• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕೇಶ್ವರದ ನೆನಪುಗಳ ಚಿತ್ರ ಶಾಲೆ ತುಂಬ ಹಿರಣ್ಯಕೇಶಿ ನದಿ, ಹರಗಾಪುರದ ಗುಡ್ಡ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಅದೊಂದು ದಿನ ಮಧ್ಯಾಹ್ನ ಸುಮಾರು ನಾಲ್ಕು ಗಂಟೆಯಾಗಿರಬೇಕು. ಶಾಲೆಗೆ ರಜೆಯಿತ್ತೆಂದು ಕಾಣುತ್ತದೆ. ಏಕೆಂದರೆ ನಾವೆಲ್ಲಾ ಮನೆಯಲ್ಲಿದ್ದೆವು. ಮಧ್ಯಾಹ್ನ ಮಳೆ ಶುರುವಾಯಿತು. ಅಂದು ಅಮ್ಮ ಮನೆಯಲ್ಲಿ ಬಿಸಿ ಬಿಸಿ ಅವಲಕ್ಕಿಯನ್ನು ಮಾಡಿದ್ದಳು ಎಂಬ ನೆನಪು.

ಹೊರಗೆ ಬೀಳುತ್ತಿದ್ದ ಜೋರಾದ ಮಳೆ ಗಾಳಿಯಿಂದ ತಂಪಾದ ವಾತಾವರಣದಲ್ಲಿ ನಾವು ಇನ್ನೇನು ಬಿಸಿ ಬಿಸಿ ಅವಲಕ್ಕಿ ತಿನ್ನಲು ಶುರು ಮಾಡಬೇಕು. ಒಮ್ಮೆಲೇ ನಮ್ಮ ಮನೆಯ ಛತ್ತಿನ ಒಂದು ಮಂಗಳೂರು ಹೆಂಚು ಸುಯ್ಯೆಂದು ಕೆಳಗಿಳಿದು ಬಿದ್ದಿತು. ಪುಣ್ಯವಶಾತ್ ಅದು ನಮ್ಮ ತಲೆಯ ಮೇಲೆ ಬೀಳದೆ, ನಮ್ಮ ಮುಂದಿನ ನೆಲದ ಮೇಲೆ ಬಿದ್ದು ಒಡೆದು ದೊಡ್ಡ ಸದ್ದು ಮಾಡಿತು.

ನೆನಪನ್ನು ಹಸಿರಾಗಿಸುವ ಸಂಕೇಶ್ವರದ ಸಕ್ಕರೆ ಕಾರಖಾನೆಯ ಭವ್ಯ ಚಿತ್ರಣ ನೆನಪನ್ನು ಹಸಿರಾಗಿಸುವ ಸಂಕೇಶ್ವರದ ಸಕ್ಕರೆ ಕಾರಖಾನೆಯ ಭವ್ಯ ಚಿತ್ರಣ

ಅದರೊಂದಿಗೆ ಮಳೆಯ ರಭಸದ ಹನಿಗಳು ಕೂಡ ಕೆಳಗಿಳಿದವು. ಕೂಡಲೇ ನಾವೆಲ್ಲ ಜೋರಾಗಿ ಕೂಗುತ್ತಾ ಕೂಡಲೇ ಅಲ್ಲಿಂದ ಎದ್ದು ಮನೆಯ ಹೊರಬಾಗಿಲಿನ ಛಾವಣಿಯ ಹತ್ತಿರ ಬಂದು ನಿಂತೆವು. ನೋಡ ನೋಡುತ್ತಿದ್ದಂತೆ ಒಂದಾದ ಮೇಲೊಂದರಂತೆ ಹಲವಾರು ಹೆಂಚುಗಳು ಬಿದ್ದವು. ಮೂಲತಃ ಈ ಮನೆ ಗೋಡೌನಾಗಿದ್ದುದರಿಂದ ಛಾವಣಿ ತುಂಬಾ ಎತ್ತರದಲ್ಲಿತ್ತು. ಪ್ರತಿ ಬಾರಿ ಹೆಂಚು ಕೆಳಗೆ ಬಿದ್ದಾಗ "ಢಬಾರ್" ಎಂದು ಪಟಾಕಿ ಬಾಂಬು ಸಿಡಿದ ಹಾಗೆ ಸದ್ದಾಗುತ್ತಿತ್ತು.

