• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಾಜಿ ಆಶೀರ್ವಾದ ಪಡೆದು ಮೊಘಲರ ಮಣಿಸಿದ್ದ ಮಹಾರಾಜ ಛತ್ರಸಾಲ

By ವಸಂತ ಕುಲಕರ್ಣಿ, ಸಿಂಗಪುರ
|

1665ರಲ್ಲಿ ಮೊಘಲರ ದೊರೆ ಔರಂಗಜೇಬನು ಶಿವಾಜಿ ಮಹಾರಾಜನನ್ನು ಹತ್ತಿಕ್ಕಲು ಮಿರ್ಜಾ ರಾಜೇ ಜಯಸಿಂಗನನ್ನು ದಖನ್ ಪ್ರಾಂತ್ಯಕ್ಕೆ ದೊಡ್ಡ ಸೈನ್ಯದೊಂದಿಗೆ ಕಳುಹಿಸಿಕೊಟ್ಟನು. ಆ ಸೈನ್ಯದಲ್ಲಿ ಹದಿನೆಂಟು ವರ್ಷದ ಬುಂದೇಲ್ ಖಂಡದ ಯುವಕನೊಬ್ಬ ಇರುತ್ತಾನೆ. ಆ ಯುವಕನಿಗೆ ಮೊಘಲರ ಮೇಲೆ ಯಾವುದೇ ರಾಜಭಕ್ತಿ ಇರುವುದಿಲ್ಲ.

ಕೇವಲ ನಾಲ್ಕು ವರ್ಷಗಳ ಹಿಂದೆ ಮೊಘಲರ ವಿರುದ್ಧದ ಯುದ್ಧದಲ್ಲಿ ಆ ಯುವಕನ ತಂದೆ ಮತ್ತು ತಾಯಿಯರನ್ನು ಮೊಘಲರ ದೊರೆ ಔರಂಗಜೇಬ ಚಿತ್ರಹಿಂಸೆ ಮಾಡಿ ಕೊಂದಿರುತ್ತಾನೆ. ಆಗ ಇನ್ನೂ ಚಿಕ್ಕ ಹುಡುಗನಾದ ಈ ಯುವಕ ತಂದೆ ತಾಯಿಯರ ಅನುಪಸ್ಥಿತಿಯಲ್ಲಿ ಅದು ಹೇಗೋ ಬೆಳೆದು ದೊಡ್ಡವನಾಗುತ್ತಾನೆ.

ಆಗ ಅವನಿಗೆ ದಖನ್ನಿನ ಮೇಲೆ ಔರಂಗಜೇಬನ ಸೈನ್ಯ ದಂಡೆತ್ತಿ ಹೋಗುವುದು ತಿಳಿಯುತ್ತದೆ. ದಖನ್ನಿನ ಯುದ್ಧದಲ್ಲಿ ಗೆಲ್ಲುವ ಸೇನೆಯೊಂದಿಗೆ ಸೇರಿಕೊಂಡು ಅಲ್ಲಿ ಲೂಟಿ ಮಾಡಿದ ಹಣದಲ್ಲಿ ತನಗೆ ಸಿಕ್ಕಿದ ಪಾಲನ್ನು ಪಡೆದು ತನ್ನ ರಾಜ್ಯ ಸೇರಿಕೊಂಡು ಐಷಾರಾಮದಿಂದ ಮುಂದಿನ ದಿನಗಳನ್ನು ಕಳೆಯುವುದು ಆ ಯುವಕನ ಆಶಯ. ಅಲ್ಲದೇ ತಾನು ಯುದ್ಧದಲ್ಲಿ ವೀರಾವೇಶದಿಂದ ಕಾದಿದರೆ ಮೊಘಲರ ಸೈನ್ಯದಲ್ಲಿ ತನಗೆ ಒಳ್ಳೆಯ ಸ್ಥಾನಮಾನ ದೊರಕಬಹುದು ಎಂಬ ಆಸೆ.

ಸಂಕೇಶ್ವರದ ದಿನಗಳು 10 : ಹೆಂಗಿದ್ದ ಜನಾರ್ಧನ ಹೆಂಗಾದ?

