Rain Alert: ಬೇಸಿಗೆ ಮಳೆಗೆ ಬೆಂಗಳೂರಿನ ಕೆಲವೆಡೆ ಸಂಚಾರ ಅಸ್ತವ್ಯಸ್ತ, ಮಾ.21ರವರೆಗೂ ಮಳೆ
ಬೆಂಗಳೂರು; ಬೆಂಗಳೂರಿನಾದ್ಯಂತ ವರ್ಷದ ಮೊದಲ ಪೂರ್ವ ಮುಂಗಾರು (Pre Monsoon Rain) ಮಳೆಗೆ ಅಲ್ಲಲ್ಲಿ ಜನ ಜೀವನ ಅಸ್ತವ್ಯಸ್ತವಾಯಿತು. ವಾಹನ ಸವಾರರು ಹಲವು ಕಡೆಗಳಲ್ಲಿ ರಸ್ತೆಯಲ್ಲೇ ನಿಲ್ಲುವಂತಾಯಿತು. ಬೇಸಿಗೆ ವೇಳೆ ಅಲಿಕಲ್ಲು ಸಹಿತ ಸುರಿದ ಮಳೆಗೆ ಬೆಂಗಳೂರಿನ ಇಳೆ ತಂಪಾಯಿತು. ಅದರೆ ಮಳೆ ನೀರು ಸರಾಗವಾಗಿ ಚರಂಡಿ ಸೇರಿದೇ ರಸ್ತೆ ಮೇಲೆ ನಿಂತು ಕಿರಿ ಕಿರಿ ಉಂಟು ಮಾಡಿತು. ರಾತ್ರಿಯಿಡಿ ಬೆಂಗಳೂರು ಸಂಚಾರ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು. ರಸ್ತೆಗಳ ಬ್ಲಾಕ್, ವಾಹನಗಳ ನಿಧಾನಗತಿ ಸಂಚಾರ ಕುರಿತು ಮಾಹಿತಿ ನೀಡಿದರು.
ನಗರದ ಅಂಜನಾಪುರ, ಗೊಟ್ಟಿಗೆರೆ, ಉತ್ತರಹಳ್ಳಿ, ರಾಜ ರಾಜೇಶ್ವರಿ ನಗರ, ಹೆಬ್ಬಾಳ, ಜೆ.ಪಿ.ನಗರ, ಕೆಂಗೇರಿ, ನಾಗವಾರ, ಕಮ್ಮನಹಳ್ಳಿ, ಸಂಜಯನಗರ ಸೇರಿದಂತೆ ನಗರ ಹಲವೆಡೆ ಗುಡುಗು ಮಿಂಚು ಸಹಿತ ವರ್ಷದ ಮೊದಲ ಮಳೆ (Bengaluru Rains) ಆಯಿತು. ಪೂರ್ವ ಮುಂಗಾರು ಮಳೆ ನಗರದಲ್ಲಿ ಮುಂದುವರಿಯುವ ಮುನ್ಸೂಚನೆ ಇದೆ. ಮಂಗಳವಾರ ನಗರದಲ್ಲಿ ಸುರಿದ ಮಳೆಗೆ ಅಲ್ಲಲ್ಲಿ ಸಂಚಾರ ಅಡಚಣೆ ಉಂಟಾಯಿತು. ನಗರದ ವಿವಿಧ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾಹಿತಿ ನೀಡಿದೆ.

ಹಲವೆಡೆ ರಸ್ತೆ ಸಂಚಾರದಲ್ಲಿ ಅಡಚಣೆ, ವೇಗಕ್ಕೆ ಬ್ರೇಕ್
ನಗರದ ಸಿಬಿಐ ಮೇಲ್ಸೇತುವೆ ಬಳಿ ಮಳೆ ನೀರು ನಿಂತಿರುವುದರಿಂದ ಏರ್‌ಪೋರ್ಟ್ ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬಂತು. ನಗರದಿಂದ ಯಲಹಂಕ, ಏರ್‌ಪೋರ್ಟ್, ದೇವನಹಳ್ಳಿ ಕಡೆಗೆ ತೆರಳುವ ಕಾರು, ಟ್ಯಾಕ್ಸಿ, ಬಸ್ ಹಾಗೂ ಬೈಕ್ ಸವಾರರು ಪರಾಡಿದ್ದು ಕಂಡು ಬಂತು.