ಸುಮಾರು ಒಂದು ಗಂಟೆಯ ಮೇಲೆ ಮಳೆ ನಿಂತ ಮೇಲೆ ಒಳಗೆ ಹೋಗಿ ನೋಡಿದೆವು. ಮನೆಯೆಲ್ಲಾ ನೀರಾಗಿತ್ತು. ಒಡೆದ ಮಂಗಳೂರು ಹೆಂಚಿನ ಚೂರುಗಳು ಎಲ್ಲ ಕಡೆಗೆ ಚೆದುರಿದ್ದವು. ನಾವಲ್ಲೇ ಬಿಟ್ಟು ಬಂದಿದ್ದ ಅವಲಕ್ಕಿಯಲ್ಲಿ ನೀರು ಮತ್ತು ಹೆಂಚಿನ ಚೂರುಗಳು ಮಿಶ್ರಣಗೊಂಡಿದ್ದವು.

ಮೇಲೆ ನೋಡಿದರೆ ಛಾವಣಿಯಲ್ಲಿ ದೊಡ್ಡ ರಂಧ್ರವಾಗಿ ನೀಲೀ ಆಕಾಶ ಕಾಣುತ್ತಿತ್ತು. ಆಕಸ್ಮಾತ್ತಾಗಿ ಹೆಂಚು ನನ್ನ ತಲೆಯ ಮೇಲೆ ಬಿದ್ದಿದ್ದರೆ ಎಂಬ ಕೆಟ್ಟ ವಿಚಾರ ಸುಳಿದು ಮೈ ಲಘುವಾಗಿ ಕಂಪಿಸಿತು. ನಮ್ಮದು ಕೇವಲ ಎರಡು ರೂಮಿನ ಮನೆಯಾಗಿದ್ದರಿಂದ ನಮ್ಮ ಪಡಸಾಲೆಯೇ ನಮ್ಮ ಮಲಗುವ ಕೋಣೆ ಕೂಡ ಆಗಿತ್ತು. ಅಂದು ರಾತ್ರಿ ನಾನು ಮಲಗಿದಾಗ ಸ್ವಲ್ಪ ದೂರದಲ್ಲಿ ತೆರೆದ ಛಾವಣಿಯಿಂದ ನಕ್ಷತ್ರಗಳು ಫಳ ಫಳ ಮಿನುಗುತ್ತಿದ್ದವು. ಆ ದಿನದ ಒಟ್ಟಾರೆ ಅನುಭವ ಎಂದೂ ಮರೆಯಲಾರದ ಅನುಭವವಾಗಿತ್ತು.

ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್ ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್

ಸಂಕೇಶ್ವರಕ್ಕೆ ಬರುವ ಮೊದಲು ನಾವು ಬಿಜಾಪುರದಲ್ಲಿದ್ದೆವಷ್ಟೆ. ಬಿಜಾಪುರದ ಬಿಸಿಲು ತುಂಬಾ ಉರಿ ಬಿಸಿಲಾಗಿತ್ತು ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ನನಗೆ ಅಲ್ಲಿನ ಬಿಸಿಲಿನ ಬಗ್ಗೆ ಅಷ್ಟೊಂದು ನೆನಪಿಲ್ಲ. ಚಿಕ್ಕಂದಿನಲ್ಲಿ ಬಿಸಿಲನ್ನು ಸೆಕೆಯನ್ನು ಕುರಿತು ನಾವು ಅಷ್ಟೊಂದು ಯೋಚಿಸುತ್ತಿರಲಿಲ್ಲವೇನೋ?

