• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಗೊತ್ತಾ? ಕಚ್ಚುವುದರಿಂದ ಆಗುವ ಲಾಭಗಳು ಅಷ್ಟಿಷ್ಟಲ್ಲ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

'ನವರಸಾಯನ' ಅಂಕಣದಲ್ಲಿ ಬರುತ್ತಿರುವ ಲೇಖನಗಳನ್ನು ಓದುವುದೆಂದರೆ ಹಾಸ್ಯ ಮತ್ತು ಸಮೃದ್ಧ ಮನರಂಜನೆಯ ಮೃಷ್ಟಾನ್ನ ಭೋಜನ ಸವಿದಂತೆ. ಆ ರಸಾಸ್ವಾದ ಸವಿದವರಿಗೇ ಗೊತ್ತು. ನಮ್ಮ ನಿಮ್ಮೆಲ್ಲರ ನಡುವೆ ನಡೆಯುವ ದಿನನಿತ್ಯದ ಆಗುಹೋಗುಗಳಲ್ಲೇ ಹಾಸ್ಯವನ್ನು ಹೆಕ್ಕಿ, ರುಚಿಕಟ್ಟಾಗಿ ಬರೆದು ಬಡಿಸುವುದರಲ್ಲಿ ಅಮೆರಿಕದಲ್ಲಿ ನೆಲೆಸಿರುವ ಚಾಮರಾಜಪೇಟೆಯ ಶ್ರೀನಾಥ್ ಅವರು ನಿಷ್ಣಾತರು. ಇಂದಿನ ಲೇಖನ 50ನೇಯದು. ಅಭಿನಂದನೆಗಳು ಶ್ರೀನಾಥ್ ಭಲ್ಲೆ ಸರ್ - ಸಂಪಾದಕ.

***
ಅಂದು, ಬಾಕ್ಸಿಂಗ್ ಜಗತ್ತಿನಲ್ಲಿ "ದಿ ಸೌಂಡ್ ಅಂಡ್ ದಿ ಫ್ಯೂರಿ" ಎಂದೇ ಖ್ಯಾತವಾಗಿದ್ದ ಪಂದ್ಯ ನೋಡಲು ಜಗತ್ತು ಕಾದುಕುಳಿತಿತ್ತು. ಈ ಪಂದ್ಯ ಟೈಸನ್ ಮತ್ತು ಹೋಲಿಫೀಲ್ಡ್ ನಡುವೆ, ಇಪ್ಪತ್ತೊಂದು ವರುಷಗಳ ಹಿಂದೆ ಅಂದ್ರೆ ಜೂನ್ 28, 1997'ರಂದು ನಡೆಯಲಿತ್ತು. ಆ ಸಮಯದಲ್ಲಿ ಟೈಸನ್'ಗಿಂತ ಮುಂದೆ ಇದ್ದವ ಮತ್ತು ಗೆಲ್ಲೋ ಕುದುರೆ ಸ್ಥಾನದಲ್ಲಿದ್ದಿದ್ದು ಹೋಲಿಫೀಲ್ಡ್.

ಕಂಡಕ್ಟರ್ ನನ್ನು ಸರಿಯಾಗಿ ಚುನಾಯಿಸಿ, ಪಯಣ ಸುಖವಾಗಿರುತ್ತೆ ಕಂಡಕ್ಟರ್ ನನ್ನು ಸರಿಯಾಗಿ ಚುನಾಯಿಸಿ, ಪಯಣ ಸುಖವಾಗಿರುತ್ತೆ

