• search

ಜಗತ್ತಿನ ರಹಸ್ಯ ಸ್ಪಷ್ಟವಾಗಿ ಹೇಳಬಲ್ಲ ಸಿದ್ಧಾಂತ ಯಾವುದು?

By ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಇತ್ತೀಚೆಗೆ ಕಾಲವಾದ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಬಗ್ಗೆ ನಾನು ಮೊತ್ತ ಮೊದಲು ಕೇಳಿದ್ದು ಎಂಜಿನೀಯರಿಂಗ್‍ನಲ್ಲಿ ಓದುತ್ತಿದ್ದಾಗ. ಆಗ ತಾನೇ ಅವರ ಪ್ರಥಮ ಪುಸ್ತಕ "A Brief History of Time" ಪ್ರಕಟವಾಗಿ ಅದೊಂದು "ಕ್ಲಾಸಿಕ್" ಎಂದು ಎಲ್ಲರೂ ಮಾತನಾಡುತ್ತಿದ್ದರು. ಆ ಪುಸ್ತಕವನ್ನು ಕೊಂಡು ಓದುವ ಮನಸ್ಸಿದ್ದರೂ ಪಠ್ಯ ಪುಸ್ತಕಗಳನ್ನು ಕೊಳ್ಳಲು ಕಾಸಿಗಾಗಿ ಪರದಾಡುತ್ತಿದ್ದ ನನಗೆ ಅದೊಂದು ಕೈಗೆಟುಕದ ಆಕಾಶ ದೀಪವೇ ಆಗಿತ್ತು. ಮುಂದೆ ನಾನೇ ನೌಕರಿ ಮಾಡತೊಡಗಿದಾಗ ಆ ಪುಸ್ತಕವನ್ನು ಕೊಂಡೆ ಆ ಮಾತು ಬೇರೆ.

  ನಮ್ಮ ಕಾಲೇಜಿನ ಸಮಾನ ಮನಸ್ಕರಲ್ಲಿ ವೈಜ್ಞಾನಿಕ ಪುಸ್ತಕಗಳನ್ನು ಕೊಂಡು ಪರಸ್ಪರರಲ್ಲಿ ಹಂಚಿಕೊಂಡು ಓದಿ ಚರ್ಚಿಸುವ ಪದ್ಧತಿಯನ್ನು ನಾವು ಹಾಕಿಕೊಂಡಿದ್ದೆವು. ಅಂತಹ ಗುಂಪಿನಿಂದ ನನಗೆ ಅವರ ಪುಸ್ತಕ ಲಭ್ಯವಾಯಿತು. ಆಗ ನಾನು ಓದಿದ್ದು ಕೇವಲ ಮೊದಲೆರಡು ಅಧ್ಯಾಯಗಳು ಮಾತ್ರ. ಕನ್ನಡ ಮಾಧ್ಯಮದಲ್ಲಿ ಓದಿದ ನನ್ನ ಇಂಗ್ಲಿಷು ಓದುವ ಗತಿ ತುಂಬಾ ನಿಧಾನವಾಗಿತ್ತು ಎನ್ನುವ ಕಾರಣ ಒಂದಾದರೆ, ಈ ಪುಸ್ತಕ ಅನೇಕ ಕ್ರಾಂತಿಕಾರಕ ವಿಚಾರಗಳನ್ನು ಹೊಂದಿದ್ದು ನಮಗೆ ಅವೆಲ್ಲವನ್ನೂ ಜೀರ್ಣಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ ನಮ್ಮಲ್ಲಿ ಶುದ್ಧ ವಿಜ್ಞಾನದ ಬಗ್ಗೆ ಅದರಲ್ಲಿಯೂ ಭೌತ ವಿಜ್ಞಾನದ ಕುತೂಹಲಕಾರಿ ಸಿದ್ಧಾಂತಗಳ ಬಗ್ಗೆ ಆಸಕ್ತಿಯನ್ನು ಬೆಳೆಸಲು ಮತ್ತು ನಮ್ಮಲ್ಲಿ ವಿವೇಚನೆ ಬೆಳೆಸಲು ತಮ್ಮ ಪುಸ್ತಕದ ಮೂಲಕ ಸ್ಟೀಫನ್ ಹಾಕಿಂಗ್ ಕಾರಣವಾದರು.

  ವಿಜ್ಞಾನವೇ ದೇವರೆಂದಿದ್ದ ಸ್ಟೀಫನ್ ಹಾಕಿಂಗ್ ನಡೆದು ಬಂದ ಹಾದಿ

  ಸ್ಟೀಫನ್ ಹಾಕಿಂಗ್ ಅವರ ವಿಚಾರಗಳಲ್ಲಿ ಎದ್ದು ಕಾಣುವ ವಿಷಯ ಎಂದರೆ ವೈಜ್ಞಾನಿಕ ವಿಷಯದಲ್ಲಿ ದೇವರು ಮತ್ತು ಧರ್ಮದ ಪಾತ್ರದ ಬಗ್ಗೆ. ಜಗತ್ತಿನ ಸೃಷ್ಟಿಯ ಬಿಗ್ ಬ್ಯಾಂಗ್ ಸಿದ್ಧಾಂತದ ಬಗ್ಗೆ ವಿವರಿಸುತ್ತ ಅವರು ಹೀಗೆ ಬರೆದಿದ್ದಾರೆ : "An expanding universe does not preclude a creator, but it does place limits on when he might have carried out his job". ಮತ್ತೊಂದು ಕಡೆ ಅವರು ಹೀಗೆ ಹೇಳುತ್ತಾರೆ: "Before we understand science, it is natural to believe that God created the universe. But now science offers a more convincing explanation".

  Is universe created by God or something else?

  ದೇವರ ಅಪಾರ ಶಕ್ತಿಯ ಬಗ್ಗೆ ಯಾವಾಗಲೂ ಕೇಳುತ್ತ ಬೆಳೆದ ನನಗೆ ಸ್ಟೀಫನ್ ಹಾಕಿಂಗ್ ಅವರ ಈ ತಾರ್ಕಿಕ ನಾಸ್ತಿಕತೆ ಮತ್ತು ವೈಜ್ಞಾನಿಕ ವೈಚಾರಿಕತೆ ಬಹಳ ಆಕರ್ಷಣೀಯವಾಯಿತು. ಈ ವಿಷಯದಲ್ಲಿ ಜಿಜ್ಞಾಸೆ ಬೆಳೆಯಿತು. ನನ್ನಂತೆ ವಿಶ್ವದಾದ್ಯಂತ ಮಿಲಿಯಗಟ್ಟಲೆ ಯುವ ಜನರು ಸ್ಟೀಫನ್ ಹಾಕಿಂಗ್ ಅವರ ಮೋಡಿಗೆ ಸಿಲುಕಿಕೊಂಡರು ಎಂದರೆ ಅತಿಶಯೋಕ್ತಿ ಏನಿಲ್ಲ.

  ದಿನಗಳೆದಂತೆ ನನ್ನ ತಿಳಿವಳಿಕೆಯ ಮಟ್ಟಕ್ಕೆ ಬಂದ ವಿಷಯವೇನೆಂದರೆ, ಸ್ಟೀಫನ್ ಹಾಕಿಂಗ್ ಅವರು ಮೂಲತಃ ಪಾಶ್ಚಾತ್ಯ ಸಿದ್ಧಾಂತವಾದ "Personal god" ಎಂದರೆ ಆಕಾಶದಲ್ಲೆಲ್ಲೋ ಕುಳಿತು ಈ ಜಗತ್ತನ್ನು ತನ್ನ ಮನಸ್ಸಿನಂತೆ ಸೃಷ್ಟಿಸಿ, ಪಾಲಿಸಿ ನಂತರ ಲಯಗೊಳಿಸುವ ಹಾಗೂ ಜೀವಿಗಳನ್ನು ಅವರ ಪಾಪಗಳಿಗನುಸಾರವಾಗಿ ಸ್ವರ್ಗಕ್ಕೋ ಅಥವಾ ನರಕಕ್ಕೋ ತಳ್ಳುವ ದೇವರ ಅಸ್ತಿತ್ವವನ್ನು ವಿರೋಧಿಸಿದ್ದು.