ಆ ಯುವಕ ದಂಡಿನೊಂದಿಗೆ ಹೊರಟು ದಖನ್ ಪ್ರಾಂತ್ಯವನ್ನು ತಲುಪುತ್ತಾನೆ. ಅಲ್ಲಿ ಮಿರ್ಜಾರಾಜಾ ಜಯಸಿಂಗ್, ಶಿವಾಜಿ ಮಹಾರಾಜನನ್ನು ಪುರಂದರಗಡದ ಮುತ್ತಿಗೆಯಲ್ಲಿ ಕಂಗೆಡಿಸುತ್ತಾನೆ. ಅಂತ್ಯವೇ ಇಲ್ಲದ ಕದನದಿಂದ ಬೇಸತ್ತ ಶಿವಾಜಿ, ಜಯಸಿಂಗನೊಡನೆ ಕದನ ಒಪ್ಪಂದ ಮಾಡಿಕೊಳ್ಳುತ್ತಾನೆ.

ಶಿವಾಜಿ ಮಹಾರಾಜನ ರಾಜ್ಯದಲ್ಲಿ ಅವನ ಪ್ರಜೆಗಳಿಟ್ಟಿರುವ ನಂಬಿಕೆ ಮತ್ತು ಭಕ್ತಿಗಳನ್ನು ಕಂಡ ಮೇಲೆ ಬುಂದೇಲಖಂಡದ ಯುವಕನಿಗೆ ಮನಃಪರಿವರ್ತನೆಯಾಗಲು ಶುರುವಾಗುತ್ತದೆ. ಶಿವಾಜಿ ಮಹಾರಾಜನ ಧೈರ್ಯ, ಶೌರ್ಯವನ್ನು ಕಣ್ಣಾರೆ ಕಂಡ ಯುವಕನಿಗೆ ಔರಂಗಜೇಬನೊಡನೆ ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಆತ್ಮಾರ್ಪಣೆ ಮಾಡಿದ ತಂದೆ ತಾಯಿಯರ ನೆನಪಾಗುತ್ತದೆ. ತನ್ನ ಸ್ವಾರ್ಥಕ್ಕೋಸ್ಕರ ಅವರ ಆದರ್ಶವನ್ನು ಮರೆತ ಯುವಕನಿಗೆ ತನ್ನ ಬಗ್ಗೆಯೇ ನಾಚಿಕೆಯಾಗುತ್ತದೆ.

ಆ ಯುವಕ ಶಿವಾಜಿ ಮಹಾರಾಜನನ್ನು ಭೇಟಿಯಾಗಲು ಕೋರಿಕೊಳ್ಳುತ್ತಾನೆ. ಶಿವಾಜಿ ಮಹಾರಾಜ ಆ ಯುವಕನನ್ನು ಭೇಟಿಯಾಗಿ ಔರಂಗಜೇಬನ ವಿರುದ್ಧ ದಂಗೆಯೆದ್ದು ತನ್ನ ಮಾತೃಭೂಮಿಯಾದ ಬುಂದೇಲಖಂಡವನ್ನು ಸ್ವತಂತ್ರಗೊಳಿಸಲು ಹುರಿದುಂಬಿಸುತ್ತಾನೆ. ಆ ಯುವಕ ಅಲ್ಲಿಂದ ತನ್ನೂರಿಗೆ ಮರಳಿ ತನ್ನದೇ ಆದ ಚಿಕ್ಕ ಸೇನೆಯೊಂದನ್ನು ಕಟ್ಟಿ, ಔರಂಗಜೇಬನು ದಖನ್ ಪ್ರಾಂತ್ಯದ ಯುದ್ಧಗಳಲ್ಲಿ ವ್ಯಸ್ತವಾಗಿರುವ ಸುಸಂದರ್ಭ ನೋಡಿಕೊಂಡು ಒಂದೊಂದಾಗಿ ಬುಂದೇಲಖಂಡದ ಎಲ್ಲ ಪ್ರಾಂತ್ಯಗಳನ್ನು ಗೆದ್ದು ಸ್ವತಂತ್ರಗೊಳಿಸುತ್ತಾನೆ.

'ಚಲ್ತಾ ಹೈ' ಮನೋಭಾವಕ್ಕೆ ನಾವು ಭಾರತೀಯರು ಕೊಕ್ಕೆ ಹಾಕುವುದೆಂದು?