ಆದರೆ, ಕೆಲವು ದಿನಗಳಲ್ಲಿ ಬೆಳಗ್ಗೆ ಎಂಟು ಗಂಟೆಗೇ ದಿನ ತುಂಬಾ ಪ್ರಕಾಶಮಾನವಾಗಿರುತ್ತಿದ್ದುದನ್ನು ಗಮನಿಸುತ್ತಿದ್ದೆ. ನಮ್ಮ ಮನೆಯ ಇದಿರಿನ ಮನೆಯ ಗೋಡೆಗೆ ಬೆಳ್ಳಗೆ ಸೀಮೆ ಸುಣ್ಣವನ್ನು ಹಚ್ಚಿದ್ದರು. ಮುಂಜಾವಿನ ಪ್ರಕಾಶದಲ್ಲಿ ಆ ಗೋಡೆ ಫಳ ಫಳ ಹೊಳೆಯುತ್ತಿದ್ದುದು ಸ್ಪಷ್ಟವಾಗಿ ನೆನಪಿದೆ.

ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ

ಅಂತಹ ಪ್ರಕಾಶಮಾನವಾದ ದಿನಗಳಲ್ಲಿ ನಿಚ್ಚಳವಾಗಿ ನೆನಪಿದ್ದ ದೃಶ್ಯವೆಂದರೆ ಒಬ್ಬರು ಬಿಳಿ ಎತ್ತೊಂದನ್ನು ಅಲಂಕರಿಸಿಕೊಂಡು ಮನೆ ಮನೆಯ ಮುಂದೆ ಕರೆತಂದು ಕೊಂಬಿನಂತಹ ಶಹನಾಯಿ ವಾದ್ಯವನ್ನು ನುಡಿಸುತ್ತಾ ಕರೆ ತರುತ್ತಿದ್ದರು. ಆ ವಾದ್ಯದಿಂದ ಹೊರಡುವ ಸ್ವರ ಸ್ವಲ್ಪ ಒರಟೆನಿಸಿದರೂ ಅದೇನೋ ಮೋಹಕವಾಗಿರುತ್ತಿತ್ತು.

ಅಲಂಕರಿಸಿಕೊಂಡು ಮನೆ ಮನೆಗಳ ಮುಂದೆ ಶಾಂತವಾಗಿ ನಿಲ್ಲುತ್ತಿದ್ದ ಎತ್ತಿನ ಮುಗ್ಧ ಕಣ್ಣುಗಳು ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೇ ಮೂಡಿವೆ. ಎಲ್ಲ ಮನೆಯವರೂ ಎತ್ತಿಗೆ ಕುಂಕುಮ ಹಚ್ಚಿ ನಮಸ್ಕರಿಸಿ ಅದನ್ನು ಕರೆ ತಂದವರಿಗೆ ಧಾನ್ಯ ಮತ್ತು ಹಣವನ್ನು ನೀಡುತ್ತಿದ್ದುದು ನನಗೆ ನೆನಪಿದೆ. ಅದೇಕೋ ನಾವೀಗ ಆಲಂಗಿಸಿಕೊಂಡ ಆಧುನಿಕತೆಯ ಗಾಳಿ ಅಂದಿನ ಮುಗ್ಧ ಸಮಾಜದ ಕೋಮಲ ಭಾವನೆಗಳನ್ನು ಮುಚ್ಚಿ ಹಾಕಿದೆ ಎಂದೆನಿಸುತ್ತದೆ.

ಅಷ್ಟೊಂದು ಬಿಸಿಲಿರುತ್ತಿದ್ದರೂ ಅಂದಿನ ದಿನಗಳಲ್ಲಿ ಬಿಜಾಪುರದಲ್ಲಿ ನೀರಿನ ಸಮಸ್ಯೆ ಇರಲಿಲ್ಲ ಎಂಬ ನೆನಪು. ಪ್ರತಿದಿನ ನಲ್ಲಿಯಲ್ಲಿ ನೀರು ಬರುತ್ತಿತ್ತು. ಸಮೀಪದ ಭೂತನಾಳ ಕೆರೆ ಇಡೀ ನಗರಕ್ಕೆ ನೀರು ಒದಗಿಸುತ್ತಿತ್ತು ಎಂದು ಹಿರಿಯರು ಮಾತನಾಡುತ್ತಿದ್ದುದನ್ನು ಕೇಳುತ್ತಿದ್ದೆ. ಬಿಜಾಪುರದಲ್ಲಿನ ಮಳೆ ನನಗೆ ಅಷ್ಟೊಂದು ನೆನಪಿಲ್ಲ. ಅಲ್ಲಿ ಮಳೆ ಕಡಿಮೆ. ಬಂದರೆ ಬಹಳ ಜೋರಾಗಿ ಬರುತ್ತಿತ್ತು. ಎರಡು ಮೂರು ಗಂಟೆಗಳ ಕಾಲ ಜೋರಾಗಿ ಮಳೆ ಹೊಡೆದು ಒಮ್ಮೆಲೇ ನಿಂತು ಬಿಸಿಲು ಬೀಳುತ್ತಿತ್ತು.

ಸಂಕೇಶ್ವರದ ದಿನಗಳು 10 : ಹೆಂಗಿದ್ದ ಜನಾರ್ಧನ ಹೆಂಗಾದ? ಸಂಕೇಶ್ವರದ ದಿನಗಳು 10 : ಹೆಂಗಿದ್ದ ಜನಾರ್ಧನ ಹೆಂಗಾದ?

ಆಗ ನಾವಿರುವ ಮನೆಯ ಬೀದಿಯೆಲ್ಲ ಕೆಸರಾಗಿಬಿಡುತ್ತಿತ್ತು. ಆದೆಂತಹ ಕೆಸರೆಂದರೆ ಮಳೆಯಾದ ನಂತರ ಶಾಲೆಯಿಂದ ಮನೆಗೆ ಮರಳಿ ಬರುವಾಗ ಹೆಜ್ಜೆ ಹೆಜ್ಜೆ ಎಣಿಸಿ ಕಾಲಿಡಬೇಕಾಗುತ್ತಿತ್ತು. ಅದು ಹೇಗಾದರೂ ಮಾಡಿ ಮನೆ ತಲುಪುವಷ್ಟರಲ್ಲಿ ಕಾಲೆಲ್ಲಾ ಕೆಸರಾಗಿಬಿಡುತ್ತಿತ್ತು. ಚಪ್ಪಲಿಯ ಕೆಳಗೆ ದಪ್ಪನೆಯ ಕೆಸರಿನ ಪದರು ಅಂಟಿಕೊಂಡು ಬಿಡುತ್ತಿತ್ತು.

ಬಿಜಾಪುರದ ಕಪ್ಪು ಮಣ್ಣಿನ ಕಸುವನ್ನು ಎಂದಾದರೂ ಒಮ್ಮೆ ಬರುವ ಈ ಮಳೆ ತೋರಿಸಿಬಿಡುತ್ತಿತ್ತು. ಆದರೆ ಬಿಜಾಪುರದಲ್ಲಿ ಇರುವವರೆಗೂ ಯಾವಾಗಲೋ ಒಮ್ಮೆ ಬರುತ್ತಿದ್ದ ಮಳೆ ನನ್ನ ಜೀವನದಲ್ಲಿ ಅಷ್ಟೊಂದು ಮಹತ್ವ ಪಡೆದಿರಲಿಲ್ಲ.

ಮಳೆಯ ನಿಜವಾದ ರೂಪವನ್ನು ನಾನು ಗಮನಿಸಿದ್ದು ಸಂಕೇಶ್ವರಕ್ಕೆ ಬಂದ ಮೇಲೆಯೇ. ಅಲ್ಲಿಯವರೆಗೆ ಮಳೆ ಎಂದರೆ ಯಾವಾಗಲೋ ಒಮ್ಮೆ ಎರಡು ಮೂರು ಗಂಟೆ ಜೋರಾಗಿ ದಬ ದಬ ಸುರಿದು ಬೀದಿಗಳನ್ನೆಲ್ಲಾ ನೀರು ನೀರಾಗಿಸಿ ನಂತರ ಕೆಸರಿನ ತವರಾಗಿಸುತ್ತಿದ್ದ ಘಟನೆ ಮಾತ್ರ ಎಂದು ತಿಳಿದಿದ್ದ ನನಗೆ ವಾರಗಟ್ಟಲೇ ಬಿಟ್ಟು ಬಿಡದೇ ಸುರಿಯುತ್ತಿದ್ದ ಸೋನೆ ಮಳೆ ಅಚ್ಚರಿಗೊಳಿಸಿತ್ತು.