ಟೈಸನ್'ಗೆ ಇದೇ ರೊಚ್ಚಿತ್ತೋ ಏನೋ ಗೊತ್ತಿಲ್ಲ, ಎರಡು ರೌಂಡ್ ದಾಟಿ ಮೂರನೇ ರೌಂಡ್'ಗೆ ಬರುತ್ತಿದ್ದಂತೆ ಹೋಲಿಫೀಲ್ಡ್'ನ ಕಿವಿಯನ್ನು ಕಚ್ಚಿ ಬಿಡೋದೇ? ಆಟ ಮುಂದುವರೆಸಬೇಕೋ ಬೇಡವೋ ಎಂದೇ ಬಹಳಷ್ಟು ಸಮಯ ಕಳೆದ ಮೇಲೆ ಕೊನೆಗೆ ಟೈಸನ್'ಗೆ ಎಚ್ಚರಿಕೆ ನೀಡಿ ಆಟ ಮುಂದುವರೆಸಲಾಯಿತು. ತಗಳಪ್ಪಾ, ಸಮಯ ಸಿಕ್ಕಿದ್ದೇ ತಡ ಮತ್ತೊಂದು ಕಿವಿಯನ್ನೂ ಕಚ್ಚೋದಾ? ಇಂದಿಗೂ ಈ ಪಂದ್ಯ "ದಿ ಬೈಟ್ ಫೈಟ್" ಎಂದೇ (ಕು)ಖ್ಯಾತಿ ಪಡೆದಿದೆ. ಖಂಡಿತಾ ಈ ಕಚ್ಚುವಿಕೆ ಚರಿತ್ರೆಯ ಪುಟ ಸೇರಿದೆ.

ಇನ್ನು ಮುಂದಿನ ವಿಷಯ ಅರಿಯದ ಭಾರತೀಯನೇ ಇಲ್ಲ ಅನ್ನಬಹುದು. "ನನ್ನ ಮದುವೆಯಾಗು, ನನ್ನ ಮದುವೆಯಾಗು" ಅಂತ ಶ್ರೀರಾಮನ ಕಿವಿಯನ್ನು ಕಚ್ಚಿದ್ದೇ ಕಚ್ಚಿದ್ದು ರಾವಣನ ತಂಗಿ ಶೂರ್ಪನಖಿ. ರಾಮ ತಾನು ಏಕಪತ್ನೀ ವ್ರತಸ್ಥ ಎಂದು ಘೋಷಿಸಿದ್ದೇ ತಡ, ಲಕ್ಷ್ಮಣನ ಹಿಂದೆ ಬಿದ್ದಾಗ ಅವನು ಮಾಡಿದ್ದಾದರೂ ಏನು? ಕಿವಿ ಕಚ್ಚಿದವಳ ಕಿವಿ-ಮೂಗು ಕೊಚ್ಚಿದ.

ತನ್ನ ಮೂಗು-ಕಿವಿ ತರಿದವರ ಬಗ್ಗೆ ತನ್ನಣ್ಣನ ಮುಂದೆ ಗೋಳು ತೋಡಿಕೊಂಡು ಅವನಲ್ಲಿ ಕ್ರೋಧ ಮೂಡಿಸಿ, ಏಕಪತ್ನಿ ವ್ರತಸ್ಥನ ಏಕಮೇವ ಪತ್ನಿಯನ್ನೇ ಅಪಹರಿಸುವಂತೆ ಮಾಡಿದಳು ಶೂರ್ಪನಖಿ. ಸರಿ, ಪತ್ನಿಯನ್ನು ಹುಡುಕುತ್ತಾ ಹೊರಟನಾ ರಾಮ. ಆದರೆ ಹಾದಿಯುದ್ದಕ್ಕೂ ನಡೆದ ಕಥೆಗಳೇ ಬೇರೆ. ಅದರಲ್ಲೊಂದು ಈ ಕಥೆ.

ನಿಮ್ಮೆಲ್ಲರ ಜೀವನದ ಕಥಾಸರಮಾಲೆ 'ಸತ್ಯಮೇವ ಜಯತೆ' ನಿಮ್ಮೆಲ್ಲರ ಜೀವನದ ಕಥಾಸರಮಾಲೆ 'ಸತ್ಯಮೇವ ಜಯತೆ'

