ಮೊದಲ ಮಳೆಗೆ ಎಚ್ಚೆತ್ತ GBA: 2000 ಕೋಟಿ ರೂ. ವೆಚ್ಚದ ರಾಜಕಾಲುವೆ ಕಾಮಗಾರಿಗಳಿಗೆ ಡೆಡ್‌ಲೈನ್
ಬೆಂಗಳೂರು: ಬೆಂಗಳೂರಿನಲ್ಲಿ ನೆನ್ನೆಯಷ್ಟೇ ವರ್ಷದ ಮೊದಲ ಮಳೆ ಸುರಿದಿದೆ. ಇದರಿಂದ ನಗರದ ಹಲವೆಡೆ ಅನೇಕ ಸಮಸ್ಯೆಗಳು ಉಲ್ಬಣಿಸಿದವು. ಇದರ ಬೆನ್ನಲ್ಲೆ ಎಚ್ಚೆತ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅವರು ಖದ್ದು ರಾಜಕಾಲುವೆ ಕಾಮಗಾರಿಗಳ ಪರಿಶೀಲನೆ ನಡೆಸಿದರು. ರಾಜಕಾಲುವೆ ದುರಸ್ತಿ, ಹೊಸ ಕೆಲಸಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಕೊಟ್ಟರು.
ನಗರದಲ್ಲಿ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ (NDMF)ಯಡಿ 175 ಕೋಟಿ ರೂ. ಹಾಗೂ ವರ್ಲ್ಡ್ ಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ (KWSRP) ಅಡಿಯಲ್ಲಿ 2000 ಕೋಟಿ ರೂ. ಅನುದಾನದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಂಗಳವಾರ ಮಳೆ ಆದ ಬೆನ್ನಲ್ಲೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಆಯುಕ್ತರು ಪ್ರಗತಿ ಪರಿಶೀಲನೆ ನಡೆಸಿದರು.

ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುವ ಮಳೆನೀರು ಕಾಲುವೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ವೇಗ ಹೆಚ್ಚಿಸಿ, ಮೇ ತಿಂಗಳಲ್ಲಿ ಆರಂಭವಾಗುವ ಪೂರ್ವ ಮಾನ್ಸೂನ್ ಮಳೆಗಾಲಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಅಗತ್ಯ. ಮಳೆಗಾಲಕ್ಕೂ ಮುನ್ನವೇ ರಾಜಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಕ್ಕೂರು ಕೆರೆ ಅಭಿವೃದ್ಧಿ
ಬೆಂಗಳೂರಿನ ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಪ್ರಕೃತಿ ಆಧಾರಿತ ಪರಿಹಾರಗಳ ಮೂಲಕ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಜಕ್ಕೂರು ಕೆರೆಯಲ್ಲಿ ಈಗಾಗಲೇ ಪ್ರಕೃತಿ ಆಧಾರಿತ ಮಾದರಿಯಲ್ಲಿ ವೆಟ್‌ಲ್ಯಾಂಡ್ ಅಭಿವೃದ್ಧಿಪಡಿಸಲಾಗಿದೆ. ಇತರೆ ಕೆರೆಗಳಲ್ಲಿಯೂ ಇದೇ ಮಾದರಿಯನ್ನು ಅಳವಡಿಸಿಕೊಂಡು, ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯುವಂತೆ ಹಾಗೂ ಶುದ್ಧ ನೀರು ಹರಿಯುವಂತೆ ಕ್ರಮ ವಹಿಸಬೇಕಿದೆ.
ಹೊಸದಾಗಿ ಕೈಗೆತ್ತಿಕೊಳ್ಳಲಾಗುತ್ತಿರುವ ಮಳೆನೀರು ಕಾಲುವೆಗಳಲ್ಲಿಯೂ ಪ್ರಕೃತಿ ಆಧಾರಿತ ಪರಿಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೀರನ್ನು ಹಿಂಗಿಸುವ ಹಾಗೂ ಕೊಳಚೆ ನೀರನ್ನು ಹೀರಿಕೊಂಡು ಶುದ್ಧೀಕರಿಸುವ ಗುಣ ಹೊಂದಿರುವ ಕೊಲೊಕಾಸಿಯಾ ಮತ್ತು ಕ್ಯಾನ್ನಾ ಇಂಡಿಕಾ ಸಸಿಗಳನ್ನು ನೆಡಬೇಕು ಎಂದರು.