ಯಲಹಂಕ ಕಾಫಿ ಡೇ ಬಳಿ ಮಳೆ ನೀರು ನಿಂತ ಪರಿಣಾಮ ಏರ್‌ಪೋರ್ಟ್ ರಸ್ತೆಯ ಕಡೆಗೆ ಸಾಗುವ ವಾಹನ ಸವಾರರು, ಪ್ರಯಾಣಿಕರಿಗೆ ತೊಂದರೆ ಆಯಿತು. ರಾಣಿ ಸರಳ ದೇವಿ ಕಾಲೇಜ್ ಮುಂಭಾಗ ಮರದ ಕಾಯಿಗಳು ರಸ್ತೆಗೆ ಬಿದ್ದು ಮಳೆ ನೀರಿಗೆ ದ್ವಿಚಕ್ರ ವಾಹನಗಳು ಸ್ಕಿಡ್ ಆಗುತ್ತಿರುವುದರಿಂದ ಟಿ ಮರಿಯಪ್ಪ ರಸ್ತೆ ಯಿಂದ ಮಾಧವನ್ ಪಾರ್ಕ್ ಕಡೆಗೆ ಸಂಚಾರ ಸಮಸ್ಯೆ ಉಂಟಾಯಿತು.
ಯಲಹಂಕ ಹಳೆ ರೈಲು ನಿಲ್ದಾಣದ ಬಳಿ ಮಳೆ ನೀರು ನಿಂತಿತ್ತು. ಇಬ್ಬಲೂರು ರಸ್ತೆ ಜಂಕ್ಷನ್ ಬಳಿ ವಾಟರ್‌ಲಾಗಿಂಗ್ ಸಮಸ್ಯೆ ಕಂಡು ಬತು. ಗಂಟೆಗಳ ಕಾಲ ಮಳೆ ನೀರು ನಿಂತ ಕಾರಣ, ವಾಹನ ಸವಾರರು ಅದರಲ್ಲಿಯೇ ನಿಧಾನವಾಗಿ ಸಾಗಿದರು. ಹಲವರು ಜಿಬಿಎ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರು.
ಮಳೆಗೆ ಸಂಚಾರ ಕಿರಿಕಿರಿ, ಮಾ.21ರವರೆಗೂ ಮಳೆ
ಅದೇ ರೀತಿ ರೈಲ್ವೆ ಅಂಡರ್ ಬ್ರಿಡ್ಜ್, ಮೇಲ್ಸೇತುವೆ, ಪ್ರಮುಖ ಜಂಕ್ಷನ್, ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಒಳಚರಂಡಿ ಸೇರಿ ಮುಂದೆ ಸಾಗದೇ ರಸ್ತೆ ಮೇಲೆ ಉಕ್ಕಿ ಹರಿಯಿತು. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಕೆಲವೆಡೆ ಕಂಡು ಬಂತು. ರಾತ್ರಿ 9 ಗಂಟೆ ಹೊತ್ತಿಗೆ ಹೆಮ್ಮೆಗೆಪುರದಲ್ಲಿ 24 ಮಿಲಿ ಮೀಟರ್, ಗೊಲ್ಲಹಳ್ಳಿಯಲ್ಲಿ 22.5 ಮಿಲಿ ಮೀಟರ್, ಬ್ಯಾಟರಾಯನಪುರ 16.5 ಮಿಲಿ ಮೀಟರ್, ಚೌಡೇಶ್ವರಿ 14.5ಮಿಲಿ ಮೀಟರ್, ಜಕ್ಕೂರು 12.5ಮಿಲಿ ಮೀಟರ್ ಮತ್ತು ಜಕ್ಕೂರು-2 12 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.
ಮುಂದಿನ ಎರಡು ದಿನ ನಗರದಲ್ಲಿ ಹಗಲು ಒಣಹವೆ ಕಂಡು ಬರಲಿದ್ದು, ಸಂಜೆ ಹೊತ್ತಿಗೆ ಮಳೆ ಜಮಾಯಿಸಲಿದೆ. ಬಿಸಿಲು ಕಡಿಮೆ ಅಗಲಿದೆ. ಮಾರ್ಚ್ 21ರವರೆಗೂ ಗುಡುಗು ಸಹಿತ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications