ತೀವ್ರಗೊಂಡ ಇರಾನ್ ಯುದ್ಧದ ಸಮಸ್ಯೆ, ತಿಕ್ಕಾಟ ಇನ್ನಷ್ಟು ಜೋರು | Operation Roaring Lion
ಮಧ್ಯಪ್ರಾಚ್ಯ ಈಗ ಭಾರಿ ದೊಡ್ಡ ಕಂಟಕದ ಕುಲುಮೆಗೆ ಸಿಲುಕಿದ್ದು, ಭವಿಷ್ಯವೇ ಮಂಕಾಗುತ್ತಾ ಇದೆ. ಇರಾನ್ & ಅಮೆರಿಕ ನಡುವಿನ ಯುದ್ಧ ಇನ್ನಷ್ಟು ಜೋರಾಗಿದ್ದು, ಮತ್ತಷ್ಟು ಘರ್ಷಣೆ ಈಗ ಹೆಚ್ಚಾಗಿದೆ. ನೋಡ ನೋಡುತ್ತಲೇ 2ನೇ ವಾರಕ್ಕೆ ಎಂಟ್ರಿ ಕೊಡುತ್ತಿರುವ ಇರಾನ್ & ಅಮೆರಿಕ ಯುದ್ಧ ಅರಬ್‌ನ ನೆಲದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ, ಇಂದು ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಇರಾನ್ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇದರ ಪರಿಣಾಮ ದುಬೈ, ಕತಾರ್, ಸೌದಿ ಸೇರಿದಂತೆ ಹಲವು ದೇಶಗಳಲ್ಲಿ ಜನರು ಭಯದಲ್ಲೇ ಬದುಕುವಂತೆ ಆಗಿದೆ. ಮತ್ತೊಂದು ಕಡೆ ಇರಾನ್ ನಡೆಸುತ್ತಿರುವ ದಾಳಿ ಹಿನ್ನೆಲೆ ತೈಲ ಸಂಸ್ಕರಣಾ ಘಟಕಗಳು ಕೂಡ ಹೊತ್ತಿ ಉರಿಯುತ್ತಿವೆ.
ಇರಾನ್ & ಅಮೆರಿಕ ನಡುವಿನ ಯುದ್ಧದಲ್ಲಿ ಈಗಾಗಲೇ 10,000ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಈ ತಿಕ್ಕಾಟದಲ್ಲಿ ಸಾವಿರಾರು ಜನ ಗಾಯಗೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹಾಗೂ ಅಂಕಿ ಅಂಶ ಸಿಕ್ಕಿಲ್ಲ. ಹೀಗಿದ್ದರೂ ಯುದ್ಧ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹೆಚ್ಚಿಸುತ್ತಿದೆ. ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಒಗಟ್ಟಿನಿಂದ ಇರಾನ್ ವಿರುದ್ಧ ಯುದ್ಧ ಸಾರಿ, ಈಗಾಗಲೇ 12 ದಿನ ಕಳೆದಿದೆ. ಫೆಬ್ರವರಿ ಕೊನೆಯ ಶನಿವಾರ ಶುರುವಾಗಿದ್ದ ಈ ಯುದ್ಧ ಈಗಾಗಲೇ ಭೀಕರ ಹಂತಕ್ಕೆ ತಲುಪಿ, ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗಿದೆ. ಹಾಗೇ ಪರಮಾಣು ಬಾಂಬ್ ಬಳಕೆಯ ಭೀತಿ ಕೂಡ ಹುಟ್ಟಿಕೊಂಡಿದೆ.

ಭೀಕರ ದಾಳಿಗೆ ಅಮೆರಿಕ ಸಿದ್ಧತೆ?
ಅಮೆರಿಕ ಎಷ್ಟೇ ಹೇಳಿದರೂ ಇರಾನ್ ಇದೀಗ ಮಾತು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನಬಹುದು. ಇರಾನ್ ಯುದ್ಧದ ಪರಿಣಾಮಗಳು ಹೆಚ್ಚಾಗುತ್ತಿದ್ದು, ಇಸ್ರೇಲ್ ಮತ್ತು ಅಮೆರಿಕ ಒಟ್ಟಾಗಿ ಘೋರವಾಗಿ ದಾಳಿ ಮಾಡುತ್ತಾ ಇರಾನ್ ನಾಶಕ್ಕೆ ಮುನ್ನುಗ್ಗಿವೆ. ಇದರ ಪರಿಣಾಮ ರೊಚ್ಚಿಗೆದ್ದಿರುವ ಇರಾನ್ ಕೂಡ ಅಕ್ಕಪಕ್ಕದ ದೇಶಗಳು ಎಂದರೆ ಅರಬ್ ದೇಶಗಳ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿದೆ. ಈ ಹಿನ್ನೆಲೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಕೂಡ ಅಲ್ಲಾಡಿ ಹೋಗಿದ್ದು, ಯಾವುದೇ ಕ್ಷಣದಲ್ಲಿ ಈ ಯುದ್ಧ ಮತ್ತಷ್ಟು ವಿನಾಶಕ್ಕೆ ನಾಂದಿ ಹಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಆದರೆ ಈಗ ಇರಾನ್ ಸೇನೆ ಮತ್ತು ನಾಯಕರಿಗೆ ಬುದ್ಧಿ ಕಲಿಸಲು ಅಮೆರಿಕ ದೊಡ್ಡ ಮಟ್ಟದ ದಾಳಿಗೆ ಮುಂದಾಗಿದೆ ಎಂಬ ಸುದ್ದಿ ಓಡಾಡುತ್ತಿದೆ.












Click it and Unblock the Notifications