ರಾಮ ಬರುವನೆಂದು ಕಾದಿದ್ದಳು ಶಬರಿ. ವರ್ಷಾನುವರ್ಷಗಳ ಕಾಲ ಕಾದಿದ್ದ ಶಬರಿಯನ್ನು ಕಾಣಲು ಬಂದ ರಾಮ. ತಾಯಿ ಶಬರಿ ರಾಮನಿಗಾಗಿ ಹಣ್ಣುಗಳನ್ನು ಕಿತ್ತುಕೊಂಡು ಬಂದು, ಮೊದಲು ತಾನು ಕಚ್ಚಿ ರುಚಿ ನೋಡಿ, ಸಿಹಿ ಇರುವ ಹಣ್ಣುಗಳನ್ನು ಮಾತ್ರ ರಾಮನಿಗೆ ನೀಡಿದಳು. ನಿಷ್ಕಲ್ಮಶ ಭಕ್ತಿರೂಪದಲ್ಲಿ ನೀಡಿದ ಕಚ್ಚಿದ ಹಣ್ಣುಗಳಿಂದ ಆಕೆ ಮೋಕ್ಷ ಹೊಂದಿದಳು ಎಂಬಲ್ಲಿಗೆ ಶಬರಿ ಕಥೆ ಕೊನೆಗೊಂಡಿದೆ. ಆದರೆ ಕಚ್ಚಿದ ಹಣ್ಣಿನ ಬಗ್ಗೆ ಹೇಳೋದಿದೆ.

There are several benefits of biting, you know

ಎಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಸಿಲ್ಕ್ ಸ್ಮಿತಾ' ಎಂಬ ನಟಿ ಇದ್ದಳು. ಈಕೆ ಯಾವ ಪರಿ ಗ್ಲಾಮರಸ್ ನಟಿ ಎಂದರೆ, ಆಕೆ ಕಚ್ಚಿದ ಸೇಬಿನ ಹಣ್ಣಿಗೆ ಎದ್ವಾತದ್ವಾ ಬೆಲೆ ಇತ್ತಂತೆ. ಕೇವಲ ಮೂವತ್ತಾರು ವರ್ಷಕ್ಕೇ ತನ್ನ ಜೀವನ ಕೊನೆಗಾಣಿಸಿಕೊಂಡಿದ್ದು ಬೇರೆ ವಿಷಯ. ಆದರೆ ಅಂದು ಆಕೆ ಕಚ್ಚಿದ ಆಪಲ್'ಗೆ ಆ ಸಿಲ್ಕ್ ಸ್ಮಿತಾ ಅಭಿಮಾನಿಗಳು ಎಷ್ಟೋ ಹಣ ಕೊಟ್ಟು ತೆಗೆದುಕೊಳ್ಳಲು ಸಿದ್ಧರಿದ್ದರು.

ಈ ವಿಷಯ ಎಲ್ಲೆಲ್ಲೋ ಹೋಗಿ ಸ್ಟೀವ್ ಜಾಬ್ಸ್ ಕಿವಿಗೆ ಬಿತ್ತಂತೆ. ಇದು ನನ್ನ ಕಥೆ, ಆಯ್ತಾ?

ಸಿನಿಮಾ ನಟಿ ಕಚ್ಚಿದ ಆಪಲ್'ಗೆ ಇಷ್ಟು ಬೆಲೆ ಇತ್ತು ಎಂದರಿತ ಸ್ಟೀವ್, ಅಂದೇ ತನ್ನ ಮನಸ್ಸಿನಲ್ಲಿ ಕಚ್ಚಿದ ಸೇಬಿನ ಲೋಗೋ ಅಚ್ಚು ಒತ್ತಿಕೊಂಡು ಮುಂದೆ ತನ್ನದೇ ಕಂಪನಿ ಸ್ಥಾಪಿಸಿ ಆ ಲೋಗೋ ಹಚ್ಚಿದ. ಒಂದು ಕಚ್ಚಿದ ಸೇಬಿನ ಕಥೆ ಅಲ್ಲಿ ಶುರುವಾಗಿ ಇಂದು ಜಗತ್ತಿನಾದ್ಯಂತ ವಯಸ್ಸಿನ ತಾರತಮ್ಯವಿಲ್ಲದೆ ಕಚ್ಚಿದ ಸೇಬನ್ನು ಕೊಂಡುಕೊಳ್ಳುತ್ತಿದ್ದಾರೆ. ಅದರಲ್ಲಿ ನಾನೂ ಒಬ್ಬ ಬಿಡಿ. ಅಂದೇ ಸಿಲ್ಕ್ ಸ್ಮಿತಾ'ಳಿಗೆ ತಾಕಚ್ಚಿದ ಸೇಬು ಈ ಲೆವೆಲ್'ಗೆ ತೆಗೆದುಕೊಂಡು ಹೋಗಬಹುದು ಅಂತ ಒಂದು ಯೋಚನೆ ಬಂದಿದ್ದರೂ ಇಂದು ಜಗತ್ತನ್ನೇ ಆಳಬಹುದಿತ್ತು.