ಬೇಸಿಗೆಯಲ್ಲಿ ಬಿಸಿಲಿನ ಪ್ರಕೋಪ ಹೆಚ್ಚಿದ್ದ ಕೆಲವು ದಿನ ಅಲ್ಲಿ ಮಳೆ ಬೀಳುತ್ತಿತ್ತು. ಸಾಮಾನ್ಯವಾಗಿ ಆ ಮಳೆ ಬಿಜಾಪುರದ ಮಳೆಯಂತೆ ಒಂದೆರಡು ಗಂಟೆ ಜೋರಾಗಿ ಬೀಳುತ್ತದೆ. ಆಲಿಕಲ್ಲು ಬೀಳುವುದು ಸಾಮಾನ್ಯ. ಇಂತಹ ಮಳೆಯನ್ನು ಬೆಳಗಾವಿ ಭಾಷೆಯಲ್ಲಿ ಅಡ್ಡ ಮಳೆ ಎಂದು ಕರೆಯುತ್ತಾರೆ.

ಅನೇಕ ಬಾರಿ ಈ ಮಳೆಯ ಜೊತೆ ಗಾಳಿ ಜೋರಾಗಿ ಬೀಸುತ್ತದೆ. ಅಂತಹ ಮಳೆ ಶುರುವಾದಾಗ ಬಿಸಿಲಿನಿಂದ ತಪ್ತಗೊಂಡಿದ್ದ ಭೂಮಿ ಒಮ್ಮೆಲೇ ತಂಪಾಗುತ್ತದೆ. ಆದರೆ ಮಳೆಯ ಜೊತೆ ಗುಡುಗು ಸಿಡಿಲಿನ ಆರ್ಭಟ ನೋಡುವಂತಿರುತ್ತದೆ. ಅಂದು ಸಂಕೇಶ್ವರದಲ್ಲಿ ನಮ್ಮ ಮನೆಯ ಹೆಂಚು ಹಾರಿಸಿದ್ದು ಈ ಅಡ್ಡ ಮಳೆಯೇ.

೧೯೮೩ರ ಮೇ ತಿಂಗಳು ಎಂಬ ನೆನಪು. ತಂದೆಯವರಿಗೆ ಬೆಳಗಾವಿಗೆ ವರ್ಗವಾಯಿತು. ಆದರೆ ಅವರು ಅಲ್ಲಿ ಹಾಜರಾಗಲು ಇನ್ನೂ ಸಮಯವಿತ್ತು. ಹೀಗಾಗಿ ಅವರು ನನ್ನನ್ನು ಮತ್ತು ಅಣ್ಣನನ್ನು ಕರೆದುಕೊಂಡು ಬೆಳಗಾವಿಗೆ ಬಂದು, ಅಲ್ಲಿ ಒಳ್ಳೆಯ ಸ್ಕೂಲು ಎಂದು ಹೆಸರಾದ ಬಿ.ಕೆ. ಮಾಡೆಲ್ ಹೈಸ್ಕೂಲಿಗೆ ಸೇರಿಸಿದರು.

ನಮ್ಮಿಬ್ಬರನ್ನೂ ನಮ್ಮ ಸೋದರಮಾವನ ಮನೆಯಲ್ಲಿ ಬಿಟ್ಟು, ಸಂಕೇಶ್ವರಕ್ಕೆ ಹೊರಟು ಹೋದರು. ನಾವು ಸಂಕೇಶ್ವರ ಬಿಡುವ ಮುಂಚೆ ಅಲ್ಲಿ ಧೋಧೋ ಮಳೆ. ಒಂದು ವಾರಕ್ಕೂ ಹೆಚ್ಚು ಸುರಿದ ಅವ್ಯಾಹತ ಜಡಿ ಮಳೆಯಿಂದ ಹಿರಣ್ಯಕೇಶಿ ಸಂಪೂರ್ಣ ತುಂಬಿಕೊಂಡು ಸಂಕೇಶ್ವರದ ಮಠ ಗಲ್ಲಿ ಮತ್ತು ನದಿ ಗಲ್ಲಿಗಳಲ್ಲಿ ಹೊಕ್ಕು ತನ್ನ ಆರ್ಭಟ ತೋರಿಸುತ್ತಿದ್ದಳು.