ಶಿವಾಜಿ ಮಹಾರಾಜನ ಶೌರ್ಯದಿಂದ ಪ್ರೇರಣೆಗೊಂಡು ತನ್ನ ತಾಯ್ನಾಡಾದ ಬುಂದೇಲಖಂಡವನ್ನು ದಾಸ್ಯದಿಂದ ಬಿಡುಗಡೆಗೊಳಿಸಿದ ಆ ಯುವಕ ಮಹಾರಾಜ ಛತ್ರಸಾಲ. ಮಹಾರಾಜ ಚಂಪಕರಾಯನ ಮೊದಲ ಪುತ್ರನಾದ ಛತ್ರಸಾಲ ತನ್ನ ಬಗ್ಗೆ ತಾನೇ ಹೀಗೆ ಬರೆದುಕೊಂಡಿದ್ದಾನೆ:

"ಪಿತಾ ಹಮಾರೆ ಸೂಬಾ ಡಾಂಡೆ| ತುರಕನ ಪರ ಅಜಮಾಯೇ ಖಾಂಡೆ||

ತಿನ ಚಂಪತಿ ಕೆ ನಂದ ಹಮ್, ಸಸಿ ನವಾವೈ ಕಾಹಿ||

ಹಮ್ ಭೂಲೆ ಸೇಯೌ ವೃಥಾ, ಹಿತು ಜಾನಿ ಕೈ ವಾಹಿ||

ಏಡ ಏಕ ಸಿವರಾಜ ನಿಬಾಹಿ| ಕರೌ ಅಪನೆ ಚಿತಕಿ ಚಾಹಿ||

ಆಠ ಪಾತಶಾಹಿ ಝುಕ ಝೋರೆ| ಸುಬನಿ ಬಾಂಧೀ ಡಾಡ ಲೈ ಛೌರೇ||

ಐಸೇ ಗುಣ ಶಿವರಾಜ ಕೇ| ಬಸೇ ಚಿತ್ರ ಮೇ ಆಯಿ||

ಮಿಲಿವೋಯಿ ಮನ ಮೇ ಧನ್ಯೋ| ಮನಸಿ ಮತ ಜ್ಯೋ ಬನಾಯಿ||

ಇದರರ್ಥವೇನೆಂದರೆ "ನನ್ನ ತಂದೆ ನನ್ನ ತಾಯ್ನಾಡಿಗಾಗಿ ಮೊಘಲರ ವಿರುದ್ಧ ಕೈಯಲ್ಲಿ ಕತ್ತಿ ಹಿರಿದು ಹೋರಾಡಿದ. ಅಂಥವನ ಮಗನಾದ ನಾನು ಅದೇ ಮೊಘಲರ ಮುಂದೆ ತಲೆಬಗ್ಗಿಸುತ್ತಿದ್ದೇನೆ. ಅದೇ ಶಿವಾಜಿಯನ್ನು ನೋಡಿ. ಆ ಮಹಾತ್ಮ ಮೊಘಲ ದೊರೆಯ ವಿರುದ್ಧ ಹೋರಾಡುತ್ತಿದ್ದಾನೆ. ಎಂಟು ಸುಲ್ತಾನರು ಅವನ ಕೈಯಲ್ಲಿ ಸೋಲನ್ನನುಭವಿಸಿದ್ದಾರೆ. ನನಗೆ ಅಂತಹ ಮಹಾನ್ ದೊರೆಯ ದರ್ಶನ ಭಾಗ್ಯ ಲಭಿಸಿದರೆ ನಾನು ಧನ್ಯ".

ಅಂದ ಹಾಗೆ ಈ ಮಹಾರಾಜ ಛತ್ರಸಾಲನೇ ಬಾಜೀರಾಯನ ಕಿರಿಯ ರಾಣಿ ಮಸ್ತಾನಿಯ ತಂದೆ. ಬಾಲಿವುಡ್ಡಿನ ಜನ ಮಸ್ತಾನಿಯನ್ನೇನೋ ತಮ್ಮ ಸಿನೇಮಾದ ಮೂಲಕ ದೇಶದ ಮನೆಮಾತಾಗಿಸಿದರು. ಆದರೆ ಛತ್ರಸಾಲ ಮಹಾರಾಜನ ಬಗ್ಗೆ? ಯಾವ ಕಥೆಯಲ್ಲಿ ಗ್ಲಾಮರ್ ಇಲ್ಲವೋ ಅದರಿಂದ ಹೇಗೆ ಸಿನೆಮಾ ಮಾಡಿಯಾರು?

ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು!

ಈ ಹಿಂದೆ ನಾನು ಲಲಿತ್ ಬೋರ್ಫುಕನ್ ಎಂಬ ಅಸ್ಸಾಮಿನ ವೀರಪುತ್ರನ ಬಗ್ಗೆ ಬರೆದಿದ್ದೇನೆ. ಇತಿಹಾಸದಲ್ಲಿ ಸಾಕಷ್ಟು ಆಸಕ್ತಿ ಇರುವ ನನಗೆ ಕೂಡ ಲಚಿತ್ ಬೋರ್ಫುಕನ್ ಮತ್ತು ಮಹಾರಾಜ ಛತ್ರಸಾಲರ ಬಗ್ಗೆ ತಿಳಿದದ್ದು ಬಹಳ ನಂತರವೇ. ಏಕೆಂದರೆ ನಮ್ಮ ಸ್ಕೂಲಿನ ಇತಿಹಾಸ ಇಂತಹ ಮಹನೀಯರ ಬಗ್ಗೆ ಒಂದು ಸಾಲನ್ನೂ ಕೂಡ ಬರೆದಿಲ್ಲ. ಮುಖ್ಯವಾಗಿ ಇಲ್ಲಿ ಹೇಳ ಬಯಸಿದ್ದೇನೆಂದರೆ ನಮ್ಮ ದೇಶದವನೇ ಆದ ಮಹಾರಾಜ ಛತ್ರಸಾಲ, ಶಿವಾಜಿಯನ್ನು ಮುಖತಃ ಭೇಟಿಯಾಗಿ ಅವನ ಆಶೀರ್ವಾದ ಪಡೆದು ಅವನ ಯುದ್ಧತಂತ್ರವನ್ನು ಅನುಸರಿಸಿ ವಿಜಯ ಗಳಿಸಿದ. ಆದರೆ ಸುಮಾರು ಮೂರುನೂರು ವರ್ಷಗಳ ನಂತರ ದಕ್ಷಿಣ ಪೂರ್ವದೇಶವಾದ ವಿಯೆತ್ನಾಮಿನ ಸೇನಾನಿ ಕೂಡ ಶಿವಾಜಿ ಮಹಾರಾಜನಿಂದ ಪ್ರಭಾವಿತನಾಗಿ ಅಮೇರಿಕದಂತಹ ಬಲಾಢ್ಯ ದೇಶವನ್ನು ಮಣಿಸಿದ ಎಂದರೆ? ಅದು ಒಂದು ಅತ್ಯಪೂರ್ವವಾದ ಸಂಗತಿ.

ವಿಶ್ವದಲ್ಲಿಯೇ ಸುಸಜ್ಜಿತ ಮತ್ತು ಸುಶಿಕ್ಷಿತ ಅಮೇರಿಕದ ಸೇನಾಪಡೆಯನ್ನು ವಿಯೆತ್ನಾಮಿನ ಗೆರಿಲ್ಲಾ ಯೋಧರು ಯುದ್ಧದಲ್ಲಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದು ಎಲ್ಲರಿಗೂ ಗೊತ್ತು. ವಿಯೆತ್ನಾಮಿನ ಸೈನಿಕರ ಈ ಯಶಸ್ಸಿನ ಹಿಂದೆ ಅವರ ಸೇನಾನಿ ಹೋ ಚಿ ಮಿನ್ ಅವರ ಘನವಾದ ಪಾತ್ರವಿದೆ.