ರಾಜ್ ಚಿತ್ರಗಳೆಂದರೆ ಸಾಗರದ ಮುತ್ತುಗಳನ್ನು ಹೆಕ್ಕಿದಂತೆ! ರಾಜ್ ಚಿತ್ರಗಳೆಂದರೆ ಸಾಗರದ ಮುತ್ತುಗಳನ್ನು ಹೆಕ್ಕಿದಂತೆ!

ಕಚ್ಚಿದ ಆಪಲ್ ಒಂದು ಲೋಗೋ ಆಗಿ, ಒಂದು ದಂತ ಕಥೆಯಾಗಿ ಚರಿತ್ರೆಯ ಪುಟ ಸೇರಿದೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಕಂಪ್ಯೂಟರ್ ಯುಗದಿಂದ ಈಗ ಏಕ್ದಂ ಬೇರೆ ಯುಗಕ್ಕೆ ಹೋಗೋಣ.

ಅಭಿಮನ್ಯು ಮತ್ತು ಉತ್ತರೆಯ ಪುತ್ರ ಪರೀಕ್ಷಿತ. ಪಾಂಡವರ ಉತ್ತರಾಧಿಕಾರಿ. ಒಮ್ಮೆ ಹೀಗೆ ಬೇಟೆಗೆ ಹೋಗಿರಲು ಬಾಯಾರಿಕೆಯಾಯ್ತು. ಅಲ್ಲೇ ಅಲೆಯುತ್ತಿದ್ದವನಿಗೆ ಕಂಡಿದ್ದು ಸಮೀಕ ಮಹರ್ಷಿಯ ಆಶ್ರಮ / ಗುಹೆ. ಆ ಮಹರ್ಷಿಯಾದರೋ ತನ್ನ ತಪಸ್ಸಿನಲ್ಲಿ ತಲ್ಲೀನನಾಗಿದ್ದ. ಮಹಾರಾಜ ಬಂದಿದ್ದರ ಅರಿವೇ ಅವನಿಗೆ ಇರಲಿಲ್ಲ. ಎಷ್ಟೇ ಆಗಲಿ ಮಹರ್ಷಿ ಎಂದುಕೊಂಡು ಅವನನ್ನು ಗೌರವದಿಂದಲೇ ಕೂಗಿ ಕರೆಯುತ್ತಿದ್ದರೂ ಧ್ಯಾನಾಸಕ್ತನಾದ ಸಮೀಕ ಮಹರ್ಷಿ ಏಳಲೇ ಇಲ್ಲ. ಕ್ಷತ್ರಿಯನ ರಕ್ತ ಕುದಿಯತೊಡಗಿದಂತೆ ವಿವೇಕ ಶೂನ್ಯವಾಗುತ್ತಾ ಹೋಯಿತು. ಕಡೆಗೆ ಅಲ್ಲೇ ಎಲ್ಲೋ ಸತ್ತು ಬಿದ್ದಿದ್ದ ಒಂದು ಸರ್ಪವನ್ನು ತೆಗೆದುಕೊಂಡು ಮಹರ್ಷಿಗೆ ಹಾರವಾಗಿ ಹಾಕಿ ಹೊರ ನಡೆದ. ಮುಂದೆ ಆ ಮಹರ್ಷಿಯ ಮಗನಿಂದ ಶಾಪಗ್ರಸ್ತನಾಗಿ ಅಲ್ಲಿಂದ ಏಳನೆಯ ದಿನಕ್ಕೆ ತಕ್ಷಕನಿಂದ ಕಚ್ಚಿಸಿಕೊಂಡು ಪ್ರಾಣ ಕಳೆದುಕೊಂಡ. ಕೂತಿದ್ದವರನ್ನು ಎಬ್ಬಿಸಲು ಹೋಗಿ ಏಳು ದಿನಗಳಲ್ಲೇ ಏಳದಂತೆ ಆಗಿದ್ದು ವಿಪರ್ಯಾಸ.