ಸ್ಕೂಲಿನಿಂದ ಬರುವಾಗ ಹಾದಿಯಲ್ಲಿದ್ದ ಹಳ್ಳದ ಮೇಲಿನ ಸೇತುವೆಯಿಂದ ಕೈ ಚಾಚಿದರೆ ಸಾಕು ನೀರು ಕೈಗೆ ಹತ್ತುತ್ತಿತ್ತು. ಶಂಕರಲಿಂಗ ದೇವಸ್ಥಾನ ಮತ್ತು ಮಠದಲ್ಲಿ ನೀರು ಎದೆಮಟ್ಟಕ್ಕೆ ತಲುಪಿತ್ತಂತೆ.

ಅಂತಹ ಜಡಿಮಳೆಯಲ್ಲಿ ನಾವಿಬ್ಬರೂ ಬೆಳಗಾವಿಗೆ ಬಂದೆವು. ಬಂದ ನಂತರ ನಮ್ಮ ಸಂಕೇಶ್ವರದಲ್ಲಿನ ಅಭ್ಯಾಸದಂತೆ ಸ್ಕೂಲಿಗೆ ನಡೆದೇ ಹೋಗಿ ಬರುತ್ತಿದ್ದೆವು. ತಂದೆಯವರು ವಾಪಸ್ಸು ಸಂಕೇಶ್ವರ ತಲುಪಿದ ಮೇಲೆ ಬೆಳಗಾವಿ ಮತ್ತು ಸಂಕೇಶ್ವರದ ನಡುವಿನ ಸಂಚಾರ ಸ್ಥಗಿತವಾಯಿತು.

ಹಿರಣ್ಯಕೇಶಿಯ ತಾಯಿಯಾದ ಘಟಪ್ರಭಾ ತುಂಬಿ ತುಳುಕಿ ಸೇತುವೆಯ ಮೇಲೆ ಉಕ್ಕಿ ಹರಿದಿದ್ದಳು. ಅದಾದ ಮೇಲೆ ಒಂದು ವಾರದ ನಂತರ ಮಳೆಯ ಪ್ರತಾಪ ಮತ್ತು ಘಟಪ್ರಭೆಯ ಕೋಪ ಎರಡೂ ಕಡಿಮೆಯಾಗಿ ಮತ್ತೆ ಸಂಚಾರ ಶುರುವಾಯಿತಂತೆ.

ಮೊನ್ನೆ ನಮ್ಮ ಕುಲಕರ್ಣಿ ಟೀಚರ್ ಅವರಿಂದ ನನಗೆ ವಾಟ್ಸಾಪ್ ಸಂದೇಶ ಬಂದಿತು. "ಶಂಕರಲಿಂಗ ಗುಡಿಯ ಫೋಟೋ ಕಳುಹಿಸುತ್ತಿದ್ದೇನೆ. ಕಾರಣ ಐದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಿರಣ್ಯಕೇಶಿ ನದಿಗೆ ಮಹಾಪೂರ ಬಂದಿದೆ. ನೀರು ಗುಡಿಯನ್ನು ಸುತ್ತುವರೆದು ಮಠ ಗಲ್ಲಿಯಲ್ಲಿ ಸಾಕಷ್ಟು ನೀರು ತುಂಬಿಕೊಂಡಿದೆ. ನೀವು ಸಂಕೇಶ್ವರದಲ್ಲಿದ್ದಾಗಿನ ನೆನಪು ಇರಬಹುದು. ಆ ಗಲ್ಲಿಯ ಜನರು ಆತಂಕದಲ್ಲಿ ಇರುವರು" ಎಂದು ಕಳವಳ ವ್ಯಕ್ತಪಡಿಸಿದ್ದರು.

ಈ ಲೇಖನ ಬರೆಯುತ್ತಿದ್ದಾಗ ಮಹಾಪೂರ ಇಳಿದಿರಬಹುದು ಹಿರಣ್ಯಕೇಶಿ ತನ್ನ ಸಿಟ್ಟನ್ನು ಇಳಿಸಿಕೊಂಡು ಎಂದಿನಂತೆ ತನ್ನ ಕೋಮಲ ಜುಳುಜುಳು ನಾದವನ್ನು ಮುಂದುವರೆಸಿದಬಹುದು ಎಂದುಕೊಂಡಿದ್ದೇನೆ. ಆದರೆ ಮಳೆ ಮತ್ತು ಮಹಾಪೂರ ಮಾಡಿದ ಹಾನಿ ಮತ್ತು ಅದರಿಂದ ಜನರಲ್ಲಿ ಉಂಟಾದ ಸಂಕಷ್ಟ ಮನಸ್ಸಿನಲ್ಲಿ ದುಗುಡ ತುಂಬಿಸಿತು.