  ವಿಜ್ಞಾನ ಮಾಂತ್ರಿಕ ಸ್ಟೀಫನ್ ಹಾಕಿಂಗ್ ಬಗ್ಗೆ ಕುತೂಹಲದ 5 ಸಂಗತಿ

  ಆದರೆ "Personal god" ಎಂಬ ದೇವರ ಅಸ್ತಿತ್ವದ ಬಗೆಗಿನ ವಾದ ದೇವರನ್ನು ಕುರಿತಾಗಿ ಇರುವ ವ್ಯಾಖ್ಯಾನಗಳಲ್ಲಿ ಒಂದು ಮಾತ್ರ. ಈ ವ್ಯಾಖ್ಯಾನ ಮುಖ್ಯವಾಗಿ ಪಾಶ್ಚಿಮಾತ್ಯ ವಿಚಾರಧಾರೆಯಿಂದ ಬಂದಿದ್ದು. ಪೂರ್ವಾತ್ಯ ವಿಚಾರಧಾರೆಗಳಲ್ಲಿ ದೇವರ ವ್ಯಾಖ್ಯಾನ ಸಾಕಷ್ಟು ಬೇರೆಯೇ ಆಗಿದೆ. ಪೂರ್ವಾತ್ಯ ವಿಚಾರಧಾರೆಯ ಒಂದು ಪ್ರಮುಖ ಶಾಖೆಯ ಪ್ರಕಾರ ದೇವರು ಎಲ್ಲೆಡೆ ಹರಡಲ್ಪಟ್ಟ ಒಂದು ಜೀವಂತವಾದ ವಿಶ್ವವ್ಯಾಪಿ ಚೈತನ್ಯ. ಅಲ್ಲದೇ ಈ ಚೈತನ್ಯ ಜಗತ್ತಿನ ಎಲ್ಲವನ್ನು ಒಂದಕ್ಕೊಂದು ಜೋಡಿಸುವ ಅದೃಶ್ಯ ಆದರೆ ಜೀವಂತ ಜಾಲ. ಆಧುನಿಕ ಭೌತ ಶಾಸ್ತ್ರ ಕೂಡ ನಿಧಾನವಾಗಿ ಈ ಜಗತ್ತನ್ನು ಒಂದಕ್ಕೊಂದು ತಳುಕು ಹಾಕಿಕೊಂಡ ಅನಂತ ಜಾಲ ಎಂಬ ತೀರ್ಮಾನಕ್ಕೆ ಬಂದಿದೆ.

  Is universe created by God or something else?

  ಇಲ್ಲಿ ಸ್ಟೀಫನ್ ಹಾಕಿಂಗ್ ಅವರ ಇನ್ನೊಂದು ಹೇಳಿಕೆಯನ್ನು ಪ್ರಸ್ತಾಪಿಸುತ್ತೇನೆ: "The question is: is the way the universe began chosen by God for reasons we can't understand, or was it determined by a law of science? I believe the second. If you like, you can call the laws of science 'God', but it wouldn't be a personal God that you could meet, and ask questions."

  ಅವರ ಈ ಹೇಳಿಕೆಯಂತೆ ಒಬ್ಬ personal God ಈ ಜಗತ್ತನ್ನು ಸೃಷ್ಟಿಸದೇ ಇರಬಹುದು. ಆದರೆ ಈ ಜಗತ್ತು ಕೆಲವು ನಿಯಮಾವಳಿಗಳಿಂದ ರೂಪಿಸಲ್ಪಟ್ಟಿದೆ. ಈ ನಿಯಮಾವಳಿಗಳ ಸೂತ್ರಧಾರಿ ಶಕ್ತಿ ಅಥವಾ ಚೈತನ್ಯವೇ ದೇವರಾಗಿರಬಹುದು ಎಂದು ನನ್ನ ನಿಲುವು. ನನಗನಿಸುವ ಮಟ್ಟಿಗೆ ಈ ಚೈತನ್ಯದ ಸಂಪೂರ್ಣ ಅರಿವು ನಮ್ಮ ವಿಜ್ಞಾನಿಗಳನ್ನು ಒಳಗೊಂಡಂತೆ ಯಾರಿಗೂ ಆಗಿಲ್ಲ. ಅದು ಹೇಗೆ ಅಪರೂಪವಾಗಿ ವಿಜ್ಞಾನಿಗಳಿಗೆ ಪರಮ ಸತ್ಯದ ಒಂದು ಮುಖದ ಮಿಣುಕು ದರ್ಶನ ಆಗಾಗ್ಗೆ ಉಂಟಾಗಿ ಸಾಪೇಕ್ಷ ಸಿದ್ಧಾಂತ, ಕಣ ಚಲನ ಶಾಸ್ತ್ರಗಳಂತಹ ಅಪೂರ್ವವಾದ ಸಿದ್ಧಾಂತಗಳು ಹೊರಹೊಮ್ಮಿವೆಯೋ, ಅದೇ ತರಹ ಪರಮಸತ್ಯದ ಒಂದು ಮಿಣುಕು ನೋಟ ನಮ್ಮ ಅನೇಕ ಋಷಿ, ಮುನಿ, ದಾರ್ಶನಿಕರುಗಳಿಗೆ ಆಗಿ ಅವರಿಂದ ಅನೇಕ ಶಾಸ್ತ್ರಗಳು, ಸಿದ್ಧಾಂತಗಳು ರಚಿಸಲ್ಪಟ್ಟಿರಬಹುದು ಎಂದು ನನ್ನ ನಂಬಿಕೆ.