ರಾಜಾ ಸತ್ಯ ಹರಿಶ್ಚಂದ್ರನ ಮಗನನ್ನು ಕಾಡಿನಲ್ಲಿ ಹಾವು ಕಚ್ಚದೇ ಹೋಗಿದ್ದರೆ, ಮಹಾರಾಜ ಮತ್ತು ಮಹಾರಾಣಿಯರ ಭೇಟಿ ಸುಡುಗಾಡಿನಲ್ಲಿ ಆಗುತ್ತಿರಲಿಲ್ಲ. ಕಚ್ಚಿದ್ದು ಸರ್ಪವೇ ಆದರೂ ಒಳಿತಿಗಾಗಿ ಎಂದುಕೊಳ್ಳೋಣ.

ದಮಯಂತಿಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಹೋರಾಟ ನಳ ಮಹಾರಾಜ, ಕಾರ್ಕೋಟಕ ಸರ್ಪವನ್ನು ಕಾಪಾಡಿದ. ಆ ಸರ್ಪವೋ ತನ್ನನ್ನು ರಕ್ಷಿಸಿದ ಋಣ ತೀರಿಸಲು ಅವನನ್ನೇ ಕಚ್ಚಿಬಿಡೋದೇ? ನಳನನ್ನು ಜನ ಗುರುತಿಸಬಹುದು ಎಂದೇ ಅವನ ರೂಪ ವಿರೂಪಗೊಳಿಸಿ ಋತುಪರ್ಣನ ಬಳಿ ಕಳಿಸುತ್ತಾನೆ ಕಾರ್ಕೋಟಕ. ಇಲ್ಲೂ ಸಹ ಕಚ್ಚಿಸಿಕೊಂಡಿದ್ದು ಒಳಿತಿಗಾಗಿಯೇ ಆಗಿದ್ದು.

ಪುರಾಣ ಪುಣ್ಯಕಥೆಗಳನ್ನು ಸ್ವಲ್ಪ ಪಕ್ಕಕ್ಕೆ ಇಟ್ಟು ಈಗ ಸಾಮಾನ್ಯರ ಜೀವನಕ್ಕೆ ಬನ್ನಿ.

ಒಂದು ಕಾಲಕ್ಕೆ ನಾಯಿ ಕಚ್ಚಿದರೆ ಹೊಕ್ಕಳ ಸುತ್ತ ಹದಿನಾಲ್ಕು ಇಂಜೆಕ್ಷನ್ ಕೊಡುತ್ತಿದ್ದರು. ಆಮೇಲೆ ಕಾಲ ಮುಂದುವರೆದಂತೆ ಎರಡೇ ಇಂಜೆಕ್ಷನ್ ಸಾಕು ಎಂದಾಯ್ತು. ನಾಯಿ (ನಮ್ಮನ್ನು) ಕಚ್ಚೋದು ಸಿಕ್ಕಾಪಟ್ಟೆ ಕಾಮನ್. ಈವರೆಗೂ ಒಮ್ಮೆಯೂ ನಾನು ನಾಯಿ ಕೈಲಿ (ಬಾಯಲ್ಲಿ) ಕಚ್ಚಿಸಿಕೊಂಡಿಲ್ಲ ಬಿಡಿ.

