಾಲೆಳೆಯುವವರಿಗೆ (ಉದಾ: ನಾನು ?) ಸ್ವಲ್ಪ ಬುದ್ಧಿ ಕಲಿ(ಳಿ)ಸಿದರೂ ಒಳ್ಳೆಯದಾಗಬಹುದು ಎಂಬುದು ನನ್ನ ಅಂಬೋಣ. ನೀವೇನಂತೀರಾ?
ನೀವು ಬರೆದ ಅಥವಾ ಓದಿದ ಕಂಗ್ಲಿಷ್‌ನಲ್ಲಿ ಸಿಕ್ಕಿದ ಮೋಜಿನ ಬಗ್ಗೆ ಬರೆದು ಎಲ್ಲರೊಂದಿಗೆ ಹಂಚಿಕೊಳ್ಳಿ (ಕಂಗ್ಲಿಷ್‌ನಲ್ಲೇ ಬರೆಯಿರಿ:-) ವಿಳಾಸ- [email protected]
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ













Click it and Unblock the Notifications