ವಿಯೆತ್ನಾಮ್ ಯುದ್ಧದ ನಂತರ ಕೆಲವು ಪತ್ರಕರ್ತರು ಹೋ ಚಿ ಮಿನ್ ಅವರಿಗೆ ಅದು ಹೇಗೆ ವಿಯೆತ್ನಾಮಿನಂತಹ ಚಿಕ್ಕ ದೇಶ ಅಮೇರಿಕದಂತಹ ದೇಶವನ್ನು ಸೋಲಿಸಿದ್ದು ಎಂದು ಕೇಳಿದಾಗ ಅವರು, "ವಿಯೆತ್ನಾಮಿನ ಯುದ್ದ ನಡೆಯುತ್ತಿದ್ದಾಗ, ಅದೃಷ್ಟವಶಾತ್ ನನಗೆ ಭಾರತದ ಶಿವಾಜಿ ಮಹಾರಾಜನ ಬಗ್ಗೆ ಪುಸ್ತಕವೊಂದು ದೊರಕಿತು. ಅವನ ಜೀವನದಿಂದ ಮತ್ತು ಯುದ್ಧಗಳಿಂದ ಪ್ರಭಾವಿತನಾಗಿ ನಾನು ಕೂಡ ಅಮೇರಿಕನ್ನರ ವಿರುದ್ಧ ಅವನ ಗೆರಿಲ್ಲಾ ಯುದ್ಧಕ್ರಮವನ್ನು ಉಪಯೋಗಿಸಿದೆ" ಎಂದು ಹೇಳಿದರಂತೆ.

ಈ ಕಥೆ ಅದೆಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಶಿವಾಜಿ ಮಹಾರಾಜನ ಜೀವನ ಕಥೆಯನ್ನು ಚಿಕ್ಕಂದಿನಿಂದ ಓದುತ್ತಾ ಬೆಳೆದ ನನಗೆ ಇದು ಸತ್ಯವೇ ಇರಬಹುದೇನೋ ಎನಿಸುತ್ತದೆ.

ನಮ್ಮ ದೆಹಲಿ ಕೇಂದ್ರಿತ ಇತಿಹಾಸಕಾರರು ಶಿವಾಜಿ, ಛತ್ರಸಾಲ, ಲಚಿತ್ ಬೊರಫುಕನ್ ಮತ್ತು ಬಾಜೀರಾಯ ಅವರಂತರ ಅನೇಕ ಮಹಾನ್ ನಾಯಕರನ್ನು ಮರೆತಿರಬಹುದು. ಅಲ್ಲದೇ ನಮ್ಮ ವೀರ ಕನ್ನಡತಿಯರಾದ ಕಿತ್ತೂರು ಚೆನ್ನಮ್ಮ, ಕೆಳದಿಯ ಚೆನ್ನಮ್ಮ ಅವರಂಥವರ ಬಗ್ಗೆ ಕೇವಲ ಕೆಲವು ಸಾಲುಗಳನ್ನು ಮಾತ್ರ ಬರೆಯುತ್ತಿರಬಹುದು.

ಮರಾಠಾ ಸೇನೆಯ ವಿರುದ್ಧ ವೀರಾವೇಶದಿಂದ ಕಾದಿದ ಬೆಳವಾಡಿ ಮಲ್ಲಮ್ಮ ಮತ್ತು ಪೋರ್ಚುಗೀಸರನ್ನು ಅನೇಕಬಾರಿ ಸೋಲಿಸಿ ಕೊನೆಗೆ ತನ್ನವರಿಂದಲೇ ವಂಚನೆಗೊಳಗಾಗಿ ಸೋತ ಕರಾವಳಿಯ ವೀರ ರಾಣಿ ಅಬ್ಬಕ್ಕ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರಬಹುದು. ಆದರೆ ನಮ್ಮ ಮಹಾನ್ ದೇಶದ ಇತಿಹಾಸವನ್ನು ನಾವೆಲ್ಲ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರಬೇಕು ಮತ್ತು ಮರೆತವರಿಗೆ ನೆನಪಿಸುತ್ತಲೇ ಇರಬೇಕು. ಏಕೆಂದರೆ ಒಂದು ನಾಡಿನ ಸಂಸ್ಕೃತಿ ಮತ್ತು ಪರಂಪರೆ ಅದರ ಇತಿಹಾಸದಿಂದಲೇ ಬದುಕಿ ಉಳಿಯುತ್ತದೆ.

English summary
Indian history : Maharaja Chhatrasal of Bundelkhand fought against Mughal empire, after getting blessings from Shivaji Maharaja. Vasant Kulkarni takes a tour in the Indian history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X