ಪ್ರೀತಿಯಿಂದ ಹೆಚ್ಚಿನ ಬೆಲೆ ಕೊಟ್ಟು ಕೊಂಡು ಧರಿಸಿದ ಚಪ್ಪಲಿಯ ಚರ್ಮ ಉಜ್ಜಿದಾಗ ನಮ್ಮ ಚರ್ಮವೇ ಕಿತ್ತುಹೋಗುತ್ತೆ. ಇದನ್ನು ಹೇಳೋ ಪರಿ ಮಾತ್ರ ಬೇರೆ. "ಚಪ್ಪಲಿ ಕಚ್ಚಿತು" ಅಂತ! ಅಲ್ಲಾ, ಚಪ್ಪಲಿಗೇನು ಹಲ್ಲಿದೆಯೇ ಕಚ್ಚೋಕ್ಕೆ?

ಕೆಲವು ಮಕ್ಕಳಿಗೆ ಕಚ್ಚುವ ಅಭ್ಯಾಸವಿರುತ್ತದೆ. ಅರ್ಥಾತ್ ತಮ್ಮ ತರಗತಿ ಅಥವಾ ತಾವು ಆಡುತ್ತಿರುವ ಮಕ್ಕಳ ಜೊತೆ ಜಗಳವಾದಾಗ ರೋಷದಿಂದ ಕಚ್ಚಿ ಬಿಡುತ್ತಾರೆ. ಎಷ್ಟೇ ಆಗಲಿ ಚಿಕ್ಕ ಮಕ್ಕಳು, ಕಚ್ಚಿಸಿಕೊಂಡ ಮಕ್ಕಳ ಕೈ ಮೇಲೆ ಹಲ್ಲಿನ ಗುರುತು ಸಕತ್ತಾಗಿ ಮೂಡಿರುತ್ತೆ. ಎರಡೂ ಕಡೆ ಅಮ್ಮಂದಿರ ಜಗಳ ಎಲ್ಲೆಲ್ಲೋ ತಲುಪಿದ್ದನ್ನೂ ನೋಡಿದ್ದೇನೆ.

ಸೊಳ್ಳೆಯಿಂದ ಕಚ್ಚಿಸಿಕೊಳ್ಳದೆ ಇರುವವರು ಯಾರಿದ್ದಾರೆ? ಅದರಂತೆಯೇ ಇರುವೆಯ ಕಚ್ಚುವಿಕೆ, ಕ್ರಿಮಿಕೀಟಗಳ ಕಚ್ಚುವಿಕೆ ಇತ್ಯಾದಿ ಅನುಭವಗಳನ್ನು ನೀವೇ ಹಂಚಿಕೊಳ್ಳಿ ಅಂತ ಬಿಟ್ಟಿದ್ದೀನಿ.

ಅದೆಲ್ಲಾ ಸರಿ ಸ್ವಾಮಿ "ಏನ್ ಈ ಸಾರಿ ಇಷ್ಟೊಂದು ಕಚ್ತಾ ಇದ್ದೀರಾ?" ಅಂತ ಕೇಳಿದಿರಾ?

ಒನ್ಇಂಡಿಯಾ ಕನ್ನಡ ವೆಬ್ ಪತ್ರಿಕೆಯಲ್ಲಿನ "ನವರಸಾಯನ"ದ ಅಂಕಣಕಾರನಾಗಿ ಈವರೆಗೆ ಬರೆಯುತ್ತಿದ್ದೇನೆ. ಇದು ನಿಮ್ಮನ್ನು ನಾವು ಐವತ್ತನೆಯೇ ಬಾರಿ ಕಚ್ಚುತ್ತಿರೋದು! ಪ್ರತೀ ವಾರ ನನ್ನ ಕಚ್ಚುವಿಕೆಯನ್ನು ಸಹಿಸಿಕೊಂಡೇ ಬಂದಿರುವ ನಿಮ್ಮೆಲ್ಲರಿಗೆ ನನ್ನ ಅನಂತ ವಂದನೆಗಳು.

ನಿಮ್ಮ ವಿಶ್ವಾಸ ಹೀಗೆ ಇರಲಿ.

English summary
There are several benefits of biting, you know. Srinath Bhalle, who has completed 50 articles in his column 'Navarasayana' has rolled out several incidents of biting, which turned out to be beneficial. Of course, you will relate yourself in many way after reading this article. Congratulations Srinath Bhalle on completing 50 articles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X