  ಈ ಜಗತ್ತಿನ ಬಹುತೇಕ ಅರಿವು ನಮಗಿಲ್ಲ ಎಂದು ಅನೇಕ ವಿಜ್ಞಾನಿಗಳು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ವಿಜ್ಞಾನಿಗಳು ಈಗ ಒಂದು Grand Unified Theory ಯೊಂದರ ಹುಡುಕಾಟದಲ್ಲಿದ್ದಾರೆ. ಇಡೀ ಜಗತ್ತಿನ ಮೂಲ ತತ್ವವನ್ನು ಕೇವಲ ಒಂದೇ ಒಂದು ಸಿದ್ಧಾಂತದಲ್ಲಿ ಹಿಡಿದಿಡುವ ಪ್ರಯತ್ನ ಇದು. ಎಂದರೆ ಜಗತ್ತಿನ ರಹಸ್ಯವನ್ನು ಸ್ಪಷ್ಟವಾಗಿ ಹೇಳಬಲ್ಲ ಸಿದ್ಧಾಂತದ ಹುಡುಕಾಟ. ವಿಜ್ಞಾನಿಗಳ ಈ ಪ್ರಯತ್ನಕ್ಕೂ, ಜಗತ್ತಿನ ಮೂಲಭೂತ ಸತ್ಯವನ್ನು ಹುಡುಕುತ್ತಿರುವ ತತ್ವಜ್ಞಾನಿಗಳು, ಅಧ್ಯಾತ್ಮ ಸಾಧನೆಯಲ್ಲಿ ತೊಡಗಿರುವವರ ಸಾಧನೆಗೂ ಬಹಳ ಅಂತರವೇನಿಲ್ಲ ಎಂದು ನನಗೆ ಎನಿಸುತ್ತದೆ. ಅವರ ಮಾರ್ಗಗಳಷ್ಟೇ ಬೇರೆ ಬೇರೆ ಎನಿಸುತ್ತದೆ. ಒಂದನ್ನು ಬೆಂಗಾವಲಿಗಿಟ್ಟುಕೊಂಡು ಇನ್ನೊಂದನ್ನು ಅಲ್ಲಗಳೆಯುವ ನಮ್ಮ ಪೃವೃತ್ತಿಯೇ ತಪ್ಪೇನೋ ಎಂದೆನಿಸುತ್ತದೆ.

  Is universe created by God or something else?

  ಸತ್ಯದ ಅನ್ವೇಷಣೆಯಲ್ಲಿ ಎಲ್ಲ ಮಾರ್ಗಗಳಿಗೂ ಸಮಾನ ಗೌರವ ಇರಬೇಕು ಮತ್ತು ಸತ್ಯಾನ್ವೇಷಣೆಗೆ ತೊಡಗಿದ ಎಲ್ಲ ಮಾರ್ಗಗಳನ್ನು ನಮ್ಮ ಅಧುನಿಕ ಸಮಾಜ ಒಪ್ಪಬೇಕೆಂದು ಒಂದು ಆಶಯ. ಒಂದೆಡೆಯಲ್ಲಿ ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳು ಸತ್ಯಾನ್ವೇಷಣೆಯಲ್ಲಿ ತೊಡಗಿ, ಹೊಸ ಹೊಸ ಆಯಾಮಗಳನ್ನು ಸೃಷ್ಟಿಸಿ, ಜಗತ್ತನ್ನು ಮೂಢ ನಂಬಿಕೆಗಳಿಂದ ಹೊರಗೆಳೆದು, ಪ್ರಾಜ್ಞ ಚರ್ಚೆಗೆ ಎಳೆದು, ಬೌದ್ಧಿಕ ಏಕತೆಗೆ ಪ್ರಯತ್ನಿಸಿದರೆ, ಇನ್ನೊಂದೆಡೆ ಅಸಾಮಾಜಿಕ ತತ್ವಗಳು ಇಲ್ಲ ಸಲ್ಲದ ವ್ಯತ್ಯಾಸಗಳನ್ನು ಸೃಷ್ಟಿಸಿ, ಜನರಲ್ಲಿ ಒಡಕನ್ನು ಕಲ್ಪಿಸುವ ನಿರಂತರ ಪ್ರಯಾಸ ನಡೆದಿರುವುದು ಇಂದಿನ ವಿಪರ್ಯಾಸ. ಆದರೇನು ಮಾಡುವುದು? ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳ ಪ್ರಯತ್ನ ಗೆಲ್ಲಲಿ ಎಂದು ಆಶಿಸುವುದಷ್ಟೆ ನಮ್ಮಂತಹ ಸಾಮಾನ್ಯರ ಪ್ರತಿಕ್ರಿಯೆ.

  (ಹಿಂದುಸ್ತಾನ್ ಟೈಮ್ಸ ನಲ್ಲಿ ಪ್ರಕಟವಾದ ಮಾರ್ಕ್ ಟಲಿ ಅವರ "Why there is no reason for religion and science to clash" ಎಂಬ ಲೇಖನದಿಂದ ಪ್ರೇರಿತ)

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  An expanding universe does not preclude a creator, but it does place limits on when he might have carried out his job. Before we understand science, it is natural to believe that God created the universe. But now science offers a more convincing explanation.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more