ಕೋಗಿಲು ಕೆರೆಗೆ ಸ್ಲೂಯಿಸ್ ಗೇಟ್
ಶ್ರೀನಿವಾಸಪುರ ಕೆರೆಯಿಂದ ಕೋಗಿಲು ಕೆರೆಯವರೆಗೆ 1.1 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಕೆರೆಯ ವೆಟ್‌ಲ್ಯಾಂಡ್ ಅಭಿವೃದ್ಧಿಪಡಿಸಿ ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆಯಬೇಕು. ಜೊತೆಗೆ ಮಳೆಗಾಲಕ್ಕೂ ಮುನ್ನ ಕೋಗಿಲು ಕೆರೆಗೆ ಸ್ಲೂಯಿಸ್ ಗೇಟ್ ಅಳವಡಿಸಬೇಕು. ಶ್ರೀನಿವಾಸಪುರ ಕೆರೆ ಪುನರುಜ್ಜೀವನ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಂಡು, ಮಳೆಗಾಲಕ್ಕೂ ಮುನ್ನ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ತಿಳಿಸಿದರು.
ಹೊಸದಾಗಿ ಕಾಲುವೆ ನಿರ್ಮಾಣ
ಬೆಳ್ಳಳ್ಳಿ ಕೆರೆಯಿಂದ ಕಣ್ಣೂರು ಕೆರೆಯವರೆಗೆ ಭೂಮಾಪನದ ಮೂಲಕ ಸಮೀಕ್ಷೆ ನಡೆಸಿ ಗುರುತಿಸಬೇಕು. 660 ಮೀಟರ್ ಉದ್ದದ ಹೊಸ ರಾಜಕಾಲುವೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿರುವ ಜಲಾವೃತ ಸಮಸ್ಯೆ ನಿವಾರಣೆಯಾಗಲಿದೆ.
ಇನ್ನೂ ದಾಸರಹಳ್ಳಿ ಮುಖ್ಯ ರಸ್ತೆ ರಾಜಕಾಲುವೆ ಬದಿಯಲ್ಲಿರುವ ಹೆಚ್ಚುವರಿ ಬಫರ್ ವಲಯವನ್ನು ಪಾದಚಾರಿಗಳಿಗೆ ಅನುಕೂಲವಾಗುವಂತೆ ಸೌಂದರ್ಯೀಕರಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿನ್ಯಾಸ ಸಿದ್ಧಪಡಿಸಿ, ಅತ್ಯುನ್ನತ ಮಾದರಿಯಲ್ಲಿ ಆಕರ್ಷಣೀಯ ಸ್ಥಳವನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.
ಕಣ್ಣೂರು ಗ್ರಾಮದಿಂದ ಕೆರೆಯವರೆಗೆ 470 ಮೀ. ಉದ್ದದ ಎರಡೂ ಬದಿಯ ಆರ್.ಸಿ.ಸಿ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, ವೇಗ ಹೆಚ್ಚಿಸಿ ಶೀಘ್ರ ಪೂರ್ಣಗೊಳ್ಳಲಿದೆ. ಚೊಕ್ಕನಹಳ್ಳಿ ಕೆರೆಯಿಂದ ಅಗ್ರಹಾರ ಕೆರೆಯವರೆಗೆ 670 ಮೀ. ಉದ್ದದ ಹೊಸ ಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ರಾಚೇನಹಳ್ಳಿ ಮುಖ್ಯ ರಸ್ತೆಯಲ್ಲಿ 600 ಮೀ. ಉದ್ದದ ರಾಜಕಾಲುವೆ ಕಾಮಗಾರಿಗೆ ವೇಗ ನೀಡಲಾಗಿದೆ.
ಸ್ಲೂಯಿಸ್ ಗೇಟ್ ಅಳವಡಿಸಬೇಕಿರುವ ಕೆರೆಗಳಿಗೆ ವಿನ್ಯಾಸ ರೂಪಿಸಿ, ಗೇಟ್‌ಗಳನ್ನು ಅಳವಡಿಕೆ ಮಾಡಲಾಗುವುದು. ನಗರದ ನಾಗವಾರ ಜಂಕ್ಷನ್‌ನಲ್ಲಿ ಜಲಾವೃತ ಸಮಸ್ಯೆ ತಡೆಯಲು ರಸ್ತೆ ಸಹಿತ ಕಾಲುವೆ ನಿರ್ಮಿಸುವುದಾಗಿ ಅಧಿಕಾರಿಗಳು ಅಯುಕ್ತರಿಗೆ ಮಾಹಿತಿ ಕೊಟ್ಟರು.












Click it and Unblock the Notifications