ಆದರೆ, ನಮ್ಮ ಸಂಕೇಶ್ವರ ಪ್ರಾಂತ್ಯದ ಜನ ಗಟ್ಟಿಗರು. ಕನ್ನಡ ನಾಡಿನ ಗಂಡುಮೆಟ್ಟಿನ ನೆಲದವರು. ಪ್ರಕೃತಿಯ ವಿರೋಧಾಭಾಸಗಳೊಡನೆ ಹೋರಾಡುತ್ತಲೇ ಶತಮಾನಗಳನ್ನು ಗೆದ್ದವರು. ಸುಭಿಕ್ಷತೆಯ ಕನಸನ್ನು ನನಸಾಗಿಸಲು ಸದಾ ಕಾಲ ರಚನಾತ್ಮಕ ಕೆಲಸಗಳನ್ನು ಮಾಡಿದವರು.

ನಾನಂದು ಸಂಕೇಶ್ವರವನ್ನು ಬಿಟ್ಟು, ಸ್ವಲ್ಪ ದೂರದ ಬೆಳಗಾವಿಯನ್ನು ಸೇರಿದರೂ, ಮುಂದೆ ಬೆಳಗಾವಿಯನ್ನು ಕೂಡ ಬಿಟ್ಟು ಎಲ್ಲೆಲ್ಲೋ ತಿರುಗಿ ಸಿಂಗಪುರವನ್ನು ಸೇರಿದರೂ, ಈಗ ಜೀವನದಲ್ಲಿ ಮತ್ತೊಂದು ದೊಡ್ಡ ತಿರುವಿನ ಪ್ರವೇಶದ್ವಾರದಲ್ಲಿದ್ದರೂ, ಸಂಕೇಶ್ವರ ನನ್ನನ್ನು ಬಿಟ್ಟಿಲ್ಲ. ನಾನು ಸಂಕೇಶ್ವರವನ್ನು ಬಿಟ್ಟಿಲ್ಲ.

ಹಿರಣ್ಯಕೇಶಿ ನದಿ, ಮಠ, ಎಸ್ ಡಿ ಹೈಸ್ಕೂಲು, ಹರಗಾಪುರದ ಗುಡ್ಡ ಮುಂತಾದವುಗಳು ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿವೆ. ಕುಲಕರ್ಣಿ ಟೀಚರ್, ಗೋಡಖಿಂಡಿ ಟೀಚರ್, ಮಟ್ಟಿಕಲ್ಲಿ ಟೀಚರ್, ಶಿವಣ್ಣಗೋಳ್ ಸರ್ ಮತ್ತು ಅಮ್ಮಣಗಿ ಸರ್ ಹೃದಯದಲ್ಲಿ ಪೂಜನೀಯ ಸ್ಥಾನ ಗಳಿಸಿ ನಿಂತು ಬಿಟ್ಟಿದ್ದಾರೆ. ಹಾಗೆಯೇ ಜನಾರ್ದನ, ಶ್ರೀಧರ ಕಟ್ಟಿ ಮುಂತಾದವರ ನೆನಪು ಚಿರಸ್ಮರಣೀಯ. ಒಟ್ಟಿನಲ್ಲಿ ಸಂಕೇಶ್ವರ ನನ್ನ ಬಾಲ್ಯದ ಉತ್ತರಾರ್ಧ ಮತ್ತು ಕಿಶೋರಾವಸ್ಥೆಯ ಪೂರ್ವಾರ್ಧವನ್ನು ಅರ್ಥ ಪೂರ್ಣಗೊಳಿಸಿದ ಜೀವಂತ ನೆನಪು.

English summary
Rainy days of Sankeshwara again remembered this time. Because of it's force. writer Vasant Kulkarni remembers those rainy days in his article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X